Mysuru Dasara: 2024ರ ರೈತ ದಸರಾದ ವಿಶೇಷತೆ ಏನು?-ಇಲ್ಲಿದೆ ಮಾಹಿತಿ
ಮೈಸೂರು, ಅಕ್ಟೋಬರ್, 06: ಮೈಸೂರು ದಸರಾಕ್ಕೆ ರೈತ ದಸರಾ ಮೆರಗು ತಂದಿದ್ದು, ಕೃಷಿಯಲ್ಲಿ ತೊಡಗಿಸಿಕೊಂಡವರು ಮತ್ತು ಕೃಷಿಯಲ್ಲಿ ಆಸಕ್ತಿ ಇರುವವರು ಇಲ್ಲಿಗೆ ಆಗಮಿಸಿ ಎಲ್ಲವನ್ನು ನೋಡಿ, ಖರೀದಿಸಿ ಖುಷಿಪಡುತ್ತಿದ್ದಾರೆ. ಅಕ್ಟೋಬರ್ 5ರಿಂದ ರೈತ ದಸರಾ ಆರಮಭವಾಗಿದ್ದು, ಹಲವು ವಿಶೇಷತೆಗಳಿಂದ ಕೃಷಿಕರ ಗಮನಸೆಳೆಯುತ್ತಿದೆ.
ರೈತ ದಸರಾದಲ್ಲಿ ವಿವಿಧ ಜಾನಪದ ಕಲಾತಂಡಗಳ ಮೆರುಗು, ಕೃಷಿಯ ವಿವಿಧ ಯಂತ್ರೋಪಕರಣಗಳ ಜೊತೆಗೆ ಎತ್ತಿನಗಾಡಿ ಮೆರವಣಿಗೆ, ಧಾನ್ಯಗಳಿಗೆ ಪೂಜೆ ಸಲ್ಲಿಸಿ ಕೃಷಿಯಲ್ಲಿ ಸಾಧನೆ ತೋರಿದ ಕೃಷಿಕರಿಗೆ ಸನ್ಮಾನ, ಗುಣಮಟ್ಟದ ಬೆಳೆಗಳ ಪ್ರದರ್ಶನ, ಸಾವಯವ ಉತ್ಪನ್ನಗಳ ಮಾರಾಟದೊಂದಿಗೆ ಅನ್ನದಾತನ ಶಕ್ತಿ ಅನಾವರಣಗೊಂಡಿದೆ.

ನಗರದ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಬಳಿ ಆಯೋಜಿಸಿದ್ದ ಮೆರವಣಿಗೆಗೆ ನಗರಿ ಬಾರಿಸುವ ಮೂಲಕ ಕೃಷಿ ಸಚಿವ ಚೆಲುವನಾರಾಯಣಸ್ವಾಮಿ ಚಾಲನೆ ನೀಡಿದರು. ಅಲಂಕೃತ ಜೋಡಿ ಎತ್ತಿನ ಗಾಡಿ ಏರಿದ ಕೃಷಿ ಸಚಿವರು ರೈತ ಕುಟುಂಬಕ್ಕೆ ಸೇರಿದವರು ಎಂದು ಸಂಭ್ರಮಿಸಿದರು. ಇವರಿಗೆ ರೇಷ್ಮೆ, ಪಶುಸಂಗೋಪನೆ ಸಚಿವ ಕೆ.ವೆಂಕಟೇಶ್, ಶಾಸಕರಾದ ಕೆ.ಹರೀಶ್‌ಗೌಡ, ರಮೇಶ್ ಬಂಡಿಸಿದ್ದೇಗೌಡ ಸೇರಿದಂತೆ ಹಲವರು ಸಾಥ್ ನೀಡಿದರು.
ನಂದಿಧ್ವಜ, ನಗಾರಿ, ತಮಟೆ, ವೀರಗಾಸೆ ವೀರಭದ್ರ ನೃತ್ಯ, ನಾದಸ್ವರ, ಪೂರ್ಣ ಕುಂಭ, ಪೂಜಾ ಕುಣಿತ, ಚಂಡೆ ವಾದ್ಯ, ಟಿಬೇಟ್ ನೃತ್ಯ ತಂಡ, ಬೀಸು ಕಂಸಾಳೆ ಎತ್ತಿನ ಗಾಡಿ, ಬಂಡೂರು ಕುರಿ, ಡೋಣ್, ಚಿಲಿಪಿಲಿ ಗೊಂಬೆ, ಕಬ್ಬು ಕಟಾವು ಯಂತ್ರ, ಕಬ್ಬು ನಾಟಿ ಯಂತ್ರ, ಬೂಮ್ ಸ್ಪ್ರೇಯರ್, ಮಿನಿ ಕಾರ್ಟ್ ಟ್ಯಾಬ್ಲೊಗಳು ಮೆರವಣಿಗೆಯಲ್ಲಿದ್ದವು.
ಅಲ್ಲದೆ, ಸ್ವರಾಜ್ ಕೋಡ್ ಟ್ರ್ಯಾಕ್ಟರ್, ಮಿನಿ ಟ್ರ್ಯಾಕ್ಟರ್, ಟ್ರ್ಯಾಕ್ಟರ್, ಕಂಬೈಂಡ್ ಹಾರ್ವೆಸ್ಟರ್, ಡೊಳ್ಳು ಕುಣಿತ, ಭತ್ತ ನಾಟಿ ಯಂತ್ರ, ಮುಸುಕಿನ ಜೋಳ ಒಕ್ಕಣೆ ಯಂತ್ರ, ಅಕ್ಟೇರಿಯಮ್, ಬಯೋಚಾರ್ ಯಂತ್ರ, ಅರಣ್ಯ ಇಲಾಖೆ, ತೋಟಗಾರಿಕೆ ಇಲಾಖೆ ಟ್ಯಾಬ್ಲೊಗಳು ಮೆರವಣಿಗೆಯಲ್ಲಿದ್ದವು.
ಮೆರವಣಿಗೆ ಕೆಆರ್ ವೃತ್ತ, ಡಿ.ದೇವರಾಜ ಅರಸು ರಸ್ತೆ, ದಿವಾನರ ರಸ್ತೆ ಮೂಲಕ ಸಾಗಿ ರೈತ ದಸರಾ ನಡೆಯುವ ಸ್ಥಳವಾದ ಜೆಕೆ ಮೈದಾನ ತಲುಪಿತು. ಬಳಿಕ ಜೆಕೆ ಮೈದಾನದಲ್ಲಿ ಕೃಷಿ ಇಲಾಖೆಯ ಯೋಜನೆಗಳು ಮತ್ತು ಇಲಾಖೆಯ ಅನುದಾನಗಳ ಕುರಿತು ಮಾಹಿತಿ ನೀಡುವ ವಸ್ತು ಪ್ರದರ್ಶನಕ್ಕೆ ಚಾಲನೆ ನೀಡಲಾಯಿತು.
ಜಿಲ್ಲೆಯ ವಿವಿಧ ಮೂಲಗಳ ಪ್ರಗತಿಪರ ರೈತರು ಬೆಳೆದ ಸಾವಯವ ಪದಾರ್ಥಗಳು, ಗುಣಮಟ್ಟದ ಬೆಳೆಗಳು, ಕೃಷಿ ಬಳಕೆ ಸಲಕರಣೆಗಳು, ಬಂಡೂರು ಕುರಿ, ಸಮಗ್ರ ಮೀನು ಸಾಕಾಣಿಕೆ, ಹಳ್ಳಿಕರ್ ತಳಿ ಹಸು, ನಾಟಿ ಕೋಟಿ ಪ್ರದರ್ಶನ, ವಿವಿಧ ಪ್ರಾಣಿಗಳ ಬ್ರೂಣ ಬೆಳವಣಿಗೆ ವಿಶೇಷ ಎನಿಸಿತು.
ಜಿಲ್ಲಾ ಪಂಚಾಯಿತಿ, ಪಶುಸಂಗೋಪನ ಇಲಾಖೆ, ರೇಷ್ಮೆ ಇಲಾಖೆಯ ವಿವಿಧ ಮಳಿಗೆಗಳಲ್ಲಿ ಸರ್ಕಾರದ ಯೋಜನೆಗಳ ಮಾಹಿತಿ ಮತ್ತು ಕೃಷಿ ಮಾಡುವ ವಿಧಾನದ ಕುರಿತು ಪ್ರತಿಕೃತಿಗಳ ಮೂಲಕ ಮಾಹಿತಿ ನೀಡಿದವು. ಬೆಂಗಳೂರಿನ ಕೃಷಿ ವಿಶ್ವವಿದ್ಯಾನಿಲಯದ ಮಳಿಗೆ ಸಾವಯವ ಕೃಷಿ ಉತ್ಪನ್ನಗಳು, ಜಿಲ್ಲಾ ಪಂಚಾಯಿತಿಯ ಮಳಿಗೆಯಲ್ಲಿ ಜಿಲ್ಲೆಯ ವಿವಿಧ ತಾಲೂಕಿನ ಜಮೀನಿನಲ್ಲಿ ಬೆಳೆದ ಬೆಳೆಗಳು ಪ್ರದರ್ಶನದಲ್ಲಿದ್ದವು.
ಇದರೊಂದಿಗೆ ತೋಟಗಾರಿಕೆಯ ಬೆಳೆಗಳ ಕುರಿತು ಸಸಿಗಳು ಮತ್ತು ಬೆಳೆ ಬೆಳೆಯುವುದು ಮತ್ತು ರೋಗ ತಡೆಯ ಮುನ್ನಚ್ಚರಿಕೆ ಕ್ರಮಗಳನ್ನು ಮೈಸೂರಿನ ತೋಟಗಾರಿಕೆ ಮಾಹಿತಿ ನೀಡುತ್ತಿದೆ. ಜಿಲ್ಲಾ ಪಂಚಾಯಿತಿಯ ಸಾಮಾಜಿಕ ಅರಣ್ಯ ವಿಭಾಗ ಶ್ರೀಗಂಧ, ರಕ್ತಚಂದನ, ಹುಣಸೆ, ತೇಗ, ಸಿಲ್ವರ್, ಹೆಬ್ಬೇವು ಗಿಡಗಳು ಮೆರಗು ತಂದಿವೆ. ಟಿಲ್ಲರ್ಸ್ ಅಂಡ್ ಟ್ರ್ಯಾಕ್ಟರ್ಸ್, ಕೃಷಿ ಪಂಪ್ ಸೆಟ್‌ಗಳ ನವೀನ ಮಾದರಿಯ ಪೈಪ್ಸ್, ಸಲಕರಣೆಗಳಿವೆ. ರಾಸಾಯನಿಕ ಮುಕ್ತ ಬೆಲ್ಲ, ಹಾಲಿನ ಉತ್ಪನ್ನಗಳ ಪೇಡಾ, ನಂದಿನಿ ಹಾಲಿನ ಉತ್ಪನ್ನಗಳ ಮಾರಾಟದಲ್ಲಿವೆ.
ಪ್ರದರ್ಶನದಲ್ಲಿ ಸಮಗ್ರ ಕೃಷಿ ಪದ್ದತಿ, ಆಧುನಿಕ ರೇಷ್ಮೆ ನೂಲು ಬಿಚ್ಚಾಣಿಕೆ ಬಗ್ಗೆ ತಿಳಿಸಿಕೊಡಲಾಗುತ್ತಿದ್ದು, ರೇಷ್ಮೆ ಗೂಡಿನಿಂದ ತಯಾರಿಸಿದ ಕರಕುಶಲ ವಸ್ತುಗಳು, ಅರಣ್ಯ ಇಲಾಖೆ ಮಳಿಗೆ, ಮಂಡ್ಯ ಬೆಲ್ಲ ಉತ್ಪಾದಕರ ಕಂಪನಿನಿಂದ ಸಾವಯವ ಬೆಲ್ಲ, ಕರ್ನಾಟಕ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ವತಿಯಿಂದ ಮೀನುಗಾರಿಗೆ ಸೇರಿದಂತೆ ವಿವಿಧ ಬ್ರೂಣಗಳ ಪ್ರದರ್ಶನ ಮಾಡಲಾಗಿತ್ತು.
ಇದರಲ್ಲಿ ಹಸುವಿನ ಹೃದಯ, 8 ಕಾಲಿನ ಕುರಿಮರಿ, ಎರಡು ತಲೆಯ ಕರು, ಗೋದಿ ನಾಗರಹಾವು, ಎರಡರಿಂದ ಎಂಟು ತಿಂಗಳ ಹಸುವಿನ ಕರು ಬ್ರೂಣ ಹಾಗೂ ಬೆಳವಣಿಗೆಯ ಹಂತಗಳನ್ನು ಪ್ರಾತ್ಯಕ್ಷಿಕೆ ಇಡಲಾಗಿತ್ತು.
ಬೆಂಗಳೂರು ಉದ್ದ ಕಿವಿ ಮೇಕೆ ತಳಿಗಾರರ ಸಂಘದ ಉದ್ದ ಕಿವಿ ಮೇಕೆ, ಲಕ್ಷ ಲಕ್ಷ ಬೆಲೆ ಬಾಳುವ ಡಾರ್ಪರ್ ಕುರಿ, ಲಕ್ಷ ಲಕ್ಷ ಬೆಲೆಯ ಹಳ್ಳಿಕಾರ್ ಎತ್ತುಗಳು, ಸುಮುಧ ಸಾವಯವ ತೋಟ, ಶ್ರೀ ಗಣೇಶ್ ಫಾರಂ ಹುಲ್ಲಹಳ್ಳಿ ಫಾರಂನ ಬಂಡೂರು ಕುರಿ, ದೇವಣಿ ತಳಿಯ ಹಸು, ಹಳ್ಳಿಕಾರ್, ಸಾಹೀವಾಲ್, ಗಿರ್, ಮಲನಾಡ್ ಗಿಡ್ಡ, ಥಾರ್ಪಾರ್ಕರ್ ತಳಿಯ ದೇಸಿ ಹಸುಗಳು, ಓಂಗೋಲ್, ಪುಂಗನೂರ್ ತಳಿಯ ಜಾನುವಾರುಗಳು ಪ್ರಮುಖ ಆಕರ್ಷಣೆಯಾಗಿವೆ.
ಕೃಷಿ ಮತ್ತು ತೋಟಗಾರಿಕೆ ಇಲಾಖೆಗೆ ಸಂಬಂಧಿಸಿದ ನಾವೀನ್ಯ ಯಂತ್ರೋಪಕರಣಗಳು ವಸ್ತುಪ್ರದರ್ಶನಲ್ಲಿ ಗಮನ ಸೆಳೆದವು. 6, 9 ಎಚ್‌ಪಿ ಪವರ್ ಟಿಲ್ಲರ್‌ಗಳು, ಸೈಕಲ್ ವೀಡರ್, ಪವರ್ ವೀಡರ್ ಪ್ರದರ್ಶನದ ಜೊತೆಗೆ ಕೃಷಿ ಉಪಕರಣಗಳ ಮಾರಾಟ ರಿಯಾಯಿತಿ ದರದಲ್ಲಿತ್ತು. ಅಲ್ಲದೆ, ಇದೇ ಮೊದಲ ಬಾರಿಗೆ ಬೆಳೆಗಳಿಗೆ ಕ್ರಿಮಿನಾಶಕ ಸಿಂಪಡಿಸುವ ಬೃಹತ್ ಬೂಮ್ ಸ್ಪ್ರೇಯರ್ ಎಲ್ಲರ ಗಮನ ಸೆಳೆಯಿತು. ಇದರ ಬೆಲೆ 19 ಲಕ್ಷವಾಗಿದ್ದು, ರೈತರಿಗೆ 7 ಲಕ್ಷ ಸಬ್ಸಿಡಿ ಸಿಗುತ್ತದೆ. ಇದು 600 ಲೀಟರ್ ಸಾಮರ್ಥ್ಯ ಹೊಂದಿದ್ದು, 45 ನಿಮಿಷದಲ್ಲಿ 5 ಎಕರೆಗೆ ಕ್ರಿಮಿನಾಶಕ ಸಿಂಪಡಿಸಬಹುದು. ಇದು ಹೆಚ್ಚು ಎತ್ತರ ಬೆಳೆಯದ ದವಸ ಧಾನ್ಯ ಬೆಳೆಗಳಿಗೆ ಬಳಸಬಹುದು. ಇದರ ಜತೆಗೆ ಸುಧಾರಿತ ತಳಿಗಳ ಪ್ರಾತ್ಯಕ್ಷಿಕೆ ಮತ್ತು ಮಾರಾಟ ಇತ್ತು. ಫರ್ಟಿಲೈಜರ್‍ಸ್ ಕಂಪನಿಗಳ ಮಳಿಗೆಗಳು ರಾಸಾಯನಿಕ ಗೊಬ್ಬರದ ಬಗ್ಗೆ ಅರಿವು ನೀಡುತ್ತಿವೆ.












Click it and Unblock the Notifications