ಮೈಸೂರು ದಸರಾ 2023ರ ಜಂಬೂ ಸವಾರಿ ಹೇಗಿರಲಿದೆ ಗೊತ್ತಾ?, ಇಲ್ಲಿದೆ ಮಾಹಿತಿ
ಮೈಸೂರು, ಅಕ್ಟೋಬರ್, 24: ಕಳೆದ ಒಂಬತ್ತು ದಿನಗಳಿಂದ ದಸರಾ ಸಂಭ್ರಮದಲ್ಲಿ ತೇಲಿದ ಜನ ಇವತ್ತು ಜಂಬೂಸವಾರಿ ವೀಕ್ಷಿಸುವ ತವಕದಲ್ಲಿದ್ದಾರೆ. ಈಗಾಗಲೇ ಜಂಬೂಸವಾರಿಗೆ ಕ್ಷಣಗಣನೆ ಆರಂಭವಾಗಿದ್ದು, ಜನ ಸಾಗರವೇ ಮೈಸೂರು ನಗರದತ್ತ ಮುಖ ಮಾಡಿದೆ. ಪಾಸು ಹೊಂದಿದವರು ಅರಮನೆ ಆವರಣದ ಕಡೆಗೆ ತೆರಳುತ್ತಿದ್ದರೆ, ಉಳಿದವರು ರಾಜಮಾರ್ಗದಲ್ಲಿ ಕುಳಿತು ವೀಕ್ಷಿಸುವ ಸಲುವಾಗಿ ಸೂಕ್ತ ಜಾಗದ ಹುಡುಕಾಟ ನಡೆಸುತ್ತಿದ್ದಾರೆ.
ವಿಶ್ವವಿಖ್ಯಾತ ಜಂಬೂ ಸವಾರಿಗೆ ಕ್ಷಣಗಣನೆ ಆರಂಭವಾಗಿದ್ದು, ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಅರಮನೆ ಆವರಣದಲ್ಲಿ 20 ಸಾವಿರಕ್ಕೂ ಹೆಚ್ಚು ಮಂದಿ ಕೂರಲು ಆಸನ ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ ಜಂಬೂ ಸವಾರಿ ಸಾಗುವ ಮಾರ್ಗದಲ್ಲಿ ರಸ್ತೆಯ ಇಕ್ಕೆಲಗಳಲ್ಲಿ ಪೆಂಡಾಲ್ ಹಾಕಿ ಆಸನದ ವ್ಯವಸ್ಥೆ ಮಾಡಲಾಗಿದೆ. ಗೋಲ್ಡ್ ಕಾರ್ಡ್, ವಿವಿಐಪಿ, ವಿಐಪಿ ಪಾಸ್‌ವುಳ್ಳವರಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ.

ಜೊತೆಗೆ ಜಂಬೂ ಸವಾರಿ ವೇಳೆ ಸಾರ್ವಜನಿಕರು ರಸ್ತೆಗೆ ಬರದಂತೆ ಎರಡೂ ಕಡೆ ಮರದ ಬ್ಯಾರಿಕೇಡ್ ನಿರ್ಮಿಸಲಾಗಿದೆ. ಹಾಗೆಯೇ ಎಲ್ಲರ ಮೇಲೂ ಹದ್ದಿನ ಕಣ್ಣಿಡಲು ಕೆ.ಆರ್.ವೃತ್ತ, ಆಯುರ್ವೇದ ಕಾಲೇಜು ವೃತ್ತ, ಹೈವೈ ಸರ್ಕಲ್ ಸೇರಿದಂತೆ ಪ್ರಮುಖ ವೃತ್ತ ಸೇರಿದಂತೆ ಅಂಬಾರಿ ಸಂಚರಿಸುವ ಮಾರ್ಗ ಹಾಗೂ ವಿವಿಧೆಡೆಗಳಲ್ಲಿ ಸಾವಿರ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.
ಸವಾರಿ ವೀಕ್ಷಿಸಲು ದೇಶ ವಿದೇಶದ ಮತ್ತು ಸ್ಥಳೀಯರು ಸೇರಿ ಲಕ್ಷಾಂತರ ಮಂದಿ ಆಗಮಿಸುವುದರಿಂದ ಅರಮನೆ ಆವರಣ ಸೇರಿದಂತೆ ಜಂಬೂ ಸವಾರಿ ಸಾಗುವ ರಾಜಮಾರ್ಗದಲ್ಲಿ ಆಸನದ ವ್ಯವಸ್ಥೆ ಸೇರಿದಂತೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಜಂಬೂಸವಾರಿ ಮಧ್ಯಾಹ್ನ 1.46ರಿಂದ 2.08ರವರೆಗೆ ಸಲ್ಲುವ ಶುಭ ಮಕರ ಲಗ್ನದಲ್ಲಿ ಅರಮನೆಯ ಬಲರಾಮ ದ್ವಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಂದಿಧ್ವಜಕ್ಕೆ ಪೂಜೆ ಸಲ್ಲಿಸಲಿದ್ದಾರೆ.
ಇದಾದ ನಂತರ ಜಂಬೂ ಸವಾರಿ ಆರಂಭಗೊಳ್ಳಲಿದೆ. ಗಜಪಡೆಯ ನಾಯಕ ಅರ್ಜುನ ನಿಶಾನೆ ಆನೆಯಾಗಿ ದಸರಾ ಮೆರವಣಿಗೆಯನ್ನು ಮುನ್ನಡೆಸಲಿದ್ದು, ಸಂಜೆ 4:40ರಿಂದ 5ಗಂಟೆವರೆಗೆ ಸಲ್ಲುವ ಶುಭ ಮೀನ ಲಗ್ನದಲ್ಲಿ ವಿಜಯದಶಮಿ (ಜಂಬೂಸವಾರಿ)ಮೆರವಣಿಗೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಗಣ್ಯರು ಅಭಿಮನ್ಯು ಹೊತ್ತ ಚಿನ್ನದ ಅಂಬಾರಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಲಿದ್ದಾರೆ.
49 ಸ್ತಬ್ಧಚಿತ್ರ ಮತ್ತು ಜಾನಪದ ತಂಡ ಭಾಗಿ
ಜಂಬೂಸವಾರಿಯಲ್ಲಿ ಅಭಿಮನ್ಯು ಸೇರಿದಂತೆ 14 ಆನೆಗಳು, ಅಶ್ವರೋಹಿಪಡೆಗಳು, ಆನೆಗಾಡಿ ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿವೆ. ಇದರ ಜೊತೆಗೆ ಮೆರವಣಿಗೆಯಲ್ಲಿ ರಾಜ್ಯದ 31 ಜಿಲ್ಲಾ ಪಂಚಾಯಿತಿಗಳ, ರಾಜ್ಯಮಟ್ಟದ ವಿವಿಧ ಇಲಾಖೆಗಳು, ನಿಗಮ ಮಂಡಳಿಗಳು, ಸ್ತಬ್ಧಚಿತ್ರ ಉಪಸಮಿತಿ ಸೇರಿ ಒಟ್ಟು 49 ಸ್ತಬ್ಧಚಿತ್ರಗಳು ಸೇರಿದಂತೆ 100ಕ್ಕೂ ಹೆಚ್ಚು ಜಾನಪದ ತಂಡಗಳು ತೆರಳಲಿವೆ.
ಅರಮನೆ ಅಂಗಳದಲ್ಲಿ ಅಂಬಾರಿ ಆನೆಯ ಮೇಲಿನ ಚಿನ್ನದ ಅಂಬಾರಿಯಲ್ಲಿ ವಿರಾಜಮಾನಳಾದ ದೇವಿ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮಾಡುವ ವೇಳೆ ಶಿಷ್ಟಾಚಾರದ ಪ್ರಕಾರ ಮುಖ್ಯಮಂತ್ರಿ, ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ, ಜಿಲ್ಲಾ ಉಸ್ತುವಾರಿ ಸಚಿವರು, ಮೇಯರ್, ಜಿಲ್ಲಾಧಿಕಾರಿ, ನಗರ ಪೊಲೀಸ್ ಆಯುಕ್ತರು ಹಾಗೂ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರಿಗೆ ವೇದಿಕೆ ಮೇಲೇರಿ ಅಂಬಾರಿಯಲ್ಲಿ ಆಸೀನಳಾದ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮಾಡಲಿದ್ದಾರೆ.
ಇದಾದ ನಂತರ ಜಂಬೂಸವಾರಿ ಮೆರವಣಿಗೆಯು ಸುಮಾರು 5 ಕಿ.ಮೀ. ದೂರ ಸಾಗಿ ಬನ್ನಿಮಂಟಪ ತಲುಪಲಿದೆ. ಬನ್ನಿಮಂಟಪದಲ್ಲಿ ರಾತ್ರಿ 7.30ರಿಂದ ಪಂಜಿನಕವಾಯತು(ಟಾರ್ಚ್ಲೈಟ್ ಪೆರೇಡ್) ಆರಂಭವಾಗಲಿದ್ದು, ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಕವಾಯತು ವೀಕ್ಷಿಸಿ ಗೌರವ ವಂದನೆ ಸ್ವೀಕರಿಸುವರು. ನಾಡಗೀತೆ ಬಳಿಕ ಎರಡು ಗಂಟೆಗಳ ಕಾಲ ಪೊಲೀಸ್ ಸಿಬ್ಬಂದಿ ಸಾಹಸಮಯ ಪ್ರದರ್ಶನ ನೀಡಲಿದ್ದು, ಮೈನವಿರೇಳಿಸುವ ಅಶ್ವಾರೋಹಿ ಪಡೆಗಳ ಸಾಹಸ ಪ್ರದರ್ಶನ ಮಾಡಲಿದ್ದಾರೆ. ಕೊನೆಗೆ ಪಂಜಿನ ಕವಾಯತಿನ ಮೂಲಕ ಹತ್ತು ದಿನಗಳ ನವರಾತ್ರಿ ಉತ್ಸವಕ್ಕೆ ತೆರೆ ಬೀಳಲಿದೆ.
ಜಂಬೂ ಸವಾರಿ ಹಿನ್ನೆಲೆಯಲ್ಲಿ ನಗರದಾದ್ಯಂತ ಬಿಗಿ ಪೊಲೀಸ್ ಭದ್ರತೆ ಕೈಗೊಳ್ಳಲಾಗಿದ್ದು, ಅರಮನೆ ಸುತ್ತಮುತ್ತ ಹಾಗೂ ಜಂಬೂ ಸವಾರಿ ಸಾಗುವ ಮಾರ್ಗದಲ್ಲಿ ಹದ್ದಿನ ಕಣ್ಣಿಡಲಾಗಿದೆ. 1 ಡಿಐಜಿ, 11 ಎಸ್‌ಪಿ, 410 ಪೊಲೀಸ್ ಅಧಿಕಾರಿಗಳು, 3,778 ಸಿಬ್ಬಂದಿ ಸೇರಿ ಒಟ್ಟು 4,000 ಸಿಬ್ಬಂದಿ, 2,000 ಸ್ಥಳೀಯ ಪೊಲೀಸರು, ಕೆಎಸ್‌ಆರ್‌ಪಿ 30, 2 ಬಿಡಿಡಿಎಸ್, 20 ಎಎಸ್‌ಸಿ, 1 ಗರುಡಾ ಪಡೆ ಸೇರಿ ಒಟ್ಟು 6000 ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗಿದೆ.












Click it and Unblock the Notifications