ಲೋಕಸಭಾ ಚುನಾವಣೆ: ಪ್ರತಾಪ್ ಸಿಂಹಗೆ ಎದುರಾಳಿ ಯಾರು? ಯತೀಂದ್ರ ಸಿದ್ದರಾಮಯ್ಯ ಹೇಳಿದ್ದೇನು?
ಮೈಸೂರು, ಆಗಸ್ಟ್ 28: ರಾಜ್ಯ ರಾಜಕೀಯದಲ್ಲಿ ಕಾಂಗ್ರೆಸ್ ಚದುರಂಗದಾಟ ಶುರು ಮಾಡಿದೆ. ಬರಲಿರುವ ಲೋಕಸಭಾ ಚುನಾವಣೆಗೆ ಈಗಿನಿಂದಲೇ ತಯಾರಿ ಆರಂಭಿಸಿದ್ದು, ರಾಜ್ಯದಿಂದ 20 ಸ್ಥಾನವನ್ನು ಗೆದ್ದುಕೊಡಲೇ ಬೇಕೆಂಬ ಹಠಕ್ಕೆ ಕಾಂಗ್ರೆಸ್ ನಾಯಕರು ಬಿದ್ದಿದ್ದಾರೆ. ಹೀಗಾಗಿಯೇ ಬಿಜೆಪಿ ಮತ್ತು ಜೆಡಿಎಸ್ ನಾಯಕರನ್ನು ಪಕ್ಷಕ್ಕೆ ಸೆಳೆಯಲು ತಂತ್ರಗಳು ನಡೆಯುತ್ತಿವೆ.
135 ಸ್ಥಾನಗಳನ್ನು ಗೆದ್ದು ಅಧಿಕಾರ ಹಿಡಿದಿರುವ ಕಾಂಗ್ರೆಸ್ ಈಗಾಗಲೇ ಶತದಿನ ಪೂರೈಸಿದ ಸಂಭ್ರಮದಲ್ಲಿದೆ. ಗ್ಯಾರಂಟಿ ಯೋಜನೆಗಳ ಮೂಲಕ ಗಮನಸೆಳೆದಿರುವ ಕಾಂಗ್ರೆಸ್ ಮುಂದಿನ ಲೋಕಸಭಾ ಚುನಾವಣೆಗೆ ತಯಾರಿ ನಡೆಸಿದೆ. ಚುನಾವಣೆ ಹೊತ್ತಿಗೆ ಎದುರಾಳಿಯಾಗಿರುವ ಬಿಜೆಪಿ ಪಕ್ಷದ ಬಲವನ್ನು ತಗ್ಗಿಸುವ ಸಲುವಾಗಿ ಹಾಲಿ, ಮಾಜಿ ಶಾಸಕರು ಮತ್ತು ನಾಯಕರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ಪ್ರಯತ್ನಗಳು ನಡೆಯುತ್ತಿವೆ.

ಬಿಜೆಪಿ ಮತ್ತು ಜೆಡಿಎಸ್ ಪಕ್ಷದಲ್ಲಿ ಅವಕಾಶ ವಂಚಿತರು ನಿಧಾನವಾಗಿ ಕಾಂಗ್ರೆಸ್ ನತ್ತ ಮುಖ ಮಾಡುವ ತಯಾರಿಯಲ್ಲಿದ್ದರೆ, ಎರಡು ಪಕ್ಷಗಳ ನಾಯಕರಿಗೆ ತಮ್ಮ ಪಕ್ಷದ ನಾಯಕರನ್ನು ಹಿಡಿದಿಟ್ಟುಕೊಳ್ಳುವುದೇ ಕಷ್ಟದ ಕೆಲಸವಾಗಿದೆ. ಇದರ ನಡುವೆ ಕಾಂಗ್ರೆಸ್ ಪಕ್ಷದ ಮೂಲ ನಾಯಕರಲ್ಲಿ ಆತಂಕ ಶುರುವಾಗಿದೆ. ವಲಸೆ ಬರುವವರಿಗೆ ಮಣೆ ಹಾಕಿದರೆ ನಮ್ಮ ಪಾಡೇನು ಎಂಬ ಆಲೋಚನೆಗಳು ಬರಲಾರಂಭಿಸಿವೆ.
ಎರಡು ಬಾರಿ ಗೆಲುವು ಕಂಡ ಪ್ರತಾಪ್ ಸಿಂಹ
ಇದೆಲ್ಲದರ ನಡುವೆ ಸಿಎಂ ಸಿದ್ದರಾಮಯ್ಯ ತವರು ಮೈಸೂರು ಜಿಲ್ಲೆ ಸೇರಿದಂತೆ ಹಳೇ ಮೈಸೂರು ವ್ಯಾಪ್ತಿಯಲ್ಲಿ ಜೆಡಿಎಸ್ ಪ್ರಾಬಲ್ಯವನ್ನು ಮುರಿದು ಕಾಂಗ್ರೆಸ್ ಪ್ರಾಬಲ್ಯವನ್ನು ಮೆರೆದಿರುವ ಬೆನ್ನಲ್ಲೇ ಕಾಂಗ್ರೆಸ್ ಇದೀಗ ಮೈಸೂರು ಮತ್ತು ಕೊಡಗು ಲೋಕಸಭಾ ಕ್ಷೇತ್ರದ ಮೇಲೆ ಕಣ್ಣಿಟ್ಟಿದೆ. ಕಳೆದ ಎರಡು ಅವಧಿಯಿಂದ ಬಿಜೆಪಿ ವಿಜಯ ಪತಾಕೆ ಹಾರಿಸಿಕೊಂಡು ಬಂದಿದ್ದು, ಬಿಜೆಪಿ ಸಂಸದ ಪ್ರತಾಪ್ ಸಿಂಹ ಅವರ ವಿರುದ್ಧ ಕಾಂಗ್ರೆಸ್ ನಿಂದ ಸ್ಪರ್ಧೆ ಮಾಡುವವರು ಯಾರು ಎಂಬ ಚರ್ಚೆ ಆರಂಭವಾಗಿದೆ.
ಮೈಸೂರು ಮತ್ತು ಕೊಡಗು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಕಾಂಗ್ರೆಸ್ ಪಕ್ಷದಲ್ಲಿ ಆಕಾಂಕ್ಷಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಆದರೆ ವರುಣ ಕ್ಷೇತ್ರವನ್ನು ಬಿಟ್ಟುಕೊಟ್ಟಿರುವ ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಸಿದ್ದರಾಮಯ್ಯ ಅವರಿಗೆ ಲೋಕಸಭಾ ಕ್ಷೇತ್ರದ ಟಿಕೆಟ್ ಎಂಬುದು ವಿಧಾನಸಭಾ ಚುನಾವಣೆ ವೇಳೆಯೇ ಕೇಳಿ ಬಂದಿತ್ತು.

ಟಿಕೆಟ್ ಆಕಾಂಕ್ಷಿಯಾಗಿರುವ ಎಚ್.ವಿಶ್ವನಾಥ್
ಈ ನಡುವೆ ಮಾಜಿ ಸಂಸದ ಎಚ್. ವಿಶ್ವನಾಥ್ ಅವರು ಜೆಡಿಎಸ್ ತೊರೆದು ಬಿಜೆಪಿ ಸೇರ್ಪಡೆಯಾದ ಬಳಿಕ ಉಪ ಚುನಾವಣೆಯಲ್ಲಿ ಸೋಲು ಕಂಡಿದ್ದರು. ಆ ನಂತರ ಬಿಜೆಪಿಯಿಂದ ವಿಧಾನ ಪರಿಷತ್ ಸದಸ್ಯರಾಗಿರುವ ಅವರು ಬಿಜೆಪಿಯಿಂದ ದೂರ ಉಳಿದು ಕಾಂಗ್ರೆಸ್‌ಗೆ ಹತ್ತಿರವಾಗಿದ್ದಾರೆ. ಅವರು ಕೂಡ ಸಂಸದ ಸ್ಥಾನದ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ ಎನ್ನುವುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಇವರ ನಡುವೆ ಇನ್ನೊಂದಷ್ಟು ನಾಯಕರು ಆಕಾಂಕ್ಷೆ ವ್ಯಕ್ತಪಡಿಸಿದರೂ ಅಚ್ಚರಿಪಡಬೇಕಾಗಿಲ್ಲ.
ಕಾಂಗ್ರೆಸ್ ನಲ್ಲಿ ಸಂಸದ ಸ್ಥಾನಕ್ಕೆ ಸ್ಪರ್ಧಿಸಲು ಆಕಾಂಕ್ಷಿಗಳು ಹೆಚ್ಚಾಗಿದ್ದರೂ ಯತೀಂದ್ರ ಸಿದ್ದರಾಮಯ್ಯ ಅವರಿಗೆ ಟಿಕೆಟ್ ಪಕ್ಕಾ ಎಂದೇ ಹೇಳಲಾಗುತ್ತಿದೆ. ಈ ನಡುವೆ ಮಾತನಾಡಿರುವ ಅವರು, ಮುಂದಿನ ಲೋಕಸಭಾ ಚುನಾವಣೆಗೆ ನನ್ನದು ಯಾವ ಬೇಡಿಕೆಯೂ ಇಲ್ಲ. ಹೈಕಮಾಂಡ್ ತೀರ್ಮಾನಕ್ಕೆ ಬದ್ಧ. ಪಕ್ಷ ಸೂಚಿಸಿದರೆ ನಾನು ಸ್ಪರ್ಧೆ ಮಾಡುತ್ತೇನೆ ಎನ್ನುವ ಮೂಲಕ ಲೋಕಸಭೆಯತ್ತ ಚಿತ್ತ ಹರಿಸಿದ್ದನ್ನು ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ.

ಯತೀಂದ್ರ ಸಿದ್ದರಾಮಯ್ಯ ಹೇಳುವುದೇನು?
ಚುನಾವಣೆಗೆ ಸ್ಪರ್ಧೆ ಮಾಡಬೇಕೆಂಬ ಬಗ್ಗೆ ಅನೇಕರು ಹೇಳಿದರೂ ಪಕ್ಷ ಸೂಚಿಸಿದರೆ ಅಭ್ಯರ್ಥಿಯಾಗುವೆ. ಪಕ್ಷದ ಮಾತನ್ನು ನಾನು ಕೇಳಲೇಬೇಕು. ಕರ್ನಾಟಕದಲ್ಲಿ ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲಬೇಕು. ವಿಧಾನಸಭಾ ಚುನಾವಣೆಯಲ್ಲಿ ಅತ್ಯಧಿಕ ಬಹುಮತಗಳಿಂದ ಆಡಳಿತಕ್ಕೆ ಬಂದಿದೆ. ಬಿಜೆಪಿ ದುರಾಡಳಿತ ನೋಡಿ ಬೇಸತ್ತಿದ್ದ ಜನರು ನಮಗೆ ಆಶೀರ್ವಾದ ಮಾಡಿದ್ದಾರೆ.
ರಾಜ್ಯದಲ್ಲಿ ಕನಿಷ್ಠ 20 ಸ್ಥಾನಗಳನ್ನು ಗೆಲ್ಲಲು ತಂತ್ರಗಾರಿಕೆ ಮಾಡಬೇಕು. ಯಾವ ಅಭ್ಯರ್ಥಿ ಬಿಜೆಪಿ ಮತ್ತು ಜೆಡಿಎಸ್ ಅಭ್ಯರ್ಥಿಯನ್ನು ಸೋಲಿಸಲು ಸಮರ್ಥರಿದ್ದಾರೋ ಅಂತವರನ್ನು ಸರ್ವೆ ಮೂಲಕ ಆಯ್ಕೆ ಮಾಡುತ್ತಾರೆ. ಸ್ಥಳೀಯ ನಾಯಕರು ಹಾಗೂ ಜನಪ್ರತಿನಿಧಿಗಳ ಅಭಿಪ್ರಾಯ ಪಡೆದು ಸೂಕ್ತ ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತಾರೆ.
ಜೆಡಿಎಸ್-ಬಿಜೆಪಿ ಎದುರಿಸಲು ಸಿದ್ಧರಾಗಿದ್ದೇವೆ
ವಿಪಕ್ಷದವರು ಮಾಡುತ್ತಿರುವ ಆರೋಪಕ್ಕೆ ಯಾವ ಸಾಕ್ಷಿಯೂ ಇಲ್ಲ. ಯಾವುದೇ ಒಂದು ಸಾಕ್ಷಿ ಇದ್ದರೆ ಕೊಡಲಿ. ಅದಕ್ಕೆ ತಕ್ಕ ಉತ್ತರ ಕೊಡುತ್ತೇನೆ. ನನ್ನ ವಿರುದ್ಧ ಮಾತನಾಡಲು ಯಾವ ಸರಕು ಇಲ್ಲದ ಕಾರಣ ಭ್ರಷ್ಟಾಚಾರದ ಆರೋಪ ಮಾಡುತ್ತಿದ್ದಾರೆ. ಕೇವಲ 19 ಸ್ಥಾನಗಳು ಬಂದಿರುವ ಕಾರಣ ಜೆಡಿಎಸ್‌ಗೆ ಅಸ್ತಿತ್ವದ ಪ್ರಶ್ನೆಯಾಗಿದೆ. ಆಡಳಿತ ಪಕ್ಷದ ವಿರುದ್ಧ ಆರೋಪ ಮಾಡುವುದಕ್ಕೆ ಯಾವುದೇ ವಿಚಾರಗಳು ಸಿಗುತ್ತಿಲ್ಲ.
ಜೆಡಿಎಸ್ ಹಾಗೂ ಬಿಜೆಪಿ ಪ್ರತಿ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಳ್ಳುತ್ತದೆ. ಅಧಿಕೃತ ಮತ್ತು ಅನಧಿಕೃತವಾಗಿ ಕೈ ಜೋಡಿಸುತ್ತಾರೆ. 2018 ಮತ್ತು 2023ರ ಚುನಾವಣೆಯಲ್ಲಿ ಒಳ ಒಪ್ಪಂದ ಮಾಡಿಕೊಂಡಿತ್ತು. ಮುಂದಿನ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಂಡರೆ ನಾವು ಎದುರಿಸಲು ಸಿದ್ಧರಿದ್ದೇವೆ ಎನ್ನುವ ಮೂಲಕ ಲೋಕಸಭಾ ಚುನಾವಣೆಗೆ ತಯಾರಾಗುತ್ತಿರುವುದನ್ನು ಒಪ್ಪಿಕೊಂಡಿದ್ದಾರೆ.
ಸೂತ್ರವಿಲ್ಲದ ಪಟವಾದ ಬಿಜೆಪಿ ಸ್ಥಿತಿ
ಒಟ್ಟಾರೆಯಾಗಿ ಹೇಳಬೇಕೆಂದರೆ ಈ ಬಾರಿ ಕಾಂಗ್ರೆಸ್ ಲೋಕಸಭಾ ಚುನಾವಣೆಗೆ ಮುನ್ನವೇ ತಯಾರಿ ಮಾಡಿಕೊಳ್ಳುತ್ತಿದ್ದರೆ ಅತ್ತ ಬಿಜೆಪಿ ಮಾತ್ರ ಗಾಢ ನಿದ್ದೆಯಲ್ಲಿದೆ. ವಿಪಕ್ಷ ನಾಯಕ ಮತ್ತು ರಾಜ್ಯಾಧ್ಯಕ್ಷರನ್ನು ಆಯ್ಕೆ ಮಾಡುವಲ್ಲಿ ಸೋತಿದೆ. ಹೀಗಾಗಿ ಸೂತ್ರವಿಲ್ಲದ ಪಟದ ಸ್ಥಿತಿ ಬಿಜೆಪಿ ನಾಯಕರದ್ದಾಗಿದೆ. ಮುಂದೇನು ಎಂಬುದೇ ಎಲ್ಲರನ್ನು ಕಾಡುತ್ತಿರುವ ಕುತೂಹಲವಾಗಿದೆ.
-
India Rain Forecast: ಮುಂದಿನ 5 ದಿನ ಈ ಭಾಗಗಳಲ್ಲಿ ವ್ಯಾಪಕ ಮಳೆ, ಉಷ್ಣ ಅಲೆ ಎಚ್ಚರಿಕೆ -
ಹಿಂದುಳಿದ, ದುರ್ಬಲ ವರ್ಗದ ಮಕ್ಕಳಿಗೆ ಖಾಸಗಿ ಅನುದಾನ ರಹಿತ ಶಾಲೆಗಳಲ್ಲಿ ಶೇ. 25 ರಷ್ಟು ಉಚಿತ ಪ್ರವೇಶಕ್ಕೆ ಅರ್ಜಿ ಆಹ್ವಾನ -
ಮಾರ್ಚ್ 23ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
ಮಾರ್ಚ್ 22ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
By-Election: ದಾವಣಗೆರೆ ದಕ್ಷಿಣದಲ್ಲಿ ಮೊದಲ ಬಾರಿ ಬಿಜೆಪಿ ಗೆಲುವು ನಿಶ್ಚಿತ; ಬಸವರಾಜ ಬೊಮ್ಮಾಯಿ ವಿಶ್ವಾಸ -
ಬಾಗಲಕೋಟೆ, ದಾವಣಗೆರೆ ಉಪಚುನಾವಣೆ: ಎರಡೂ ಕಡೆ ಭರ್ಜರಿ ಬಹುಮತದೊಂದಿಗೆ ಕಾಂಗ್ರೆಸ್ ಗೆಲುವು ಎಂದ ಡಿ.ಕೆ.ಶಿವಕುಮಾರ್ -
ಮಾರ್ಚ್ 21ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
ನಟಿ ನೋರಾ ಫತೇಹಿ ವೃತ್ತಿಜೀವನಕ್ಕೆ ಕುತ್ತು ತಂದ 'ಸೆರಗ ಸರ್ಸೆ' ವಿವಾದ: ಗಡಿಪಾರು ಮಾಡುವಂತೆ ಗೃಹ ಸಚಿವಾಲಯಕ್ಕೆ ದೂರು -
Ration: ಪಡಿತರ ಚೀಟಿದಾರರಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟ ಕೇಂದ್ರ ಸರ್ಕಾರ -
Power Cut: ನಾಳೆ ಮಾ.22 ರಿಂದ 25ರವರೆಗೆ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ: ಬೆಸ್ಕಾಂ -
ಆರ್ಸಿಬಿ ಮತ್ತೆ ಚಾಂಪಿಯನ್ ಆಗೋದು ಫಿಕ್ಸ್, ಹ್ಯಾಜಲ್ವುಡ್ ಅಲಭ್ಯತೆ ತಂಡಕ್ಕೆ ವರದಾನ ಎಂದ ಆರ್.ಅಶ್ವಿನ್ -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ











Click it and Unblock the Notifications