Kabini Dam Water Level: ಕೊನೆಗೂ ಭರ್ತಿಯಾದ ಕಬಿನಿ ಜಲಾಶಯ, ಒಂದೆಡೆ ಖುಷಿ, ಮತ್ತೊಂದೆಡೆ ಆತಂಕ
ಮೈಸೂರು, ಜುಲೈ, 26: ಬೇಸಿಗೆಯಲ್ಲಿ ತಳಮುಟ್ಟಿದ್ದ ಜಿಲ್ಲೆಯ ಹೆಚ್.ಡಿ.ಕೋಟೆ ತಾಲೂಕಿನ ಕಬಿನಿ ಜಲಾಶಯ ಕೊನೆಗೂ ಭರ್ತಿಯಾಗಿದ್ದು, ಇದರಿಂದ ಒಂದೆಡೆ ರೈತರ ಮೊಗದಲ್ಲಿ ಮಂದಹಾಸ ಮೂಡಿದ್ದರೆ, ಮತ್ತೊಂದೆಡೆ ನದಿಪಾತ್ರದ ಜನರಲ್ಲಿ ಆತಂಕ ಮನೆ ಮಾಡಿದೆ.
ಕಳೆದ ವರ್ಷ ಕಬಿನಿ ಜಲಾಶಯ ಕಳೆದ ಜುಲೈ 17ರಂದು ಭರ್ತಿಯಾಗಿದ್ದು, ಜುಲೈ 20 ರಂದು ಸರ್ಕಾರದ ಪರವಾಗಿ ಮುಖ್ಯಮಂತ್ರಿಗಳಾಗಿದ್ದ ಬಸವರಾಜ ಬೊಮ್ಮಾಯಿ ಅವರು ಜಲಾಶಯಕ್ಕೆ ಪೂಜೆ ಸಲ್ಲಿಸಿ ಬಾಗಿನ ಆರ್ಪಿಸಿದ್ದರು. ಈ ವರ್ಷ ಐದು ದಿನ ತಡವಾಗಿ ಜಲಾಶಯ ಭರ್ತಿಯಾಗಿದೆ. ಹೀಗಾಗಿ ಮೈಸೂರು ಜಿಲ್ಲೆಯವರೇ ಆದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಾಗಿನ ಅರ್ಪಿಸುವ ಸಾಧ್ಯತೆಯಿದೆ.

ಕಬಿನಿ ಹಿನ್ನೀರು ವ್ಯಾಪ್ತಿ ಪ್ರದೇಶ ಸೇರಿದಂತೆ ಕೇರಳದ ವೈನಾಡು ಪ್ರದೇಶದಲ್ಲಿ ಕಳೆದ ಒಂದು ವಾರದಿಂದ ಎಡೆಬಿಡದೆ ಸುರಿದ ಮಳೆಯ ಪರಿಣಾಮ ಜಲಾಶಯಕ್ಕೆ 25 ಸಾವಿರ ಕ್ಯೂಸೆಕ್‌ಗಿಂತ ಹೆಚ್ಚು ನೀರು ಹರಿದು ಬರುತ್ತಿದೆ. ಆದ್ದರಿಂದ ಜಲಾಶಯ ಭರ್ತಿಯಾಗಿದೆ. ಹೀಗಾಗಿ ಜಲಾಶಯದ ಗರಿಷ್ಠ ಸಂಗ್ರಹ ಮಟ್ಟ ಕಾಯ್ದುಕೊಂಡು ಹೆಚ್ಚುವರಿ 20 ಸಾವಿರ ಕ್ಯೂಸೆಕ್ ನೀರನ್ನು ನದಿಗೆ ಬಿಡಲಾಗುತ್ತಿದೆ.
20 ಸಾವಿರ ಕ್ಯೂಸೆಕ್ ನೀರು ಹೊರಕ್ಕೆ
ಸದ್ಯ ಜಲಾಶಯದಲ್ಲಿ ಗರಿಷ್ಟ 2284 ಅಡಿಗಳಷ್ಟು ಇದ್ದು, 25 ಸಾವಿರ ಕ್ಯೂಸೆಕ್‌ಗೂ ಹೆಚ್ಚು ನೀರು ಹರಿದು ಬರುತ್ತಿದೆ. ಆದ್ದರಿಂದ ಜಲಾಶಯದ ಸಂಗ್ರಹ ಮಟ್ಟವನ್ನು 2282 ಅಡಿಗಳಿಗೆ ಕಾಯ್ದುಕೊಂಡು 20 ಸಾವಿರ ಕ್ಯೂಸೆಕ್ ನೀರನ್ನು ನದಿಗೆ ಹರಿಸಲಾಗುತ್ತಿದೆ. ಆದರೆ ಈಗಲೂ ಕೇರಳದ ವೈನಾಡು ಹಾಗೂ ಜಲಾಶಯದ ಹಿನ್ನೀರಿನಲ್ಲಿ ಮಳೆಯ ಅಬ್ಬರ ಇನ್ನಷ್ಟು ಹೆಚ್ಚಳವಾಗಿ ಒಳ ಹರಿವು ಹೆಚ್ಚಾದರೆ, ಹೊರ ಹರಿವಿನ ಪ್ರಮಾಣವೂ ಹೆಚ್ಚಾಗುವ ಸಾಧ್ಯತೆಯಿದೆ. ಹೀಗಾಗಿ ನದಿಪಾತ್ರದ ಜನರು ಆತಂಕಗೊಂಡಿದ್ದಾರೆ.
ಇನ್ನು ಕಬಿನಿ ಜಲಾಶಯ ಭರ್ತಿಯಾಗಿ ಜಲಾಶಯದ ನಾಲ್ಕು ಕ್ರಸ್ಟ್ ಗೇಟ್‌ಗಳ ಮೂಲಕ 20 ಸಾವಿರ ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತದೆ. ಇದರಿಂದ ಜಲಾಶಯದ ಮುಂಭಾಗದ ಸೇತುವೆ ಸಂಪೂರ್ಣ ಮುಳುಗಡೆಯಾಗಿದೆ. ಅಲ್ಲದೆ ಈ ಭಾಗದ ಬೀದಹಳ್ಳಿ, ಎನ್.ಬೇಗೂರು ಪಂಚಾಯಿತಿಯ ಗ್ರಾಮಗಳು ಸೇರಿದಂತೆ 20ಕ್ಕೂ ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ. ಇನ್ನು ಜಲಾಶಯದ ಮೇಲೆ ಲಘು ವಾಹನಗಳಿಗೆ ಮಾತ್ರ ಸಂಚಾರಕ್ಕೆ ಅವಕಾಶ ನೀಡಲಾಗಿದೆ.
ಡೆಡ್ ಸ್ಟೋರೆಜ್ ತಲುಪಿದ್ದ ಜಲಾಶಯ
ಇನ್ನು ಜಲಾಶಯ ಭರ್ತಿಯಾಗಿರುವುದರಿಂದ ಹೆಚ್ಚಿನ ನೀರು ನದಿಗೆ ಹರಿಸುವುದರಿಂದ ಅಚ್ಚುಕಟ್ಟು ಭಾಗದ ಪ್ರವಾಹ ಪೀಡಿತ ಗ್ರಾಮಗಳ ಜನರಿಗೆ ಸುರಕ್ಷಿತ ಸ್ಥಳಕ್ಕೆ ತೆರಳಲು ಸೂಚಿಸಲಾಗಿದೆ. ಜೊತೆಗೆ ಜಲಾಶಯಕ್ಕೆ ಹೆಚ್ಚಿನ ಪೊಲೀಸರ ಭದ್ರತೆ ಒದಗಿಸಲಾಗಿದೆ. ಅಲ್ಲದೆ ಹಲವು ಅಧಿಕಾರಿಗಳು ಕೂಡ ಜಲಾಶಯದ ಹತ್ತಿರವೇ ಮೊಕಂ ಹೂಡುವ ಮೂಲಕ ಮುಂಜಾಗ್ರತಾ ಕ್ರಮ ವಹಿಸಲಾಗಿದೆ.
ಕೆಲವು ದಿನಗಳ ಹಿಂದೆಯಷ್ಟೆ ಪೂರ್ವ ಮುಂಗಾರು ಕೈಕೊಟ್ಟಿದ್ದಲ್ಲದೆ, ಮುಂಗಾರು ಮಳೆ ವಿಳಂಬವಾಗಿದ್ದರಿಂದ ಕಬಿನಿ ಜಲಾಶಯದ ನೀರಿನ ಸಂಗ್ರಹ ಮಟ್ಟ ಭಾರಿ ಕುಸಿತ ಕಂಡು ಡೆಡ್ ಸ್ಟೋರೆಜ್ ತಲುಪಿತ್ತು. ಇದರಿಂದ ಅಚ್ಚುಕಟ್ಟು ರೈತರ ನೀರಾವರಿ ಬೆಳೆಗಳಿಗೆ ಸಂಕಷ್ಟ ಎದುರಾಗಿದ್ದಲ್ಲದೆ, ಕುಡಿಯುವ ನೀರಿಗೂ ಹಾಹಾಕಾರ ಉಂಟಾಗುವ ಭಯ ಶುರುವಾಗಿತ್ತು.
ಒಂದೆಡೆ ಖುಷಿ, ಮತ್ತೊಂದೆಡೆ ಆತಂಕ
ಇದೆಲ್ಲದರ ನಡುವೆ ಕಳೆದೊಂದು ವಾರದಿಂದ ಕೇರಳದ ವೈನಾಡು ಸೇರಿದಂತೆ ಜಲಾಶಯದ ಹಿನ್ನೀರು ಪ್ರದೇಶದಲ್ಲಿ ಎಡಬಿಡದೆ ಮಳೆ ಸುರಿದ ಪರಿಣಾಮ ಜಲಾಶಯದ ಒಳ ಹರಿವಿನ ಪ್ರಮಾಣ ಗಣನೀಯವಾಗಿ ಏರಿಕೆ ಕಂಡಿದೆ. ಇದರಿಂದಾಗಿ ಮುಂದಿನ ದಿನಗಳಲ್ಲಿ ಅಚ್ಚುಕಟ್ಟು ಪ್ರದೇಶದ ರೈತರ ಬೆಳೆಗಳಿಗೆ ನೀರು ಹರಿದು ಬರಲಿರುವುದರಿಂದ ರೈತರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.
ಒಟ್ಟಾರೆಯಾಗಿ ಹೇಳಬೇಕೆಂದರೆ ಡೆಡ್ ಸ್ಟೋರೆಜ್ ತಲುಪಿದ್ದ ಜಲಾಶಯ ಕೆಲವೇ ದಿನಗಳಲ್ಲಿ ಭರ್ತಿಯಾಗಿರುವುದು ಖುಷಿಯ ವಿಚಾರವಾಗಿದೆ. ಜೊತೆಗೆ ನದಿಪಾತ್ರದ ಜನರಲ್ಲಿ ಪ್ರವಾಹದ ಭಯವೂ ಶುರುವಾಗಿದೆ.












Click it and Unblock the Notifications