ಅನುದಾನದ ಹಣದಲ್ಲಿ ಮೋಸವಾಗುತ್ತಿದೆ; ಪ್ರತಾಪ್ ಸಿಂಹ
ಮೈಸೂರು, ಜೂನ್ 12: ಮೈಸೂರು ಮಹಾನಗರ ಪಾಲಿಕೆಗೆ ಕೇಂದ್ರ ಸರ್ಕಾರದಿಂದ ಅಭಿವೃದ್ಧಿಗಾಗಿ ದೊರೆತ ಅನುದಾನದ ಹಣವನ್ನು ಸ್ಥಳೀಯ ಕಾರ್ಪೊರೇಟರ್ ಗಳೇ ಬಳಸಿಕೊಳ್ಳುವ ಮಾಫಿಯಾ ನಡೆಯುತ್ತಿದೆ ಎಂದು ಸಂಸದ ಪ್ರತಾಪ್ ಸಿಂಹ ಗಂಭೀರ ಆರೋಪ ಮಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರದ 14ನೇ ಹಣಕಾಸು ಆಯೋಗದಿಂದ ಪಾಲಿಕೆಗೆ ಹಣ ಬರುತ್ತದೆ. ಹೆಚ್ಚಿನ ಅನುದಾನವನ್ನು ಸರ್ಕಾರ ನೀಡುತ್ತದೆ. ಈ ಬಾರಿಯೂ 68 ಕೋಟಿ ಅನುದಾನ ಕೊಟ್ಟಿದ್ದೇವೆ. ಪಾಲಿಕೆಯಲ್ಲಿ ನಾಮಕಾವಸ್ಥೆಗೆ ಕೌನ್ಸಿಲ್ ಮೀಟಿಂಗ್ ಎಂದು ಮಾಡಿ ಕೆಲವು ಹಿರಿಯ ಕಾರ್ಪೊರೇಟರ್ ಗಳು ಹೆಚ್ಚಿನ ಪಾಲನ್ನು ತೆಗೆದುಕೊಳ್ಳುತ್ತಿದ್ದಾರೆ. ಕೆಲವು ವಾರ್ಡ್ ಗಳಿಗೆ ಸಮನಾಗಿ ಹಣವನ್ನು ಹಂಚುತ್ತಿಲ್ಲ ಎಂದು ದೂರಿದರು.
ಈ ವಿಷಯವನ್ನು ನಾನು ಕಮಿಷನರ್ ಶಿಲ್ಪಾ ನಾಗ್ ಅವರ ಗಮನಕ್ಕೂ ತಂದಿದ್ದೇನೆ. ಜಿಲ್ಲಾಧಿಕಾರಿ ಅವರಿಗೆ ಈ ಕೂಡಲೇ ಪತ್ರ ಬರೆಯುತ್ತಿದ್ದೇನೆ. ಕಾರ್ಪೊರೇಷನ್ ನಲ್ಲಿ ಒಂದು ಮಾಫಿಯಾ ಮಾಡಿಕೊಂಡು ಇಂತಿಷ್ಟು ಹಣ ಅಂತ ಹಂಚಿಕೊಳ್ಳುವುದು, ಅದಕ್ಕೆ ಕೌನ್ಸಿಲ್ ಮೀಟಿಂಗ್ ನಲ್ಲಿ ಒಪ್ಪಿಗೆ ಸೂಚಿಸುವುದು ಕೂಡ ನಡೆಯುತ್ತಿದೆ. ಇದು ಅಂತ್ಯವಾಗಬೇಕು ಎಂದರು.

ಕೇಂದ್ರ ಸರ್ಕಾರದಿಂದ ಬರುವ ಹಣದಲ್ಲಿ ಕುಡಿಯುವ ನೀರು ಪೂರೈಕೆಗೆ ಆದ್ಯತೆ ನೀಡಬೇಕು. ಶಾಶ್ವತವಾಗಿ ಕುಡಿಯುವ ನೀರಿನ ಸಮಸ್ಯೆ ಪರಿಹಾರ ಮಾಡಬೇಕು. 14ನೇ ಹಣಕಾಸು ಆಯೋಗದಿಂದ ಏನು ಹಣ ಬಂದಿದೆ ಅದನ್ನಷ್ಟು ಕುಡಿಯುವ ನೀರಿನ ವ್ಯವಸ್ಥೆ ಮಾಡಲಿಕ್ಕೆ ಬಳಸಿ ಉಳಿದ ಹಣವನ್ನು ವಾರ್ಡ್ ಅಭಿವೃದ್ಧಿಗೆ ಬಳಸಿಕೊಳ್ಳಬೇಕು ಎಂದರು.












Click it and Unblock the Notifications