ಮೈಸೂರಿನೆಲ್ಲೆಡೆ ಕಳೆಕಟ್ಟಿದ ದಸರಾ ಸಂಭ್ರಮ: ಆನೆಗಳಿಗೆ ಜಂಬೂಸವಾರಿ ತಾಲೀಮು
ಮೈಸೂರು, ಅಕ್ಟೋಬರ್ 11: ಸಾಂಸ್ಕೃತಿಕ ನಗರಿ ಮೈಸೂರಿನೆಲ್ಲೆಡೆ ನಾಡಹಬ್ಬ ದಸರೆಯ ಸಂಭ್ರಮ ಕಳೆಕಟ್ಟಿದ್ದು, ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾಗಿರುವ ಜಂಬೂಸವಾರಿ ಮೆರವಣಿಗೆಗೆ ದಿನಗಣನೆ ಆರಂಭವಾಗಿದೆ. ಈ ಹಿನ್ನೆಲೆಯಲ್ಲಿ ಸೋಮವಾರ ದಸರಾ ಜಂಬೂಸವಾರಿ ಮೆರವಣಿಗೆಯ ತಾಲೀಮು ನಡೆಸಲಾಯಿತು.
ಅ.15ರಂದು ನಡೆಯಲಿರುವ ಜಂಬೂಸವಾರಿ ಮೆರವಣಿಗೆಯ ಪೂರ್ವಭಾಗಿಯಾಗಿ ಅರಮನೆ ಅಂಗಳದಲ್ಲಿ ಸೋಮವಾರ ಬೆಳಗ್ಗೆ ನಡೆದ ಜಂಬೂಸವಾರಿ ತಾಲೀಮಿನಲ್ಲಿ ಅಭಿಮನ್ಯುವಿಗೆ ಮರದ ಅಂಬಾರಿ ಹೊರಿಸದೆ ರಿಹರ್ಸಲ್ ನಡೆಸಲಾಯಿತು. ಅರಮನೆ ಆವರಣದಲ್ಲಿ ತಾಲೀಮಿನಲ್ಲಿ, ಸಿಎಆರ್ ವಿಭಾಗದ ಡಿಸಿಪಿ ಶಿವರಾಮ್, ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ಗಜಪಡೆಗೆ ಪುಷ್ಪಾರ್ಷನೆ ಮಾಡುವ ತಾಲೀಮು ನಡೆಸಿದರು.

ಗಜಪಡೆ ಸಾರಥಿ ಅಭಿಮನ್ಯುಗೆ ಕಾವೇರಿ, ಚೈತ್ರಾ ಸಾಥ್
ಈ ವೇಳೆ ತಾಲೀಮಿನಲ್ಲಿ ಭಾಗವಹಿಸಿದ್ದ ಪೊಲೀಸ್ ಬ್ಯಾಂಡ್ ಸಿಬ್ಬಂದಿ ಪುಷ್ಪಾರ್ಚನೆ ಬಳಿಕ ರಾಷ್ಟ್ರಗೀತೆ ನುಡಿಸಿದರು. ಈ ವೇಳೆ ಗಜಪಡೆ ಸಾರಥಿ ಅಭಿಮನ್ಯುಗೆ, ಕುಮ್ಕಿ ಆನೆಗಳಾಗಿ ಕಾವೇರಿ, ಚೈತ್ರಾ ಸಾಥ್ ನೀಡಿದರೆ, ಅಶ್ವತ್ಥಾಮ ಹಾಗೂ ಲಕ್ಷ್ಮಿ ಆನೆಗಳು ಸಹ ತಾಲೀಮಿನ ಮೆರವಣಿಗೆಯಲ್ಲಿ ಭಾಗಿಯಾಗಿದ್ದವು. ಆದರೆ ದಸರಾ ಹಿನ್ನೆಲೆಯಲ್ಲಿ ಕಾಡಿನಿಂದ ಮೈಸೂರಿಗೆ ಆಗಮಿಸಿರುವ ಧನಂಜಯ ಹಾಗೂ ಗೋಪಾಲಸ್ವಾಮಿ ಆನೆಗಳು ಅರಮನೆ ಪೂಜೆಯಲ್ಲಿ ಭಾಗಿಯಾಗಿದ್ದ ಕಾರಣ ತಾಲೀಮಿನಲ್ಲಿ ಭಾಗವಹಿಸಲಿಲ್ಲ.
ಜಂಬೂಸವಾರಿ ಮೆರವಣಿಗೆಯ ದೂರ ಹಾಗೂ ಸಮಯ ಪಾಲಿಸುವ ನಿಟ್ಟಿನಲ್ಲಿ ಈ ರಿಹರ್ಸಲ್ ನಡೆಸಲಾಯಿತು. ತಾಲೀಮಿನಲ್ಲಿ ದಸರಾ ಗಜಪಡೆಯೊಂದಿಗೆ ಪೊಲೀಸ್ ಅಶ್ವರೋಹಿ ದಳದ ಸಿಬ್ಬಂದಿ ಸಹ ಭಾಗವಹಿಸಿದ್ದರು. ತಾಲೀಮಿನಲ್ಲಿ ಪಾಲ್ಗೊಂಡ ಪೊಲೀಸ್ ಬ್ಯಾಂಡ್ ಸಿಬ್ಬಂದಿ, ಸಂಗೀತದ ಜೊತೆಗೆ ಪಥಸಂಚಲನ ನಡೆಸಿದರೆ, ವಿವಿಧ ತುಕಡಿಗಳ ಶಸ್ತ್ರಾಸ್ತ್ರಧಾರಿ ಪೊಲೀಸರು ಸಹ ಪಥಸಂಚಲನದಲ್ಲಿ ಹೆಜ್ಜೆ ಹಾಕಿದರು.

ದಸರೆ ಸಂಭ್ರಮಕ್ಕೆ ಮಳೆ ಅಡ್ಡಿ
ಮೈಸೂರು ದಸರಾ ಮಹೋತ್ಸವ ಹಿನ್ನೆಲೆ ನಡೆಯುತ್ತಿರುವ ಸರಳದ ದಸರೆಯ ಸಂಭ್ರಮಕ್ಕೆ ಮಳೆರಾಯ ಅಡ್ಡಿಪಡಿಸಿದ್ದಾನೆ. ಭಾನುವಾರ ಸುರಿದ ಭಾರೀ ಮಳೆಯಿಂದ ಅರಮನೆ ಅಂಗಳದಲ್ಲಿ ನಿರ್ಮಿಸಿರುವ ವಿವಿಧ ಪುಷ್ಪಗಳಿಂದ ಮಳೆಯಿಂದಾಗಿ ಬಾಡಿಹೋಗಿವೆ. ಇನ್ನು ಭಾನುವಾರ ಮಧ್ಯಾಹ್ನದಿಂದ ಮೈಸೂರಿನಲ್ಲಿ ಸುರಿದ ಮಳೆಯಿಂದಾಗಿ ಪ್ರವಾಸಿಗರಲ್ಲಿ ನಿರಾಸೆ ಮೂಡಿಸಿತು. ಭಾನುವಾರದ ಹಿನ್ನೆಲೆಯಲ್ಲಿ ದಸರಾ ದೀಪಾಲಂಕಾರ ನೋಡಲು ಕಾತುರರಾಗಿದ್ದ ಮೈಸೂರಿಗರು ಮಾತ್ರವಲ್ಲದೇ ಪ್ರವಾಸಿಗರಿಗೆ ನಿರಾಸೆ ಮೂಡಿಸಿತು. ಅಲ್ಲದೇ ದಸರಾ ಹಿನ್ನೆಲೆಯಲ್ಲಿ ಅರಮನೆ ಆವರಣದಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮಕ್ಕೂ ಮಳೆ ಅಡ್ಡಿಪಡಿಸಿತು.

ವಿಶೇಷ ಕಿಟ್ ವಿತರಣೆ
ವಿಶ್ವವಿಖ್ಯಾತ ಮೈಸೂರು ದಸರಾ ಹಿನ್ನೆಲೆಯಲ್ಲಿ ಕಾಡಿನಿಂದ ನಾಡಿಗೆ ಬಂದಿರುವ ಮಾವುತರು, ಕಾವಾಡಿಗಳಿಗೆ ವಿಶೇಷ ಕಿಟ್ ವಿತರಣೆ ಮಾಡಲಾಯಿತು. ಅರಮನೆ ಆವರಣದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್, ಶೂ, ಜರ್ಕಿನ್, ಬ್ಯಾಗ್, ವಾಟರ್ ಬಾಟಲ್ ಸೇರಿದಂತೆ ಇನ್ನಿತರ ಉಪಯುಕ್ತ ವಸ್ತುಗಳಿರುವ ಕಿಟ್ ವಿತರಿಸಿದರು. ಈ ವೇಳೆ ಡಿಸಿಎಫ್ ಡಾ. ಕರಿಕಾಳನ್, ಅರಮನೆ ಆಡಳಿತ ಮಂಡಳಿ ನಿರ್ದೇಶಕ ಟಿ.ಎಸ್. ಸುಬ್ರಮಣ್ಯ, ಜಿ.ಪಂ. ಸಿಇಒ ಯೋಗೇಶ್, ಅರಮನೆ ಎಸಿಪಿ ಚಂದ್ರಶೇಖರ್ ಇತರರಿದ್ದರು.

ಗಜಪಡೆಗೆ ಮಹಾಮಜ್ಜನ
ದಸರಾ ಹಿನ್ನೆಲೆಯಲ್ಲಿ ಮೈಸೂರಿಗೆ ಆಗಮಿಸಿರುವ ದಸರಾ ಆನೆಗಳಿಗೆ ಸೋಮವಾರವೂ ಮಹಾಮಜ್ಜನ ನಡೆಸಲಾಯಿತು. ಅರಮನೆ ಆವರಣದಲ್ಲಿರುವ ಸ್ನಾನದ ತೊಟ್ಟಿಯಲ್ಲಿ ಗಜಪಡೆಯ ಸಾರಥಿ ಅಭಿಮನ್ಯು ಸೇರಿದಂತೆ ಎಲ್ಲಾ ಆನೆಗಳಿಗೂ ಮಹಾಮಜ್ಜನ ನಡೆಸಲಾಯಿತು. ಬಿಸಿಲ ಬೇಗೆಯಲ್ಲಿ ಧಣಿವರಿಯುತ್ತಿರುವ ದಸರಾ ಆನೆಗಳಿಗೆ ಪ್ರತಿನಿತ್ಯ ನಾಲ್ಕು ಬಾರಿ ಸ್ನಾನ ಮಾಡಿಸಲಾಗುತ್ತದೆ.












Click it and Unblock the Notifications