ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರು ಅಭಿವೃದ್ಧಿ ಮಾಡಿದ್ದು ನಾನು; ಸ್ವಪಕ್ಷದ ಶಾಸಕರಿಗೆ ಪ್ರತಾಪ್ ಸಿಂಹ ಟಾಂಗ್

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಜನವರಿ 29: ಮೈಸೂರು ನಗರದಲ್ಲಿ ಗ್ಯಾಸ್ ಪೈಪ್‌ಲೈನ್ ಅಳವಡಿಕೆಯ ವಿಚಾರವಾಗಿ ಶುರುವಾಗಿರುವ ಬಿಜೆಪಿ ಸಂಸದ vs ಬಿಜೆಪಿ ಶಾಸಕರ ತಿಕ್ಕಾಟ ಸದ್ಯಕ್ಕೆ ಮುಗಿಯುವ ಲಕ್ಷಣ ಕಾಣುತ್ತಿಲ್ಲ.

ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಹಾಗೂ ಶಾಸಕರಾದ ರಾಮದಾಸ್ ಮತ್ತು ಎಲ್. ನಾಗೇಂದ್ರ ನಡುವಿನ ವಾಕ್ಸಮರ ತಾರಕಕ್ಕೇರಿದ್ದು, ತಮ್ಮ ವಿರುದ್ಧ ವಾಗ್ದಾಳಿ ನಡೆಸಿರುವ ಚಾಮರಾಜ ಕ್ಷೇತ್ರದ ಶಾಸಕರ ವಿರುದ್ಧ ಪ್ರತಾಪ್‌ ಸಿಂಹ ತಿರುಗೇಟು ನೀಡಿದ್ದಾರೆ.

ಮೈಸೂರಿನ ಜಲದರ್ಶಿನಿ ಅತಿಥಿ ಗೃಹದಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ಮೈಸೂರಿನಲ್ಲಿ ಈ ಹಿಂದೆಯೂ ಖಾಸಗಿ ಕಂಪನಿ ಜಸ್ಕೋದವರು ಮನಬಂದಂತೆ ರಸ್ತೆಗಳನ್ನು ಅಗೆದಿದ್ದಾರೆ. ಆಗೆಲ್ಲಾ ಜನಪ್ರತಿನಿಧಿಗಳು ಏಕೆ ಸುಮ್ಮನಿದ್ದರು? ಈಗ ಗ್ಯಾಸ್ ಪೈಪ್‌ಲೈನ್ ಕಾಮಗಾರಿಯನ್ನು ಏಕೆ ವಿರೋಧಿಸುತ್ತಿದ್ದಾರೆ? ಶಾಸಕ ರಾಮದಾಸ್ ಅವರು ಯೋಜನೆ ವಿರೋಧಿಸಿ ಪತ್ರ ಬರೆದಿರುವ ಅಗತ್ಯ ಏನಿತ್ತು? ಎಂದು ಪ್ರಶ್ನಿಸಿದ ಪ್ರತಾಪ್ ಸಿಂಹ, ಈ ವಿಚಾರದಲ್ಲಿ ಜನರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡಬಾರದು," ಎಂದು ತಮ್ಮದೇ ಪಕ್ಷದ ಶಾಸಕರ ವಿರುದ್ಧ ಸಂಸದರು ವಾಗ್ದಾಳಿ ನಡೆಸಿದರು.

 ಜನರ ಆರ್ಥಿಕ ಸಮಸ್ಯೆ ನಿವಾರಿಸುವ ಸಲುವಾಗಿ ಯೋಜನೆ

ಜನರ ಆರ್ಥಿಕ ಸಮಸ್ಯೆ ನಿವಾರಿಸುವ ಸಲುವಾಗಿ ಯೋಜನೆ

"ಮೈಸೂರು ನಗರ ಅತಿ ವೇಗವಾಗಿ ಬೆಳೆಯುತ್ತಿದೆ. ಮನೆ ಮಂದಿಯೆಲ್ಲಾ ದುಡಿಯುವ ಪರಿಸ್ಥಿತಿ ಇದೆ. ಎರಡು ಸಿಲಿಂಡರ್ ಇದ್ದರೂ ಅದನ್ನು ಪಡೆಯಲು ಮನೆಯಲ್ಲೊಬ್ಬರು ಇರಲೇಬೇಕಿದೆ. ಸಿಲಿಂಡರ್ ನೀಡುವವರು ಹಣ ಪಡೆಯುತ್ತಾರೆ. ಸಿಲಿಂಡರ್ ಸ್ಪೋಟಗೊಂಡು ಅವಘಡಗಳು ಸಂಭವಿಸುತ್ತಿವೆ. ಇವೆಲ್ಲಾ ಸಮಸ್ಯೆಗಳನ್ನು ನಿವಾರಿಸುವ ಸಲುವಾಗಿ ಗ್ಯಾಸ್ ಪೈಪ್‌ಲೈನ್ ಅಳವಡಿಕೆ ಮೂಲಕ ಅನಿಲ ಪೂರೈಕೆ ಚಿಂತನೆ ಆರಂಭವಾಗಿದೆ. ಪ್ರಧಾನಿ ನರೇಂದ್ರ ಮೋದಿಯವರ ಚಿಂತನೆ ಇದಾಗಿದ್ದು, ಮೈಸೂರು ಸೇರಿದಂತೆ ರಾಜ್ಯದ ಹಲವು ನಗರಗಳಲ್ಲಿ ಗ್ಯಾಸ್ ಪೈಪ್‌ಲೈನ್ ಅಳವಡಿಸುವ ಉದ್ದೇಶವಿದೆ. ಇದನ್ನು ಅಳವಡಿಕೆ ಮಾಡುವುದರಿಂದ ಜನರಿಗೆ ತುಂಬಾ ಅನುಕೂಲವಾಗಲಿದೆ," ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು.

 ಯೋಜನೆಯಿಂದ ಜನರಿಗೆ ಹಣ ಉಳಿಯುತ್ತದೆ

ಯೋಜನೆಯಿಂದ ಜನರಿಗೆ ಹಣ ಉಳಿಯುತ್ತದೆ

"ಪ್ರಧಾನಿ ನರೇಂದ್ರ ಮೋದಿಯವರು ಗುಜರಾತ್‌ನಲ್ಲಿ ಇದನ್ನು ಮೊದಲು ಆರಂಭಿಸಿದ್ದರು. ಬೆಂಗಳೂರು, ಮೈಸೂರು, ರಾಮನಗರ, ಮಂಡ್ಯ, ತುಮಕೂರು, ಹಾಸನ, ಶಿವಮೊಗ್ಗ, ಹುಬ್ಬಳ್ಳಿ- ಧಾರವಾಡ, ಚಿತ್ರದುರ್ಗ, ಕಲಬುರಗಿ ಹೀಗೆ ಹಲವು ಜಿಲ್ಲೆಗಳಲ್ಲಿ ಇದನ್ನು ಜಾರಿಗೆ ತರಲಾಗಿದೆ. LPG ಬೆಲೆ‌ ಸದ್ಯ 904 ರೂಪಾಯಿ ಇದ್ದು, ಗ್ಯಾಸ್ ಪೈಪ್‌ಲೈನ್ ಬಂದರೆ ಅದು 500 ರೂಪಾಯಿಗೆ ಸಿಗುತ್ತದೆ. ಇದರಿಂದ ಜನಕ್ಕೆ 400 ರೂಪಾಯಿ ಉಳಿತಾಯವಾಗುತ್ತದೆ ಎಂದು ಸಂಸದ ಪ್ರತಾಪ್ ಸಿಂಹ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಅಲ್ಲದೇ, ಪ್ರಧಾನಿ ನರೇಂದ್ರ ಮೋದಿಯವರು ಸಾಧಕ- ಬಾಧಕಗಳನ್ನು ಪರಿಶೀಲಿಸಿ ಈ ಯೋಜನೆ ಜಾರಿಗೊಳಿಸಿದ್ದಾರೆ," ಎಂದರು.

 ಶಾಸಕ ರಾಮದಾಸ್ ಪ್ರಧಾನಿ ನರೇಂದ್ರ ಮೋದಿಗಿಂತ ಸೀನಿಯರ್

ಶಾಸಕ ರಾಮದಾಸ್ ಪ್ರಧಾನಿ ನರೇಂದ್ರ ಮೋದಿಗಿಂತ ಸೀನಿಯರ್

"ಪ್ರಧಾನಿ ನರೇಂದ್ರ ಮೋದಿ ಗುಜರಾತ್ ಮುಖ್ಯಮಂತ್ರಿ ಆಗುವುದಕ್ಕಿಂತಲೂ ಮೊದಲೇ ಇವರು ಜನಪ್ರತಿನಿಧಿಗಳಾಗಿದ್ದವರು. ಶಾಸಕ ಎಲ್. ನಾಗೇಂದ್ರ ಕೂಡ ಪಾಲಿಕೆ ಸದಸ್ಯರಾಗಿದ್ದವರು. ಪಾಲಿಕೆ ಕೌನ್ಸಿಲ್ ಸಭೆಗೆ ಭಾಗಿಯಾಗದೇ ನಮ್ಮ ಪಕ್ಷದ ಮೇಯರ್ ಸುನಂದಾ ಪಾಲನೇತ್ರ ಅವರಿಗೆ ಅಗೌರವ ತೋರಲಾಗಿದೆ. ನಮ್ಮ ಪಕ್ಷದ ಮೇಯರ್‌ಗೆ ಅಗೌರವ ತೋರಿದ್ದು ಸರಿಯಾದ ನಿಲುವೇ?," ಎಂದು ಸುದ್ದಿಗೋಷ್ಠಿಯಲ್ಲಿ ಸಂಸದ ಪ್ರತಾಪ್ ಸಿಂಹ ಪ್ರಶ್ನೆ ಮಾಡಿದರು.

 ಮಾತು ಬರುತ್ತದೆ ಅಂತಾ ಏನೇನೋ ಮಾತಾಡ್ಬೇಡಿ

ಮಾತು ಬರುತ್ತದೆ ಅಂತಾ ಏನೇನೋ ಮಾತಾಡ್ಬೇಡಿ

ಶಾಸಕ ಎಸ್.ಎ. ರಾಮದಾಸ್ ಹಾಗೂ ಎಲ್. ನಾಗೇಂದ್ರ ವಿರುದ್ಧ ವಾಗ್ದಾಳಿ ನಡೆಸಿದ ಪ್ರತಾಪ್‌ ಸಿಂಹ, ಚಾಮರಾಜ ಕ್ಷೇತ್ರದಲ್ಲಿ ಈಗ ನೀವು ಹಾಕಿರುವ ರಸ್ತೆಗಳು ಒಂದು ವರ್ಷವೂ ಬಳಕೆ ಬರುವುದಿಲ್ಲ. ಸುಮ್ಮನೆ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡಬೇಡಿ. ಮಾತು ಬರುತ್ತದೆ ಅಂತಾ ಏನೇನೋ ಮಾತಾಡಬೇಡಿ. ಮನೆ ಮನೆಗೆ ಗ್ಯಾಸ್ ಕೊಟ್ಟರು ಅಂತಾ ನಾಗೇಂದ್ರರವರ ಹೆಸರನ್ನೇ ಹೇಳ್ತೀನಿ. ಮೋದಿ ಅವರಿಗಿಂತಲೂ ರಾಮದಾಸ್, ನಾಗೇಂದ್ರ ಅವರು ರಾಜಕೀಯದಲ್ಲಿ ಸೀನಿಯರ್‌. ಅವರಿಬ್ಬರು ಮೋದಿ ಅವರಿಗೆ ಪತ್ರ ಬರೆದು ಈ ಯೋಜನೆ ಸರಿ ಇಲ್ಲ ಅಂತಾ ಪತ್ರ ಬರೆಯಲಿ. ಆಗ ನಾನು ಸುಮ್ಮನಾಗುತ್ತೇನೆ ಎಂದು ಸ್ವಪಕ್ಷದ ಶಾಸಕರ ವಿರುದ್ಧ ಸಂಸದ ಪ್ರತಾಪ್‌ ಸಿಂಹ ಲೇವಡಿ ಮಾಡಿದರು.

 ನಮ್ಮ ಕಾರ್ಯಕರ್ತರ ಶ್ರಮದಿಂದ ಸಂಸದನಾಗಿದ್ದೇನೆ

ನಮ್ಮ ಕಾರ್ಯಕರ್ತರ ಶ್ರಮದಿಂದ ಸಂಸದನಾಗಿದ್ದೇನೆ

ಇನ್ನು ಮೈಸೂರು ಮಹಾನಗರ ಪಾಲಿಕೆ ಸದಸ್ಯರು, ಶಾಸಕರ ಶ್ರಮದಿಂದ ಸಂಸದರು ಗೆದ್ದಿದ್ದಾರೆಂಬ ಎಲ್. ನಾಗೇಂದ್ರ ಹೇಳಿಕೆಗೆ ಟಾಂಗ್ ನೀಡಿದ ಪ್ರತಾಪ್ ಸಿಂಹ, ನಮ್ಮ ಪಕ್ಷದ ಕಾರ್ಯಕರ್ತರ ಅವಿರತ ಪರಿಶ್ರಮದ ಫಲವಾಗಿ ನಾನು ಸಂಸದನಾಗಿ ಮರು ಆಯ್ಕೆಯಾಗಿದ್ದೇನೆ. ಜೆಡಿಎಸ್, ಕಾಂಗ್ರೆಸ್‌ನಲ್ಲಿರುವ ಮೋದಿ ಅಭಿಮಾನಿಗಳು ಸಹ ನನಗೆ ಬೆಂಬಲ ನೀಡಿದ್ದಾರೆ. ಅವರೆಲ್ಲರ ಬೆಂಬಲದಿಂದ ನಾನು ಮರು ಆಯ್ಕೆಯಾಗಿದ್ದೇನೆ ಎಂದು ತಿರುಗೇಟು ನೀಡಿದರು.

ಚಾಮರಾಜ ಶಾಸಕ ಎಲ್. ನಾಗೇಂದ್ರ ವಾಸಿಸುತ್ತಿರುವ ಕೆ.ಜಿ. ಕೊಪ್ಪಲಿನಲ್ಲಿ ನನಗೆ ಲೀಡ್ ಸಿಕ್ಕಿಲ್ಲ, ಕೆ.ಜಿ. ಕೊಪ್ಪಲಿನಲ್ಲಿ ನನಗೆ ಹಿನ್ನೆಡೆಯಾಗಿದೆ. ಪಾಲಿಕೆ ಚುನಾವಣೆಯಲ್ಲೂ ಕೆ.ಜಿ. ಕೊಪ್ಪಲಿನಲ್ಲಿ ಬಿಜೆಪಿ ಅಭ್ಯರ್ಥಿ ಸೋತಿದ್ದಾರೆ. ಅಲ್ಲಿ ಹರೀಶ್ ಗೌಡ ಬೆಂಬಲಿತ ಅಭ್ಯರ್ಥಿ ಗೆದ್ದಿದ್ದಾರೆ. ನಗರ ಪಾಲಿಕೆ ಚುನಾವಣೆಗೆ ಸ್ಪರ್ಧಿಸಿದ್ದ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳಲು ಶಾಸಕ ನಾಗೇಂದ್ರಗೆ ಸಾಧ್ಯವಾಗಿಲ್ಲ ಎಂದು ವಾಗ್ದಾಳಿ ನಡೆಸಿದರು.

 ಮಹಾರಾಜರನ್ನು ಬಿಟ್ಟರೆ‌ ಹೆಚ್ಚು ಮತದಿಂದ ಗೆದ್ದಿದ್ದು ನಾನೇ

ಮಹಾರಾಜರನ್ನು ಬಿಟ್ಟರೆ‌ ಹೆಚ್ಚು ಮತದಿಂದ ಗೆದ್ದಿದ್ದು ನಾನೇ

ಮೈಸೂರಿನ ಮಹಾರಾಜರನ್ನು ಹೊರತುಪಡಿಸಿದರೆ ಅತಿಹೆಚ್ಚು ಮತಗಳ ಅಂತರದಿಂದ ನಾನು ಗೆದ್ದಿದ್ದೇನೆ. ಹೆಚ್ಚಿನ ಮತಗಳ ಅಂತರದಿಂದ ಸಂಸದನಾಗಿ ಮರು ಆಯ್ಕೆಯಾಗಿದ್ದೇನೆ. ಮೈಸೂರು ಅಭಿವೃದ್ಧಿ ಮಾಡಿದ್ದು ನಾನು, ನಾನು, ನಾನು... ಮೈಸೂರು ಮಹಾರಾಜರನ್ನು ಬಿಟ್ಟರೆ ನಾನೇ ಎಂದು ಮೈಸೂರಿನ ಶಾಸಕರಿಗೆ ಸವಾಲು ಹಾಕಿದ ಪ್ರತಾಪ್ ಸಿಂಹ, ಮಹಾರಾಜರ ನಂತರ ಅತಿ ಹೆಚ್ಚು ಲೀಡ್‌ನಲ್ಲಿ ಗೆದ್ದಿರುವುದು ನಾನು. ನನ್ನಿಂದಲೇ ಮೈಸೂರು ಅಭಿವೃದ್ಧಿ ಆಗಿರುವುದು ಎಂದು ತಮ್ಮದೇ ಪಕ್ಷದ‌ ಶಾಸಕರ ವಿರುದ್ಧ ಕಿಡಿಕಾರಿದರು.

 ನಾಗೇಂದ್ರ ಅಭಿವೃದ್ಧಿಯ ಹರಿಕಾರ ಎನ್ನುವ ಭ್ರಮೆಯಲ್ಲಿದ್ದಾರೆ

ನಾಗೇಂದ್ರ ಅಭಿವೃದ್ಧಿಯ ಹರಿಕಾರ ಎನ್ನುವ ಭ್ರಮೆಯಲ್ಲಿದ್ದಾರೆ

ಪ್ರಮುಖವಾಗಿ ಶಾಸಕ ಎಲ್. ನಾಗೇಂದ್ರ ವಿರುದ್ಧ ವಾಗ್ದಾಳಿ ನಡೆಸಿದ ಪ್ರತಾಪ್‌ ಸಿಂಹ, ಎಲ್. ನಾಗೇಂದ್ರರವರು ನಾನೇ ಅಭಿವೃದ್ಧಿಯ ಹರಿಕಾರ ಎನ್ನುವ ಭ್ರಮೆಯಲ್ಲಿದ್ದಾರೆ. 30 ಕೋಟಿ ರೂ. ಅನುದಾನ ತಂದಿಲ್ಲ. 300 ಕೋಟಿ ರೂಪಾಯಿ ಕೆಲಸ ಅಂತ ಹೇಳ್ತಾರೆ. ಎಲ್ಲಿದೆ 300 ಕೋಟಿ? ಯಾವ ರಸ್ತೆ ಮಾಡಿದ್ದೀರಿ ತೋರಿಸಿ. ಚಾಮರಾಜ ಕ್ಷೇತ್ರದ ಕೆ.ಆರ್. ಆಸ್ಪತ್ರೆಯಲ್ಲಿ ಸೊಳ್ಳೆ, ನಾಯಿ ಕಾಟ ಇದೆ. ನಿಮ್ಮ ಕ್ಷೇತ್ರದ ವಿಜಯನಗರದಲ್ಲಿ ವಾಟರ್ ಟ್ಯಾಂಕ್ ಹಾಕಿಸಿದ್ದು ನಾನು. ಪಾಸ್‌ಪೊರ್ಟ್ ಸೇವಾ ಕೇಂದ್ರ ಮಾಡಿಸಿದ್ದು ನಾನು. ನೀವು ಗೋವಾಕ್ಕೆ ಹೋಗುವ ವಿಮಾನ ತಂದಿದ್ದು ನಾನು. ಬೆಂಗಳೂರು- ಮೈಸೂರು ಹೆದ್ದಾರಿ ಮಾಡಿಸಿದ್ದು ನಾನು. ಕೆ.ಆರ್. ಕ್ಷೇತ್ರದ ಕಸದ ಸಮಸ್ಯೆ ನಿವಾರಿಸಿದ್ದು ನಾನು. ಶಾಸಕರು ರಿಯಲ್ ಎಸ್ಟೇಟ್ ಮಾಡಲಿ, ಆದರೆ ಕೃಷ್ಣರಾಜ, ಚಾಮರಾಜ ಕ್ಷೇತ್ರಗಳು ಅವರ ಬಡಾವಣೆಗಳಲ್ಲ ಎಂದು ಸಂಸದ ಪ್ರತಾಪ್ ಸಿಂಹ ಟಾಂಗ್ ಕೊಟ್ಟರು.

Recommended Video

Rohit Sharma ತಂಡಕ್ಕೆ ಫ್ಲೈಟ್ ವ್ಯವಸ್ಥೆ ಮಾಡದ BCCI | Oneindia Kannada

English summary
Mysuru-Kodagu MP Pratap Simha expressed outrage against BJP MLA L Nagendra over Mysuru Gas Pipe Line.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X