KRS Dam: ಕೊಡಗು, ಕೇರಳದಲ್ಲಿ ಭಾರಿ ಮಳೆ; 90 ಅಡಿ ತಲುಪಿದ ಕನ್ನಂಬಾಡಿ
ಮೂರು ದಿನಗಳಿಂದ ಕೊಡಗು ಹಾಗೂ ಕೇರಳದಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿರುವ ಪರಿಣಾಮ ಮೈಸೂರು-ಮಂಡ್ಯ-ಬೆಂಗಳೂರು ಭಾಗದ ಜೀವನಾಡಿ ಕೆಆರ್‌ಎಸ್ ಅಣೆಕಟ್ಟು 90 ಅಡಿ ತಲುಪಿದ್ದು, ರೈತರಲ್ಲಿ ನಿರಾಳ ಭಾವನೆ ಉಂಟು ಮಾಡಿದೆ.
ಗುರುವಾರ ಕೇವಲ 2241 ಕ್ಯೂಸೆಕ್ ಇದ್ದ ಒಳ ಹರಿವಿನ ಪ್ರಮಾಣ, ಶುಕ್ರವಾರ ಬೆಳಗಿನ ವೇಳೆಗೆ 13,437 ಕ್ಯೂಸೆಕ್‌ಗೆ ಹೆಚ್ಚಾಗಿದೆ. ಹಾಗಾಗಿ ಕನ್ನಂಬಾಡಿ ಕಟ್ಟೆಯ ನೀರಿನ ಮಟ್ಟ 90 ಅಡಿ ದಾಟಿದೆ. ಇದೇ ಪ್ರಮಾಣದಲ್ಲಿ ನೀರು ಜಲಾಶಯಕ್ಕೆ ಹರಿದು ಬಂದರೆ ಮೂರ್ನಾಲ್ಕು ದಿನಗಳಲ್ಲಿ ನೂರಡಿ ದಾಟಲಿದೆ. ಕೊಡಗು ಜಿಲ್ಲೆ ಭಾಗಮಂಡಲದ ತ್ರಿವೇಣಿ ಸಂಗಮ ಸಂಪೂರ್ಣ ಭರ್ತಿಯಾಗಿದ್ದು, ನದಿಯಲ್ಲಿ ನೀರು ಹರಿವಿನ ಪ್ರಮಾಣ ಹೆಚ್ಚಾಗಿದೆ.

ಕಳೆದ ವರ್ಷ ಉತ್ತಮ ಮಳೆಯಾಗದೆ ರೈತರು ಬೆಳೆನಷ್ಟ ಅನುಭವಿಸಿದ್ದರು. ಅಲ್ಲದೆ ಕುಡಿಯುವ ನೀರಿಗೂ ಸಮಸ್ಯೆ ಉಂಟಾಗಿತ್ತು. ಕರ್ನಾಟಕ-ತಮಿಳುನಾಡು ನೀರಿನ ವ್ಯಾಜ್ಯವೂ ಸಮಸ್ಯೆಯನ್ನು ಮತ್ತಷ್ಟು ಗಟ್ಟಿಯಾಗಿಸಿತ್ತು. ಆದರೆ, ಈ ಬಾರಿ ಉತ್ತಮ ಮಳೆಯಾಗುವ ಲಕ್ಷಣ ಗೋಚರಿಸಿದ್ದು, ನೀರಿನ ಸಮಸ್ಯೆಗೆ ಪರಿಹಾರ ಸಿಗುವ ವಿಶ್ವಾಸವನ್ನು ರೈತರು ವ್ಯಕ್ತಪಡಿಸಿದ್ದಾರೆ.
ಲಕ್ಷ್ಮಣತೀರ್ಥದ ಹರಿವು ಹೆಚ್ಚಳ
ಕೊಡಗು ಹಾಗೂ ನಾಗರಹೊಳೆ ಉದ್ಯಾನದಲ್ಲಿ ಬೀಳುತ್ತಿರುವ ಸತತ ಮಳೆಯಿಂದಾಗಿ ಲಕ್ಷ್ಮಣತೀರ್ಥ ನದಿಯಲ್ಲಿ ಒಳ ಹರಿವು ಹೆಚ್ಚಿದ್ದು, ಹನಗೋಡು ಅಣೆಕಟ್ಟೆ ಮೇಲೆ 2500 ಕ್ಯೂಸೆಕ್ ನೀರು ಹರಿಯುತ್ತಿದೆ. ಎರಡೇ ದಿನದಲ್ಲಿ ಲಕ್ಷ್ಮಣತೀರ್ಥ ನದಿಯ ಹನಗೋಡು ಅಣೆಕಟ್ಟೆ ತುಂಬಿ ಅಂದಾಜು ಎರಡೂವರೆ ಅಡಿಯಷ್ಟು ನೀರು ತುಂಬಿದೆ. ಶೀಘ್ರದಲ್ಲೇ ಮುಖ್ಯ ಕಾಲುವೆಗೆ ನೀರು ಹರಿಸಿ ಕೆರೆಗಳಿಗೆ ನೀರು ತುಂಬಿಸಲಾಗುವುದೆಂದು ಹಾರಂಗಿ ಹನಗೋಡು ಉಪ ವಿಭಾಗದ ಎಇಇ ಅಶೋಕ್ ತಿಳಿಸಿದ್ದಾರೆ.
ತಂಬಾಕು ಬೆಳೆಗೆ ಸಂಜೀವಿನಿ
ಮಳೆ ಇಲ್ಲದೆ ಸೊರಗುತ್ತಿದ್ದ ತಂಬಾಕು ಬೆಳೆಗೆ ಈ ಮಳೆಯು ಸಂಜೀವಿನಿಯಂತಾಗಿದೆ. ಇದರಿಂದ ತಂಬಾಕು ಹಾಗೂ ಶುಂಠಿ ಬೆಳೆಗಾರರು ಹರ್ಷಗೊಂಡಿದ್ದಾರೆ. ಇದೇ ರೀತಿ ಮಳೆ ಮುಂದುವರಿದಲ್ಲಿ ತಂಬಾಕು ಹಾಗೂ ಶುಂಠಿ ಬೆಳೆ ಕೊಳೆಯುವ ಭೀತಿಯೂ ಎದುರಾಗಿದೆ ಎನ್ನುತ್ತಾರೆ ರೈತರು.
ಭರ್ತಿಯಾಗುವತ್ತ ಕಬಿನಿ
ಕೇರಳದ ವಯನಾಡಿಯಲ್ಲಿ ಮಳೆಯಾಗುತ್ತಿರುವ ಪರಿಣಾಮ ಎಚ್.ಡಿ.ಕೋಟೆಯ ಕಬಿನಿ ಜಲಾಶಯ ಭರ್ತಿಯಾಗುವ ಲಕ್ಷಣ ಗೋಚರಿಸಿದೆ. ಕಬಿನಿ ಜಲಾಶಯದ ಗರಿಷ್ಠ ಮಟ್ಟ 2284 ಅಡಿಗಳಾಗಿದ್ದು, ಪ್ರಸ್ತುತ 2272 ಅಡಿ ಪ್ರಸ್ತುತ ಭರ್ತಿಯಾಗಿದೆ. ಹೀಗೆ ಮಳೆ ಮುಂದುವರಿದರೆ ವಾರದಲ್ಲಿ ಕಬಿನಿ ಜಲಾಶಯ ತುಂಬುವ ಸಾಧ್ಯತೆ ಇದೆ.












Click it and Unblock the Notifications