ಒಕ್ಕಲಿಗರಿಗೆ ಆದರ್ಶ ಯಾರಾಗಬೇಕು? ಪ್ರತಿಭಟನೆ ವಿರುದ್ಧ ಮಾತಾಡಿದ ಸಚಿವ ಸಿ.ಟಿ ರವಿ
ಮೈಸೂರು, ಸೆಪ್ಟೆಂಬರ್ 11: ಒಕ್ಕಲಿಗ ಸಮುದಾಯದವರು ಡಿ.ಕೆ. ಶಿವಕುಮಾರ್ ಬಂಧನದ ವಿರುದ್ಧ ನಡೆಸುತ್ತಿರುವ ಪ್ರತಿಭಟನೆಗೆ ಸಚಿವ ಸಿ.ಟಿ. ರವಿ ಬೇಸರ ವ್ಯಕ್ತಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಒಕ್ಕಲಿಗರಿಗೆ ಯಾರು ಆದರ್ಶ ಆಗಬೇಕು ಎಂಬುದನ್ನು ಅವರೇ ತೀರ್ಮಾನ ಮಾಡಿಕೊಳ್ಳಲಿ. ಒಕ್ಕಲಿಗರಿಗೆ ಶಾಂತವೇರಿ ಗೋಪಾಲಗೌಡರು, ಕುವೆಂಪು, ಕೆಂಗಲ್ ಹನುಮಂತಯ್ಯ ಅವರಂಥ ಮಹನೀಯರು ಆದರ್ಶರಾಗಬೇಕೋ ಅಥವಾ ಇನ್ಯಾರು ಆದರ್ಶ ಆಗಬೇಕು ಎಂಬುದನ್ನು ಅವರೇ ತೀರ್ಮಾನಿಸಲಿ" ಎಂದು ತಿರುಗೇಟು ನೀಡಿದ್ದಾರೆ.

"ಜಾರಿ ನಿರ್ದೇಶನಾಲಯದಲ್ಲಿ ಯಾವುದೇ ಜಾತಿ ಇಲ್ಲ. ಇದನ್ನು ಹುಟ್ಟುಹಾಕಿದವರು ಯಾರು? ಭಾರತೀಯ ಜನತಾ ಪಾರ್ಟಿ ಇಡಿ ಹುಟ್ಟುಹಾಕಿಲ್ಲ. ಕೋಟ್ಯಂತರ ರೂಪಾಯಿ ಅಕ್ರಮ ಆಸ್ತಿ ಸಂಬಂಧ ಇಡಿ ತನಿಖೆ ಮಾಡುತ್ತಿದೆ. ತನಿಖೆ ಮಾಡೋದೇ ತಪ್ಪು ಎಂದರೆ ಹೇಗೆ? ಸತ್ಯವಂತರಿಗೆ ಇದು ಕಾಲವಲ್ಲ. ನಾನು ಸತ್ಯ ಹೇಳಿದರೆ ಕೆಲವರಿಗೆ ಅಪಥ್ಯವಾಗುತ್ತದೆ" ಎಂದು ಪ್ರಶ್ನಿಸಿದರು.

ಈ ಸಂದರ್ಭ ಸಂಚಾರಿ ನಿಯಮಗಳ ಉಲ್ಲಂಘನೆಗೆ ವಿಧಿಸಿರುವ ದಂಡದ ಕುರಿತೂ ಮಾತನಾಡಿದ ಅವರು, "ತಪ್ಪು ಮಾಡದೇ ಇರುವವರಿಗೆ ದಂಡದ ಪ್ರಶ್ನೆಯೇ ಇಲ್ಲ. ತಪ್ಪು ಮಾಡುವವರಿಗೆ ಟ್ರಾಫಿಕ್ ದಂಡ ಬೀಳುತ್ತದೆ. ನಾನೂ ಮೊದಲು ಸೀಟ್ ಬೆಲ್ಟ್ ಹಾಕುತ್ತಿರಲಿಲ್ಲ. ಟ್ರಾಫಿಕ್ ಫೈನ್ ಜಾಸ್ತಿಯಾದ ಮೇಲೆ ಕಡ್ಡಾಯವಾಗಿ ಹಾಕುತ್ತಿದ್ದೇನೆ. ನಾನು ತಪ್ಪು ಮಾಡಿದರೆ ಮೊದಲು ನನ್ನಂಥವರಿಗೆ ದಂಡ ಹಾಕಬೇಕು. ಮಿನಿಸ್ಟರ್ ಇರಲಿ, ಸಿಎಂ ಇರಲಿ ಎಲ್ಲರಿಗೂ ದಂಡ ಕಡ್ಡಾಯವಾಗಬೇಕು" ಎಂದರು.
"ಸಾರ್ವಜನಿಕರು ನೀಡುವ ದಂಡದ ಹಣದಲ್ಲಿ ರಸ್ತೆ ರಿಪೇರಿ ಮಾಡುವಂತೆ ಕೇಳಿಕೊಳ್ಳುತ್ತಿದ್ದಾರೆ. ಆದರೆ ಈಗ ದನಿ ಎತ್ತಿರುವವರು ಎಷ್ಟು ಜನ ತೆರಿಗೆ ಕಟ್ಟುತ್ತಿದ್ದಾರೆ ಎಂದು ನೋಡಿಕೊಳ್ಳಲಿ. ಅಮೆರಿಕಾದಲ್ಲಿ ಶೇ. 97ರಷ್ಟು ಜನ ತೆರಿಗೆ ಕಟ್ಟುತ್ತಾರೆ. ಆದರೆ ನಮ್ಮಲ್ಲಿ ತೆರಿಗೆ ಕದಿಯುವುದು ಹೇಗೆ ಎಂದು ನೂರು ಮಾರ್ಗ ಹುಡುಕುತ್ತಾರೆ" ಎಂದು ತಮ್ಮ ನಡೆಯನ್ನು ಸಮರ್ಥಿಸಿಕೊಂಡರು.












Click it and Unblock the Notifications