ಅಂಬಾವಿಲಾಸ ಅರಮನೆ ಚಿನ್ನಲೇಪನದಲ್ಲಿ ಅಕ್ರಮ
ಮೈಸೂರು, ಜೂ. 10 : ಮೈಸೂರಿನ ಅಂಬಾವಿಲಾಸ ಅರಮನೆಯ ಸ್ವರ್ಣ ಲೇಪನ ಕಾಮಗಾರಿಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ. ಅರಮನೆ ಮಂಡಳಿ ಹಾಲಿ ಮತ್ತು ನಿವೃತ್ತ ಉಪ ನಿರ್ದೇಶಕರೂ ಸೇರಿದಂತೆ ಹತ್ತು ಜನರ ವಿರುದ್ಧ ದೂರು ದಾಖಲಾಗಿದೆ.
ಅಂಬಾವಿಲಾಸ ಅರಮನೆ ಸ್ವರ್ಣಲೇಪನ ಕಾಮಗಾರಿ ಗುಣಮಟ್ಟದಿಂದ ಕೂಡಿಲ್ಲ ಎಂದು ನಂಜನಗೂಡಿನ ಜವರಾಜ್ ಎಂಬವರು 2013 ರಲ್ಲಿ ದೂರು ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಲಖನೌದಲ್ಲಿರುವ ರಾಷ್ಟ್ರೀಯ ಸಾಂಸ್ಕೃತಿಕ ಸಂಪತ್ತು ಸಂಶೋಧನೆ ಮತ್ತು ಸಂರಕ್ಷಣಾ ಪ್ರಯೋಗಾಲಯದ ನಿರ್ದೇಶಕ ಬಿ.ವಿ. ಕರ್ಬಡೆ ಅವರು ಇತ್ತೀಚೆಗೆ ಅರಮನೆಗೆ ಭೇಟಿ ನೀಡಿ ಕಾಮಗಾರಿ ಪರಿಶೀಲಿಸಿದ್ದರು.

ಅವರು ಲೋಕಾಯುಕ್ತರಿಗೆ ನೀಡಿದ ವರದಿಯಲ್ಲಿ ಸ್ವರ್ಣ ಲೇಪನ ಕಾಮಗಾರಿ ಗುಣಮಟ್ಟದಿಂದ ಕೂಡಿಲ್ಲ. ಈ ಕುರಿತು ತನಿಖೆಯಾಗಬೇಕು ಎಂದು ಶಿಫಾರಸು ಮಾಡಿದ್ದರು. ಸೋಮವಾರ ಈ ಹಿನ್ನೆಲೆಯಲ್ಲಿ ಲೋಕಾಯುಕ್ತರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಒಟ್ಟು ಹತ್ತು ಜನರ ವಿರುದ್ಧ ದೂರು ದಾಖಲಾಗಿದೆ. [4 ಕೋಟಿ ವೆಚ್ಚದಲ್ಲಿ ಅಂಬಾ ವಿಲಾಸ ಅರಮನೆ ಅಭಿವೃದ್ಧಿ]
ಮೈಸೂರು ಅರಮನೆ ಮಂಡಳಿಯ ಉಪ ನಿರ್ದೇಶಕ ಟಿ.ಎಸ್. ಸುಬ್ರಮಣ್ಯಂ, ನಿವೃತ್ತ ಉಪ ನಿರ್ದೇಶಕ ಪಿ.ವಿ. ಅವರಾದಿ, 2007 ರಿಂದ 2013 ರವರೆಗೆ ಎಂಜಿನಿಯರ್ ಗಳಾಗಿ ಕಾರ್ಯ ನಿರ್ವಹಿಸಿದ್ದ ಲಕ್ಷ್ಮೀಶ್, ಶ್ರೀನಿವಾಸ್, ರಾಜಶೇಖರ ಗೌಡ, ಮುರಳೀಧರ್, ಸೋಮಶೇಖರ್, ಪರಶಿವಮೂರ್ತಿ, ಕಲಾವಿದರಾದ ಬಾಂಬೆ ಪಿಂಕ್ ಸಿಟಿಯ ಶಯ್ಜಾದ್ ಖಾನ್ ಮತ್ತು ಗಂಜೀಫಾ ರಘುಪತಿ ಭಟ್ಟ ಎಂಬವರ ದೂರು ದಾಖಲಿಸಿಕೊಳ್ಳಲಾಗಿದೆ. [ಮೈಸೂರು ಒಡೆಯರ್ ಆಸ್ತಿ ಕಬಳಿಕೆ, ನಾಲ್ವರ ಬಂಧನ]
ಕಾಮಗಾರಿ ಯಾವಾಗ ನಡೆದಿತ್ತು : ಅಂಬಾವಿಲಾಸ ಅರಮನೆಯ ಒಳಭಾಗದಲ್ಲಿ 2011ರಲ್ಲಿ ಚಿನ್ನದ ಲೇಪನ ಕಾಮಗಾರಿಗೆ 55 ಲಕ್ಷ, 2012ರಲ್ಲಿ 24 ಲಕ್ಷ ಮತ್ತು 2013ರಲ್ಲಿ 3.65 ಕೋಟಿ ಪಾವತಿ ಮಾಡಲಾಗಿದೆ. ಆದರೆ, ಕಾಮಗಾರಿ ಸಮರ್ಪಕವಾಗಿಲ್ಲ ಎಂಬ ಆರೋಪ ಕೇಳಿ ಬಂದಿತ್ತು. ಆದರೆ, ಅರಮನೆ ಮಂಡಳಿಯ ಅಧಿಕಾರಿಗಳು ಕಾಮಗಾರಿ ಸಮರ್ಪಕವಾಗಿ ನಡೆದಿದೆ ಎಂದು ಹಣ ಬಿಡುಗಡೆ ಮಾಡಿದ್ದರು.











Click it and Unblock the Notifications