ಮುಡುಕುತೊರೆ ಜಾತ್ರೆಗೆ ದಿನಗಣನೆ ಆರಂಭ: ಈ ಉತ್ಸವದ ವಿಶೇಷತೆಗಳೇನು?

ಮೈಸೂರು, ಜನವರಿ 20: ಈಗ ಎಲ್ಲೆಡೆ ಜಾತ್ರೆಗಳು ಆರಂಭವಾಗಿದ್ದು ಈಗಾಗಲೇ ಹಲವು ಕಡೆಗಳಲ್ಲಿ ಹಲವು ರೀತಿಯಲ್ಲಿ ಜಾತ್ರೆಗಳು ನಡೆದಿದ್ದು ಮುಂದೆಯೂ ಇನ್ನಷ್ಟು ಕ್ಷೇತ್ರಗಳಲ್ಲಿ ಜಾತ್ರೆಗಳು ನಡೆಯಬೇಕಾಗಿದ್ದು, ಎಲ್ಲ ಜಾತ್ರೆಗಳಲ್ಲೂ ತನ್ನದೇ ಆದ ವೈಶಿಷ್ಟ್ಯತೆಗಳು ಎದ್ದು ಕಾಣಿಸುತ್ತವೆ. ಪ್ರತಿ ಜಾತ್ರೆಯಲ್ಲೂ ರಥೋತ್ಸವ ನಡೆಯುತ್ತಿದ್ದು, ಅದರಾಚೆಗೆ ಸ್ಥಳದ ಮಹಿಮೆಯಂತೆ ವಿವಿಧ ಕಾರ್ಯಕ್ರಮಗಳು ನಡೆಯುತ್ತವೆ.

ಪ್ರತಿ ಜಾತ್ರೆಗೂ ತನ್ನದೇ ಆದ ಇತಿಹಾಸವಿದ್ದು, ಶತಶತಮಾನಗಳಿಂದ ಸಂಪ್ರದಾಯಬದ್ಧವಾಗಿ ನಡೆದುಕೊಂಡು ಬರುತ್ತಿದ್ದು, ಪ್ರತಿ ಜಾತ್ರೆಯಲ್ಲಿಯೂ ಧಾರ್ಮಿಕ ಕೈಂಕರ್ಯಗಳೊಂದಿಗೆ ಸಂಭ್ರಮ, ಸಡಗರವಿದ್ದು, ಜನರಿಗೆ ಮನೋರಂಜನೆ ನೀಡುತ್ತಾ ಬರುತ್ತಿದೆ. ಇಂತಹ ಜಾತ್ರೆ ಪೈಕಿ ಮುಡುಕುತೊರೆ ಜಾತ್ರೆಯೂ ವಿಭಿನ್ನ ಮತ್ತು ವಿಶಿಷ್ಟವಾಗಿ ಕಂಗೊಳಿಸುತ್ತದೆ.

Mudukuthore Festival Key Highlights And Significance

ಇಲ್ಲಿ ಸುಮಾರು 17ದಿನಗಳ ಕಾಲ ಜಾತ್ರೆ ನಡೆಯುತ್ತಿದ್ದು, ಪ್ರತಿ ದಿನವೂ ಒಂದೊಂದು ರೀತಿಯ ವಿಶೇಷತೆ ಇರುವುದನ್ನು ಕಾಣಬಹುದಾಗಿದೆ. ಈ ಬಾರಿ ಮುಡುಕುತೊರೆ ಜಾತ್ರೆ ಜನವರಿ 31ರಿಂದ ಆರಂಭವಾಗಿ ಫೆಬ್ರರಿ 16ರವರೆಗೆ ನಡೆಯಲಿದೆ. ಮೊದಲ ದಿನ ಅಂಕುರಾರ್ಪಣ ದಿಂದ 17 ದಿನಗಳ ಕಾಲ ವಿವಿಧ ಕಾರ್ಯಕ್ರಮ ನಡೆಯಲಿದೆ. ಫೆ. 7ರ ಶುಕ್ರವಾರದಂದು ಶ್ರೀ ಮದ್ವಿದ್ಯಾ ಬ್ರಹ್ಮರಥೋತ್ಸವ ಜರಗಲಿದೆ. ಫೆ.10ರ ಸೋಮವಾರ ತೆಪ್ಪೋತ್ಸವ ನಡೆಯಲಿದೆ.

ಮೈಸೂರು ಭಾಗದಲ್ಲಿ ಮುಡುಕುತೊರೆ ಜಾತ್ರೆಗೆ ಹೋಗುವುದೆಂದರೆ ಅದರ ಮಜಾವೇ ಬೇರೆ. ಅದರಲ್ಲೂ ರೈತರು ಇಲ್ಲಿ ನಡೆಯುವ ಜಾನುವಾರು ಜಾತ್ರೆಯಲ್ಲಿ ಪಾಲ್ಗೊಳ್ಳುವ ಸಲುವಾಗಿ ತಿಂಗಳ ಮುಂದೆಯೇ ತಯಾರು ನಡೆಸುತ್ತಾರೆ. ತಮ್ಮ ಜಾನುವಾರುಗಳನ್ನು ಮಾರಾಟ ಮಾಡಿ ಅಥವಾ ಹೊಸ ಜಾನುವಾರುಗಳನ್ನು ಖರೀದಿಸಿ ತರುವುದು ವಿಶೇಷವಾಗಿದೆ. ಇನ್ನು ಜಾತ್ರೆಯ ಅಂಗವಾಗಿ ಶಯನೋತ್ಸವ, ಪಲ್ಲಕ್ಕಿ ಉತ್ಸವ, ರಥೋತ್ಸವ, ತೆಪ್ಪೋತ್ಸವ, ಕೈಲಾಸ ವಾಹನೋತ್ಸವ, ಮಂಟಪೋತ್ಸವಗಳು, ಗಿರಿ ಪ್ರದಕ್ಷಿಣೆ, ಪರ್ವತ ಪರಿಷೆ, ಮಹಾಭಿಷೇಕ ಹೀಗೆ ಹತ್ತಾರು ಕಾರ್ಯಕ್ರಮಗಳು ನಡೆಯುತ್ತವೆ.

ಪರ್ವತ ಪರಿಷೆಗೆ ದಿನಾಂಕ ನಿಗದಿ

ರಥೋತ್ಸವ ದಿನದಂದು ಸಹಸ್ರಾರು ಸಂಖ್ಯೆಯಲ್ಲಿ ಜನ ಸೇರುವುದರೊಂದಿಗೆ ಈ ಸಂದರ್ಭ ಗೊರವರ ಕುಣಿತ, ನಂದಿಕಂಬ, ಪೂಜಾಕುಣಿತ, ಕಂಸಾಳೆ, ಸೋಬಾನೆ, ಜಾಗಟೆ ಸೇವೆ, ತುತ್ತೂರಿ, ಕೊಂಬುಸೇವೆ ಮೊದಲಾದ ಜನಪದೀಯ ತಂಡಗಳು ರಥೋತ್ಸವಕ್ಕೆ ಮೆರಗು ನೀಡುತ್ತವೆ. ಇಷ್ಟೇ ಅಲ್ಲದೆ ತೆಪ್ಪೋತ್ಸವದಲ್ಲಿ ಸಾವಿರಾರು ಭಕ್ತಾಧಿಗಳು ಪಾಲ್ಗೊಳ್ಳುತ್ತಾರೆ. ತೆಪ್ಪದ ದಿನ ಗೊರವರು ಗಿರಿಯ ಮೇಲೆ ಕುಣಿಯುವುದು ವಿಶೇಷವಾಗಿರುತ್ತದೆ. ಇದೇ ಸಂದರ್ಭ 'ಕಜ್ಜಾಯದ ಮಣೆ ಬಟ್ಟಲು ಉಡಿಸುತೀವಿ' ಎಂದು ಹರಕೆ ಹೊತ್ತವರು ಅದನ್ನು ಒಪ್ಪಿಸುತ್ತಾರೆ.

Mudukuthore Festival Key Highlights And Significance

ಜಾತ್ರೆಯಲ್ಲಿ ದಿನ ಪರ್ವತ ಪರಿಷೆಯ ದಿನಾಂಕವನ್ನು ನಿಗದಿಪಡಿಸಲಾಗುತ್ತದೆ. ಪರ್ವತ ಪರಿಷೆ ಎಂಬುವುದು ಈ ಜಾತ್ರೆಯ ವೈಶಿಷ್ಟ್ಯತೆಯಲ್ಲೊಂದಾಗಿದೆ. ಪುರಾಣ ಕಥೆಯ ಪ್ರಕಾರ ಪಾರ್ವತಿಯು ಶಿವನ ವಾಹನ ಬಸವನ ಮೇಲೆ ತನ್ನ ತವರು ಮನೆಯಾದ ಶ್ರೀಶೈಲಕ್ಕೆ ಹೋಗಿ ಬರುತ್ತಿದ್ದಳೆಂದೂ ಆ ನಂಬಿಕೆ ಇಂದಿಗೂ ಜನಮನದಲ್ಲಿದೆ. ಈ ಪರಿಷೆ ಯಾವಾಗ ಆರಂಭವಾಯಿತೆಂಬುವುದು ತಿಳಿದು ಬರುವುದಿಲ್ಲವಾದರೂ ಚಿಕ್ಕದೇವರಾಜ ತನಗೆ ಮಲ್ಲಿಕಾರ್ಜುನನ ಕೃಪೆಯಿಂದ ಒಳ್ಳೆಯದಾದ ಹಿನ್ನಲೆಯಲ್ಲಿ ಪರಿಷೆ ಮಾಡಿಸಿದ್ದರಂತೆ.

ಭಕ್ತಿಭಾವಕ್ಕೆ ಸಾಕ್ಷಿಯಾಗಿರುವ ಜಾತ್ರೆ

ಸಾಮಾನ್ಯವಾಗಿ ಶಿವರಾತ್ರಿ ಸಂದರ್ಭ ಬಸವನೊಂದಿಗೆ ಭಕ್ತರು ಪರಿಷೆ ಹೊರಡುತ್ತಾರೆ. ಕಾಲ್ನಡಿಗೆಯಲ್ಲಿಯೇ ಮದ್ದೂರು, ಚನ್ನಪಟ್ಟಣ, ಬೆಂಗಳೂರು, ನಂದ್ಯಾಲ ಮೂಲಕ ಶ್ರೀಶೈಲವನ್ನು ಯುಗಾದಿ ಸಂದರ್ಭ ತಲುಪುತ್ತಾರೆ ಅಲ್ಲಿ ಕೃಷ್ಣಾ ನದಿಯಲ್ಲಿ ಸ್ನಾನ ಮಾಡಿ ವೃತ ತೆಗೆಯಲಾಗುತ್ತದೆ. ಮತ್ತೆ ಒಂದು ತಿಂಗಳಿಗೆ ಕಾಲ್ನಡಿಗೆಯಲ್ಲಿಯೇ ಮುಡುಕುತೊರೆಗೆ ಹಿಂತಿರುಗುತ್ತಾರೆ. ಅಲ್ಲದೆ ಪರಿಷೆ ಯಶಸ್ವಿಯಾದುದಕ್ಕೆ ಮಲ್ಲಿಕಾರ್ಜುನನಿಗೆ ಪೂಜೆ ಸಲ್ಲಿಸುತ್ತಾರೆ. ಒಟ್ಟಾರೆ ಮುಡುಕುತೊರೆ ಜಾತ್ರೆ ವೇಳೆ ಹತ್ತಾರು ವಿಶೇಷತೆಗಳು ನಡೆಯುತ್ತಿದ್ದು ಜನರ ಭಕ್ತಿಭಾವಕ್ಕೆ ಸಾಕ್ಷಿಯಾಗಿದೆ.

ಮುಡುಕುತೊರೆ ಮೈಸೂರು ಜಿಲ್ಲೆಯ ತಾಲೂಕು ಕೇಂದ್ರಗಳಲ್ಲೊಂದಾದ ತಿ.ನರಸೀಪುರದಿಂದ 19 ಕಿ.ಮೀ ದೂರದಲ್ಲಿದೆ. ಕಾವೇರಿ ನದಿ ಪಶ್ಚಿಮದಿಂದ ಉತ್ತರ ದಿಕ್ಕಿನತ್ತ ಹರಿದು, ಪೂರ್ವಕ್ಕೆ ಮುರಿದು ದಕ್ಷಿಣಕ್ಕೆ ಪ್ರವೇಶಿಸಿದ್ದರಿಂದ ಬಹುಶಃ ಮುಡುಕುತೊರೆ ಎಂಬ ಹೆಸರು ಬಂದಿದೆ ಎಂದು ಹೇಳಲಾಗುತ್ತಿದೆ. ಇನ್ನು ಇಲ್ಲಿನ ಸೋಮಗಿರಿ ಬೆಟ್ಟದ ಮೇಲಿನ ಐತಿಹಾಸಿಕ ಮಲ್ಲಿಕಾರ್ಜುನ ದೇಗುಲದ ಆಧಿದೈವ ಮಲ್ಲಿಕಾರ್ಜುನ ಲಿಂಗವೂ ಕೂಡ ತಲಕಾಡು ಪಂಚಲಿಂಗದೊಂದಿಗೆ ಸೇರಿರುವುದು ಮತ್ತೊಂದು ವಿಶೇಷತೆಯಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+