• search
  • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

"ಫ್ರೀ ಕಾಶ್ಮೀರ್" ಫಲಕ ಪ್ರದರ್ಶನ ಪ್ರಕರಣ; ಇಬ್ಭಾಗವಾದ ಜಿಲ್ಲಾ ವಕೀಲರ ಸಂಘ

By ಮೈಸೂರು ಪ್ರತಿನಿಧಿ
|

ಮೈಸೂರು, ಜನವರಿ 21: ಜೆಎನ್ ಯು ವಿದ್ಯಾರ್ಥಿಗಳ ಮೇಲಿನ ದೌರ್ಜನ್ಯ ಖಂಡಿಸಿ ಮೈಸೂರು ವಿಶ್ವವಿದ್ಯಾಲಯದಲ್ಲಿ ನಡೆದ ಪ್ರತಿಭಟನೆ ವೇಳೆ "ಫ್ರೀ ಕಾಶ್ಮೀರ್" ಫಲಕ ಪ್ರದರ್ಶಿಸಿದ್ದ ಯುವತಿ ನಳಿನಿ ಪರ ವಕಾಲತ್ತು ವಹಿಸುವ ವಿಚಾರದಲ್ಲಿ ಮೈಸೂರು ಜಿಲ್ಲಾ ವಕೀಲರ ಸಂಘವೇ ಇಬ್ಭಾಗವಾಗಿದೆ.

ನಳಿನಿ ಪರ ವಕಾಲತ್ತಿಗೆ ಮೈಸೂರು ಜಿಲ್ಲಾ ವಕೀಲರ ಸಂಘ ನಿರಾಕರಿಸಿದ್ದ ಹಿನ್ನೆಲೆಯಲ್ಲಿ ನಿನ್ನೆ ರಾಜ್ಯದ ಇತರೆ ಜಿಲ್ಲೆಗಳ ವಕೀಲರು ವಕಾಲತ್ತು ವಹಿಸಿಕೊಳ್ಳಲು ಮುಂದೆ ಬಂದಿದ್ದರು. ದ್ವಾರಕಾನಾಥ್ ಮತ್ತು ತಂಡವೂ ವಕಾಲತ್ತಿಗೆ ಅರ್ಜಿ ಸಲ್ಲಿಸಿತ್ತು. ಬೆಂಗಳೂರು, ಮಂಡ್ಯ, ಚಾಮರಾಜನಗರ, ಶಿವಮೊಗ್ಗ, ದಾವಣಗೆರೆ ಸೇರಿದಂತೆ ಹಲವು ಜಿಲ್ಲೆಗಳ ವಕೀಲರು ಬಂದಿದ್ದು, 200ಕ್ಕೂ ಹೆಚ್ಚು ವಕೀಲರು ಸಹಿ ಮಾಡಿರುವ ವಕಾಲತ್ತು ಪತ್ರದೊಂದಿಗೆ ಎರಡನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯದ ಮುಂದೆ ಹಾಜರಾಗಿದ್ದರು.

ಫ್ರೀ ಕಾಶ್ಮೀರ್ ಫಲಕ ಪ್ರದರ್ಶನ; ನಳಿನಿ ಪರ ವಕಾಲತ್ತಿಗೆ ಮುಂದಾದ ಸಿ.ಎಸ್.ದ್ವಾರಕಾನಾಥ್ ತಂಡ

ಮತ್ತೊಂದೆಡೆ ಮೈಸೂರು ವಕೀಲರ ಸಂಘ ಸಭೆ ಕರೆದಿದ್ದು, ಪ್ರಕರಣದ ಕುರಿತು ಮತ್ತೊಮ್ಮೆ ತಮ್ಮ ನಿಲುವನ್ನು ಪ್ರಕಟಿಸುವುದಾಗಿ ತಿಳಿಸಿತ್ತು. ಇದರ ಬೆನ್ನಲ್ಲೇ ಮೈಸೂರು ವಕೀಲರು ಸಹ ನಳಿನಿ ವಕಾಲತ್ತು ವಹಿಸುವ ನಿರ್ಧಾರ ಮಾಡಿ, ನ್ಯಾಯಾಲಯಕ್ಕೆ ಜಾಮೀನು ಅರ್ಜಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಮೈಸೂರು ವಕೀಲರ ಸಂಘದ ನಿರ್ಣಯಕ್ಕೆ ವಿರುದ್ಧವಾಗಿ ನಡೆದುಕೊಂಡ ಇವರ ವಿರುದ್ಧ ಕ್ರಮಕ್ಕೆ ಸಂಘ ಮುಂದಾಗಿದೆ.

"ದೇಶ ದ್ರೋಹದ ಪ್ರಕರಣ ಎದುರಿಸುತ್ತಿರುವ ಆರೋಪಿಗಳ ಪರವಾಗಿ ವಕಾಲತ್ತು ವಹಿಸಬೇಡಿ. ಒಂದು ವೇಳೆ ವಕಾಲತ್ತು ವಹಿಸಿದರೆ ಅಂಥವರನ್ನು ಸಂಘದಿಂದ ಅಮಾನತುಗೊಳಿಸಲಾಗುವುದು" ಎಂದು ಜಿಲ್ಲಾ ವಕೀಲರ ಸಂಘದ ಸಾಮಾನ್ಯ ಸಭೆಯಲ್ಲಿ ಮೈಸೂರು ವಕೀಲರ ಸಂಘದ ಅಧ್ಯಕ್ಷ ಆನಂದ್ ಕುಮಾರ್ ಎಚ್ಚರಿಕೆ ನೀಡಿದ್ದಾರೆ.

"ಫ್ರೀ ಕಾಶ್ಮೀರ್" ಪ್ರಕರಣ: ನಳಿನಿ ಪರ ವಕಾಲತ್ತು ವಹಿಸದಿರಲು ವಕೀಲರ ನಿರ್ಧಾರ

ಆದರೆ ಸಭೆಯ ಈ ನಿರ್ಣಯಕ್ಕೆ ಸುಮಾರು 150 ವಕೀಲರು ವಿರೋಧ ವ್ಯಕ್ತಪಡಿಸಿದ್ದಾರೆ. ತಾವು ನಳಿನಿ ಪರ ವಕಾಲತ್ತು ವಹಿಸಲು ಸಿದ್ಧ ಎಂದಿದ್ದಾರೆ. ಇದೇ ಉದ್ದೇಶದೊಂದಿಗೆ ನ್ಯಾಯಾಲಯಕ್ಕೆ ಅರ್ಜಿಯನ್ನೂ ಸಲ್ಲಿಸಿರುವುದಾಗಿ ಹೇಳಿದ್ದು, ಇದೀಗ ಮೈಸೂರು ವಕೀಲರ ಸಂಘ ಇಬ್ಭಾಗವಾದಂತಾಗಿದೆ.

English summary
The Mysuru District Advocates Association split over the case of advocacy of Nalini, a girl who hold "Free Kashmir" placard during a protest at the University of Mysore condemning the atrocities on JNU students,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X