ಬರದ ನಡುವೆ ದಸರಾ: ನಾಡಹಬ್ಬಕ್ಕೆ ಸಜ್ಜಾಗುತ್ತಿರುವ ಅಂಬಾವಿಲಾಸ ಅರಮನೆ
ಮೈಸೂರು, ಸೆಪ್ಟೆಂಬರ್ 20: ಮೈಸೂರಿನ ಜಗದ್ವಿಖ್ಯಾತ ಅಂಬಾ ವಿಲಾಸ ಅರಮನೆಯು ಐತಿಹಾಸಿಕ ದಸರಾವನ್ನು ಸ್ವಾಗತಿಸಲು ಸರ್ವ ರೀತಿಯಲ್ಲಿ ತಯಾರಾಗುತ್ತಿದೆ. ಅರಮನೆಯ ಸುತ್ತಮುತ್ತಲೂ ಸ್ವಚ್ಛಗೊಳಿಸುವ, ಉದ್ಯಾನದಲ್ಲಿ ಹೂಗಿಡಗಳನ್ನು ಬೆಳೆಸುವ,ಹೂಕುಂಡಗಳನ್ನು ಶುಚಿಗೊಳಿಸಿ ಅಲಂಕಾರಗೊಳಿಸುವ ಕಾರ್ಯಗಳು ಆರಂಭವಾಗಿವೆ. ಅರಮನೆಯ ಆವರಣಲ್ಲಿ ದಸರಾ ಸಂದರ್ಭದಲ್ಲಿ ಫಲಪುಷ್ಪ ಪ್ರದರ್ಶನ ನಡೆಸಲಾಗುತ್ತಿದ್ದು, ಅದಕ್ಕೆ ಬೇಕಾದ ಸಿದ್ಧತೆಗಳು ಈಗಿನಿಂದಲೇ ಆರಂಭವಾಗಿವೆ.
ದಸರಾದ ಹತ್ತು ದಿನಗಳ ಕಾಲವೂ ಅರಮನೆಯಲ್ಲಿ ವಿವಿಧ ಕಾರ್ಯಕ್ರಮಗಳು ನಡೆಯಲಿದ್ದು, ಅದರಲ್ಲೂ ಖಾಸಗಿ ದರ್ಬಾರ್ ವಿಶೇಷವಾಗಿದೆ. ಇದಕ್ಕಾಗಿ ಎಲ್ಲವೂ ಶಾಸ್ತ್ರೋಕ್ತವಾಗಿಯೇ ನಡೆಯಬೇಕಾಗಿದೆ. ಅರಮನೆಗೆ ಸುಣ್ಣಬಣ್ಣ ಬಳಿಯುವ ಕೆಲಸವಲ್ಲದೆ, ಕೆಟ್ಟು ಹೋಗಿರುವ ವಿದ್ಯುತ್ ಬಲ್ಭ್ ಗಳನ್ನು ತೆಗೆದು ಹೊಸತಾಗಿರುವ ಬಲ್ಭ್ ಗಳನ್ನು ಅಳವಡಿಸಬೇಕಾಗಿದೆ. ದಸರಾ ಕಾರ್ಯಕ್ರಮ ಆರಂಭಕ್ಕೆ ಕೇವಲ ಇಪ್ಪತ್ತೈದು ದಿನಗಳಷ್ಟೆ ಬಾಕಿಯಿದ್ದು, ಎಲ್ಲವೂ ಶೀಘ್ರಗತಿಯಲ್ಲಿ ನಡೆಯಬೇಕಾಗಿದೆ.

ದಸರಾ ವೇಳೆಯಲ್ಲಿ ಪ್ರವಾಸಿಗರು ಅರಮನೆಯನ್ನು ವೀಕ್ಷಿಸಲು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ದಸರಾ ಕಾರ್ಯಕ್ರಮಕ್ಕೆ ಚಾಮುಂಡಿಬೆಟ್ಟದಲ್ಲಿ ಚಾಲನೆ ದೊರೆತರೂ ದಸರಾ ಸಂಬಂಧಿಸಿದ ಶರನ್ನವರಾತ್ರಿಯ ಆಚರಣೆ ಹತ್ತು ದಿನಗಳ ಕಾಲ ಅರಮನೆ ಆವರಣದಲ್ಲಿಯೇ ನಡೆಯಲಿದೆ. ಅತ್ತ ಚಾಮುಂಡಿಬೆಟ್ಟದಲ್ಲಿ ಚಾಮುಂಡೇಶ್ವರಿ ತಾಯಿಯ ಉತ್ಸವ ಮೂರ್ತಿಗೆ ಪುಷ್ಪಾರ್ಚನೆಯೊಂದಿಗೆ ನಾಡಹಬ್ಬ ದಸರಾಕ್ಕೆ ಚಾಲನೆ ನೀಡುತ್ತಿದ್ದರೆ ಇತ್ತ ಅರಮನೆಯಲ್ಲಿ ವಿವಿಧ ಪೂಜಾ ಕೈಂಕರ್ಯಗಳೊಂದಿಗೆ ಖಾಸಗಿ ದರ್ಬಾರ್ ಆರಂಭವಾಗುತ್ತದೆ.
ಅಕ್ಟೋಬರ್ 15ರಿಂದ ದಸರಾ ಆರಂಭ
ಸಂಜೆ ವೇಳೆ ಅರಮನೆ ವೇದಿಕೆಯಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದರೆ ವಿದ್ಯುತ್ ಬೆಳಕಿನಲ್ಲಿ ಮಿನುಗುವ ಅರಮನೆಯನ್ನು ವೀಕ್ಷಿಸಲೆಂದೇ ಸಾವಿರಾರು ಜನರು ಇತ್ತ ಆಗಮಿಸುತ್ತಾರೆ. ಇನ್ನು ಈ ಬಾರಿ ಅಕ್ಟೋಬರ್ 15ರ ಭಾನುವಾರ ಬೆಳಗ್ಗೆ 10.15ರಿಂದ 10.36ರ ಶುಭ ವೃಶ್ಚಿಕ ಲಗ್ನದಲ್ಲಿ ಚಾಲನೆ ಚಾಮುಂಡಿ ಬೆಟ್ಟದಲ್ಲಿ ಚಾಮುಂಡೇಶ್ವರಿಯ ಅಗ್ರ ಪೂಜೆಯೊಂದಿಗೆ ಶರನ್ನವರಾತ್ರಿ ಆಚರಣೆಗೆ ಚಾಲನೆ ಸಿಗಲಿದ್ದು, ಅಂದು ಸಂಜೆಯಿಂದಲೇ ಅರಮನೆಯಲ್ಲಿ ಪೂಜಾ ವಿಧಿವಿಧಾನಗಳು ನಡೆಯಲಿವೆ.

ಅರಮನೆಯಲ್ಲಿ ಪ್ರತಿದಿನವೂ ಕಾರ್ಯಕ್ರಮಗಳು ನಡೆಯಲಿದ್ದು, ಅ.15ರಂದು ಸಾಯಂಕಾಲ 6.30 ರಿಂದ 7.15ಶುಭಮೇಷ ಲಗ್ನದಲ್ಲಿ ಪೂಜಾ ಕೈಂಕರ್ಯ ಸಾಗಲಿದೆ. 16ರಂದು ಬ್ರಹ್ಮಚಾರಣಿ, 17ರಂದು ಚಂದ್ರಘಂಟಾ, 18ರಂದು ಕೂಷ್ಮಾಂಡಾ, 19ರಂದು ಸ್ಕಂದಮಾತಾ, 20ರಂದು ಕಾತ್ಯಾಯನಿ ಹಾಗೂ ಸರಸ್ವತಿ, 21ರಂದು ಕಾಳರಾತ್ರ ಹಾಗೂ ಮಹಿಷ ಸಂಹಾರ, 22ರಂದು ದುರ್ಗಾಷ್ಟಮಿ ಹಾಗೂ ಸಿದ್ದಿ ಧಾತ್ರಿ, 23ರಂದು ಆಯುಧ ಪೂಜೆ, ಹಾಗೂ 24ರಂದು ವಿಸರ್ಜನೆ ನಡೆಯಲಿದೆ.
ಅ.24ರಂದು ಜಂಬೂ ಸವಾರಿ
ಇದೆಲ್ಲದರ ನಡುವೆ 20ರ ಶುಕ್ರವಾರ ಮೂಲ ನಕ್ಷತ್ರದಲ್ಲಿ ಸರಸ್ವತಿ ಪೂಜೆ ಪ್ರಾರಂಭ ಮಾಡಿ ಶ್ರವಣ ನಕ್ಷತ್ರದ ದಿನ ಅಂದರೆ 24ರ ಮಂಗಳವಾರ ವಿಸರ್ಜನೆ ಮಾಡಲಾಗುತ್ತದೆ. 24ರ ಮಂಗಳವಾರ ವಿಜಯದಶಮಿ ನಡೆಯಲಿದ್ದು, ಮಧ್ಯಾಹ್ನ 1.46ರಿಂದ 2.08ರ ನಡುವಿನ ಮಕರ ಲಗ್ನದಲ್ಲಿ ಮುಖ್ಯಮಂತ್ರಿಯವರಿಂದ ನಂದೀ ಧ್ವಜ ಪೂಜೆ ನಡೆಯಲಿದೆ. ಸಂಜೆ 4.40ರಿಂದ 5 ಗಂಟೆಯೊಳಗಿನ ಶುಭ ಮೀನ ಲಗ್ನದಲ್ಲಿ ಮುಖ್ಯಮಂತ್ರಿ ಮತ್ತು ಗಣ್ಯಾತಿಗಣ್ಯರಿಂದ ಅಂಬಾರಿ ಮೇಲೆ ವಿರಾಜಮಾನಳಾಗಿರುವ ಬೆಟ್ಟದ ತಾಯಿ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ನಂತರ ಜಂಬೂ ಸವಾರಿ ಪ್ರಾರಂಭವಾಗಲಿದೆ.

27ರ ಶುಕ್ರವಾರ ಬೆಟ್ಟದಲ್ಲಿ ಶ್ರೀ ಚಾಮುಂಡೇಶ್ವರಿ ರಥೋತ್ಸವದೊಂದಿಗೆ 2023ನೇ ಸಾಲಿನ ದಸರಾ ಮಹೋತ್ಸವದ ಎಲ್ಲಾ ಕಾರ್ಯಕ್ರಮಗಳು ಮುಕ್ತಾಯಗೊಳ್ಳಲಿವೆ. ಬೆಳಗ್ಗೆ 10.40ರಿಂದ 11 ಗಂಟೆಯ ಧನುರ್ ಲಗ್ನದಲ್ಲಿ ಅರಮನೆಯಿಂದ ವೀರನ ಹೊಸಹಳ್ಳಿಗೆ ಗಜಪಡೆ ತೆರಳಲಿವೆ. ಅಲ್ಲಿಗೆ ದಸರಾ ಕಾರ್ಯಕ್ರಮ ಮುಗಿದು ಹೋಗಲಿದೆ. ಆದರೆ ದಸರಾ ಕಳೆದರೂ ದಸರಾ ವಸ್ತುಪ್ರದರ್ಶನ ಇರುವುದರಿಂದ ಸಂಜೆ ಹೊತ್ತು ಅತ್ತ ತೆರಳಿ ಒಂದಷ್ಟು ಸಮಯವನ್ನು ಕಳೆದು ಬರುವುದು ನಡೆಯಲಿದೆ.
ಬರದ ನಡುವೆ ದಸರಾ ಆಚರಣೆ
ಈಗಾಗಲೇ ದಸರಾ ಆಚರಣೆಗೆ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದ್ದು, ಇನ್ನು ಕೆಲವೇ ದಿನಗಳಲ್ಲಿ ಮೈಸೂರಿಗೆ ದಸರಾ ಕಳೆ ಬರಲಿದೆ. ಅಲ್ಲದೆ ದಸರಾಕ್ಕೆ ಸಂಬಂಧಿಸಿದಂತೆ ವಿವಿಧ ಕಾರ್ಯಕ್ರಮಗಳು ಆರಂಭವಾಗಲಿದೆ. ಈ ಬಾರಿ ಬರದ ನಡುವೆ ದಸರಾ ಆಚರಣೆ ನಡೆಯುತ್ತಿದ್ದು, ಹೇಗೆ ನಡೆಯಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.












Click it and Unblock the Notifications