ವೈದ್ಯ ದಂಪತಿಗೆ ಚಾಕುವಿನಿಂದ ಇರಿದು ದರೋಡೆ ಮಾಡಿದ ದುಷ್ಕರ್ಮಿಗಳು
ಮೈಸೂರು, ಜನವರಿ 29: ಮೈಸೂರು ನಗರದಲ್ಲಿ ಕಾರ್ಯನಿರ್ವಹಿಸುತ್ತಿರುವ ರೆಡಿಯಾಲಜಿಸ್ಟ್ ಮತ್ತು ಅವರ ಪತ್ನಿಗೆ ದುಷ್ಕರ್ಮಿಗಳು ಚಾಕುವಿನಿಂದ ಇರಿದು ಪರಾರಿಯಾಗಿರುವ ಘಟನೆ ಗುರುವಾರ ರಾತ್ರಿ ವಿಜಯನಗರದಲ್ಲಿ ನಡೆದಿದೆ.
ಇರಿತಕ್ಕೊಳಗಾದವರನ್ನು ರೆಡಿಯಾಲಜಿಸ್ಟ್ ಕೇಶವ್ ಪಿ.ರಾಯಚೂರ್ಕರ್ ಮತ್ತವರ ಪತ್ನಿ ಡಾ.ಕೃಷ್ಣಕುಮಾರಿ ಎಂದು ಗುರುತಿಸಲಾಗಿದೆ. ಡಾ.ಕೇಶವ್ ಅವರು ಮೈಸೂರಿನ ಸರಸ್ವತಿಪುರಂ ಪೊಲೀಸ್ ಠಾಣೆಯ ಪಕ್ಕದಲ್ಲಿ ಎಎಕ್ಸ್ ಎಲ್ ಪ್ರೈಮ್ ಎಂಬ ಡಯಾಗ್ನಸ್ಟಿಕ್ ಸೆಂಟರ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
ಗುರುವಾರ ಸಂಜೆ 8.30ರ ಸುಮಾರಿಗೆ ಹೆಲ್ಮೆಟ್, ಮಾಸ್ಕ್ ಧರಿಸಿ ವೈದ್ಯರ ಮನೆ ಪ್ರವೇಶಿಸಿದ ಇಬ್ಬರು ದುಷ್ಕರ್ಮಿಗಳು, ಡಾ.ಕೃಷ್ಣಕುಮಾರಿ ಅವರ ಮೇಲೆ ಹಲ್ಲೆ ನಡೆಸಿ ಅಡುಗೆ ಮನೆಯಲ್ಲಿ ಕೂಡಿ ಹಾಕಿದ್ದಾರೆ. ಕೆಲ ಸಮಯದ ಪರಿ ಡಾ.ಕೇಶವ ಅವರು ಮನೆಗೆ ಬಂದಾಗ ಅವರ ಮೇಲೂ ಚಾಕಿನಿಂದ ಹಲ್ಲೆ ನಡೆಸಿ ಗಾಯಗೊಳಿಸಿದ್ದಾರೆ.

ದುಷ್ಕರ್ಮಿಗಳಲ್ಲಿ ಒಬ್ಬನಿಗೆ ನಿನಗೆ ಏನು ಬೇಕೋ ಅದನ್ನು ತೆಗೆದುಕೊಂಡು ಹೋಗು ನಮಗೇನು ಮಾಡಬೇಡ ಎಂದಿದ್ದಕ್ಕೆ ಆತ ಬಚ್ಚಲು ಮನೆಗೆ ಹೋಗಿ ಕೈಕಾಲು ತೊಳೆದುಕೊಂಡು ಬಂದು ನಾನು ನಿತಿನ್. ನಾನು ಕೆಲಸ ಕೇಳಿಕೊಂಡು ಬಂದರೆ ನನಗೆ ಕೆಲಸ ಕೊಡದೆ ಏನೋ ಹೇಳಿ ಕಳುಹಿಸಿದ್ದೀರಿ, ಅದಕ್ಕೆ ಈ ರೀತಿ ಹಲ್ಲೆ ಮಾಡಿರುವುದಾಗಿ ಹೇಳಿದ್ದಾನೆ.
ಪತ್ನಿಯ ಕುತ್ತಿಗೆಯಲ್ಲಿದ್ದ 64 ಗ್ರಾಂ ತೂಕದ ಚಿನ್ನದ ಸರ ಮತ್ತು 60 ಗ್ರಾಂ ತೂಕದ ನಾಲ್ಕು ಚಿನ್ನದ ಬಳೆಗಳನ್ನು, ಪತಿಯ ಐಫೋನ್ ನ್ನು ಕಿತ್ತುಕೊಂಡು ಪರಾರಿಯಾಗಿದ್ದಾನೆ.
ಈ ಕುರಿತು ಡಾ.ಕೃಷ್ಣಕುಮಾರಿ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಗಾಯಗೊಂಡಿರುವ ವೈದ್ಯ ಕೇಶವ್ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ವಿಜಯನಗರ ಪೊಲೀಸರು ಮೊಕದ್ದಮೆ ದಾಖಲಿಸಿಕೊಂಡಿದ್ದು, ಆರೋಪಿಗಳ ಪತ್ತೆಗಾಗಿ ಬಲೆ ಬೀಸಿದ್ದಾರೆ












Click it and Unblock the Notifications