ಮುಡಾ ಹಗರಣ; ಬಿಜೆಪಿ-ಜೆಡಿಎಸ್ 'ಮೈಸೂರು ಚಲೋ' ಹೋರಾಟ ಪೂರ್ಣ!
ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡುವಂತೆ ಒತ್ತಾಯಿಸಿ ಬಿಜೆಪಿ ಹಾಗೂ ಜೆಡಿಎಸ್ ಹಮ್ಮಿಕೊಂಡಿದ್ದ ಮೈಸೂರು ಚಲೋ ಸಮಾವೇಶ ಶನಿವಾರ ಮುಕ್ತಾಯವಾಗಿದೆ. ಕಳೆದ ಎಂಟು ದಿನಗಳಿಂದ ಮಳೆ, ಬಿಸಿಲು, ಗಾಳಿ ಎನ್ನದೆ 140 ಕಿಮೀ ಪಾದಯಾತ್ರೆ ನಡೆಸುವ ಮೂಲಕ ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ರಣಕಹಳೆ ಮೊಳಗಿಸಿದ್ದ ಮೈತ್ರಿ ನಾಯಕರು, ಶನಿವಾರ ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಸಮಾವೇಶ ನಡೆಸಿ ಯಶಸ್ವಿಯಾಗಿ ಪೂರ್ಣಗೊಳಿಸಿದರು.
ಮೈಸೂರು, ಚಾಮರಾಜನಗರ, ಮಂಡ್ಯ, ಹಾಸನ, ಕೊಡಗು ಸೇರಿದಂತೆ ಹಲವು ಜಿಲ್ಲೆಗಳಿಂದ ಒಂದು ಲಕ್ಷಕ್ಕೂ ಅಧಿಕ ಮಂದಿ ಸಮಾವೇಶಕ್ಕೆ ಆಗಮಿಸಿದ್ದರು. ಮೈಸೂರು ವಿಭಾಗದ ಜಿಲ್ಲೆಗಳಿಂದ ಕಾರ್ಯಕರ್ತರನ್ನು ಕರೆತರಲು ಸಾವಿರಕ್ಕೂ ಹೆಚ್ಚು ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ವ್ಯವಸ್ಥೆ ಮಾಡಲಾಗಿತು. ನಗರದ ಪ್ರಮುಖ ರಸ್ತೆಗಳ ತುಂಬಾ ಕೇಸರಿ-ಹಸಿರು ಬಾವುಟಗಳು ರಾರಾಜಿಸಿದವು. ಮೈತ್ರಿ ನಾಯಕರ ಫ್ಲೆಕ್ಸ್ ಹಾಗೂ ಬಂಟಿಂಗ್ಸ್‌ಗಳನ್ನು ರಸ್ತೆ ವಿಭಜಕ, ಮೈದಾನ ಹಾಗೂ ಮರಗಳಿಗೆ ನೇತು ಹಾಕಲಾಗಿತ್ತು.

300 ಪೊಲೀಸ್ ಸಿಬ್ಬಂದಿ ನಿಯೋಜನೆ
ರಾಘವೇಂದ್ರ ಸ್ವಾಮಿ ಮಠದಿಂದ ಮಹಾರಾಜ ಕಾಲೇಜು ಮೈದಾನದವರೆಗೆ ನಡೆದ ಪಾದಯಾತ್ರೆಗೆ ಹೆಜ್ಜೆ ಹೆಜ್ಜೆಗೂ ಪೊಲೀಸ್ ಸರ್ಪಗಾವಲಿತ್ತು. ಯಾತ್ರೆಯ ಮಾರ್ಗದಲ್ಲಿ 300ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿತ್ತು. ಅಲ್ಲದೇ ಪಾದಯಾತ್ರೆಯಲ್ಲಿದ್ದ ಜನರನ್ನು ಪೊಲೀಸರು ಸುತ್ತುವರಿದು ಅನಾಹುತವಾಗದಂತೆ ಎಚ್ಚರಿಕೆ ವಹಿಸಿದ್ದರು.
ವಿಶೇಷ ಪೂಜೆ ಸಲ್ಲಿಸಿದ ನಾಯಕರು
ಪಾದಯಾತ್ರೆಗೂ ಮುನ್ನ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಕೋಟೆ ಆಂಜನೇಯ ಸ್ವಾಮಿ ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಕೆ.ಆರ್.ವೃತ್ತದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು.
ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಶುಕ್ರವಾರ ಕಾಂಗ್ರೆಸ್ ಪಕ್ಷ ಗುಟುರು ಹಾಕಿದ್ದ ವೇದಿಕೆಯಲ್ಲೇ ಶನಿವಾರ ಬಿಜೆಪಿ, ಜೆಡಿಎಸ್ ದೋಸ್ತಿ ಪಕ್ಷಗಳ ನಾಯಕರು ಆಡಳಿತಾರೂಢ ಕಾಂಗ್ರೆಸ್ ಪಕ್ಷದ ವಿರುದ್ಧ ವಾಗ್ಭಾಣ ಬಿಟ್ಟರು. ಶುಕ್ರವಾರ ಮಳೆಯಿಂದ ಒದ್ದೆಯಾಗಿದ್ದ ವೇದಿಕೆಯನ್ನು ಬಹುಬೇಗನೆ ಬಿಜೆಪಿ-ಜೆಡಿಎಸ್ ಸಮಾವೇಶಕ್ಕೆ ಸಿಂಗರಿಸಲಾಗಿತ್ತು.












Click it and Unblock the Notifications