ಸುಮಲತಾ ಅವರು ನಿಖಿಲ್ ಬೆಂಬಲಿಸುತ್ತಾರೆ ಎಂಬ ವಿಶ್ವಾಸವಿದೆ: ಸಾ ರಾ ಮಹೇಶ್
ಮೈಸೂರು, ಮಾರ್ಚ್ 16 : ಸುಮಲತಾ ಅಂಬರೀಶ್ ಈಗಲೂ ನಿಖಿಲ್ ಬೆಂಬಲಿಸುವ ಬಗ್ಗೆ ನನಗೆ ವಿಶ್ವಾಸವಿದೆ. ಯಾರೋ ಅವರಿಗೆ ಒತ್ತಡ ಹಾಕಿದ್ದಾರೆ ಆದ್ದರಿಂದ ಸುಮಲತಾ ಸ್ಪರ್ಧೆ ಮಾಡುತ್ತಿದ್ದಾರೆ ಎಂದು ಮೈಸೂರಿನಲ್ಲಿ ಸಚಿವ ಸಾ.ರಾ ಮಹೇಶ್ ವಿಶ್ವಾಸ ವ್ಯಕ್ತಪಡಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿಖಿಲ್ ಕುಮಾರಸ್ವಾಮಿ ಮತ್ತು ಅಭಿಷೇಕ್ ಆತ್ಮೀಯ ಸ್ನೇಹಿತರು. ಸುಮಲತಾ ಅವರು ಮನಸು ಮಾಡಬಹುದಿತ್ತು. ಮಗನ ಸ್ನೇಹಿತನನ್ನು ಮಗನಂತೆ ಕಾಣಬಹುದಾಗಿತ್ತು. ಅಂಬರೀಶ್ ಅಣ್ಣನವರೇ ಚುನಾವಣೆ ಬೇಡ ಅಂದಿದ್ದರು. ಮನೆ ಬಾಗಿಲಿಗೆ ಬಂದ ಬಿ ಫಾರಂ ನಿರಾಕರಿಸಿದ್ದರು. ಸುಮಕ್ಕಾ ಅವರಿಗೂ ಚುನಾವಣೆ ಏಕೆ ಅಂತಾ ನಾನು ಮನವಿ ಮಾಡಿದ್ದೆ. ಅವರು ಅನುಭವಿಗಳು, ನನಗೆ ಇಂದಿಗೂ ವಿಶ್ವಾಸ ಇದೆ. ನಿಖಿಲ್ - ಅಭಿ ಬಾಂಧವ್ಯ ಈ ಎಲ್ಲಾ ನೋಡಿ ಸುಮಲತಾ ಅಂಬರೀಶ್ ನಿಖಿಲ್ ಬೆಂಬಲಿಸುತ್ತಾರೆ ಎಂದು ತಿಳಿಸಿದರು.
ಇತ್ತ ಲೋಕಸಭಾ ಚುನಾವಣೆ ಸೀಟು ಹಂಚಿಕೆ ವಿಚಾರ ಮೈತ್ರಿ ಪಕ್ಷಗಳ ನಡುವೆ ಹೊಂದಾಣಿಕೆ ಕಷ್ಟಸಾಧ್ಯವಾದಂತೆ ಕಾಣುತ್ತಿದೆ. ಇದಕ್ಕೆ ಪೂರಕವೆಂಬಂತೆ ಸಚಿವ ಸಾ ರಾ ಮಹೇಶ್ ಪರೋಕ್ಷವಾಗಿ ಕಾಂಗ್ರೆಸ್ಸಿಗೆ ಎಚ್ಚರಿಕೆ ನೀಡಿದ್ದಾರೆ. ವಿಧಾನಸಭಾ ಚುನಾವಣೆಯಲ್ಲಿ ನಿಮ್ಮ, ನಮ್ಮ ಅಂತರ ಇದ್ದೆ ಇರುತ್ತದೆ. ಮೈತ್ರಿಯಾಗಿ ಸರ್ಕಾರ ನಡೆಸುತ್ತಿದ್ದೇವೆ. ಆದರೆ ಕಾಂಗ್ರೆಸ್ ಸ್ನೇಹಿತರೇ ನೀವು ಮಂಡ್ಯದಲ್ಲಿ ನಮ್ಮನ್ನು ಹೇಗೆ ನಡೆಸಿಕೊಳ್ಳುತ್ತಿರೋ ಅದು ಮೈಸೂರಿನಲ್ಲಿ ಪ್ರತಿಧ್ವನಿಸಲಿದೆ ಎಂದರು.

ಮಂಡ್ಯದಲ್ಲಿ ನಮ್ಮನ್ನ ಒಮ್ಮೆ ತಬ್ಬಿಕೊಂಡರೆ ಮೈಸೂರಿನಲ್ಲಿ ನಿಮ್ಮನ್ನ 5 ಬಾರಿ ತಬ್ಬಿಕೊಳ್ಳುತ್ತೇವೆ. ನಿಮಗೆ ಇದು ನೆನಪಿನಲ್ಲಿ ಇರಲಿ. ಈ ಲೋಕಸಭೆ ಚುನಾವಣೆಯಿಂದಲೇ ಇದು ಪ್ರಾರಂಭವಾಗಬೇಕು. ನಾವು ಜಿಲ್ಲೆಯಲ್ಲಿ ಯಾವುದೇ ವ್ಯತ್ಯಾಸವನ್ನು ಮಾಡದೇ ಸೇವೆ ಮಾಡಿದ್ದೇವೆ. ಆದ್ದರಿಂದ ಮೈತ್ರಿ ಧರ್ಮ ಪಾಲಿಸಿ ನಿಖಿಲ್ ಕುಮಾರಸ್ವಾಮಿ ಅವರನ್ನು ಗೆಲ್ಲಿಸಿಕೊಡಿ ಎಂದು ಮನವಿ ಮಾಡಿದರು.












Click it and Unblock the Notifications