ತಮಿಳುನಾಡಿನ ಮೀನುಗಾರರ ಸಾವಿನಲ್ಲಿ ರಾಜ್ಯ ಅರಣ್ಯ ಸಿಬ್ಬಂದಿ ಪಾತ್ರವಿಲ್ಲ: ಸಚಿವ ವಿ ಸೋಮಣ್ಣ
ಮೆಟ್ಟೂರು ಬಳಿ ಮೀನುಗಾರಿಕೆ ನಡೆಸುತ್ತಿದ್ದ ರಾಜು ಅವರನ್ನು ಅರಣ್ಯ ಸಿಬ್ಬಂದಿ ಗುಂಡಿಕ್ಕಿ ಕೊಂದಿದ್ದಾರೆ ಎಂದು ಮೃತರ ಕುಟುಂಬಸ್ಥರು ಆರೋಪಿಸಿದ್ದರು.
ಮೈಸೂರು, ಫೆಬ್ರವರಿ. 19: ಸೇಲಂ ಜಿಲ್ಲೆಯ ಎಂ ರಾಜು (40) ಸಾವಿನಲ್ಲಿ ರಾಜ್ಯದ ಅರಣ್ಯ ಇಲಾಖೆಯ ಪಾತ್ರವಿಲ್ಲ ಎಂದು ವಸತಿ ಸಚಿವ ವಿ ಸೋಮಣ್ಣ ಶನಿವಾರ ಹೇಳಿದ್ದಾರೆ.
ಮೆಟ್ಟೂರು ಬಳಿ ಮೀನುಗಾರಿಕೆ ನಡೆಸುತ್ತಿದ್ದ ರಾಜು ಅವರನ್ನು ಅರಣ್ಯ ಸಿಬ್ಬಂದಿ ಗುಂಡಿಕ್ಕಿ ಕೊಂದಿದ್ದಾರೆ ಎಂದು ಮೃತರ ಕುಟುಂಬಸ್ಥರು ಆರೋಪಿಸಿದ್ದರು.
ಆದರೆ, ಮೃತರನ್ನು ಕಳ್ಳ ಬೇಟೆಗಾರ ಎಂದು ಆರೋಪಿಸಿರು ಸಚಿವ ಸೋಮಣ್ಣ, ವ್ಯಕ್ತಿ ಗುಂಡೇಟಿನಿಂದ ಸಾವನ್ನಪ್ಪಿಲ್ಲ ಎಂದು ಹೇಳಿದ್ದಾರೆ. ಗುಂಡು ಹಾರಿಸಿದ ಸ್ಥಳದಿಂದ ಅರಣ್ಯ ಸಿಬ್ಬಂದಿ ಜಿಂಕೆಯ ಕಳೆಬರ ಮತ್ತು ದೇಸಿ ಬಂದೂಕುಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.

ಎಂಟು ವರ್ಷಗಳ ಹಿಂದೆ ರಾಜ್ಯದ ಅರಣ್ಯ ಭೂಮಿಯಲ್ಲಿ ಕಳ್ಳಬೇಟೆ ನಡೆಸುತ್ತಿದ್ದಾಗ ಮೃತ ರಾಜುವನ್ನು ಬಂಧಿಸಲಾಗಿತ್ತು ಎಂದು ಮಾಹಿತಿ ನೀಡಿದ್ದಾರೆ. ರಾಜಾ (ಎ) ಕರವಾಡಯ್ಯನ್ ಸೇಲಂ ಜಿಲ್ಲೆಯ ಕೊಳತ್ತೂರಿನ ಗೋವಿಂಧಪಾಡಿ ಬಳಿಯ ಅರಿಸಿಪಾಳ್ಯಂ ನಿವಾಸಿಯಾಗಿದ್ದಾರೆ.
"ಕಾವೇರಿ ನದಿಯಲ್ಲಿ ಮೀನುಗಾರಿಕೆಗೆ ಸಾವಿರಾರು ಜನರು ಬರುತ್ತಾರೆ. ಅವರು ಯಾವುದೇ ಸಮಸ್ಯೆಗಳನ್ನು ಎದುರಿಸಿಲಿಲ್ಲ. ತಮಿಳುನಾಡಿನ ಆಸ್ಪತ್ರೆಯಿಂದ ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರ ಈ ಸಾವಿನ ಬಗ್ಗೆ ಸತ್ಯಾಂಶ ಹೊರಬೀಳಲಿದೆ. ತಮಿಳುನಾಡು ಅಧಿಕಾರಿಗಳೊಂದಿಗೆ ಸರ್ಕಾರ ಮಾತುಕತೆ ನಡೆಸಲಿದೆ" ಎಂದು ಸೋಮಣ್ಣ ತಿಳಿಸಿದ್ದಾರೆ.
ಮೃತ ರಾಜು ಅವರ ಕುಟುಂಬವು ಅನೇಕ ಬೇಡಿಕೆಗಳನ್ನು ಮುಂದಿಟ್ಟು ಶನಿವಾರ ಸಂಜೆಯವರೆಗೆ ಮರಣೋತ್ತರ ಪರೀಕ್ಷೆಗೆ ಒಪ್ಪಿಗೆ ನೀಡಲು ನಿರಾಕರಿಸಿತ್ತು. "ವಿಶೇಷವಾಗಿ, ಅವರು ಕರ್ನಾಟಕ ಸರ್ಕಾರದ ಮೌನವನ್ನು ಪ್ರಶ್ನಿಸಿದ್ದರು. ಕರ್ನಾಟ ರಾಜ್ಯವು ಸೂಕ್ತ ಪರಿಹಾರವನ್ನು ನೀಡಬೇಕು, ಕರ್ನಾಟಕ ಅರಣ್ಯ ಸಿಬ್ಬಂದಿ ವಿರುದ್ಧ ಕೊಲೆ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿದ್ದರು" ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಕೊನೆಗೆ, ಮೆಟ್ಟೂರು ಶಾಸಕ ಎಸ್ ಸದಾಶಿವಂ, ಪೊಲೀಸರು, ಸೇಲಂ ಜಿಲ್ಲಾಧಿಕಾರಿ ಎಸ್ ಕಾರ್ಮೆಗಂ ಎಲ್ಲರೂ ಸೇರಿ ಮೃತರ ಪತ್ನಿ ಪೌನಾ ಮತ್ತು ಕುಟುಂಬಸ್ಥರ ಮನವೊಲಿಸಿದ ಬಳಿಕೆ ಮರಣೋತ್ತರ ಪರೀಕ್ಷೆಗೆ ಒಪ್ಪಿಗೆ ನೀಡಿದರು. ಮೂಲಗಳ ಪ್ರಕಾರ, ಮರಣೋತ್ತರ ಪರೀಕ್ಷೆ ನಡೆಸಿದರೆ ಮಾತ್ರ ಪೊಲೀಸರು ಮುಂದಿನ ಕ್ರಮ ತೆಗೆದುಕೊಳ್ಳಬಹುದು ಎಂದು ಜಿಲ್ಲಾಧಿಕಾರಿ ಕುಟುಂಬಸ್ಥರಿಗೆ ತಿಳಿ ಹೇಳಿದ್ದರು..
ಚಾಮರಾಜನಗರ ಜಿಲ್ಲಾಧಿಕಾರಿಯೊಂದಿಗೆ ಮಾತನಾಡಿದ ಸೇಲಂ ಜಿಲ್ಲಾಧಿಕಾರಿ ಎಸ್ ಕಾರ್ಮೆಗಂ, ಘಟನೆ ಬಗ್ಗೆ ಕರ್ನಾಟಕ ಮುಖ್ಯ ಕಾರ್ಯದರ್ಶಿಯವರ ಗಮನಕ್ಕೆ ತರುವುದಾಗಿ ಭರವಸೆ ನೀಡಿದ್ದಾರೆ. ಶನಿವಾರ ಸಂಜೆಯಿಂದಲೇ ಮರಣೋತ್ತರ ಪರೀಕ್ಷೆ ಆರಂಭಗೊಂಡಿದ್ದು, ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹವನ್ನು ರಾಜಾ ಅವರ ಕುಟುಂಬಕ್ಕೆ ಹಸ್ತಾಂತರಿಸಲಾಗುವುದು.
ಫೆಬ್ರವರಿ 14 ರ ರಾತ್ರಿ ತಮಿಳುನಾಡು - ಕರ್ನಾಟಕ ಗಡಿಯಲ್ಲಿ ಕರ್ನಾಟಕ ಅರಣ್ಯ ಇಲಾಖೆ ಸಿಬ್ಬಂದಿ ಗುಂಡು ಹಾರಿಸಿದ್ದಾರೆ ಎಂದು ಆರೋಪಿಸಲಾಗಿದೆ. ಈರೋಡ್ ಜಿಲ್ಲೆಯ ಬರ್ಗೂರ್ ಪೊಲೀಸ್ ವ್ಯಾಪ್ತಿಯ ಕಾವೇರಿ ಪುರಂ ಬಳಿಯ ಪಾಲಾರ್ ನದಿಯಲ್ಲಿ ಶುಕ್ರವಾರ ರಾಜ ಅವರ ಮೃತದೇಹ ಪತ್ತೆಯಾಗಿತ್ತು.
ಗುಂಡಿನ ಚಕಮಕಿ ನಡೆದ ಬಳಿಕ ನದಿ ದಡದಲ್ಲಿ ಸಿಕ್ಕಿದ್ದ ಎರಡು ಜಿಂಕೆ ಶವಗಳನ್ನು ಮರಣೋತ್ತರ ಪರೀಕ್ಷೆ ಬಳಿಕ ಅರಣ್ಯ ಇಲಾಖೆ ಸಿಬ್ಬಂದಿ ಕಾಡಿನಲ್ಲಿ ಸುಟ್ಟಿದ್ದಾರೆ. ಗುಂಡಿನ ಚಕಮಕಿ ಸಂಬಂಧ ಈಗಾಗಲೇ ಮಲೆಮಹದೇಶ್ವರ ಬೆಟ್ಟದಲ್ಲಿ ನಾಲ್ವರ ಅಪರಿಚಿತರ ವಿರುದ್ಧ ಪ್ರಕರಣ ದಾಖಲಾಗಿದೆ.












Click it and Unblock the Notifications