ಮೈಸೂರಿನ ನಿವೃತ್ತ ಪ್ರಾಂಶುಪಾಲ ಕೊಲೆ ಪ್ರಕರಣ: ಅನನ್ಯ ಭಟ್ ತಂದೆ ಸೇರಿದಂತೆ ಐವರ ಬಂಧನ
ಮೈಸೂರು, ಅಕ್ಟೋಬರ್ 28: ಮೈಸೂರಿನ ನಿವೇದಿತ ನಗರದಲ್ಲಿ ನಿವೃತ್ತ ಪ್ರಾಂಶುಪಾಲರನ್ನು ಕೊಲೆಗೈದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಗಾಯಕಿ ಅನನ್ಯ ಭಟ್ ತಂದೆ ವಿಶ್ವನಾಥ್ ಭಟ್ ಸೇರಿದಂತೆ ಐವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಡಿಸಿಪಿ ಡಾ.ಎ.ಎನ್.ಪ್ರಕಾಶ್ ಗೌಡ ತಿಳಿಸಿದರು.
ಕುವೆಂಪು ನಗರ ಪೊಲೀಸ್ ಠಾಣೆಯಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಡಿಸಿಪಿ, ""ಪ್ರಾಂಶುಪಾಲ ಪರಶಿವಮೂರ್ತಿ ಕಳೆದ ಸೆಪ್ಟೆಂಬರ್ 20 ರಂದು ತಮ್ಮ ಮನೆಯಲ್ಲೆ ಕೊಲೆಯಾಗಿದ್ದರು. ಮೃತರ ಪತ್ನಿ ಸವಿತ ನೀಡಿದ ದೂರಿನ ಮೇರೆಗೆ ಮೊಕದ್ದಮೆ ದಾಖಲಿಸಿಕೊಂಡು ತನಿಖೆಯ ವೇಳೆ ಕೊಲೆ ಮಾಡಿದ ಆರೋಪಿಗಳನ್ನು ಪತ್ತೆಹಚ್ಚಲಾಗಿದೆ'' ಎಂದರು.
ಐ.ಡಿ.ಎಫ್.ಸಿ ಬ್ಯಾಂಕ್ ನಲ್ಲಿ ರಿಕವರಿ ಆಫೀಸರ್ ಆಗಿ ಕಾರ್ಯನಿರ್ವಹಿಸುತ್ತಿರುವ ಭುಗತಹಳ್ಳಿ ಗ್ರಾಮದ ನಿವಾಸಿ ನಾಗೇಶ ಎಂ.ಬಿನ್ ಮಹಾದೇವ (37), ಗಾರೆ ಕೆಲಸ ಮಾಡುವ ಭುಗತಹಳ್ಳಿ ಗ್ರಾಮದ ನಿವಾಸಿ ನಿರಂಜನ್ ಎನ್(22), ಮಡಿವಾಳಸ್ವಾಮಿ ಸಂಸ್ಕೃತ ಪಾಠಶಾಲೆಯ ಶಿಕ್ಷಕ ಸಿದ್ದರಾಜು ಬಿನ್ ಮಹದೇವಪ್ಪ(54) ವಿಶ್ವಚೇತನ ಸಂಸ್ಕೃತ ಪಾಠಶಾಲೆಯ ಮುಖ್ಯ ಶಿಕ್ಷಕ ಕೆ.ಆರ್.ಮೊಹಲ್ಲಾ ನಿವಾಸಿ ವಿಶ್ವನಾಥ್ ಕೆ. ಬಿನ್ ಲೇಟ್ ಕೃಷ್ಣ ಭಟ್(52) ವಿಶ್ವಚೇತನ ಸಂಸ್ಕೃತ ಪಾಠಶಾಲೆಯ ಸಹ ಶಿಕ್ಷಕ, ಪರಶಿವ ಬಿನ್ ಪುಟ್ಟಸ್ವಾಮಿ(55) ಅವರನ್ನು ಬಂಧಿಸಲಾಗಿದೆ ಎಂದು ತಿಳಿಸಿದರು.

ಬಂಧಿತರಿಂದ 55,000 ರೂ. ನಗದು ಹಣ, ನಾಲ್ಕು ದ್ವಿಚಕ್ರ ವಾಹನಗಳು, ಒಂದು ಟಾಟಾ ಏಸ್ ಗೂಡ್ಸ್ ವಾಹನ, ಎಂಟು ಮೊಬೈಲ್, ಎರಡು ಚಾಕು, ರಕ್ತಸಿಕ್ತ ಬಟ್ಟೆಗಳು ಹಾಗೂ ಇತರೆ ದಾಖಲಾತಿಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಡಿಸಿಪಿ ಮಾಹಿತಿ ನೀಡಿದರು.
ಮೃತ ಪರಶಿವಮೂರ್ತಿ ನಡೆಸುತ್ತಿದ್ದ ಸಂಸ್ಕೃತ ಪಾಠಶಾಲೆಯಲ್ಲಿನ ಶಿಕ್ಷಕರು ಪ್ರತಿ ತಿಂಗಳು ಅವರ ವೇತನದಲ್ಲಿ ನಿರ್ದಿಷ್ಟಪಡಿಸಿದ ಹಣ ನೀಡುವಂತೆ ನೀಡುತ್ತಿದ್ದ ಕಿರುಕುಳ, ಹಿಂಸೆ, ಹಾಗೂ ಅವಾಚ್ಯ ಶಬ್ಧಗಳಿಂದ ಬೈದಾಡುತ್ತ ತುಚ್ಛವಾಗಿ ಕಾಣುತ್ತಿರುವುದೇ ಕೊಲೆಗೆ ಪ್ರಮುಖ ಕಾರಣವಾಗಿದೆ ಎಂದು ಆರೋಪಿಗಳು ಬಾಯ್ಬಿಟ್ಟಿರುವುದಾಗಿ ತಿಳಿಸಿದರು.

ಆರೋಪಿಗಳಾದ ವಿಶ್ವನಾಥ್ ಬಿನ್ ಕೃಷ್ಣ ಭಟ್ ಮತ್ತು ಸಹ ಶಿಕ್ಷಕ ಪುಟ್ಟಸ್ವಾಮಿ ಅವರು ಮೃತರ ಬಗ್ಗೆ ದ್ವೇಷ ಹೊಂದಿದ್ದು, ಸುಪಾರಿ ನೀಡಿ ಕೊಲೆ ಮಾಡಿಸಿದ್ದಾರೆ ಎಂದು ಹೇಳಿದರು.

ಆರೋಪಿಗಳ ಪತ್ತೆ ಕಾರ್ಯದಲ್ಲಿ ಡಿಸಿಪಿ ಗೀತಪ್ರಸನ್ನ ಮಾರ್ಗದರ್ಶನದಲ್ಲಿ, ಕೃಷ್ಣರಾಜ ವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಎಂ.ಎಸ್ ಪೂರ್ಣಚಂದ್ರ ತೇಜಸ್ವಿ ಉಸ್ತುವಾರಿಯಲ್ಲಿ ಆರೋಪಿಗಳ ಪತ್ತೆಗಾಗಿ ಸರಸ್ವತಿಪುರಂ ಪೊಲೀಸ್ ಠಾಣೆಯ ಪಿಐ ಆರ್.ವಿಜಯಕುಮಾರ್, ಕುವೆಂಪು ನಗರ ಪೊಲೀಸ್ ಠಾಣೆಯ ಪಿಐ ಜೆ.ಸಿ.ರಾಜು, ಸರಸ್ವತಿಪುರಂ ಪೊಲೀಸ್ ಠಾಣೆಯ ಪಿಎಸ್ಐ ಭವ್ಯ ಅವರ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿತ್ತು ಎಂದರು.












Click it and Unblock the Notifications