ಅಭಿವೃದ್ಧಿಗಿಂತ ಹೆಸರಿನ ಮೇಲೆ ಒಲವು: ವಿವಾದದೊಂದಿಗೆ ಮುನ್ನಲೆಗೆ ಬಂದ ಮೈಸೂರು ವಿಮಾನ ನಿಲ್ದಾಣ
ಮೈಸೂರು, ಡಿಸೆಂಬರ್ 18: ಮಂಡಕಳ್ಳಿ ವಿಮಾನ ನಿಲ್ದಾಣವೆಂದೇ ಕರೆಯಲ್ಪಡುತ್ತಿರುವ ಮೈಸೂರು ವಿಮಾನ ನಿಲ್ದಾಣಕ್ಕೆ ಯಾರ ಹೆಸರು ಇಡಬೇಕು ಎಂಬ ವಿಚಾರ ಚರ್ಚೆಯಲ್ಲಿರುವಾಗಲೇ ಕಾಂಗ್ರೆಸ್ ಶಾಸಕ ಅಬ್ಬಯ್ಯ ಪ್ರಸಾದ್ ಅವರು ಟಿಪ್ಪು ಸುಲ್ತಾನ್ ಹೆಸರಿಡುವಂತೆ ಆಗ್ರಹಿಸಿರುವುದು ಈಗ ಪರವಿರೋಧಗಳ ಚರ್ಚೆಗೆ ವೇದಿಕೆ ಮಾಡಿಕೊಟ್ಟಿದೆ. ಮುಂದೆ ಇದು ಎಲ್ಲಿಗೆ ಬಂದು ನಿಲ್ಲುತ್ತೋ ಗೊತ್ತಿಲ್ಲ. ಆದರೆ ಮೈಸೂರು ವಿಮಾನ ನಿಲ್ದಾಣಕ್ಕೊಂದು ಹೆಸರಿನ ಅಗತ್ಯವಿರುವುದಂತು ನಿಜ.
ಇವತ್ತು ಮೈಸೂರು ದೇಶವಿದೇಶಗಳಲ್ಲಿ ಖ್ಯಾತಿ ಗಳಿಸಿದ್ದರೆ, ಹಲವು ಪ್ರಥಮಗಳಿಗೆ ಮುನ್ನುಡಿ ಬರೆದಿದ್ದರೆ ಅದಕ್ಕೆ ಕಾರಣ ಮೈಸೂರು ಮಹಾರಾಜರು ಎಂಬುದರಲ್ಲಿ ಎರಡು ಮಾತಿಲ್ಲ. ಸುಂದರ, ಪಾರಂಪರಿಕ ನಗರಿಯನ್ನು ನಿರ್ಮಿಸುವಲ್ಲಿ ಮೈಸೂರು ಮಹಾರಾಜರ ದೊಡ್ಡ ಕೊಡುಗೆಯಿದೆ. ಹೀಗಾಗಿ ಮೈಸೂರು ಮಹಾರಾಜರ ಮನೆತನಕ್ಕೆ ಸಂಬಂಧಿಸಿದಂತೆ ಹೆಸರಿಡಬೇಕು ಎಂಬುದು ಬಹುತೇಕರ ಒತ್ತಾಯವಾಗಿದೆ.

ಅದು ಏನೇ ಇರಲಿ ಇದೆಲ್ಲವನ್ನು ಬದಿಗಿಟ್ಟು ಮೈಸೂರು ವಿಮಾನ ನಿಲ್ದಾಣದ ಬಗ್ಗೆ ನಾವು ನೋಡುವುದಾದರೆ, ಇದು ಇತರೆಡೆಗೆ ಹೋಲಿಸಿದರೆ ವಿಮಾನಯಾನದ ವಿಚಾರದಲ್ಲಿ ಅಭಿವೃದ್ಧಿ ಕಾಣಲಿಲ್ಲ ಎಂಬುದನ್ನು ನಾವು ಒಪ್ಪಿಕೊಳ್ಳಲೇ ಬೇಕಾಗುತ್ತದೆ. ಹೀಗಾಗಿ ವಿಮಾನ ನಿಲ್ದಾಣ ನಿರ್ಮಿಸಿದ ಬಳಿಕವೂ ಇಲ್ಲಿಗೆ ವಿಮಾನವನ್ನು ತರುವುದು ದೊಡ್ಡದೊಂದು ಸಾಹಸವಾಗಿತ್ತು ಎಂಬುದನ್ನು ಮರೆಯುವಂತಿಲ್ಲ. ಬಹಳಷ್ಟು ಸಮಯಗಳ ಕಾಲ ಇಲ್ಲಿಗೆ ವಿಮಾನವೇ ಬಾರದೆ ನೀರವ ಮೌನ ಆವರಿಸಿದ್ದನ್ನು ನಾವು ಮರೆಯುವಂತಿಲ್ಲ.
ಮಂಡಕಳ್ಳಿ ವಿಮಾನ ನಿಲ್ದಾಣವಾಗಿ ಖ್ಯಾತಿ
ಮೈಸೂರಿಗೆ ವಿಮಾನ ಬಂದರೆ ಹತ್ತು ಹಲವು ರೀತಿಯಲ್ಲಿ ಅಭಿವೃದ್ಧಿಯಾಗುತ್ತದೆ. ಪ್ರವಾಸಿಗರು ಕೂಡ ವಿಮಾನದಲ್ಲಿಯೇ ಬರುತ್ತಾರೆ ಎಂಬ ನಂಬಿಕೆಯಿತ್ತು. ಆದರೆ ಅಂತಹದೊಂದು ಮಹಾ ಅದ್ಭುತಗಳಂತು ಆಗಲೇ ಇಲ್ಲ. ಅದರಲ್ಲೂ ಬೆಂಗಳೂರು ಮೈಸೂರು ದಶಪಥ ರಸ್ತೆಯಾದ ಬಳಿಕ ವಿಮಾನದಲ್ಲಿ ಬರುವುದಕ್ಕಿಂತ ಸುಲಭವಾಗಿ ಬೆಂಗಳೂರಿನಿಂದ ರಸ್ತೆ ಮಾರ್ಗದಲ್ಲಿ ಬರುತ್ತಿದ್ದಾರೆ ಎಂಬುದನ್ನು ತಳ್ಳಿ ಹಾಕಲಾಗದು.
ಮೈಸೂರು ವಿಮಾನ ನಿಲ್ದಾಣದ ಇತಿಹಾಸವನ್ನು ನೋಡಿದ್ದೇ ಆದರೆ ಇಲ್ಲಿಗೆ ವಿಮಾನ ನಿಲ್ದಾಣಬೇಕೆಂಬುದು ಮಹಾರಾಜರ ಕಾಲದ ಬೇಡಿಕೆಯಾಗಿತ್ತು. ಅದು ಕಾರ್ಯಗತಗೊಂಡು ಸಕಾರಗೊಂಡಿದ್ದು ದೊಡ್ಡ ಸಾಹಸವೇ ಸರಿ. ವಿಮಾನ ನಿಲ್ದಾಣದ ಬಗ್ಗೆ ಹೇಳಬೇಕೆಂದರೆ ಮೈಸೂರು ನಗರದ ದಕ್ಷಿಣಕ್ಕೆ ನಂಜನಗೂಡಿಗೆ ತೆರಳುವ ರಸ್ತೆಯಲ್ಲಿ ಸುಮಾರು ಹತ್ತು ಕಿ.ಮೀ. ದೂರದಲ್ಲಿದೆ. ಮಂಡಕಳ್ಳಿ ಎಂಬಲ್ಲಿ ನಿರ್ಮಾಣವಾಗಿರುವ ಕಾರಣ ಹೆಚ್ಚಿನವರು ಮಂಡಕಳ್ಳಿ ವಿಮಾನ ನಿಲ್ದಾಣ ಎಂದು ಕರೆಯುತ್ತಾರೆ.

ನಿಲ್ದಾಣಕ್ಕೆ ಜಾಗ ಕಾಯ್ದಿರಿಸಿದ್ದ ಮಹಾರಾಜರು
ಇದರ ಇತಿಹಾಸವನ್ನು ಕೆದಕಿ ನೋಡಿದರೆ 1947ರಲ್ಲಿಯೇ ಅಂದಿನ ಮಹಾರಾಜರು ಸುಮಾರು 168 ಎಕರೆಯ ಭೂಮಿಯನ್ನು ವಿಮಾನ ನಿಲ್ದಾಣಕ್ಕೆ ಕಾಯ್ದಿರಿಸಿದ್ದರು. ಆ ನಂತರ 1950ರಲ್ಲಿ ವಿಮಾನ ನಿಲ್ದಾಣ ಪ್ರಾರಂಭಿಸಲಾಯಿತು. ಆ ದಿನಗಳಲ್ಲಿ ದಸರಾ ಮಹೋತ್ಸವದ ಸಂದರ್ಭ ಮಾತ್ರ "ವಿಮಾನ ವಿಹಾರ" ನಡೆಸಲಾಗುತ್ತಿತ್ತು. ನಂತರದ ವರ್ಷಗಳಲ್ಲಿ ಅಂದರೆ 1958ರಲ್ಲಿ ನಾಲ್ಕು ಆಸನಗಳುಳ್ಳ ಲಘು ವಿಮಾನ ಇಲ್ಲಿ ಇಳಿಯುತ್ತಿತ್ತು ಎಂದು ಹೇಳಲಾಗಿದೆ.
ಆದರೆ ಪೂರ್ಣಪ್ರಮಾಣದ ವಿಮಾನ ನಿಲ್ದಾಣವಾಗಲೇ ಇಲ್ಲ. ಹೀಗಾಗಿ ಮೈಸೂರಿನಲ್ಲಿ ವಿಮಾನ ನಿಲ್ದಾಣವಿದ್ದರೂ ವಿಮಾನಗಳೇ ಹಾರಾಡುತ್ತಿಲ್ಲ ಎಂಬ ಕೊರಗು ಇಲ್ಲಿಯ ಜನತೆಯನ್ನು ಕಾಡತೊಡಗಿತ್ತು. ಜತೆಗೆ ಇಲ್ಲಿಗೆ ವಿಮಾನ ಬರಬೇಕು. ನಾವೆಲ್ಲರೂ ವಿಮಾನದಲ್ಲಿ ಹಾರಾಡಬೇಕು ಬಯಕೆ ಜನರನ್ನು ಕಾಡುತ್ತಲೇ ಇತ್ತು. ಈ ವಿಮಾನ ನಿಲ್ದಾಣವನ್ನು ವಿಸ್ತರಿಸುವ ಮೂಲಕ ದೊಡ್ಡ ವಿಮಾನಗಳು ಕೂಡ ಹಾರಾಡಲು ಅನುಕೂಲವಾಗುವಂತೆ ಅಭಿವೃದ್ಧಿಗೊಳಿಸಲು 2005ರಲ್ಲಿ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ(ಎಎಐ) ಮತ್ತು ರಾಜ್ಯ ಸರ್ಕಾರದ ನಡುವೆ ಒಡಂಬಡಿಕೆ ಪತ್ರ (ಎಂಓಯು)ಕ್ಕೆ ಸಹಿ ಹಾಕಲಾಯಿತು. ಆ ನಂತರ ಕಾಮಗಾರಿಯೂ ಆರಂಭವಾಯಿತು. ಆದರೆ ಇದು ಆಮೆಗತಿಯಲ್ಲಿಯೇ ನಡೆಯತೊಡಗಿತು.
2010ರ ಮೇ 15ರಂದು ನಿಲ್ದಾಣ ಉದ್ಘಾಟನೆ
ಈ ಸಂದರ್ಭ ಕೆಲವು ಸಂಘಟನೆಗಳು ನಿಲ್ದಾಣದ ಕಾರ್ಯವೈಖರಿಯ ವಿರುದ್ಧ ಪ್ರತಿಭಟನೆಗಳನ್ನು ಕೂಡ ನಡೆಸಿದ್ದವು. ಎಲ್ಲ ವೈರುಧ್ಯಗಳ ನಡುವೆಯೂ ವಿಮಾನ ನಿಲ್ದಾಣದ ಕಾಮಗಾರಿ ಮುಗಿದು 2010ರ ಮೇ 15ರಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಿಲ್ದಾಣವನ್ನು ಉದ್ಘಾಟಿಸಿದರು. ಆದರೆ ಮೈಸೂರಿಗೆ ವಿಮಾನ ಸಂಚಾರ ಆರಂಭಿಸಲು ಯಾವುದೇ ಖಾಸಗಿ ವಿಮಾನಯಾನ ಸಂಸ್ಥೆಗಳು ಮುಂದೆ ಬಂದಿರಲಿಲ್ಲ.
ಕೊನೆಗೂ ಆ ವರ್ಷದ ಅಕ್ಟೋಬರ್ 1ರಂದು ವಿಜಯ್ ಮಲ್ಯ ಒಡೆತನದ ಕಿಂಗ್‌ಫಿಶರ್ ವಿಮಾನ ಮೈಸೂರಿನಿಂದ ಬೆಂಗಳೂರು ಮೂಲಕ ಚೆನ್ನೈಗೆ ಹಾರಾಡಿ ಗಮನಸೆಳೆದಿತ್ತು. ಅವತ್ತು ಮೊದಲ ಬಾರಿಗೆ ಅಧಿಕೃತವಾಗಿ ಮೈಸೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ ವಿಮಾನದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ವಿಪಕ್ಷ ನಾಯಕ ಸಿದ್ದರಾಮಯ್ಯ, ಉದ್ಯಮಿ ವಿಜಯ್ ಮಲ್ಯ ಸೇರಿದಂತೆ ಹಲವು ನಾಯಕರು ಆಗಮಿಸಿದ್ದರು. ವಿಮಾನ ನಿಲ್ದಾಣದಲ್ಲಿ ಇಳಿಯುತ್ತಿದ್ದಂತೆಯೇ ನೀರನ್ನು ಚಿಮ್ಮಿಸುವ ಮೂಲಕ ಸ್ವಾಗತಿಸಲಾಗಿತ್ತು. ಆದರೆ ಕಿಂಗ್‌ಫಿಶರ್ ಏರ್‌ಲೈನ್ಸ್ ನಷ್ಟದ ಸುಳಿಯಲ್ಲಿ ಸಿಲುಕಿದ್ದರಿಂದಾಗಿ ಹಾರಾಟ ನಿಲ್ಲಿಸಿದ್ದು ಇತಿಹಾಸ.
50-60 ಆಸನಗಳ ವಿಮಾನ ಹಾರಾಟ
ಇವತ್ತು ಮೈಸೂರು ವಿಮಾನ ನಿಲ್ದಾಣಕ್ಕೆ ಹೊರಗಿನಿಂದ ವಿಮಾನಗಳು ಬರುತ್ತಿವೆ. ಅದರಂತೆ ಇಲ್ಲಿಂದಲೂ ಬೇರೆಡೆಗೆ ಹಾರಾಡುತ್ತಿವೆ. ಈಗಿರುವ ರನ್‌ವೇ 1.7ಕಿ.ಮೀ. ಉದ್ದವಿದ್ದು, ಇದು 50-60 ಆಸನಗಳ ಸಾಮರ್ಥ್ಯದ ಎಟಿಆರ್ 72 ವಿಮಾನ ಹಾರಾಟಕ್ಕೆ ಮಾತ್ರ ಸೂಕ್ತವಾಗಿದೆ. ಈ ರನ್ ವೇಯನ್ನು ವಿಸ್ತರಿಸಿದರೆ 180 ಆಸನ ಸಾಮರ್ಥ್ಯದ ಎಬಿ 321 ವಿಮಾನ ಹಾರಾಟ ನಡೆಸಬಹುದಂತೆ ಇದು ಸಾಧ್ಯವಾಗಬೇಕಾದರೆ 333ಎಕರೆ ಭೂಮಿ ಅಗತ್ಯವಿದೆ ಎಂದು ಹೇಳಲಾಗುತ್ತಿದೆ. ಆದರೆ ಅದೆಲ್ಲವೂ ಆಗುತ್ತದೆ ಎಂಬುದು ಕನಸಿನ ಮಾತಾಗಿದೆ.
ಇದೆಲ್ಲದರ ನಡುವೆ ಮೈಸೂರು ವಿಮಾನ ನಿಲ್ದಾಣ ಸುರಕ್ಷವಲ್ಲ ಎಂಬ ವಾದವನ್ನು ಕೆಲವರು ಮಾಡುತ್ತಿದ್ದು, ಅವರ ಪ್ರಕಾರ ಸಮುದ್ರ ಮಟ್ಟದಿಂದ 2865 ಅಡಿ ಎತ್ತರವಿರುವ ಚಾಮುಂಡಿಬೆಟ್ಟವು ರಾತ್ರಿ ವೇಳೆ ವಿಮಾನ ಹಾರಾಟಕ್ಕೆ ತೊಂದರೆ ನೀಡಲಿದೆಯಂತೆ. ಆದರೆ ಈ ಆರೋಪಗಳನ್ನು ಕೆಲವರು ಒಪ್ಪುತ್ತಿಲ್ಲ. ಅವರು ಹೇಳುವುದೇನೆಂದರೆ ಚಾಮುಂಡಿಬೆಟ್ಟವು ವಿಮಾನ ನಿಲ್ದಾಣದಿಂದ ನಾಲ್ಕೂವರೆ ಕಿ.ಮೀ. ದೂರದಲ್ಲಿದೆ. ಇದರಿಂದ ವಿಮಾನ ಲ್ಯಾಂಡಿಗ್ ಹಾಗೂ ಟೇಕಾಫ್‌ಗೆ ಯಾವುದೇ ತೊಂದರೆ ಇಲ್ಲ ಎನ್ನುತ್ತಾರೆ.
ಹೆಸರಿಡುವ ವಿಚಾರದಲ್ಲಿ ರಾಜಕೀಯ
ಅದು ಏನೇ ಇರಲಿ ಮೈಸೂರು ವಿಮಾನ ನಿಲ್ದಾಣವನ್ನು ಮೇಲ್ದೆದರ್ಜೆಗೇರಿಸುವುದು ಮತ್ತು ಸೌಲಭ್ಯ ಕಲ್ಪಿಸುವುದು, ವಿಮಾಣದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಜನ ಪ್ರಯಾಣಿಸುವಂತೆ ಮಾಡುವುದು, ಹೀಗೆ ವಿಮಾನಯಾನದ ಅಭಿವೃದ್ಧಿಯತ್ತ ಗಮನಹರಿಸುವುದು ಈಗಿನ ಅಗತ್ಯತೆಯಾಗಿದೆ. ಜತೆಗೆ ಈ ವಿಮಾನ ನಿಲ್ದಾಣಕ್ಕೆ ಕೊಡುಗೆ ನೀಡಿದವರನ್ನು ಕೂಡ ಸ್ಮರಿಸಬೇಕಾಗಿದೆ. ಅದನ್ನು ಹೊರತುಪಡಿಸಿ ವಿಮಾನ ನಿಲ್ದಾಣಕ್ಕೆ ಹೆಸರಿಡುವ ವಿಚಾರದಲ್ಲಿ ರಾಜಕೀಯ ಮಾಡುವುದೆಷ್ಟು ಸರಿ?












Click it and Unblock the Notifications