Mysuru Dasara: ಮೆರುಗು ತಂದ ದೀಪಾಲಂಕಾರ; ಗಮನ ಸೆಳೆದ ಜಾವಾ ಬೈಕ್, ರಂಗೋಲಿ ಸ್ಪರ್ಧೆ
'ಮೈಸೂರು ದಸರಾ ಎಷ್ಟೊಂದು ಸುಂದರ' ಎನ್ನುವ ಮಾತು ಸುಮ್ಮನೆ ಬಂದಿದ್ದಲ್ಲ, ದಸರಾ ವೈಭವನ್ನು ನೋಡಿದವರಿಗೆ ಇದು ಅತಿಶಯ ಎಂದು ಕೂಡ ಅನಿಸುವುದಿಲ್ಲ. ರಾಜ್ಯದಲ್ಲಿ ಈ ವರ್ಷ ಉತ್ತಮ ಮಳೆಯಾಗಿರುವ ಕಾರಣ, ಅದ್ಧೂರಿ ದಸರಾ ಆಚರಣೆಗೆ ಸರ್ಕಾರ ನಿರ್ಧರಿಸಿದ್ದರಿಂದ, ಸಾಂಸ್ಕೃತಿಕ ನಗರಿಯಲ್ಲಿ ದಸರಾ ವೈಭವ ಜೋರಾಗಿದೆ. ಈ ಬಾರಿ ದಸರಾ ಪ್ರಯುಕ್ತ 21 ದಿನಗಳ ಕಾಲ ದಸರಾ ವಿದ್ಯುತ್ ದೀಪಾಲಂಕಾರ ಇರಲಿದೆ.
ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ(ಸೆಸ್ಕ್)ದಿಂದ ದಸರಾ ದೀಪಾಲಂಕಾರ ಮಾಡಿದ್ದು, ಕಳೆದ ಬಾರಿಗಿಂತ ಈ ಬಾರಿ ಹೆಚ್ಚು ಆಕರ್ಷಕವಾಗಿದೆ. ಅರಮನೆ ಸುತ್ತಲಿನ ರಸ್ತೆಗಳು ಸೇರಿದಂತೆ ಸಯ್ಯಾಜಿರಾವ್ ರಸ್ತೆ, ಬಿಎನ್ ರಸ್ತೆ, ಇರ್ವಿನ್ ರಸ್ತೆ, ಅಲ್ಬರ್ಟ್ ವಿಕ್ಟರ್ ರಸ್ತೆ, ಜೆಎಲ್‌ಬಿ ರಸ್ತೆ, ಚಾಮರಾಜ ಜೋಡಿ ರಸ್ತೆ, ಹೊರ ವಲಯದಲ್ಲಿನ ಪ್ರಮುಖ ಹೆದ್ದಾರಿಗಳಿಗೂ ದೀಪಾಲಂಕಾರ ಮಾಡಲಾಗಿದೆ. ದೊಡ್ಡಕೆರೆ ಮೈದಾನ, ಕೆ.ಆರ್.ವೃತ್ತ, ಚಾಮರಾಜ ವೃತ್ತ, ಜಯಚಾಮರಾಜ ವೃತ್ತ(ಹಾರ್ಡಿಂಜ್), ರಾಮಸ್ವಾಮಿ ವೃತ್ತ, ರೈಲ್ವೆ ನಿಲ್ದಾಣ ಸಮೀಪ, ಗನ್‌ಹೌಸ್, ಎಲ್‌ಐಸಿ ವೃತ್ತ ಸೇರಿದಂತೆ ವಿವಿಧೆಡೆ ವಿದ್ಯುತ್ ದೀಪಗಳಿಂದಲೇ 65ಕ್ಕೂ ಹೆಚ್ಚು ಕಲಾಕೃತಿಗಳನ್ನು ನಿರ್ಮಿಸಲಾಗಿದೆ.

ಈ ಬಾರಿ 21 ದಿನಗಳ ಕಾಲ ದೀಪಾಲಂಕಾರ ಇರಲಿದೆ. ದೀಪಾಲಂಕಾರಕ್ಕಾಗಿಯೇ ಸುಮಾರು 6.50 ಕೋಟಿ ರೂಪಾಯಿ ಖರ್ಚು ಮಾಡಲಾಗುತ್ತಿದೆ. ದೀಪಾಲಂಕಾರದ ಜೊತೆ ಇದೇ ಮೊದಲ ಬಾರಿಗೆ ಡ್ರೋನ್ ಪ್ರದರ್ಶನ ಕೂಡ ಏರ್ಪಡಿಸಲಾಗಿದೆ. ಎಲ್‌ಇಡಿ ಬಲ್ಬ್ ಬಳಸಿರುವ 1500 ಡ್ರೋನ್‌ಗಳನ್ನು ಬಳಕೆ ಮಾಡಿ, ಆಕಾಶದಲ್ಲಿ ಅದ್ಭುತ ವಿನ್ಯಾಸ ಮೂಡಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.
ಅಕ್ಟೋಬರ್ 6, 7ರಂದು ಹಾಗೂ 11, 12ರಂದು ರಾತ್ರಿ 8 ಗಂಟೆಯಿಂದ 8:15ರವರೆಗೆ ಡ್ರೋನ್ ಪ್ರದರ್ಶನ ನಡೆಯಲಿದ್ದು ಬನ್ನಿಮಂಟಪದ ಪಂಜಿನ ಕವಾಯತು ಮೈದಾನದಲ್ಲಿ ವೀಕ್ಷಿಸಲು ವ್ಯವಸ್ಥೆ ಮಾಡಲಾಗಿದೆ. ಅಕ್ಟೊಬರ್ 6 ಮತ್ತು 7ರಂದು ಡ್ರೋನ್ ಶೋ ವೀಕ್ಷಿಸಲು ಪ್ರವೇಶ ಉಚಿತವಾಗಿರುತ್ತದೆ.
ಜಾವಾ ಬೈಕ್‌ಗಳ ಆಕರ್ಷನೆ
ರಂಗಚಾರ್ಲು ಪುರಭವನ ಆವರಣದಲ್ಲಿ ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಹಾಗೂ ಪ್ರವಾಸೋದ್ಯಮ ಇಲಾಖೆ ವತಿಯಿಂದ ಪಾರಂಪರಿಕ ಜಾವಾ ಮೋಟಾರ್ ಬೈಕ್ ಸವಾರಿಗೆ ಶುಕ್ರವಾರ ಚಾಲನೆ ನೀಡಲಾಗಿದೆ. ವಿಭಿನ್ನವಾದ ವಿಶಿಷ್ಟತೆಗಳಿಂದ ಜನರ ಗಮನ ಸೆಳೆದು ನಮ್ಮ ಪರಂಪರೆ ಕಟ್ಟಡಗಳ ಬಗ್ಗೆ ತಿಳಿಸುವ ಪ್ರಯತ್ನ ಮಾಡುವ ನಿಟ್ಟಿನಲ್ಲಿ ಈ ಬಾರಿ ಬೈಕ್ ಸವಾರಿ ಹಮ್ಮಿಕೊಳ್ಳಲಾಗಿದೆ.

ಜಾವಾ ಮೋಟಾರ್ ಬೈಕ್ ಸವಾರಿಯ ಪುರ ಭವನದಿಂದ ಹೊರಟು ದೊಡ್ಡ ಗಡಿಯಾರ ಚಾಮರಾಜ ಒಡೆಯರ್ ವೃತ್ತ ಕೆ ಆರ್ ಸರ್ಕಲ್ ಬನ್ಮಯ್ಯ ಕಾಲೇಜು ಕಾಡಾ ಕಛೇರಿ ಹಾರ್ಡಿಕ್ ಸರ್ಕಲ್ ಎಸ್ ಐ ಆರ್ ಡಿ ಲಲಿತಮಹಲ್ ಟೇರಿಷಿಯನ್ ಕಾಲೇಜು ಪಿ.ಟಿ ಸರ್ಕಲ್ ವಸಂತ ಮಹಲ್ ಮತ್ತು ಪುರಾತತ್ವ ಇಲಾಖೆಯನ್ನು ತಲುಪಿತು.
ರಂಗೋಲಿ ಸ್ಪರ್ಧೆ
ಮೈಸೂರು ದಸರಾ ಅಂಗವಾಗಿ ಮೈಸೂರು ಅರಮನೆಯ ಒಳ ಆವರಣದಲ್ಲಿ ರಂಗೋಲಿ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿತ್ತು. ರಂಗೋಲಿ ಸ್ಪರ್ಧೆಯಲ್ಲಿ 100 ಕ್ಕೂ ಅಧಿಕ ಮಹಿಳೆಯರು ಭಾಗವಹಿಸಿರುವುದು ವಿವಿಧ ರೀತಿಯ ರಂಗೋಲಿ ಬಿಡಿಸುವ ಮೂಲಕ ಗಮನ ಸೆಳೆದರು.
ಚಾಮುಂಡಿ ಬೆಟ್ಟದಲ್ಲಿ ನೆಲೆಸಿರುವ ಮೈಷಾಸುರನ ರೂಪ, ಮೈಸೂರು ದಸರಾ ಅಂಬಾರಿಯನ್ನು ಹೊತ್ತಿರುವ ಆನೆಯ ಚಿತ್ರ, ಬಸವ ಮತ್ತು ಶಿವ, ಲಿಂಗ ಸಮಾನತೆಯನ್ನು ಉತ್ತೇಜಿಸೋಣ ಎಂಬ ವಿಷಯದ ಮೇಲೆ, ಮಹಿಳೆಯ ಮೇಲೆ ಆಗುತ್ತಿರುವ ಅತ್ಯಾಚಾರ ತಡೆಗಟ್ಟುವುದು ಸೇರಿದಂತೆ ಬಣ್ಣದ ಬಣ್ಣದ ರಂಗೋಲಿ ಬಿಡಿಸಿದರು.












Click it and Unblock the Notifications