ಡಾ.ಸಿ.ಎನ್.ಮಂಜುನಾಥ್ ರಾಜಕೀಯಕ್ಕೆ ಬರಬೇಕು ಎಂದ ಸಂಸದ ಪ್ರತಾಪ್ ಸಿಂಹ
ಮೈಸೂರು: ಹಣ ಇದ್ದವರು ಮಾತ್ರ ಅಲ್ಲ ಉತ್ತಮ ಗುಣ ಇರುವವರು ರಾಜಕೀಯಕ್ಕೆ ಬರಬೇಕು. ಹಾಗಾಗಿ ಡಾ.ಸಿ.ಎನ್.ಮಂಜುನಾಥ್ ಅವರು ರಾಜಕೀಯಕ್ಕೆ ಬರಬೇಕು, ಎಂದು ಸಂಸದ ಪ್ರತಾಪಸಿಂಹ ವೇದಿಕೆಯಲ್ಲೇ ಆಹ್ವಾನ ನೀಡಿದರು.
ನಗರದ ಕಲಾಮಂದಿರದಲ್ಲಿ ಡಾ. ಮಂಜುನಾಥ್ ಅಭಿನಂದನಾ ಸಮಿತಿ ಮೈಸೂರು ವತಿಯಿಂದ 'ಧನ್ಯವಾದ ಧನ್ವಂತರಿ' ಎಂಬ ಹೆಸರಿನಲ್ಲಿ ಡಾ.ಸಿ.ಎನ್.ಮಂಜುನಾಥ್ ಅವರಿಗೆ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು. "ರಾಜಕೀಯ ಕೆಟ್ಟದ್ದಲ್ಲ. ರಾಜಕೀಯಕ್ಕೆ ಒಳ್ಳೆಯವರು ಬರಬೇಕು. ನಾನು ಏನು ಇಲ್ಲದೆ ರಾಜಕೀಯ ಬಂದವನು. ಜನ ಎರಡು ಬಾರಿ ಗೆಲ್ಲಿಸಿದರು. ಒಳ್ಳೆಯ ವ್ಯಕ್ತಿಗಳು ರಾಜಕೀಯಕ್ಕೆ ಬಂದಾಗ ಜನ ಖಂಡಿತವಾಗಿ ಸ್ವೀಕರಿಸುತ್ತಾರೆ. ಹಾಗಾಗಿ ಡಾ.ಮಂಜುನಾಥ್ ಅವರು ರಾಜಕೀಯಕ್ಕೆ ಬರಬೇಕು" ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಡಾ.ಸಿ.ಎನ್.ಮಂಜುನಾಥ್ ಅವರು, ನನ್ನ ಸೇವೆ ರಾಷ್ಟ್ರಮಟ್ಟದಲ್ಲೂ ಸಿಗಬೇಕೆಂಬ ಹಂಬಲವನ್ನು ಬಹಳಷ್ಟು ಜನರು ವ್ಯಕ್ತಪಡಿಸಿದ್ದಾರೆ. ಹಾಗಾಗಿ ಈ ಬಗ್ಗೆ ನಾನು ಆಲೋಚನೆ ಮಾಡುತ್ತಿದ್ದೇನೆ. ಇನ್ನೂ ಯಾವುದೇ ತೀರ್ಮಾನ ಮಾಡಿಲ್ಲ ಎಂದು ಹೇಳಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, "ಜಯದೇವ ಆಸ್ಪತ್ರೆಯಿಂದ 75 ಲಕ್ಷ ಹೊರ ರೋಗಿಗಳಿಗೆ ಚಿಕಿತ್ಸೆ ನೀಡಲಾಗಿದೆ. 8 ಲಕ್ಷ ರೋಗಿಗಳಿಗೆ ಶಸಚಿಕಿತ್ಸೆ ಮಾಡಲಾಗಿದೆ. ಆಸ್ಪತ್ರೆಯ ಪ್ರತಿಯೊಬ್ಬ ವೈದ್ಯರು, ಸಿಬ್ಬಂದಿ ಪರಿಶ್ರಮದಿಂದ ಇದು ಸಾಧ್ಯವಾಯಿತು. ನನಗೆ ಹಲವಾರು ಪ್ರಶಸ್ತಿಗಳು ಬಂದಿವೆ. ಆದರೆ, ಜನರು ನೀಡುವ ಸನ್ಮಾನ ಎಲ್ಲಾ ಪ್ರಶಸ್ತಿಗಿಂತ ವಿಶೇಷ ಎಂದೇ ಭಾವಿಸುವೆ" ಎಂದರು.
"ನಾವೆಲ್ಲರೂ ಜನರ ಹೃದಯ ಗೆಲ್ಲಬೇಕು. ದ್ವೇಷ ಕಳೆಯಬೇಕು. ಪ್ರೀತಿ ಹಂಚಬೇಕು. ಹಂಚಿ ತಿನ್ನುವ ಸಂಸ್ಕಾರ ಬೆಳೆಸಿಕೊಳ್ಳಬೇಕು. ವ್ಯಕ್ತಿ ಹೋದರೂ ವ್ಯಕ್ತಿತ್ವ ಶಾಶ್ವತವಾಗಿ ಉಳಿಯುವಂತಾಗಬೇಕು. ಜಯದೇವ ಆಸ್ಪತ್ರೆಗೆ ತುರ್ತು ಚಿಕಿತ್ಸೆಗೆ ಬಂದವರ ಬಳಿ ಹಣ ಕಟ್ಟಿಸಿಕೊಳ್ಳುವುದಿಲ್ಲ. ಆ ನಾಮಲಕವನ್ನು ನಾವು ಆಸ್ಪತ್ರೆಯ ಆವರಣದಲ್ಲೇ ಹಾಕಿದ್ದೇವೆ. ಕೆಲಸ ಮಾಡಲು ಇಂತಹ ಹೃದಯಸ್ಪರ್ಶಿ ವಾತಾವರಣ ತುಂಬಾ ಮುಖ್ಯ" ಎಂದು ಹೇಳಿದರು.












Click it and Unblock the Notifications