ಮೈಸೂರಿನಲ್ಲಿ ಗೃಹ ಮಂಡಳಿ ಲೇಔಟ್, 20 ಸಾವಿರ ಸೈಟು ಹಂಚಿಕೆ
ಮೈಸೂರು, ಏಪ್ರಿಲ್ 14: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಿವೇಶನ ಕೊಳ್ಳುವ ಆಲೋಚನೆ ಹೊಂದಿರುವ ಜನರಿಗೆ ಸಿಹಿಸುದ್ದಿಯೊಂದಿದೆ. ಕರ್ನಾಟಕ ಗೃಹ ಮಂಡಳಿ ನಗರದಲ್ಲಿ ಬಡಾವಣೆಯೊಂದನ್ನು ನಿರ್ಮಾಣ ಮಾಡಲಿದ್ದು, ಸುಮಾರು 20 ಸಾವಿರ ಸೈಟುಗಳನ್ನು ಹಂಚಿಕೆ ಮಾಡಲು ಮುಂದಾಗಿದೆ. ಸುಮಾರು 2,500 ಎಕರೆ ಪ್ರದೇಶದಲ್ಲಿ ಅಗತ್ಯ ಮೂಲ ಸೌಕರ್ಯಗಳ ಜೊತೆಗೆ ಬಡಾವಣೆ ನಿರ್ಮಾಣ ಮಾಡಲಾಗುತ್ತದೆ.
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಸೈಟುಗಳ ಕುರಿತು ರಾಜ್ಯ ರಾಜಕೀಯದಲ್ಲಿ ಭಾರೀ ಚರ್ಚೆಗಳು ನಡೆಯುತ್ತಿವೆ. ಇಂತಹ ಹೊತ್ತಿನಲ್ಲಿಯೇ ಮೈಸೂರು ನಗರದ ಹೊರ ವಲಯದಲ್ಲಿ ಕರ್ನಾಟಕ ಗೃಹ ಮಂಡಳಿ ಬಡಾವಣೆ ನಿರ್ಮಾಣ ಮಾಡಿ, ಸೈಟುಗಳನ್ನು ಜನರಿಗೆ ಹಂಚಿಕೆ ಮಾಡಲು ಮುಂದಾಗಿದೆ.

ಸುಮಾರು 2,500 ಎಕರೆ ಪ್ರದೇಶದಲ್ಲಿ ಹೊಸ ಬಡಾವಣೆ ನಿರ್ಮಾಣಕ್ಕೆ ಕರ್ನಾಟಕ ಗೃಹ ಮಂಡಳಿ (ಕೆಎಚ್‌ಬಿ) ಯೋಜನೆ ಸಿದ್ಧಗೊಳಿಸಿದೆ. ಈ ಕುರಿತು ಕರ್ನಾಟಕ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆ ಮಾಡಿದೆ. ಸಚಿವ ಸಂಪುಟ ಸಭೆಯಲ್ಲಿ ಇದಕ್ಕೆ ಅನುಮೋದನೆ ನೀಡಿದರೆ ಮುಂದಿನ ಕೆಲಸಗಳನ್ನು ಕೆಎಚ್‌ಬಿ ಕೈಗೊಳ್ಳಲಿದೆ.
20 ಸಾವಿರ ಸೈಟುಗಳ ಹಂಚಿಕೆ: ಸರ್ಕಾರದಿಂದ ಅನುಮೋದನೆ ಸಿಕ್ಕ ಕೂಡಲೇ ರೈತರಿಂದ ನೇರವಾಗಿ ಜಮೀನು ಖರೀದಿ ಮಾಡಿ, ಬಡಾವಣೆ ನಿರ್ಮಾಣ ಮಾಡಲು ಪ್ರಕ್ರಿಯೆಯನ್ನು ಕೆಎಚ್‌ಬಿ ಆರಂಭಿಸಲಿದೆ. ಬಡಾವಣೆಗೆ ಭೂಮಿ ನೀಡಿದ ರೈತರಿಗೆ ಸಹ ಸೈಟುಗಳನ್ನು ನೀಡಿ, ಜನರಿಗೆ 20 ಸಾವಿರ ನಿವೇಶನ ಹಂಚಿಕೆ ಮಾಡುವ ಗುರಿಯನ್ನು ಕೆಎಚ್‌ಬಿ ಹೊಂದಿದೆ.
ಈಗಾಗಲೇ ಕೆಎಚ್‌ಬಿ ನಗರದಲ್ಲಿ ಹೂಟಗಳ್ಳಿ, ಇಲವಾಲ ಮತ್ತು ಕೆಂಚಲಗೂಡಿನಲ್ಲಿ ಬಡಾವಣೆಗಳನ್ನು ನಿರ್ಮಾಣ ಮಾಡಿ ಮನೆಗಳನ್ನು ಸಹ ನಿರ್ಮಾಣ ಮಾಡಿ ಹಂಚಿಕೆ ಮಾಡಿದೆ. ಈಗ ಮುಡಾ ಸೈಟುಗಳ ಬೆಲೆಗಳು ಗಗನಕ್ಕೆ ಏರಿದೆ. ಆದ್ದರಿಂದ ಕೆಎಚ್‌ಬಿ ನಗರದಲ್ಲಿ ಮತ್ತೊಂದು ಬಡಾವಣೆ ನಿರ್ಮಾಣ ಮಾಡಲು ತಯಾರಿ ನಡೆಸಿದೆ.
ನಗರದ ಹೊರ ವಲಯದಲ್ಲಿ ರೈತರಿಂದ ಶೇ 50:50ರ ಅನುಪಾತದಲ್ಲಿ ಜಮೀನು ಖರೀದಿ ಮಾಡಲಾಗುತ್ತದೆ. ಒಂದೇ ಕಡೆ ಜಮೀನು ಸಿಕ್ಕಿದರೆ ದೊಡ್ಡ ಬಡಾವಣೆ, ಇಲ್ಲವಾದಲ್ಲಿ ನಾಲ್ಕು ಅಥವ 5 ಕಡೆ ಜಮೀನು ಪಡೆದು ಬಡಾವಣೆ ನಿರ್ಮಾಣ ಮಾಡುವುದು ಕೆಎಚ್‌ಬಿಯ ಆಲೋಚನೆಯಾಗಿದೆ.
2009-10ರಲ್ಲಿ ಕೆಎಚ್‌ಬಿ ನಗರದಲ್ಲಿ ನಿವೇಶನ ಆಕಾಂಕ್ಷಿಗಳಿಂದ ಸೈಟು ಬೇಡಿಕೆಯ ಸಮೀಕ್ಷೆ ನಡೆಸಿತ್ತು. ಆಗ 3 ಸಾವಿರಕ್ಕೂ ಅಧಿಕ ಅರ್ಜಿಗಳನ್ನು ಸ್ವೀಕಾರ ಮಾಡಲಾಗಿತ್ತು. ಆದರೆ ಆಗ ಮುಡಾ ಬಡಾವಣೆ ನಿರ್ಮಾಣ ಮಾಡುವ ಯೋಜನೆ ಕೈಗೊಂಡ ಕಾರಣ ಕೆಎಚ್‌ಬಿ ತನ್ನ ಆಲೋಚನೆಯನ್ನು ಕೈ ಬಿಟ್ಟಿತ್ತು.
ಮೈಸೂರಿನಲ್ಲಿ ಇತ್ತೀಚೆಗೆ ಕೆಎಚ್‌ಬಿ ಮಾನಂದವಾಡಿ ರಸ್ತೆಯ ಕೆಂಚಲಗೂಡು ಬಳಿ ಬಡಾವಣೆ ನಿರ್ಮಾಣ ಮಾಡಿ, ಸೈಟುಗಳನ್ನು ಹಂಚಿಕೆ ಮಾಡಿದೆ. ಈ ಮಾದರಿಯಲ್ಲಿ ನಗರದ ಹೊರ ವಲಯದಲ್ಲಿ ಬಡಾವಣೆ ನಿರ್ಮಾಣ ಮಾಡಿ ಸೈಟುಗಳನ್ನು ಹಂಚಿಕೆ ಮಾಡುವುದು ಕೆಎಚ್‌ಬಿಯ ಆಲೋಚನೆಯಾಗಿದೆ.
ಮೈಸೂರು ನಗರದ ಮಾತ್ರವಲ್ಲ ತಾಲೂಕು ಕೇಂದ್ರಗಳಲ್ಲಿಯೂ ಬಡಾವಣೆ ನಿರ್ಮಾಣ ಮಾಡಲು ಕೆಎಚ್‌ಬಿ ಯೋಜನೆ ರೂಪಿಸುತ್ತಿದೆ. ಈಗಾಗಲೇ ನಂಜನಗೂಡಿನಲ್ಲಿ ಬಡಾವಣೆ ನಿರ್ಮಾಣ ಮಾಡಿ ಸೈಟುಗಳನ್ನು ಹಂಚಿಕೆ ಮಾಡಿದೆ. ಇದೇ ಮಾದರಿಯಲ್ಲಿ ರೈತರಿಂದ ಶೇ 60:40ರ ಅನುಪಾತದಲ್ಲಿ ಜಮೀನು ಖರೀದಿ ಮಾಡಿ, ತಾಲೂಕು ಕೇಂದ್ರಗಳಲ್ಲಿ ಬಡಾವಣೆ ನಿರ್ಮಿಸಲಾಗುತ್ತದೆ.












Click it and Unblock the Notifications