ದಸರಾ ಜಂಬೂಸವಾರಿ ಮೆರವಣಿಗೆಗೆ ದಿನಗಣನೆ: ಈ ಬಾರಿ 6 ಸ್ತಬ್ಧಚಿತ್ರಗಳು ಮಾತ್ರ ಭಾಗಿ
ಮೈಸೂರು, ಅಕ್ಟೋಬರ್ 11: ದಸರಾ ಜಂಬೂಸವಾರಿ ಮೆರವಣಿಗೆಗೆ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಸಿದ್ಧತೆಗಳು ಭರದಿಂದ ಸಾಗುತ್ತಿವೆ. ಜಂಬೂಸವಾರಿ ಮೆರವಣಿಗೆ ಅರಮನೆ ಆವರಣಕ್ಕೆ ಸೀಮಿತವಾಗಿ ಹಾಗೂ ಸರಳವಾಗಿ ನಡೆಯುತ್ತಿರುವ ಕಾರಣ ಈ ಬಾರಿ 6 ಸ್ತಬ್ಧಚಿತ್ರಗಳು ಮಾತ್ರ ಭಾಗವಹಿಸುತ್ತಿವೆ.
ಮೈಸೂರಿನ ದಸರಾ ವಸ್ತು ಪ್ರದರ್ಶನದ ಆವರಣದಲ್ಲಿ ಸ್ತಬ್ಧಚಿತ್ರಗಳ ನಿರ್ಮಾಣ ಕಾರ್ಯ ವೇಗವಾಗಿ ನಡೆಯುತ್ತಿವೆ. ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಭಾನುವಾರ ಸ್ತಬ್ಧಚಿತ್ರಗಳ ತಯಾರಿಯನ್ನು ಪರಿಶೀಲನೆ ಮಾಡಿದರು.
ನಾಡಿನ ಸಂಸ್ಕೃತಿ, ಪರಂಪರೆ ಹಾಗೂ ಆಧುನಿಕತೆಯ ಉತ್ತಮ ಸಂದೇಶ ಸಾರುವ ಸ್ತಬ್ಧಚಿತ್ರಗಳು ಅತ್ಯಾಕರ್ಷಕವಾಗಿ ನಿರ್ಮಾಣವಾಗುತ್ತಿವೆ ಎಂದು ಇದೇ ವೇಳೆ ಸಚಿವರು ಹೇಳಿದರು. ಜಂಬೂಸವಾರಿ ಮೆರವಣಿಗೆಗೆ ಕೇವಲ ಇನ್ನು ನಾಲ್ಕು ದಿನ ಮಾತ್ರ ಬಾಕಿ ಇದ್ದು, ಮೈಸೂರಿನಲ್ಲಿ ಸಿದ್ಧತೆಗಳು ಭರದಿಂದ ಸಾಗುತ್ತಿವೆ. ದಸರಾ ಸರಳವಾಗಿ ಆಚರಣೆಯಾದರೂ, ನಗರದಾದ್ಯಂತ ಮಾಡಿರುವ ವಿದ್ಯುದ್ದೀಪಲಂಕಾರ ನೋಡಲು ಸಹಸ್ರಾರು ಜನರು ಮೈಸೂರಿಗೆ ಬರುತ್ತಿದ್ದಾರೆ.

ಹೇಗಿರಲಿದೆ ಖಾಸಗಿ ದರ್ಬಾರ್?
ಮೈಸೂರು ಅರಮನೆಯಲ್ಲಿ ಖಾಸಗಿ ದರ್ಬಾರ್ ಆರಂಭದ ದಿನ ಬೆಳಗ್ಗೆ 6ರಿಂದ 6.12ರೊಳಗೆ ಸಲ್ಲುವ ಶುಭ ಲಗ್ನದಲ್ಲಿ ಸಿಂಹಾಸನಕ್ಕೆ ಸಿಂಹವನ್ನು ಜೋಡಣೆ ಮಾಡಿ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ನಂತರ ಯದುವೀರ್‌ರಿಗೆ ಬೆಳಗ್ಗೆ ಎದ್ದ ತಕ್ಷಣವೇ ಆರತಿ ಎತ್ತಿ ಎಣ್ಣೆ ಶಾಸ್ತ್ರ ಮಾಡಿಸಿ, ಅರಮನೆಗೆ ಬರುವ ಕ್ಷೌರಿಕರಿಂದ ಚೌಲ ಮಾಡಿಸಿ ನಂತರ ಮಂಗಳಸ್ನಾನ ಮಾಡಿಸಲಾಗುತ್ತದೆ.
ಮುತ್ತೈದೆಯರು ಮತ್ತು ಪುರೋಹಿತ ಮನೆತನದ ಹೆಂಗಸರು ಆರತಿ ಬೆಳಗುತ್ತಾರೆ. ಆನಂತರ ಯದುವೀರ್ ಪೂಜೆಗೆ ಅಣಿಯಾಗುತ್ತಾರೆ. ಮೊದಲಿಗೆ ಚಾಮುಂಡಿ ತೊಟ್ಟಿಯಲ್ಲಿ ಗಣಪತಿಗೆ ಪೂಜೆ ಮಾಡಿ ಬಳಿಕ ಕಳಶಪೂಜೆ, ಕಂಕಣಪೂಜೆ ನಡೆಸಿದರು. ಬಳಿಕ ಚಾಮುಂಡಿ ತೊಟ್ಟಿಯಲ್ಲಿ ಕೂರಿಸಿ ಕಂಕಣ ಧಾರಣೆ ಮಾಡಲಾಗುತ್ತದೆ. ಮತ್ತೊಂದೆಡೆ ತ್ರಿಷಿಕಾ ಅವರೂ ವಾಣಿವಿಲಾಸ ದೇವರಮನೆಯಲ್ಲಿ ಕಂಕಣ ಧಾರಣೆ ಮಾಡಿಕೊಳ್ಳುತ್ತಾರೆ. ನಂತರ ಚಾಮುಂಡೇಶ್ವರಿ ಮತ್ತು ಗಣಪತಿಯನ್ನು ಪೂಜಿಸಿ ಬಳಿಕ ಅರಮನೆಯ ಸಾವರ ತೊಟ್ಟಿಗೆ ಪಟ್ಟದ ಆನೆ, ಪಟ್ಟದ ಹಸುವನ್ನು ಕರೆತಂದು ಯದುವೀರ್ ಪೂಜೆ ಸಲ್ಲಿಸುತ್ತಾರೆ.

ಗಜಪಡೆಗೆ ರಿಲ್ಯಾಕ್ಸ್
ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ಜಂಬೂಸವಾರಿ ಮೆರವಣಿಗೆಗೆ ದಸರಾ ಗಜಪಡೆಯನ್ನು ಅಣಿಗೊಳಿಸಲಾಗುತ್ತಿದೆ. ಆನೆಗಳಿಗೆ ಶೃಂಗಾರ ಮಾಡಲಾಗುತ್ತಿದ್ದು, ಆನೆಗಳು ರಿಲ್ಯಾಕ್ಸ್ ಮಾಡುತ್ತಿವೆ.
ಇನ್ನು ವಿಕ್ರಮ ಆನೆಗೆ ಮದವೇರಿದ್ದು, ಹೀಗಾಗಿ ಆ ಆನೆಯನ್ನು ದಸರಾ ಕಾರ್ಯಕ್ರಮಕ್ಕೆ ಬಳಸಿಕೊಳ್ಳುತ್ತಿಲ್ಲ. ಜಂಬೂಸವಾರಿಗೆ ಐದು ಆನೆಗಳು ಮಾತ್ರ ಸಾಕು. ಆದರೆ ನಾವು 8 ಆನೆಗಳು ತಂದಿದ್ದು, ನಗರದ ವಾತಾವರಣಕ್ಕೆ ಹೊಂದಿಕೊಳ್ಳಲು ಕೊನೆ ಹಂತದಲ್ಲಿ ಸಮಸ್ಯೆಯಾಗದಂತೆ ಕ್ರಮ ಕೈಗೊಳ್ಳಲಾಗಿದೆ. ದಸರಾ ವೇಳೆ ಆನೆ ಅಭಿಮನ್ಯು ಅಕ್ಕಪಕ್ಕ ಎರಡು ಹೆಣ್ಣಾನೆಗಳು ಬಳಕೆ ಆಗುತ್ತವೆ. ನಿಶಾನೆ ಆನೆ, ನೌಪತ್ ಆನೆ ಸೇರಿ ಒಟ್ಟು 5 ಆನೆ ಜಂಬೂಸವಾರಿಯಲ್ಲಿ ಬಳಸಿಕೊಳ್ಳಲಾಗುವುದು ಎಂದು ವಲಯ ಅರಣ್ಯಾಧಿಕಾರಿ ಕರಿಕಾಳನ್ ಮಾಹಿತಿ ನೀಡಿದ್ದಾರೆ.

ಆರ್. ಅಶೋಕ್ ಸೀನಿಯರ್, ಅವರಿಗೇ ಬೆಂಗಳೂರು ಉಸ್ತುವಾರಿ!
ಸಚಿವ ಆರ್. ಅಶೋಕ್ ಸೀನಿಯರ್ ಮೋಸ್ಟ್ ಶಾಸಕರಾಗಿದ್ದು, ಎಲ್ಲಕ್ಕಿಂತ ಮೇಲಾಗಿ ಮೂಲ ಬಿಜೆಪಿಗರು. ನಾವೆಲ್ಲ ಬೇರೆ ಪಕ್ಷದಿಂದ ಬಂದವರು ಎಂದು ಸಚಿವ ಎಸ್.ಟಿ. ಸೋಮಶೇಖರ್ ಭಾನುವಾರ ಮೈಸೂರಿನಲ್ಲಿ ಹೇಳಿದ್ದಾರೆ.
ಬೆಂಗಳೂರು ಉಸ್ತುವಾರಿ ವಿಚಾರಕ್ಕೆ ಸಂಬಂಧಿಸಿದಂತೆ ಆರ್. ಅಶೋಕ್ ಪರ ಬ್ಯಾಟಿಂಗ್ ಮಾಡಿದ್ದಾರೆ. ಆರ್. ಅಶೋಕ್ ಬಗ್ಗೆ ಯಾರೂ ಮಾತಾನಾಡುವುದೇನಿಲ್ಲ. ಅಶೋಕ್‌ರನ್ನು ಯಾರೂ ವಿರೋಧ ಮಾಡುತ್ತಿಲ್ಲ. ಯಾವ ಜಿಲ್ಲೆಗೆ ಯಾವ ಉಸ್ತುವಾರಿ ಕೊಡಬೇಕು ಅನ್ನುವುದು ಮುಖ್ಯಮಂತ್ರಿಗಳ ಪರಮಾಧಿಕಾರ ಎಂದು ಸಚಿವ ಎಸ್.ಟಿ. ಸೋಮಶೇಖರ್ ಹೇಳಿದರು.
ಇತ್ತೀಚಿಗೆ ಬೆಂಗಳೂರು ಉಸ್ತುವಾರಿ ವಿಚಾರವಾಗಿ ಮಾತನಾಡಿದ್ದ ಸಚಿವ ವಿ. ಸೋಮಣ್ಣ ತಾನು ಅಶೋಕ್ಗಿಂತ ಸೀನಿಯರ್ ಮೋಸ್ಟ್ ಇದ್ದೀನಿ. ಹಾಗಾಗಿ ತನಗೇ ಉಸ್ತವಾರಿ ನೀಡಿ ಅಥವಾ ಇಬ್ಬರಿಗೆ ಅರ್ಧ- ಅರ್ಧ ನೀಡುವಂತೆ ಕೇಳಿದ್ದರು. ಬಳಿಕ ರಾಜ್ಯ ರಾಜಕಾರಣದಲ್ಲಿ ಉಸ್ತುವಾರಿ ವಿಚಾರ ಭಾರೀ ಗದ್ದಲ ಸೃಷ್ಟಿಸಿತ್ತು.












Click it and Unblock the Notifications