ವಿಜಯೇಂದ್ರ ಸ್ಪರ್ಧೆ : 'ಐತಿಹಾಸಿಕ' ನಿರ್ಧಾರ ಪ್ರಕಟಿಸಿದ ಪ್ರಕಾಶ್ ಜಾವಡೇಕರ್!
ಮೈಸೂರು, ಏಪ್ರಿಲ್ 24 : 'ವರುಣಾ ಕ್ಷೇತ್ರದಿಂದ ಬಿ.ವೈ.ವಿಜಯೇಂದ್ರ ಅವರು ಸ್ಪರ್ಧೆ ಮಾಡುವುದಿಲ್ಲ' ಎಂದು ಬಿ.ಎಸ್.ಯಡಿಯೂರಪ್ಪ ಘೋಷಿಸಿದರು. ನಾಮಪತ್ರ ಸಲ್ಲಿಸಲು ಇಂದೇ ಕೊನೆಯ ದಿನವಾಗಿದ್ದು, ಅಭ್ಯರ್ಥಿ ಯಾರು? ಎಂಬುದು ಕುತೂಹಲಕ್ಕೆ ಕಾರಣವಾಗಿದೆ.
ಮಂಗಳವಾರ ಬೆಳಗ್ಗೆ ರಾಷ್ಟ್ರೀಯ ನಾಯಕರ ಜೊತೆ ಸಭೆ ನಡೆಸಿದ ಬಳಿಕ ಯಡಿಯೂರಪ್ಪ ಮತ್ತು ಕರ್ನಾಟಕ ಬಿಜೆಪಿ ಚುನಾವಣಾ ಉಸ್ತುವಾರಿ ಪ್ರಕಾಶ್ ಜಾವಡೇಕರ್ ಅವರು ಜಂಟಿಯಾಗಿ ಪತ್ರಿಕಾ ಹೇಳಿಕೆ ನೀಡಿದರು.
ಮೈಸೂರಿನ ಪ್ರೆಸಿಡೆಂಟ್ ಹೋಟೆಲ್‌ನಲ್ಲಿ ಮಂಗಳವಾರ ಬೆಳಗ್ಗೆ ಬಿ.ಎಸ್.ಯಡಿಯೂರಪ್ಪ ಜೊತೆ ಕರ್ನಾಟಕ ಬಿಜೆಪಿ ಉಸ್ತುವಾರಿ ಮುರಳೀಧರರಾವ್ ಮತ್ತು ಬಿಜೆಪಿ ಚುನಾವಣಾ ಉಸ್ತುವಾರಿ ಪ್ರಕಾಶ್ ಜಾವಡೇಕರ್ ಅವರು ಸಭೆ ನಡೆಸಿದರು.
ಸಭೆಯ ಬಳಿಕ ಜಂಟಿ ಪತ್ರಿಕಾಗೋಷ್ಠಿ ನಡೆಸಿದ ನಾಯಕರು ವಿಜಯೇಂದ್ರ ಸ್ಪರ್ಧೆ ಬಗ್ಗೆ ಹೇಳಿಕೆ ನೀಡಿದರು. 'ರಾಷ್ಟ್ರೀಯ ನಾಯಕರ ನಿರ್ಧಾರವನ್ನು ಸಮಾಧಾನದಿಂದ ಕೇಳಿ. ವರುಣಾ ಕ್ಷೇತ್ರದಿಂದ ಬಿ.ವೈ.ವಿಜಯೇಂದ್ರ ಅವರು ಸ್ಪರ್ಧೆ ಮಾಡುತ್ತಿಲ್ಲ' ಎಂದು ಯಡಿಯೂರಪ್ಪ ಘೋಷಣೆ ಮಾಡಿದರು.
ಬಳಿಕ ಮಾತನಾಡಿದ ಪ್ರಕಾಶ್ ಜಾವಡೇಕರ್ ಅವರು, 'ಸಭೆಯ ಬಳಿಕ ಐತಿಹಾಸಿಕ ನಿರ್ಣಯವನ್ನು ಕೈಗೊಂಡಿದ್ದೇವೆ. ವಿಜಯೇಂದ್ರ ಅವರು ಚುನಾವಣೆಗೆ ಸ್ಪರ್ಧೆ ಮಾಡುತ್ತಿಲ್ಲ. ಅವರನ್ನು ಪಕ್ಷದ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗುತ್ತದೆ' ಎಂದು ಘೋಷಣೆ ಮಾಡಿದರು.

ಇಂದು ನಾಮಪತ್ರ ಸಲ್ಲಿಸಲೇಬೇಕು
ವರುಣಾ ಕ್ಷೇತ್ರದಿಂದ ಬಿ.ಎಸ್.ಯಡಿಯೂರಪ್ಪ ಪುತ್ರ ಬಿ.ವೈ.ವಿಜಯೇಂದ್ರ ಸ್ಪರ್ಧೆ ಮಾಡುವುದಿಲ್ಲ. ಹಾಗಾದರೆ ಬಿಜೆಪಿ ಅಭ್ಯರ್ಥಿ ಯಾರು?
ಪಕ್ಷ ಯಾರನ್ನು ಅಭ್ಯರ್ಥಿ ಎಂದು ಘೋಷಣೆ ಮಾಡಿದರೂ ಇಂದು ಮಧ್ಯಾಹ್ನ 3 ಗಂಟೆಯೊಳಗೆ ನಾಮಪತ್ರವನ್ನು ಸಲ್ಲಿಸಲೇಬೇಕು. ನಾಮಪತ್ರ ಸಲ್ಲಿಕೆಗೆ ಇಂದೇ ಅಂತಿಮ ದಿನವಾಗಿದೆ.
ವರುಣಾ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪುತ್ರ ಡಾ.ಯತೀಂದ್ರ ಅವರು ಕಾಂಗ್ರೆಸ್ ಅಭ್ಯರ್ಥಿ. ಅವರನ್ನು ಕಟ್ಟಿಹಾಕಲು ಬಿಜೆಪಿ ಯಾರನ್ನು ಕಣಕ್ಕಿಳಿಸಲಿದೆ? ಎಂದು ಕಾದು ನೋಡಬೇಕು.

ಸೋಮವಾರ ನಾಮಪತ್ರ ಸಲ್ಲಿಸಬೇಕಿತ್ತು
ಬಿ.ವೈ.ವಿಜಯೇಂದ್ರ ಅವರು ಸೋಮವಾರ ನಾಮಪತ್ರ ಸಲ್ಲಿಸಬೇಕಿತ್ತು. ಆದರೆ, ಕೊನೆ ಕ್ಷಣದಲ್ಲಿ ಅವರಿಗೆ ಭಿ-ಫಾರಂ ನೀಡುವುದಿಲ್ಲ ಎಂಬ ಸೂಚನೆ ಹೈಕಮಾಂಡ್‌ನಿಂದ ಬಂದಿತ್ತು.
ಆದ್ದರಿಂದ, ಬಿ.ಎಸ್.ಯಡಿಯೂರಪ್ಪ ಅವರು ನಂಜನಗೂಡಿನಲ್ಲಿ ನಡೆದ ಸಮಾವೇಶದಲ್ಲಿ ವಿಜಯೇಂದ್ರ ಅವರು ಸ್ಪರ್ಧೆ ಮಾಡುವುದಿಲ್ಲ ಎಂದು ಘೋಷಣೆ ಮಾಡಿದ್ದರು.
ಸೋಮವಾರ ಮಧ್ಯಾಹ್ನ ಯಡಿಯೂರಪ್ಪ ಅವರು ಈ ಘೋಷಣೆ ಮಾಡಿದ ಬಳಿಕ ಮೈಸೂರಿನಲ್ಲಿ ಹೈಡ್ರಾಮ ನಡೆದಿತ್ತು. ವಿಜಯೇಂದ್ರ ಅವರಿಗೆ ಟಿಕೆಟ್ ನೀಡಬೇಕು ಎಂದು ಕಾರ್ಯಕರ್ತರು, ನಾಯಕರು ಒತ್ತಾಯಿಸುತ್ತಿದ್ದರು. ಬಿಜೆಪಿ ನಾಯಕರ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದರು.

ಸಭೆಯ ಬಳಿಕ ನಿರ್ದಾರ ಪ್ರಕಟ
ಬಿ.ಎಸ್.ಯಡಿಯೂರಪ್ಪ ಮೈಸೂರಿನಲ್ಲಿಯೇ ವಾಸ್ತವ್ಯ ಹೂಡಿದ್ದರು. ಪ್ರೆಸಿಡೆಂಟ್ ಹೋಟೆಲ್‌ನಲ್ಲಿ ಮಂಗಳವಾರ ಬೆಳಗ್ಗೆ ಬಿ.ಎಸ್.ಯಡಿಯೂರಪ್ಪ ಜೊತೆ ಕರ್ನಾಟಕ ಬಿಜೆಪಿ ಉಸ್ತುವಾರಿ ಮುರಳೀಧರರಾವ್ ಮತ್ತು ಬಿಜೆಪಿ ಚುನಾವಣಾ ಉಸ್ತುವಾರಿ ಪ್ರಕಾಶ್ ಜಾವಡೇಕರ್ ಅವರು ಸಭೆ ನಡೆಸಿದರು.
ಸಭೆಯ ಬಳಿಕ ವಿಜಯೇಂದ್ರ ಅವರು ಸ್ಪರ್ಧೆ ಮಾಡುವುದಿಲ್ಲ ಎಂದು ಯಡಿಯೂರಪ್ಪ ಮತ್ತು ಪ್ರಕಾಶ್ ಜಾವಡೇಕರ್ ಜಂಟಿಯಾಗಿ ಘೋಷಣೆ ಮಾಡಿದ್ದಾರೆ.
ಬಿ.ವೈ.ವಿಜಯೇಂದ್ರ ಅವರನ್ನು ಬಿಜೆಪಿ ಯುವಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಕ ಮಾಡುವುದಾಗಿ ಪ್ರಕಾಶ್ ಜಾವಡೇಕರ್ ಹೇಳಿದರು.

ರೇವಣ ಸಿದ್ದಯ್ಯ ಅಭ್ಯರ್ಥಿ?
ಭಾನುವಾರ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿರುವ ನಿವೃತ್ತ ಪೊಲೀಸ್ ಅಧಿಕಾರಿ ರೇವಣಸಿದ್ದಯ್ಯ ಅವರಯ ವರುಣಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗುವ ಸಾಧ್ಯತೆ ಇದೆ.
ಟಿ.ನರಸೀಪುರ ಮೂಲದ ತೋಟದ ಬಸಪ್ಪ ಅವರು ಅಭ್ಯರ್ಥಿಯಾಗಬಹುದು ಎಂಬ ಚರ್ಚೆ ನಡೆದಿದೆ. ಮತ್ತೊಂದು ಕಡೆ ವಿಜಯೇಂದ್ರ ಅವರಿಗೆ ಟಿಕೆಟ್ ನೀಡಬೇಕು ಎಂದು ಪ್ರತಿಭಟನೆ ಮುಂದುವರೆದಿದೆ.












Click it and Unblock the Notifications