ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಾವು ಅಶ್ವಥ್ ನಾರಾಯಣರಷ್ಟು ದೊಡ್ಡವರಲ್ಲ, ಎಳಸು; ಡಿ.ಕೆ. ಶಿವಕುಮಾರ್

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಜನವರಿ 3: ರಾಮನಗರದಲ್ಲಿ ನಡೆದ ಸಮಾರಂಭವೊಂದರ ವೇದಿಕೆ ಮೇಲೆ ಸಂಸದ ಡಿ.ಕೆ. ಸುರೇಶ್ ಹಾಗೂ ಸಚಿವ ಅಶ್ವಥ್ ನಾರಾಯಣ ಜಟಾಪಟಿ ನಡೆಸಿದ ಪ್ರಸಂಗ ಇದೀಗ ರಾಜ್ಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಇನ್ನು ಮುಖ್ಯಮಂತ್ರಿಗಳ ಸಮ್ಮುಖದಲ್ಲೇ ನಡೆದ ಈ ಘಟನೆ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ.

"ರಾಮನಗರದ ಘಟನೆ ಒಬ್ಬ ಸಚಿವರ ದುರಹಂಕಾರದ ಪರಮಾವಧಿ. ಸಚಿವ ಅಶ್ವಥ್ ನಾರಾಯಣ, ಮುಖ್ಯಮಂತ್ರಿಯನ್ನು ಕರೆದುಕೊಂಡು ಬಂದಿದ್ದಾರೆ. ಅವರು ಮುಖ್ಯಮಂತ್ರಿಗಳಿರುವ ವೇದಿಕೆಯಲ್ಲಿ ಏನು ಮಾತನಾಡಬೇಕು, ಅವರಿಗೆ ಯಾವ ರೀತಿ ಗೌರವ ಕೊಡಬೇಕು ಎಂಬ ಪರಿಜ್ಞಾನ ಇರಬೇಕು".

"ರಾಜಕಾರಣದಲ್ಲಿ ಜೈಕಾರ ಹಾಕುವವರು, ಧಿಕ್ಕಾರ ಕೂಗುವವರು, ಕಲ್ಲು, ಮೊಟ್ಟೆ, ಟೊಮೆಟೊ ಹೊಡೆಯುವವರು ಇರುತ್ತಾರೆ. ಯಾವುದೋ ಸನ್ನಿವೇಶದಲ್ಲಿ ದಲಿತರಿಗೆ ನೋವಾಗಿದ್ದು, ಅವರು ಘೋಷಣೆ ಕೂಗಿದ್ದಾರೆ. ಇಂತಹ ಘಟನೆಯನ್ನು ನಾವೂ ಎದುರಿಸಿದ್ದೇವೆ," ಎಂದರು.

Mysuru: KPCC President DK Shivakumar Reacted On Uproar of DK Suresh And Ashwath Narayan

"ಸಭೆಯನ್ನು ಹೇಗೆ ನಿಭಾಯಿಸಬೇಕು, ಸಿಎಂ ಬಂದ ಸಂದರ್ಭದಲ್ಲಿ ಯಾರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು ಎಂಬ ಕನಿಷ್ಠ ಜ್ಞಾನ ಜಿಲ್ಲಾ ಉಸ್ತುವಾರಿ ಮಂತ್ರಿಗಳಿಗೆ ಇರಬೇಕು. ಅವರಿಗೆ ಆ ಜ್ಞಾನವೇ ಇಲ್ಲವೋ, ಸಮಯಪ್ರಜ್ಞೆ ಇಲ್ಲವೋ, ಇದು ಅವರ ಸಂಸ್ಕೃತಿಯೋ ಗೊತ್ತಿಲ್ಲ. ಇಲ್ಲಿ ಯಾವುದನ್ನೂ ಕತ್ತಲಲ್ಲಿ ಇಡಲು ಸಾಧ್ಯವಿಲ್ಲ".

ನನ್ನ ಸೋದರಿ ಅನಿತಾರ ಮನಸಿಗೂ ನೋವಾಗಿ ಪ್ರತಿಭಟನೆ ವ್ಯಕ್ತಪಡಿಸಿದ್ದಾರೆ. ವಿಡಿಯೋದಲ್ಲಿ ಮುಖ್ಯಮಂತ್ರಿಗಳು ಕೂಡ ಆ ರೀತಿ ಮಾತಾಡುವುದು ಬೇಡ, ನಿಲ್ಲಿಸು ಎಂದು ಆ ಸಚಿವರಿಗೆ ಸನ್ನೆ ಮಾಡುತ್ತಾರೆ. ಆದರೂ ಅವರು ನಿಲ್ಲಿಸಲಿಲ್ಲ.

"ರಾಮನಗರ ಜಿಲ್ಲೆ ಕೆಂಗಲ್ ಹನುಮಂತಯ್ಯ, ರಾಮಕೃಷ್ಣ ಹೆಗಡೆ, ದೇವೇಗೌಡರು, ಎರಡು ಬಾರಿ ಕುಮಾರಸ್ವಾಮಿ ಅವರನ್ನು, 2 ಕಿ.ಮೀ ದೂರದಲ್ಲಿನ ಎಸ್.ಎಂ. ಕೃಷ್ಣರನ್ನು ಸಿಎಂ ಆಗಿ ಕೊಟ್ಟಂತಹ ಜಿಲ್ಲೆ. ಪ್ರತಿ ಮನೆಗೂ ರಾಜಕಾರಣ ಗೊತ್ತಿದೆ. ನಾವು ಅಶ್ವಥ್ ನಾರಾಯಣ ಅವರಷ್ಟು ದೊಡ್ಡವರಲ್ಲ, ಎಳಸು ಇರಬಹುದು. ಆದರೆ ರಾಮನಗರ ಜಿಲ್ಲೆಯವರು ಅವರ ಬೆದರಿಕೆಗೆ ಹೆದರುವ ಮಕ್ಕಳಲ್ಲ".

"ಅವರು ಬಂದಿರುವುದು ಬೆಂಗಳೂರು ಕಟ್ಟಿದ ಕೆಂಪೇಗೌಡರು, ಸಂವಿಧಾನ ಶಿಲ್ಪಿ ಅಂಬೇಡ್ಕರ್ ಪ್ರತಿಮೆ ಅನಾವರಣಕ್ಕೆ. ಅದನ್ನು ಮಾಡಿಸಿದ್ದು ಇವರಲ್ಲ. ಜಿಲ್ಲಾ ಮಂತ್ರಿಯಾಗಿದ್ದಾಗ ನಾನು ಹಾಗೂ ಎಲ್ಲರೂ ಸೇರಿ ನಿರ್ಮಾಣ ಮಾಡಿದ ಪ್ರತಿಮೆ," ಎಂದು ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.

Mysuru: KPCC President DK Shivakumar Reacted On Uproar of DK Suresh And Ashwath Narayan

ಅವರ ಪಕ್ಷದ ವೇದಿಕೆಯಲ್ಲಿ ಏನು ಬೇಕಾದರೆ ಹೇಳಿಕೊಳ್ಳಲಿ. ಇದು ಸಿಎಂ ಅವರ ಸಭೆ. ಸಿಎಂ ಇಳಿಸಲು ಮೊದಲಿನಿಂದಲೂ ಬಿಜೆಪಿಯಲ್ಲಿ ಪ್ರಯತ್ನ ನಡೆಯುತ್ತಿದೆ. ಯಡಿಯೂರಪ್ಪನವರನ್ನು ಇಳಿಸಲು ದೊಡ್ಡ ಷಡ್ಯಂತ್ರ ಮಾಡಿದ್ದರು. ಈಗ ಬೊಮ್ಮಾಯಿ ಅವರನ್ನು ಇಳಿಸಲು ಪ್ರಯತ್ನಿಸುತ್ತಿದ್ದಾರೆ. ಬಿಟ್ ಕಾಯಿನ್ ವಿಚಾರ ತೆಗೆದುಕೊಳ್ಳಿ, ಬೇರೆ ವಿಚಾರ ತೆಗೆದುಕೊಳ್ಳಿ ಎಂದು ನಮಗೆ ಮಾಹಿತಿ ಕೊಟ್ಟವರೇ ಬಿಜೆಪಿಯವರು, ಇದೇ ಅಶ್ವಥ್ ನಾರಾಯಣ್. ಈ ವಿಚಾರಗಳ ಬಗ್ಗೆ ಸಮಯ ಬಂದಾಗ ನಾವು ನಮ್ಮ ನಿರ್ಧಾರ ತಿಳಿಸುತ್ತೇವೆ ಎಂದರು.

ಈಗಲೂ ಗುತ್ತಿಗೆದಾರರ ಕಮಿಷನ್ ವಿಚಾರ ಬಳಸಿಕೊಳ್ಳುತ್ತಿದ್ದಾರೆ. ಅವರ ಆಂತರಿಕ ಸಮಸ್ಯೆಗೆ ಮುಖ್ಯಮಂತ್ರಿಗಳನ್ನು ವೇದಿಕೆ ಮೇಲೆ ಕೂರಿಸಿಕೊಂಡು ಅಪಮಾನ ಮಾಡಿದರೆ ಅದು ಸರಿಯೇ? ಮಾಡಲಿ ಬಿಡಿ. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅನಿತಕ್ಕ ಹಾಗೂ ಮುಖ್ಯಮಂತ್ರಿಗಳೇ ಅವರ ಮಾತು ಸರಿಯಾಗಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದ ಮೇಲೆ ಅದರ ಬಗ್ಗೆ ನಾನು ಹೇಳುವುದಾದರೂ ಏನಿದೆ. ಅವರ ಎಲ್ಲ ಸವಾಲುಗಳನ್ನು ಎದುರಿಸಲು ನಾವು ಸಿದ್ಧ ಎಂದು ಹೇಳಿದರು.

ಇದು ಮುಖ್ಯಮಂತ್ರಿ, ಅವರ ಪಕ್ಷ, ಆರ್‌ಎಸ್‌ಎಸ್, ಜಿಲ್ಲಾಡಳಿತ, ಜಿಲ್ಲೆಯ ಜನರಿಗೆ ಆಗಿರುವ ಅಪಮಾನ. ಇಂತಹವರು ಮಂತ್ರಿಯಾಗಿರುವುದೇ ದೊಡ್ಡ ಅವಮಾನ. ಅವರು ಯಾವ ಅಭಿವೃದ್ಧಿ ಮಾಡಿದ್ದಾರೆ. ಅಭಿವೃದ್ಧಿ ಎಂದರೆ ಏನು ಎಂದು ನನಗೂ ತಿಳಿಸಲಿ. ನಾನು ಏಳು ಬಾರಿ ಶಾಸಕನಾಗಿದ್ದೇನೆ, ನನಗೂ ತಿಳಿಸಲಿ. ನಾಳೆ ಅವರೇ ಸಮಯ ನಿಗದಿ ಮಾಡಲಿ. ನಾವು ಬಂದು ತಿಳಿದುಕೊಳ್ಳುತ್ತೇವೆ.

ಅಂಬೇಡ್ಕರ್ ಪ್ರತಿಮೆ ಅವರು ನಿರ್ಮಿಸಿದರಾ? ಅವರೇನು ಅಣೆಕಟ್ಟು ಕಟ್ಟಿದ್ದಾರಾ? ನರೇಗಾ ಯೋಜನೆಯಲ್ಲಿ ಯಾವುದಾದರೂ ಊರಿನ ಅಂತರ್ಜಲ ಹೆಚ್ಚಿಸಿದ್ದಾರಾ? ಕಟ್ಟಡ ಕಟ್ಟಿದ್ದಾರಾ? ರಸ್ತೆ ಮಾಡಿಸಿದ್ದಾರಾ? ಶಾಲೆ ನಿರ್ಮಿಸಿದ್ದಾರಾ? ಅವರು ಒಂದು ದಿನ ನನ್ನ ಜತೆ ಮಾತನಾಡಿಲ್ಲ. ಯಾವುದೂ ಗೊತ್ತಿಲ್ಲ. 900 ಕೋಟಿ ರೂ. ಎಲ್ಲಿ ಕೊಟ್ಟಿದ್ದಾರೆ? ಸರ್ಕಾರದಿಂದ ಅನುದಾನ ಹೋಗುತ್ತಿದೆಯಾ, ಅದೂ ಗೊತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.

ಮುಖ್ಯಮಂತ್ರಿ ಸ್ಥಾನಕ್ಕೆ ನಾವು ಗೌರವ ನೀಡುತ್ತೇವೆ. ಅವರನ್ನು ವೈಯಕ್ತಿಕವಾಗಿ ನಾವು ಮೆಚ್ಚಿಕೊಳ್ಳುತ್ತೇವೆ. ಹಾಗೆಂದು ಅವರ ಸಮ್ಮುಖದಲ್ಲಿ ಮಂತ್ರಿಯೊಬ್ಬರು ಹೇಳಿದ್ದನ್ನೆಲ್ಲ ಕೇಳಿಸಿಕೊಂಡು ಕೂರಲು ಸಾಧ್ಯವೇ? ನಮಗೂ ಸ್ವಾಭಿಮಾನ ಇದೆ. ವೇದಿಕೆ ಮೇಲೆ ಕೂರಿಸಿ ನೀವು ಗಂಡಸಾ ಎಂದು ಕೇಳಿದರೆ ಸುಮ್ಮನೆ ಕೂರಲು ಸಾಧ್ಯವೇ? ರಾಜಕೀಯ, ಅಧಿಕಾರ ಬರುತ್ತದೆ ಹೋಗುತ್ತದೆ. ಆದರೆ ಅವರಿಗೆ ಗೊತ್ತಿರಲಿ. ರಾಮನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರಿನ ಜನರ ರಕ್ತವೇ ಬೇರೆ ಎಂದು ಡಿ.ಕೆ. ಶಿವಕುಮಾರ್ ಎಚ್ಚರಿಕೆ ನೀಡಿದರು.

Mysuru: KPCC President DK Shivakumar Reacted On Uproar of DK Suresh And Ashwath Narayan


ನಕಲಿ ತುಪ್ಪ ಆರೋಪಿಗಳನ್ನು ರಕ್ಷಿಸುವ ಪ್ರಶ್ನೆಯಿಲ್ಲ
ಮೈಸೂರು ಹಾಲು ಒಕ್ಕೂಟ ವ್ಯಾಪ್ತಿಯಲ್ಲಿ ನಡೆದಿದ್ದ ನಂದಿನಿ ನಕಲಿ ತುಪ್ಪ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ರಕ್ಷಿಸುವ ಪ್ರಶ್ನೆಯೇ ಇಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಸ್ಪಷ್ಟಪಡಿಸಿದರು.

ಪ್ರಕರಣದ ಈವರೆಗಿನ ತನಿಖೆ ವೇಳೆ ಕೆಎಂಎಫ್‌ನ ಸಿಬ್ಬಂದಿ ಪ್ರಕರಣದಲ್ಲಿ ಭಾಗಿಯಾಗಿಲ್ಲ ಎಂಬುದು ಕಂಡುಬಂದಿದೆ. ಪ್ರಕರಣ ಸಂಬಂಧ ನಾಲ್ವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪ್ರಕರಣದಲ್ಲಿ ಯಾರು ಭಾಗಿಯಾಗಿದ್ದಾರೆ ಎಂಬುದರ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ನಕಲಿ ನಂದಿನಿ ಉತ್ಪನ್ನಗಳನ್ನು ಪತ್ತೆ ಹಚ್ಚಲು ಏಳು ಮಂದಿಯನ್ನು ಒಳಗೊಂಡ ಸಮಿತಿ ರಚಿಸಲಾಗಿದೆ ಎಂದು ತಿಳಿಸಿದರು.

ನಿಗದಿತ ಬೆಲೆಗಿಂತ ಕಡಿಮೆ ಬೆಲೆಗೆ ನಂದಿನಿ ಉತ್ಪನ್ನಗಳನ್ನು ಮಾರಾಟ ಮಾಡುವ ಬಗ್ಗೆ ತಿಳಿದರೆ ಆ ಸ್ಥಳಕ್ಕೆ ಹೋಗಿ ಸಮಿತಿಯ ಸದಸ್ಯರು ಪರಿಶೀಲನೆ ಮಾಡಲಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಸಚಿವರು ಮಹಿತಿ ನೀಡಿದರು.

ನಂದಿನಿ ನಕಲಿ ತುಪ್ಪ ಪತ್ತೆ ಪ್ರಕರಣದಲ್ಲಿ ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಸೂಚಿಸಲಾಗಿದೆ ಎಂದ ಅವರು, ಪ್ರಕರಣ ಸಂಬಂಧ ಬಂಧಿಸಿರುವ ನಾಲ್ವರು ಆರೋಪಿಗಳು ವಿಭಿನ್ನ ಮಾಹಿತಿ ನೀಡಿದ್ದಾರೆ. ಪೊಲೀಸರ ತನಿಖೆ ವೇಳೆ ನಾಲ್ವರು ಆರೋಪಿಗಳು ಬೇರೆ ಬೇರೆ ರೀತಿಯ ಹೇಳಿಕೆಗಳನ್ನು ನೀಡಿದ್ದಾರೆ ಎಂದರು.

Recommended Video

ಓಮಿಕ್ರಾನ್ ರೂಪಾಂತರದ ಭೀತಿ: ಕರ್ನಾಟಕ ಸಿಎಂ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಭೆ, ಹೊಸ ಮಾರ್ಗಸೂಚಿ ಸಾಧ್ಯತೆ | Oneindia Kannada

English summary
KPCC president DK Shivakumar responded about MP DK Suresh and minister CN Ashwath Narayana Uproar in Ramanagara.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X