ಮೈಸೂರು: ಪ್ರತಾಪ್ ಸಿಂಹ ಗೆಲುವಿಗೆ ಕಾರಣ ಗೊತ್ತಾಯ್ತು!
ಮೈಸೂರು, ಮೇ 17: ಬಿಜೆಪಿ ಪಕ್ಷದಿಂದ ಮೈಸೂರು-ಕೊಡಗು ಕ್ಷೇತ್ರದಿಂದ ಪ್ರತಾಪ್ ಸಿಂಹ ಭರ್ಜರಿ ಜಯಭೇರಿ ಬಾರಿಸಿದ್ದಾರೆ. ಆದರೆ ಈ ಗೆಲುವಿಗೆ ಕಾರಣ ಏನೆಂಬುದು ಇದೀಗ ಬಹಿರಂಗವಾಗಿದೆ.
ಜಸ್ಟ್ ಒಂದು ತಿಂಗಳ ಹಿಂದೆ ಪ್ರತಾಪ್ ಸಿಂಹ ಬಗ್ಗೆ ಪ್ರತಿಸ್ಪರ್ಧಿ ಅಭ್ಯರ್ಥಿ ಕಾಂಗ್ರೆಸ್ಸಿನ ವಿಶ್ವನಾಥ್ ಏನು ಹೇಳಿದ್ದರು ಎಂಬುದನ್ನು ಮೆಲುಕು ಹಾಕುವುದಾದರೆ 'ಪ್ರತಾಪ್ ಸಿಂಹ ಒಬ್ಬ ಜಂಭದ ಕೋಳಿ. ಯಾರ ಕೋಳಿಯಿಂದಲೂ ಬೆತ್ತಲಾಗುವುದಿಲ್ಲ. ನನ್ನಿಂದಲೇ ಎಲ್ಲಾ ಎಂಬ ದುರಹಂಕಾರಕ್ಕೆ ಜನ ತಕ್ಕ ಉತ್ತರ ನೀಡಲಿದ್ದಾರೆ' ಎಂದು ಹಿರಿಯರಾದ ವಿಶ್ವನಾಥ್ ಕಟಕಿಯಾಡಿದ್ದರು.
'ಬಿಜೆಪಿಯ ಯಾವ ತಂತ್ರಗಾರಿಕೆಯೂ ನಡೆಯುವುದಿಲ್ಲ. ನಡೆ-ನುಡಿಯಲ್ಲಿ ದುರಹಂಕಾರ ತೋರಿಸುವ ಪ್ರತಾಪ್ ಸಿಂಹನಿಗೆ ಅವರ ಬಿಜೆಪಿ ಪಕ್ಷದಲ್ಲೇ ವಿರೋಧವಿದೆ' ಎಂದೆಲ್ಲಾ ವಿಶ್ವನಾಥ್ ಬಡಬಡಾಯಿಸಿದ್ದರು. ಅಷ್ಟೇ ಅಲ್ಲ 'ಜನ ಕಾಂಗ್ರೆಸ್ ಪಕ್ಷದ ಕೈಹಿಡಿಯಲಿದ್ದಾರೆ. ತಾವು ಗೆಲ್ಲುವುದರಲ್ಲಿ ಯಾವುದೇ ಸಂಶಯವಿಲ್ಲ' ಎಂದೂ ಸಂಸದ ಎಚ್. ವಿಶ್ವನಾಥ್ ಭವಿಷ್ಯ ನುಡಿದಿದ್ದರು.
ಆದರೆ ಸಾಹೇಬರು ಈಗ ಉಲ್ಟಾ ಹೊಡೆದಿದ್ದು, ತದ್ವಿರುದ್ಧವಾಗಿ ಮಾತನಾಡುತ್ತಿದ್ದಾರೆ. ತನ್ಮೂಲಕ ಪ್ರತಾಪ್ ಗೆಲುವಿಗೆ ಕಾರಣ ಏನೆಂಬುದುನ್ನು ಬಹಿರಂಗಪಡಿಸಿದ್ದಾರೆ. ('ಜಂಭದ ಕೋಳಿ ಪ್ರತಾಪ್ ಫಲಿತಾಂಶದ ದಿನ ಬೆತ್ತಲು')

ಹಾಗೆ ನೋಡಿದರೆ ಹಳ್ಳಿ ಹಕ್ಕಿ ಹಾಡಿನ ವಿಶ್ವನಾಥರ ಧ್ವನಿಯಲ್ಲಿ ಚುನಾವಣೆಗೂ ಮುನ್ನವೇ ನಡುಕ ಕಾಣಿಸಿಕೊಂಡಿತ್ತು. (ಹಳ್ಳಿ ಹಕ್ಕಿ ಹಾಡಿನ ವಿಶ್ವನಾಥರ ಧ್ವನಿಯಲ್ಲಿ ನಡುಕ!)
ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ಈ ಬಾರಿ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡಿವೆ ಎಂದು ಆರೋಪದ ಧಾಟಿಯಲ್ಲಿ ಹೇಳಿದ್ದರು.
'ಹಳ್ಳಿ ಹಕ್ಕಿ ಹಾಡು' ಖ್ಯಾತಿಯ ವಿಶ್ವನಾಥ್ ಅವರು 'ಮ್ಯಾಚ್ ಫಿಕ್ಸಿಂಗ್ ಅಂದ ಮೇಲೆ ಅದಕ್ಕೊಬ್ಬ ರೆಫರಿಯೂ ಇರುತ್ತಾರೆ. ಅದು ಯಾರು ಅಂತ ನನ್ಗೊತ್ತು. ಆದರೆ ಅವರ ಹೆಸರನ್ನು ಈಗ ಬಹಿರಂಗಪಡಿಸುವುದಿಲ್ಲ' ಎಂದೂ ನಿಗೂಢವಾಗಿ ಹೇಳಿದ್ದರು. 'ಚುನಾವಣೆಯಲ್ಲಿ ನಾನೂ ಒಬ್ಬ ಆಟಗಾರನಾಗಿರುವುದರಿಂದ ಈ ಸಂದರ್ಭದಲ್ಲಿ ರೆಫರಿ ಹೆಸರು ಹೇಳುವುದು ಉಚಿತವಲ್ಲ' ಎಂದೂ ಒಕ್ಕಣೆ ಸೇರಿಸಿದ್ದರು.
ಆದರೆ ವಿಶ್ವನಾಥರು ಇದೀಗ ತುಸು ಧೈರ್ಯ ತಂದುಕೊಂಡು ರೆಫರಿ ಯಾರು ಎಂಬುದುನ್ನು ಬಹಿರಂಗಪಡಿಸಿದ್ದಾರೆ. ಅವರು ಅವರದೇ ಕಾಂಗ್ರೆಸ್ ಪಕ್ಷವರಂತೆ. ನನ್ನ ಪಕ್ಷದಲ್ಲಿ ಕೆಲವರು ಕುತಂತ್ರ ಮಾಡಿ ನನ್ನ ಸೋಲಿಗೆ ಕಾರಣವಾದರು. ಆದರೆ ಅವರು ಯಾರು ಎಂಬುದನ್ನು ಈಗಲೇ ಬಹಿರಂಗಪಡಿಸುವುದಿಲ್ಲ. (ಏಕೆಂದರೆ ಅವರು ಯಾರು ಎಂಬುದು ನನಗೇ ಗೊತ್ತಿಲ್ಲ) ಪತ್ತೆ ಹಚ್ಚಿ ನಿಮಗೆ (ಪತ್ರಕರ್ತರಿಗೆ) ತಿಳಿಸುವೆ' ಎಂದು ದುರ್ದಾನ ತೆಗೆದುಕೊಂಡವರಂತೆ ವಿಶ್ವನಾಥರು ಹೇಳಿದ್ದಾರೆ.
ಅಷ್ಟೇ ಅಲ್ಲ. ಮೈಸೂರು-ಕೊಡಗು ಭಾಗದಲ್ಲಿ ಲಜ್ಜೆಗೆಟ್ಟ ರಾಜಕೀಯ ನಡೆಯುತ್ತಿದೆ ಎಂದೂ ವಿಶ್ವನಾಥರು ನಿಗೂಢವಾಗಿ ಹೇಳಿದ್ದಾರೆ.












Click it and Unblock the Notifications