ಮದುವೆ ಮನೆಗೆ ಅಡ್ಡಿಯಾದ ಮತ ಎಣಿಕೆ ಬಿಸಿ
ಮೈಸೂರು, ಮೇ 24 : ಲೋಕಸಭಾ ಚುನಾವಣೆಯ ಮತ ಎಣಿಕೆ ಕಾವು ಮದುವೆ ಮನೆಗೂ ತಟ್ಟಿದೆ. ಲೋಕಸಭಾ ಚುನಾವಣೆಯ ಮತ ಎಣಿಕೆ ಕಾರ್ಯ ನಗರದ ಹುಣಸೂರು ಮುಖ್ಯರಸ್ತೆಯಲ್ಲಿರುವ ಮಹಾರಾಣಿ ವಾಣಿಜ್ಯ ಹಾಗೂ ನಿರ್ವಹಣಾ ಕಾಲೇಜಿನಲ್ಲಿ ನಡೆಯಿತು. ಅದೇ ದಿನವೇ ಕಾಲೇಜಿನ ಪಕ್ಕದಲ್ಲಿದ್ದ ಕಲ್ಯಾಣ ಮಂಟಪದಲ್ಲಿ ಮದುವೆ ಕಾರ್ಯಕ್ರಮ ನಿಗದಿಯಾಗಿದ್ದರಿಂದ ಅಲ್ಲಿಗೆ ನೆಂಟರಿಷ್ಟರು ತೆರಳಲು ಪರದಾಡುವಂತಹ ಸ್ಥಿತಿ ಎದುರಾಯಿತು.
ಒಂಬತ್ತು ತಿಂಗಳ ಹಿಂದೆಯೇ ನಗರದ ಬಸವೇಶ್ವರ ರಸ್ತೆಯ ಸುಬ್ರಹ್ಮಣ್ಯ ದಂಪತಿ ಪುತ್ರಿ ನಾಗಶ್ರೀ ವಿವಾಹವನ್ನು ಚೆನ್ನಯ್ಯ ಕಲ್ಯಾಣ ಮಂಟಪದಲ್ಲಿ ಆಯೋಜಿಸಲು ನಿಗದಿಯಾಗಿತ್ತು. ಮದುವೆ ದಿನವೇ ಫಲಿತಾಂಶದ ದಿನವೂ ಆಗಿತ್ತು. ಮತ ಎಣಿಕೆ ಇದ್ದ ಕಾರಣದಿಂದಾಗಿ ವಧುವಿನ ಕುಟುಂಬ ಪೊಲೀಸ್ ಠಾಣೆಗೆ ಹೋಗಿ, ಮದುವೆ ಮಂಟಪಕ್ಕೆ ಬರಲು ಅನುಮತಿ ಕೋರಿ, ನಗರ ಪೊಲೀಸ್ ಆಯುಕ್ತರಿಗೆ ಪತ್ರ ಬರೆದು ಅನುಮತಿಯನ್ನೂ ಪಡೆದಿದ್ದರು. ಅದಾಗ್ಯೂ ಮತಗಳ ಎಣಿಕೆಯ ಭದ್ರತೆಯಲ್ಲಿದ್ದ ಸಿಬ್ಬಂದಿ, ಮದುವೆಗೆ ಬಂದಿದ್ದ ಬಹುತೇಕ ಸಂಬಂಧಿಕರ ವಾಹನಗಳನ್ನು ಮಂಟಪದ ಬಳಿ ಬಿಡದಂತೆ ತಡೆದಿದ್ದಾರೆ. ಈ ಹಿನ್ನೆಲೆಯಲ್ಲಿ ಸಾಕಷ್ಟು ಮಂದಿ ಮದುವೆಯಿಂದ ದೂರ ಉಳಿಯಬೇಕಾಯಿತು.

ಮದುವೆ ಮಂಟಪದ ಮುಖ್ಯದ್ವಾರವನ್ನು ಸಹ ಬಂದ್ ಮಾಡಿಸಿದ್ದರಿಂದ ಮಂಟಪಕ್ಕೆ ಸಂಬಂಧಿಕರು ಬರಲು ಹಿಂಜರಿದರು. ಮದುವೆಗೆ ಒಂದು ಸಾವಿರ ಮಂದಿ ಬರುವ ನಿರೀಕ್ಷೆ ಇತ್ತು. ಆದರೆ ಪೊಲೀಸ್ ಭದ್ರತೆ ದಾಟಿ ಬರಲು ಸಂಬಂಧಿಕರು ಹಿಂಜರಿದ ಕಾರಣ ಅಡುಗೆಯೆಲ್ಲಾ ವ್ಯರ್ಥವಾಯಿತು. ಮದುವೆ ಛತ್ರವೂ ಖಾಲಿ ಖಾಲಿಯಾಗಿತ್ತು ಎಂದು ವಧುವಿನ ತಂದೆ ಬೇಸರ ವ್ಯಕ್ತಪಡಿಸಿದರು.











Click it and Unblock the Notifications