NR Constituency Mysore: ತನ್ವೀರ್ ಸೇಠ್ ಆಪ್ತನಿಗೆ ಜೆಡಿಎಸ್ ಟಿಕೆಟ್ ಘೋಷಣೆ, ಗೂಡಿಗೆ ಮರಳಿದ ಅಬ್ದುಲ್ ಖಾದರ್ ಶಾಹಿದ್
ಮೈಸೂರು, ಏಪ್ರಿಲ್, 20: ಜೆಡಿಎಸ್ (ಬುಧವಾರ 19) ಮೂರನೇ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಇದರಲ್ಲಿ ಮೈಸೂರು ನಗರದ ಎನ್.ಆರ್. ವಿಧಾನಸಭಾ ಕ್ಷೇತ್ರದಿಂದ ಅಬ್ದುಲ್ ಖಾದರ್ ಶಾಹಿದ್ ಅವರನ್ನು ಕಣಕ್ಕಿಳಿಸಿದೆ.
ಒಂದು ಕಾಲದಲ್ಲಿ ಶಾಸಕ, ಕಾಂಗ್ರೆಸ್ ಅಭ್ಯರ್ಥಿ ತನ್ವೀರ್ ಸೇಠ್ ಅವರ ಪರಮ ಆಪ್ತನಾಗಿದ್ದ ಅಬ್ದುಲ್ ಖಾದರ್ ಶಾಹಿದ್ ಇದೀಗ ಎದುರಾಳಿ ಆಗಿದ್ದು, ಅವರು ಜೆಡಿಎಸ್ ಪಕ್ಷದಿಂದ ಸ್ಪರ್ಧೆ ಕಣಕ್ಕಿಳಿದಿದ್ದಾರೆ. ಕಳೆದ ವರ್ಷ ನಡೆದ ಮೇಯರ್ ಚುನಾವಣೆಯಲ್ಲಿ ಶಾಸಕ ತನ್ನೀರ್ ಸೇಠ್ ಅವರನ್ನು ಕಡೆಗಣಿಸಲಾಗುತ್ತಿದೆ ಎಂದು ಅಸಮಾಧಾನದಿಂದ ಕಾಂಗ್ರೆಸ್ ಮುಖಂಡರ ವಿರುದ್ಧ ಶಾಹಿದ್ ಕಿಡಿನುಡಿಗಳನ್ನಾಡಿದ್ದರು.

ಈ ಹಿನ್ನೆಲೆಯಲ್ಲಿ ಶಾಹಿದ್ ಅವರನ್ನು ಕಾಂಗ್ರೆಸ್ ಪಕ್ಷದಿಂದ ಉಚ್ಚಾಟನೆ ಮಾಡಲಾಗಿತ್ತು. ಇದರಿಂದ ಬೇಸರಗೊಂಡಿದ್ದ ಅವರು ಸಿ.ಎಂ.ಇಬ್ರಾಹಿಂ ಅವರ ನೇತೃತ್ವದಲ್ಲಿ ಜೆಡಿಎಸ್ ಸೇರ್ಪಡೆಯಾದರು. ಜೆಡಿಎಸ್ ವರಿಷ್ಠರಿಂದ ಬಿ ಫಾರಂ ಪಡೆದಿರುವ ಅಬ್ದುಲ್ ಖಾದರ್ ಶಾಹಿದ್, ನಗರದ ಕೃಷ್ಣವಿಲಾಸ್ ರಸ್ತೆಯಲ್ಲಿರುವ ಹಜರತ್ ಇಮಾಮ್ ಶಾ ವಲಿ ದರ್ಗಾಗೆ ಭೇಟಿ ನೀಡಿ, ಧಾರ್ಮಿಕ ಮುಖಂಡರಿಂದ ಆಶೀರ್ವಾದ ಪಡೆದರು. ಅಲ್ಲದೇ ಬಿ.ಫಾರಂ ಇಟ್ಟು ಪ್ರಾರ್ಥನೆಯನ್ನೂ ಸಲ್ಲಿಸಿದರು.
ನಂತರ ಮಾತನಾಡಿದ ಶಾಹಿದ್, ನಾನು ಮೊದಲು ಜೆಡಿಎಸ್‌ನಲ್ಲಿದ್ದೆ. ನಂತರ ಕಾಂಗ್ರೆಸ್‌ಗೆ ಹೋಗಿದ್ದೆ. ಈಗ ಮತ್ತೆ ಜೆಡಿಎಸ್‌ಗೆ ಮರಳಿದ್ದೇನೆ. ಪಕ್ಷದ ವರಿಷ್ಠರು ನನ್ನ ಮೇಲೆ ನಂಬಿಕೆ ಇಟ್ಟು ಟಿಕೆಟ್ ನೀಡಿರುವುದರಿಂದ ತುಂಬ ಖುಷಿ ಆಗಿದೆ. ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ, ಜಿ.ಟಿ.ದೇವೇಗೌಡ ಶಾಸಕ ಪಕ್ಷದ ಹಾಗೂ ಮುಖಂಡರಿಂದ ಟಿಕೆಟ್ ಸಿಕ್ಕಿದೆ. ಅವರು ನನ್ನ ಮೇಲೆ ಇಟ್ಟಿರುವ ನಂಬಿಕೆಯನ್ನು ಗೆಲುವಿನ ಮುಖಾಂತರ ಉಳಿಸಿಕೊಳ್ಳುತ್ತೇನೆ ಎಂದು ವಿಶ್ವಾಸವಿದೆ ಎಂದರು.
ನಾಮಪತ್ರ ಸಲ್ಲಿಕೆ
ಏಪ್ರಿಲ್ 20ದು ಪಕ್ಷದ ಮುಖಂಡರು ಹಾಗೂ ಪಕ್ಷದ ಕಾರ್ಯಕರ್ತರೊಡನೆ ಪಾದಯಾತ್ರೆ ಮೂಲಕ ನಾಮಪತ್ರ ಸಲ್ಲಿಸುತ್ತೇನೆ ಅಂತಳು ಅಬ್ದುಲ್ ಖಾದರ್ ಶಾಹಿದ್ ತಿಳಿಸಿದ್ದರು.
ತಾತನ ಪ್ರಚಾರ ಅಖಾಡಕ್ಕೆ ಮರಿ ಟಗರು ಎಂಟ್ರಿ
ರಾಜ್ಯದ ಹೈವೋಲ್ಟೇಜ್ ಕ್ಷೇತ್ರವಾಗಿ ವರುಣ ಮಾರ್ಪಟ್ಟಿದೆ. ದಿನದಿಂದ ದಿನಕ್ಕೆ ಚುನಾವಣಾ ರಂಗು ಕಾವೇರುತ್ತಿದೆ. ಇತ್ತ ಸಮಾವೇಶದಲ್ಲಿ ಸಿದ್ದರಾಮಯ್ಯ ನಾಮಪತ್ರ ಸಲ್ಲಿಕೆ ಮುನ್ನ ಭವಿಷ್ಯದ ನಾಯಕ ಧವನ್ ರಾಕೇಶ್ ಎಂದು ಘೋಷಿಸಿ ಗಮನ ಸೆಳೆದಿದ್ದಾರೆ. ಆ ಮೂಲಕ ಧವನ್ ಮುಂದಿನ ಉತ್ತರಾಧಿಕಾರಿ ಎಂಬ ಸಂದೇಶ ಸಾರಿದ್ದಾರೆ.
ನಂಜನಗೂಡಿನ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ಅವರು, ವರುಣ ಕ್ಷೇತ್ರದ ಭವಿಷ್ಯದ ನಾಯಕ ಎಂದರೆ ಅದು ನನ್ನ ಮೊಮ್ಮಗ ಧವನ್ ರಾಕೇಶ್. ಈ ಬಾರಿಯ ಚುನಾವಣೆ ನನ್ನ ಕೊನೆಯ ಚುನಾವಣೆ. ಹಾಗಾಗಿ ಮುಂದಿನ ದಿನಗಳಲ್ಲಿ ಡಾ.ಯತೀಂದ್ರ ರಾಜಕೀಯ ಮುಂದುವರಿಸಿಕೊಂಡು ಹೋಗುತ್ತಾನೆ. ನಂತರ ಮೊಮ್ಮಗ ಧವನ್ ರಾಜಕೀಯಕ್ಕೆ ಬರುತ್ತಾರೆ. ಅವನಿಗೀಗ 17 ವರ್ಷ, ವಿದ್ಯಾಭ್ಯಾಸ ಮಾಡುತ್ತಿದ್ದಾನೆ. ಮುಂದಿನ ದಿನಗಳಲ್ಲಿ ನಿಮ್ಮ ಸೇವೆಗೆ ಬರುತ್ತಾನೆ. ಅದನ್ನು ಜನ ಸ್ವೀಕರಿಸಬೇಕು ಎಂದು ಹೇಳಿದರು.
ಮಗ ರಾಕೇಶ್ ಅಕಾಲಿಕ ಮರಣಕ್ಕೆ ತುತ್ತಾದನು. ಅವನು ಚಾಮುಂಡೇಶ್ವರಿ ಹಾಗೂ ವರುಣ ಕ್ಷೇತ್ರ ಎರಡನ್ನೂ ಉಸ್ತುವಾರಿ ನೋಡಿಕೊಳ್ಳುತ್ತಿದ್ದ. ಜನ ಈಗಲೂ ರಾಕೇಶ್ ಮೇಲೆ ಪ್ರೀತಿ, ಅಭಿಮಾನ ಇಟ್ಡಿದ್ದಾರೆ. ಅಲ್ಲದೆ, ಅವನ ಮಗ ಧವನ‌್ ರಾಕೇಶ್ ಕಂಡರೂ ಅಪಾರ ಪ್ರೀತಿ ತೋರುತ್ತಾರೆ. ಹಾಗಾಗಿ ಮುಂದೆ ಭವಿಷ್ಯದ ನಾಯಕನಾಗಿ ಇರುತ್ತಾನೆ ಎಂದು ಘೋಷಿಸಿದರು.
ಇದು ನನ್ನ ಕೊನೆ ಚುನಾವಣೆ
ನಿಮ್ಮ ಉತ್ಸಾಹ ನೋಡಿದರೆ ಏನು ಮಾತನಾಡಬೇಕು ಎಂದು ಗೊತ್ತಾಗುತ್ತಿಲ್ಲ. ಇದು ನನ್ನ ಕೊನೆಯ ಚುನಾವಣೆ. ಮುಂದೆ ಡಾ ಯತೀಂದ್ರ ಇದ್ದಾನೆ, ಧವನ್ ಇದ್ದಾನೆ. ನಿಮ್ಮೆಲ್ಲರ ಆಶೀರ್ವಾದ ಬಯಸಿ ಸ್ಪರ್ಧೆ ಮಾಡುತ್ತಿದ್ದೇನೆ. ಬಿಜೆಪಿಯವರು ವರುಣ ಕ್ಷೇತ್ರದಲ್ಲಿ ಹುಟ್ಟಿ ಬೆಳೆದವರಿಗೆ ಅವಕಾಶ ನೀಡಿಲ್ಲ. ಬೆಂಗಳೂರಿನಿಂದ ಸೋಮಣ್ಣ ಅವರನ್ನು ಕರೆತಂದು ನಿಲ್ಲಿಸಿದ್ದಾರೆ. ಬಿಜೆಪಿ- ಜೆಡಿಎಸ್‌ನವರು ಒಳ ಒಪ್ಪಂದ ಮಾಡಿಕೊಂಡಿದ್ದಾರೆ. ಆದ್ದರಿಂದಲೇ ಜೆಡಿಎಸ್‌ನವರು ಡಾ ಭಾರತಿ ಶಂಕರ್ ಅವರನ್ನು ಕರೆತಂದು ನಿಲ್ಲಿಸಿದ್ದಾರೆ. ಬಿಜೆಪಿ, ಜೆಡಿಎಸ್ ಅಭ್ಯರ್ಥಿ ಸೋಲಿಸಿ ದೊಡ್ಡ ಅಂತರದಲ್ಲಿ ನೀವು ಗೆಲ್ಲಿಸುತ್ತೀರಿ ಎನ್ನುವ ವಿಶ್ವಾಸ ಇದೆ ಎಂದರು.












Click it and Unblock the Notifications