Mahisha Dasara: ಮತ್ತೆ ಮುನ್ನಲೆಗೆ ಬಂದ ಮಹಿಷ ದಸರಾ ವಿವಾದ
ಮೈಸೂರಿನಲ್ಲಿ ದಸರಾ ಹಬ್ಬದ ಸಂಭ್ರಮ ಗರಿಗೆದರಿದೆ. 14 ಆನೆಗಳು ಪ್ರತಿನಿತ್ಯ ತಾಲೀಮಿನಲ್ಲಿ ಭಾಗವಹಿಸುತ್ತಿವೆ. ದಸರಾ ಹಿನ್ನೆಲೆಯಲ್ಲಿ ರಸ್ತೆ ಗುಂಡಿ ಮುಚ್ಚಲಾಗುತ್ತಿದ್ದು, ಅರಮನೆಯಲ್ಲಿ ಕೆಟ್ಟಿರುವ ಬಲ್ಬ್‌ಗಳನ್ನು ಬದಲಾಯಿಸಲಾಗುತ್ತಿದೆ. ಸಂಭ್ರಮದ ದಸರಾ ಆಚರಣೆಗೆ ಸಿದ್ಧವಾಗುತ್ತಿರುವ ನಡುವೆ ಮಹಿಷ ದಸರಾ ಮತ್ತೆ ಮುನ್ನಲೆಗೆ ಬಂದಿದ್ದು, ಪರ-ವಿರೋಧ ಚರ್ಚೆ ಆಗುತ್ತಿದೆ.
ಪ್ರತಿವರ್ಷದಂತೆ ಈ ವರ್ಷ ಕೂಡ ಮಹಿಷ ದಸರಾಗೆ ವಿರೋಧ ವ್ಯಕ್ತವಾಗಿದೆ. ಆದರೆ, ಮಹಿಷ ದಸರಾ ಆಚರಣೆ ಸಮಿತಿ ಅಧ್ಯಕ್ಷ ಪುರುಷೋತ್ತಮ್ ಸೆಪ್ಟೆಂಬರ್ 29ರಂದು 'ಮಹಿಷ ದಮ್ಮೋತ್ಸವ' ಹೆಸರಿನಲ್ಲಿ ವಿಭಿನ್ನವಾಗಿ ಮಹಿಷ ದಸರಾ ಆಚರಣೆ ಮಾಡುತ್ತೇವೆ ಎಂದು ಘೋಷಿಸಿದ್ದಾರೆ. ಮಾಜಿ ಸಂಸದ ಪ್ರತಾಪಸಿಂಹ ಇದಕ್ಕೆ ಪ್ರತಿಕ್ರಿಯೆ ನೀಡಿದ್ದು "ಚಾಮುಂಡಿಬೆಟ್ಟದಲ್ಲಿ ಮಹಿಷ ದಸರಾ ನಡೆಸಲು ಬಿಡುವುದಿಲ್ಲ" ಎಂದು ಹೇಳಿದ್ದಾರೆ.

ಮಹಿಷಾ ದಸರಾ ಬಗ್ಗೆ ಮಾತನಾಡಿದ ಪ್ರತಾಪ್ ಸಿಂಹ "ಯಾರ ನಿಲುವು ಏನೇ ಇರಲಿ. ನನ್ನ ನಿಲುವು ಮಾತ್ರ ಯಾವತ್ತಿಗೂ ಒಂದೇ. ನಾನು ಸಂಸದ ಆಗಿರಲಿ, ಇಲ್ಲದಿರಲಿ. ತಾಯಿ ಚಾಮುಂಡೇಶ್ವರಿಗೆ ಅವಮಾನ ಆಗುವುದಕ್ಕೆ ಬಿಡುವುದಿಲ್ಲ. ಮಹಿಷ ದಸರಾ ನಡೆಸುವವರು ಅವರ ಮನೆಗಳಲ್ಲಿ ಮಾಡಿಕೊಳ್ಳಲಿ. ತಮಗೆ ಮಹಿಷನಂತಹ ಮಕ್ಕಳೇ ಹುಟ್ಟಲಿ ಎಂದು ದಿನವೂ ಪೂಜಿಸಲಿ. ಅದಕ್ಕೆ ನಮ್ಮದೇನೂ ವಿರೋಧವಿಲ್ಲ" ಎಂದು ಹೇಳಿದರು.
ಮಹಿಷ ದಸರಾ ಆಚರಣೆ ಸಮಿತಿ ಅಧ್ಯಕ್ಷ ಪುರುಷೋತ್ತಮ್ ಮಾತನಾಡಿ, ನಾವು ಎಲ್ಲೂ ಸಾಂಪ್ರದಾಯಿಕ ದಸರಾ ಆಚರಣೆಗೆ ಅಡ್ಡಿಪಡಿಸಿಲ್ಲ. ನಮ್ಮ ಪೂರ್ವಿಕರ ಆಚರಣೆ, ಸಂಪ್ರದಾಯವನ್ನು ಮುಂದುವರಿಸುತ್ತಿದ್ದೇವೆ. ಕಿಡಿಗೇಡಿಗಳು ನಮ್ಮ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ, ಅದನ್ನೇ ನಂಬಿ ಪೊಲೀಸರು ನಮಗೆ ಆಚರಣೆ ಮಾಡಲು ಅನುಮತಿ ನೀಡಲು ಹಿಂದೇಟು ಹಾಕುತ್ತಿದ್ದಾರೆ ಎಂದರು.
ದೇಶದ ಹಲವು ಕಡೆಗಳಲ್ಲಿ ಮಹಿಷನ ಆರಾಧನೆ ನಡೆಯುತ್ತಿದೆ. ನಾವು ಕಳೆದ ಹತ್ತು ವರ್ಷಗಳಿಂದಲೂ ಮಹಿಷ ದಸರಾ ಆಚರಣೆ ವಾಡಿಕೊಂಡು ಬಂದಿದ್ದೇವೆ. ಆದರೆ, ಉದ್ದೇಶಪೂರ್ವಕವಾಗಿ, ರಾಜಕೀಯ ಪ್ರೇರಿತವಾಗಿ ವಾತನಾಡುವುದು ಮೂರ್ಖತನ. ಚಾಮುಂಡಿಬೆಟ್ಟದ ಮೇಲಿರುವ ಮಹಿಷಾಸುರನ ಪ್ರತಿಮೆಗೆ ಪುಷ್ಪಾರ್ಚನೆ ವಾಡಿ ಬರುತ್ತೇವೆ ಎಂದು ಸ್ಪಷ್ಟಪಡಿಸಿದ್ದಾರೆ.












Click it and Unblock the Notifications