ಮೈಸೂರು, ಮಡಿಕೇರಿಯ ಕ್ರೈಂ ಸುದ್ದಿಗಳ ಸಂಗ್ರಹ
ಮೈಸೂರು, ಜನವರಿ 12: ತಂದೆಯನ್ನು ಕೊಂದು ಆಕಸ್ಮಿಕ ಸಾವು ಎಂದು ಕಥೆ ಕಟ್ಟಿದ್ದ ಪುತ್ರ ಪೊಲೀಸರ ಅತಿಥಿಯಾಗಿದ್ದಾನೆ. ಷೇರು ವಹಿವಾಟಿನಲ್ಲಿ ನಷ್ಟ ಅನುಭವಿಸಿದ ವ್ಯಾಪಾರಿ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮದುವೆ ಆಗಲು ಹೆಣ್ಣು ಸಿಗದ್ದಕ್ಕೆ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ
ಮೈಸೂರು ನಗರ ಮತ್ತು ವಿವಿಧ ತಾಲೂಕು ಕೇಂದ್ರಗ, ಮಡಿಕೇರಿಯಲ್ಲಿ ನಡೆದ ವಿವಿಧ ಕ್ರೈಂ ಸುದ್ದಿಗಳ ಸಂಗ್ರಹ ಇಲ್ಲಿದೆ. ಇವುಗಳಲ್ಲಿ ವಿವಾಹನವಾಗಲು ಹೆಣ್ಣು ಸಿಗಲಿಲ್ಲ ಎಂದು ಮನನೊಂದ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡ ಪ್ರಕರಣವೂ ಸೇರಿದೆ.
ಪುತ್ರ ಬಂಧನ; ತಂದೆಯನ್ನು ಹತ್ಯೆ ಮಾಡಿ ಕಾಲು ಜಾರಿ ಬಿದ್ದು ಸತ್ತಿದ್ದಾರೆಂದು ಕಥೆ ಕಟ್ಟಿದ್ದ ಪುತ್ರನನ್ನು ಬಂಧಿಸುವಲ್ಲಿ ಮಡಿಕೇರಿ ಗ್ರಾಮೀಣ ಠಾಣೆ ಪೋಲೀಸರು ಯಶಸ್ವಿ ಯಾಗಿದ್ದಾರೆ.

ಮದೆನಾಡಿನ ನಿವಾಸಿ ಮಧುಕರ ಮತ್ತು ತಂದೆ ಶಿವಯ್ಯ ನಡುವೆ ಕ್ಷುಲ್ಲಕ ಕಾರಣಕ್ಕೆ ಜನವರಿ 8 ರಂದು ಜಗಳವಾಗಿತ್ತು. ಈ ಸಂದರ್ಭದಲ್ಲಿ ಆಕ್ರೋಶಗೊಂಡ ಪುತ್ರ ಮಧುಕರ ದೊಣ್ಣೆ ಹಾಗೂ ಕತ್ತಿಯಿಂದ ಮಾರಣಾಂತಿಕ ಹಲ್ಲೆ ಮಾಡಿದ ಪರಿಣಾಮ ಶಿವಯ್ಯ ಮೃತಪಟ್ಟಿದ್ದರು.
ತಂದೆ ಕಾಲು ಜಾರಿ ಬಿದ್ದು ಮೃತಪಟ್ಟಿದ್ದಾರೆ ಎಂದು ಮಧುಕರ ನೆರೆ ಹೊರೆಯವರಿಗೆ ಹೇಳಿದ್ದ. ಆದರೆ, ಅಂತ್ಯ ಸಂಸ್ಕಾರಕ್ಕೆ ಬಂದಿದ್ದ ಇನ್ನೊಬ್ಬ ಪುತ್ರ ಮೋಹನ್ ದೇಹದ ಗಾಯವನ್ನು ನೋಡಿ ಅನುಮಾನಗೊಂಡು ಮಡಿಕೇರಿ ಗ್ರಾಮಾಂತರ ಠಾಣೆಗೆ ಮಾಹಿತಿ ನೀಡಿದ್ದರು. ತನಿಖೆ ನಡೆಸಿದಾಗ ಹತ್ಯೆ ಪ್ರಕರಣ ಬಯಲಾಗಿದೆ.
ವ್ಯಾಪಾರಿ ಆತ್ಮಹತ್ಯೆ; ಷೇರು ವಹಿವಾಟಿನಲ್ಲಿ ವಿಪರೀತ ನಷ್ಟ ಅನುಭವಿಸಿದ್ದಕ್ಕೆ ಮನನೊಂದು ವ್ಯಾಪಾರಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆ ಮಾಡಿಕೊಂಡವರನ್ನು ಬೆಂಗಳೂರಿನ ಯಲಹಂಕದ ನಿವಾಸಿ ಬಸವರಾಜಪ್ಪ (55) ಎಂದು ಗುರುತಿಸಲಾಗಿದೆ. ಕಳೆದ ಮೂರು ದಿನಗಳ ಹಿಂದೆ ಮನೆ ಬಿಟ್ಟಿದ್ದ ಇವರು, ಭಾನುವಾರ ಸಂಜೆ ಇಲ್ಲಿನ ನೀಲಗಿರಿ ರಸ್ತೆಯ ಹೋಟೆಲ್ ಒಂದರಲ್ಲಿ ತಂಗಿದ್ದರು. ಭಾನುವಾರ ತಡರಾತ್ರಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಬರೆದಿಟ್ಟ ಡೆತ್‌ನೋಟ್ ಅನ್ನು ಪೋಟೋ ತೆಗೆದು ತಮ್ಮ ಮನೆಯವರಿಗೆ ವಾಟ್ಸ್‌ಆ್ಯಪ್ ಮಾಡಿದ್ದು, ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಬೆಂಗಳೂರಿನಲ್ಲಿದ್ದ ಮೃತರ ಕುಟುಂಬದವರು ಮೈಸೂರಿನ ತಮ್ಮ ಸಂಬಂಧಿಕರಿಗೆ ಇಂತಹ ಹೋಟೆಲ್‌ನಲ್ಲಿ ಬಸವರಾಜು ಉಳಿದುಕೊಂಡಿದ್ದು, ಹುಡುಕುವಂತೆ ತಿಳಿಸಿದ್ದಾರೆ. ಆದರೆ, ಸಂಬಂಧಿಕರು ಹೋಟೆಲ್‌ಗೆ ಬರುವ ವೇಳೆಗೆ ಆತ್ಮಹತ್ಯೆ ಗೆ ಶರಣಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ನಗರದ ದೇವರಾಜ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಯುವಕ ಆತ್ಮಹತ್ಯೆ; ಮದುವೆ ಆಗಲು ಸೂಕ್ತ ಹೆಣ್ಣು ಸಿಗದ ಹಿನ್ನಲೆಯಲ್ಲಿ ಮನನೊಂದ ಯುವಕನೊಬ್ಬ ನೇಣಿಗೆ ಶರಣಾಗಿರುವ ಘಟನೆ ನಂಜನಗೂಡು ತಾಲೂಕಿನ ಕಪ್ಪಸೋಗೆಯಲ್ಲಿ ನಡೆದಿದೆ. ಮೃತ ಯುವಕನನ್ನು ಕಪ್ಪಸೋಗೆ ಗ್ರಾಮದ ಪ್ರವೀಣ್ (34) ಎಂದು ಗುರುತಿಸಲಾಗಿದೆ.
ಸಣ್ಣ ರೈತನಾಗಿರುವ ಪ್ರವೀಣ್‌ಗೆ ಕಳೆದ ಆರೇಳು ವರ್ಷಗಳಿಂದ ಹೆಣ್ಣು ಹುಡುಕಲಾಗುತಿತ್ತು. ಆದರೆ, ವರನು ಕೃಷಿಕ ನಾಗಿರುವ ಮತ್ತು ಹಳ್ಳಿಯಲ್ಲಿರುವುದರಿಂದ ಹೆಣ್ಣು ಕೊಡಲು ನಿರಾಕರಿಸಲಾಗುತ್ತಿತ್ತು. ಇದರಿಂದ ಪ್ರವೀಣ್ ಮಾನಸಿಕ ಖಿನ್ನತೆಗೆ ಒಳಗಾಗಿದ್ದನು. ತನಗೆ ಇನ್ನೂ ಮದುವೆಯಾಗಲಿಲ್ಲ ಎಂಬ ಕೊರಗಿನಿಂದ ಸೋಮವಾರ ಮನೆಯ ಮಲಗುವ ಕೋಣೆಯಲ್ಲಿ ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಹುಲ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications