ಕುಲು ಮನಾಲಿ ಪ್ರವಾಸಕ್ಕೆ ತೆರಳಿದ್ದ ಮೈಸೂರಿಗರು ನಾಪತ್ತೆ
ಮೈಸೂರು, ಜುಲೈ11: ಕುಲು ಮನಾಲಿ ಪ್ರವಾಸಕ್ಕೆ ಹೋಗಿದ್ದ ಮೈಸೂರಿನ ಪ್ರವಾಸಿಗರು ನಾಪತ್ತೆಯಾಗಿದ್ದಾರೆ ಎನ್ನುವ ಆತಂಕಕಾರಿ ಮಾಹಿತಿಯೊಂದು ಲಭ್ಯವಾಗಿದೆ.
ಕಳೆದ ಗುರುವಾರ ಪ್ಯಾಕೇಜ್ ಟೂರ್‌ನಲ್ಲಿ ಶ್ರೀನಿಧಿ, ನವ್ಯ,ವೀರ್ ಹಾಗೂ ಅವರ ಪತ್ನಿ ಮೈಸೂರಿನಿಂದ ಕುಲು ಮನಾಲಿ ಪ್ರವಾಸಕ್ಕೆ ತೆರಳಿದ್ದರು. ರಾಜ್ಯಾದ್ಯಂತ 50ಕ್ಕೂ ಹೆಚ್ಚು ಜನರು ಇವರ ಜೊತೆ ತೆರಳಿದ್ದರು ಎಂದು ತಿಳಿದುಬಂದಿದೆ. ಇನ್ನು ಭಾನುವಾರ ರಾತ್ರಿ ಅಂದರೆ (ಜುಲೈ 09) ಅವರು ಕೊನೆಯ ಬಾರಿ ಸಂಪರ್ಕಕ್ಕೆ ಸಿಕ್ಕಿದ್ದು, ಈ ವೇಳೆ ಭಾರೀ ಮೆಳೆ ಇರುವ ಕಾರಣ ರೆಡ್ ಅಲರ್ಟ್ ಘೋಷಣೆ ಮಾಡಿದ್ದಾರೆ. ಆದ್ದರಿಂದ ನಾವು ಕೊಠಡಿಯಲ್ಲಿ ಸುರಕ್ಷಿತರಾಗಿದ್ದೇವೆ ಎನ್ನುವ ಮಾಹಿತಿಯನ್ನು ರವಾನಿಸಿದ್ದರು.

ಬಳಿಕ ಇದುವರೆಗೂ ಯಾರೊಬ್ಬರೂ ಸಂಪರ್ಕ್ಕೆ ಸಿಗುತ್ತಿಲ್ಲ ಹಾಗೂ ಮಾಹಿತಿಯೂ ಇಲ್ಲದಂತಾಗಿದೆ. ಈ ಹಿನ್ನೆಲೆ ಪ್ರವಾಸಿಗರು ಮನೆಯವರು ಆತಂಕಗೊಂಡಿದ್ದು, ನಮ್ಮವರನ್ನು ಸುರಕ್ಷಿತವಾಗಿ ಕರೆತರುವಂತೆ ಮನವಿ ಮಾಡಿದ್ದಾರೆ. ಆದರೆ ಸಂಬಂಧಿಕರಿಗೆ ಯಾವ ಟ್ರ್ಯಾವಲ್ಸ್ ಅಂತಲೂ ಕೂಡ ಸರಿಯಾದ ಮಾಹಿತಿ ಇಲ್ಲದಂತಾಗಿದೆ.
ಚನ್ನಗಿರಿಯ 8 ಮಂದಿ ಸೇಫ್
ಮತ್ತೊಂದೆಡೆ ದಾವಣಗೆರೆ ಜಿಲ್ಲೆಯ ಚನ್ನಗಿರಿಯಿಂದ ಅಮರನಾಥ ಯಾತ್ರೆಗೆ ತೆರಳಿದ್ದ 8 ಮಂದಿ ಸುರಕ್ಷಿತವಾಗಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಚನ್ನಗಿರಿ ತಾಲೂಕಿನ ಅಜ್ಜಿಹಳ್ಳಿಯ ಪ್ರಕಾಶ್, ವಸಂತ ಕುಮಾರ್, ರೇವಣ್ಣ, ಆದಿತ್ಯ, ಪ್ರಹ್ಲಾದ್, ನಲ್ಲೂರಿನ ಸತೀಶ್, ಚನ್ನಗಿರಿ ಪಟ್ಟಣದ ರಂಗಯ್ಯ, ತಿಪ್ಪಗೊಂಡನಹಳ್ಳಿಯಿಂದ ಮಂಜುನಾಥ್ ಡಿಎಂ., ಹಳ್ಳಿಹಾಳು (ಪೆನ್ನಸಮುದ್ರ) ಗ್ರಾಮದ ಜಿ.ಎಸ್. ನಾಗರಾಜು ಅವರು ಇದೇ ಜುಲೈ 7ರಂದು ಶ್ರೀನಗರಕ್ಕೆ ತೆರಳಿ ಅಲ್ಲಿಂದ ಅಮನಾಥಕ್ಕೆ ತೆರಳಿ ದೇವರ ದರ್ಶನ ಪಡೆದಿದ್ದು, ನಂತರ ಶ್ರೀನಗರ ಮೂಲಕ ಕರ್ನಾಟಕಕ್ಕೆ ವಾಪಸ್ ಬರುತ್ತಿದ್ದಾರೆ.
ಅಮರನಾಥ ಯಾತ್ರೆಗೆ ತೆರಳಿದ್ದ ಕ್ಷೇತ್ರದ ಎಂಟು ಮಂದಿಯ ಪರಿಸ್ಥಿತಿಯ ಬಗ್ಗೆ ಶಾಸಕ ಬಸವರಾಜು ಅವರು ಮಾಹಿತಿ ಪಡೆದುಕೊಂಡಿದ್ದಾರೆ. ಅಲ್ಲದೆ ಫೋನ್‌ನಲ್ಲಿ ಮಾತನಾಡಿ ಪ್ರವಾಸದಲ್ಲಿರುವವರಿಗೆ ಧೈರ್ಯ ತುಂಬಿದ್ದಾರೆ. ಚನ್ನಗಿರಿ ಕ್ಷೇತ್ರದಿಂದ ಈ ಬಾರಿ ಎಷ್ಟು ಮಂದಿ ತೆರಳಿದ್ದಾರೆ ಎಂಬುದರ ಕುರಿತು ಅಧಿಕಾರಿಗಳೊಂದಿಗೆ ಮಾಹಿತಿ ಪಡೆದು ಅವರನ್ನು ಫೋನ್ ಕರೆ ಮೂಲಕ ಸಂಪರ್ಕಿಸಿದ್ದಾರೆ. ಕ್ಷೇತ್ರದಿಂದ ಅಮರನಾಥ ಯಾತ್ರೆಗೆ ತೆರಳಿದ್ದವರನ್ನು ಸಂಪರ್ಕ ಮಾಡಿ ಅವರ ಯೋಗಕ್ಷೇಮವನ್ನೂ ವಿಚಾರಿಸಿದ್ದಾರೆ.
ಅಮರನಾಥ ಸೇರಿದಂತೆ ಉತ್ತರ ಭಾರತ ಪ್ರವಾಸದಲ್ಲಿವರಿಗೆ ಶುಭ ಕೋರಿ ಯಾವುದೇ ಸಮಯದಲ್ಲಿ ನಿಮಗೆ ಸಣ್ಣ ಸಮಸ್ಯೆಯಾದರೂ ನನಗೆ ನೇರವಾಗಿ ಫೋನ್ ಕರೆ ಮಾಡಿ ಸಂಪರ್ಕಿಸಿ ಅಂತಲೂ ಹೇಳಿದ್ದಾರೆ.












Click it and Unblock the Notifications