ಮೈಸೂರು: ಗಂಡ- ಮಕ್ಕಳ ಬಿಟ್ಟು ಅಪ್ರಾಪ್ತನ ಹಿಂದೆ ಬಿದ್ದ ಮಹಿಳೆ ಮಾಡಿದ್ದೇನು?
ಮೈಸೂರು, ಡಿಸೆಂಬರ್ 22: ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾದ ಅಪ್ರಾಪ್ತ ಯುವಕನ ವ್ಯಾಮೋಹಕ್ಕೆ ಬಿದ್ದ ಮೂವತ್ತೈದರ ಮಹಿಳೆ, ಗಂಡ ಮತ್ತು ಮೂವರು ಮಕ್ಕಳನ್ನು ಬಿಟ್ಟು ಯುವಕನನ್ನು ಹುಡುಕಿಕೊಂಡು ಮನೆಗೆ ಹೋಗಿ ತನ್ನನ್ನು ಮದುವೆ ಮಾಡಿಕೊಳ್ಳುವಂತೆ ಪಟ್ಟು ಹಿಡಿದ ಘಟನೆ ಬೆಳಕಿಗೆ ಬಂದಿದ್ದು, ಜನ ಎಂಥ ಕಲಿಗಾಲ ಬಂತಪ್ಪಾ ಎಂದು ಮೂಗಿನ ಮೇಲೆ ಬೆರಳಿಟ್ಟುಕೊಂಡಿದ್ದಾರೆ.
ಒಳಿತಿಗಿಂತ ಕೆಡಕೇ ಜಾಸ್ತಿ
ಕೆಲವರು ಸೋಷಿಯಲ್ ಮೀಡಿಯಾವನ್ನು ಒಳಿತಿಗಿಂತ ಕೆಡುಕಿಗೆ ಹೆಚ್ಚಾಗಿ ಬಳಸಿಕೊಳ್ಳುತ್ತಿರುವುದರಿಂದ ಮೇಲಿಂದ ಮೇಲೆ ಒಂದಲ್ಲ ಒಂದು ರೀತಿಯಲ್ಲಿ ಅಪರಾಧಗಳು ನಡೆಯುವಂತಾಗಿದೆ. ಅದರಲ್ಲೂ ಚಾಟ್ ಮೂಲಕ ಆರಂಭವಾಗುವ ಪರಿಚಯ ಬಳಿಕ ಆಕರ್ಷಣೆಯನ್ನು ಹುಟ್ಟು ಹಾಕಿ ಸಮಸ್ಯೆಗಳನ್ನು ತಂದೊಡ್ಡುತ್ತಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಹಾಯ್, ಬಾಯ್‌ನಿಂದ ಶುರುವಾಗಿ ಕ್ರಮೇಣ ದಿಕ್ಕನ್ನೇ ಬದಲಿಸಿ ಪ್ರೀತಿ- ಪ್ರೇಮದ ಹೆಸರಿನಲ್ಲಿ ವಂಚನೆ ಮತ್ತು ಅನೈತಿಕ ಸಂಬಂಧಕ್ಕೂ ದಾರಿ ಮಾಡಿಕೊಟ್ಟು ಬದುಕನ್ನೇ ಬಲಿ ತೆಗೆದುಕೊಳ್ಳುವಂತೆ ಮಾಡುತ್ತಿದೆ. ಅದರಲ್ಲೂ ಮೊದಲಿಗೆ ಬರೀ ಸಂದೇಶದಿಂದಲೇ ಆರಂಭವಾಗಿ ಬಳಿಕ ಫೋನ್ ಮಾತುಕತೆ, ಭೇಟಿ ಅಷ್ಟೇ ಅಲ್ಲದೆ ಮುಂದುವರೆದು ದೈಹಿಕವಾಗಿಯೂ ಬೆರೆತು ಬಳಿಕ ಬ್ಲಾಕ್‌ಮೇಲ್, ವಂಚನೆ, ಮೋಸ, ಕಳ್ಳತನ ಸುಲಿಗೆ ಹೀಗೆ ಹತ್ತು ಹಲವು ಅಪರಾಧಗಳಿಗೆ ಎಡೆ ಮಾಡಿಕೊಡುತ್ತಿದೆ.

ಅಪ್ರಾಪ್ತ ಯುವಕನ ಹಿಂದೆ ಬಿದ್ದ ಮಹಿಳೆ
ಆದರೆ ಈ ಪೈಕಿ ಸೆಕ್ಸ್ ಧೋಖಾ ಪ್ರಕರಣಗಳು ಜಾಸ್ತಿಯಾಗಿದ್ದು, ಈಗಾಗಲೇ ಕೆಲವರು ತಮ್ಮ ಸಂಸಾರವನ್ನೇ ಹಾಳುಮಾಡಿಕೊಂಡಿದ್ದಾರೆ. ಅದರಲ್ಲೂ ಕೆಲವು ಮಹಿಳೆಯರು ಗಂಡ, ಮಕ್ಕಳು ಸಂಸಾರದ ಜವಾಬ್ದಾರಿಯನ್ನೇ ಮರೆತು ಜಾಲತಾಣದಲ್ಲಿ ಪರಿಚಯವಾಗುವ ಯುವಕರ ಮೋಹಕ್ಕೆ ಬೀಳುತ್ತಿರುವುದು ಗುಟ್ಟಾಗಿ ಉಳಿದಿಲ್ಲ.
ಇದೀಗ ಮೂವತ್ತೈದು ವರ್ಷ ಪ್ರಾಯದ, ಮೂವರು ಮಕ್ಕಳ ತಾಯಿಯೊಬ್ಬಳು 17 ವಯಸ್ಸಿನ ಅಪ್ರಾಪ್ತ ಯುವಕನೊಂದಿಗೆ ಆನ್‌ಲೈನ್‌ನಲ್ಲಿ ಸ್ನೇಹ ಬೆಳೆಸಿದ್ದಲ್ಲದೆ, ಆತನೊಂದಿಗೆ ದೈಹಿಕ ಸಂಪರ್ಕ ಹೊಂದಿ ಇದೀಗ ಗಂಡ ಮಕ್ಕಳು ಎಲ್ಲರನ್ನು ಬಿಟ್ಟು ಆತನೊಂದಿಗೆ ಸಂಸಾರ ನಡೆಸುವ ಹಠಕ್ಕೆ ಬಿದ್ದಿರುವ ಅಸಹ್ಯ ಘಟನೆಯೊಂದು ಮೈಸೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ.
ಮದುವೆಗೆ ಬಲವಂತ ಮಾಡಿದ ಮಹಿಳೆ
ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾದ ಬಾಲಕನೊಂದಿಗೆ ಚಾಟ್ ಮಾಡುತ್ತಿದ್ದ ಮಹಿಳೆ, ತಾನು ವಿವಾಹಿತೆ ತನಗೆ 13 ವರ್ಷ ವಯಸ್ಸಿನ ಮಗಳು ಸೇರಿದಂತೆ ಮೂವರು ಮಕ್ಕಳು ಇದ್ದಾರೆ ಎಂಬುದನ್ನು ಮರೆತು ಆತನೊಂದಿಗೆ ಪ್ರಣಯ ಶುರು ಮಾಡಿದ್ದಾಳೆ. ಅಷ್ಟೇ ಅಲ್ಲದೆ ಆತನನ್ನು ಭೇಟಿಯಾಗಿ ದೈಹಿಕ ಸಂಪರ್ಕ ಹೊಂದಿದ್ದಾಳೆ. ಬಳಿಕ ಆತನಿಗೆ ನಾನು ಗಂಡ, ಮಕ್ಕಳನ್ನು ಬಿಟ್ಟು ಬರುತ್ತೇನೆ ನೀನು ನನ್ನನ್ನು ಮದುವೆಯಾಗು ಎಂದು ಹಠ ಹಿಡಿದಿದ್ದಾಳೆ.
ಆಂಟಿಯನ್ನು ಪಟಾಯಿಸಿ ದೈಹಿಕ ಬಯಕೆ ತೀರಿಸಿಕೊಂಡು ಜಾಲಿಯಾಗಿರಬಹುದೆಂದು ನಂಬಿದ್ದ ಅಪ್ರಾಪ್ತ ಯುವಕನಿಗೆ ಅವಳು ಮದುವೆಯಾಗುವಂತೆ ಹಠ ಹಿಡಿದಾಗ ಆಕಾಶವೇ ಕಳಚಿ ತಲೆ ಬಿದ್ದಂತಾಗಿದೆ. ಹೀಗಾಗಿ ಆಕೆಯಿಂದ ಅಂತರ ಕಾಪಾಡಿಕೊಳ್ಳುವ ಪ್ರಯತ್ನ ಮಾಡಿದ್ದಲ್ಲದೆ, ಮನೆ ಬಿಟ್ಟು ಹೊರ ಹೋಗಿದ್ದನು. ಆದರೆ ಅವನ ವ್ಯಾಮೋಹಕ್ಕೆ ಬಿದ್ದ ಅವಳು ಮಾತ್ರ ಸುಮ್ಮನಿರದೆ ಅವನನ್ನು ಹುಡುಕಿಕೊಂಡು ಮನೆಗೆ ತೆರಳಿದ್ದಲ್ಲದೆ, ಆತನನ್ನೇ ವಿವಾಹ ಮಾಡಿಕೊಡುವಂತೆ ಮನೆಯವರೊಂದಿಗೆ ಪಟ್ಟು ಹಿಡಿದ್ದಾಳೆ.
ಪೊಲೀಸರ ಮೊರೆ ಹೋದ ಪೋಷಕರು
ಈ ನಡುವೆ ಯುವಕನನ್ನು ಕರೆಯಿಸಲಾಯಿತಾದರೂ ಮನೆಗೆ ಬಂದ ಆತ ಮೊಬೈಲ್ ಕಳೆದುಹೋಗಿದ್ದರಿಂದ ಹೆದರಿ ಸ್ನೇಹಿತರ ಜತೆಗೆ ಬೇರೆ ಊರಿನಲ್ಲಿ ಇದ್ದೆ ಎಂದಿದ್ದಾನೆ. ಬಾಲಕನ ಮನೆಯವರು, ಊರಿನವರು ಎಷ್ಟೇ ಬುದ್ದಿ ಹೇಳಿದರೂ ಒಪ್ಪದ ಮಹಿಳೆ ನನಗೆ ಆತನೇ ಬೇಕೆಂದು ಹಠಕ್ಕೆ ಬಿದ್ದಿದ್ದಾಳೆ. ಇದೀಗ ಹೆದರಿದ ಅಪ್ರಾಪ್ತ ಯುವಕನ ಮನೆಯವರು ಮಹಿಳೆಯಿಂದ ತಮ್ಮ ಮಗನನ್ನು ರಕ್ಷಿಸಿಕೊಡಿ ಎಂದು ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಸೋಷಿಯಲ್ ಮೀಡಿಯಾ ಬಳಸುವವರು ಎಚ್ಚರವಾಗಿರಿ. ಒಳಿತಿಗೆ ಬಳಸಿದರೆ ಒಳಿತಾಗುತ್ತದೆ. ಇಲ್ಲಿ ನಮ್ಮ ಬುದ್ದಿಗೆ ಕೆಲಸ ಕೊಡದೆ ಹೋದರೆ ಮಾನಸಿಕ ನೆಮ್ಮದಿ ಜತೆಗೆ ಬದುಕೇ ಎಕ್ಕುಟ್ಟಿ ಹೋಗುವುದರಲ್ಲಿ ಸಂಶಯವಿಲ್ಲ.












Click it and Unblock the Notifications