Siddaramiah: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತ ಎಸ್‌ಪಿಗೆ ದೂರು
ಮುಡಾ ಅಕ್ರಮ ನಿವೇಶನ ಹಂಚಿಕೆ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಒಂದಾದ ಮೇಲೆ ಒಂದು ಆಘಾತ ಎದುರಾಗುತ್ತಿದೆ. ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದ ಕ್ರಮವನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದ ಬಳಿಕ, ಜನ ಪ್ರತಿನಿಧಿಗಳ ವಿಶೇಷ ನ್ಯಾಯಾಲಯ ತನಿಖೆಗೆ ಆದೇಶ ಕೊಟ್ಟಿದೆ. ಮೈಸೂರು ಲೋಕಾಯುಕ್ತಕ್ಕೆ ಸೂಚನೆ ಕೊಟ್ಟಿದ್ದು, ಮೂರು ತಿಂಗಳಲ್ಲಿ ತನಿಖಾ ವರದಿ ಸಲ್ಲಿಸಲು ಸೂಚಿಸಿದೆ. ಈಗ ಸಿದ್ದರಾಮಯ್ಯ ವಿರುದ್ಧ ಮೈಸೂರು ಲೋಕಾಯುಕ್ತರಿಗೆ ಮತ್ತೊಂದು ದೂರು ನೀಡಲಾಗಿದೆ.
ಜೆಡಿಎಸ್ ಮುಖಂಡ ಎಸ್.ಪಿ.ಪ್ರದೀಪ್‌ಕುಮಾರ್ ನೇತೃತ್ವದಲ್ಲಿ ಜೆಡಿಎಸ್ ನಿಯೋಗ ಇಂದು ಲೋಕಾಯುಕ್ತ ಎಸ್‌ಪಿ ಅವರಿಗೆ ದೂರು ನೀಡಿದೆ. ಬಳಿಕ ಮಾತನಾಡಿದ ಪ್ರದೀಪ್ ಕುಮಾರ್, ಎರಡು ತಿಂಗಳ ಹಿಂದೆಯೇ ಮುಡಾ ಹಗರಣ ಸಂಬಂಧ ದೂರು ನೀಡಲಾಗಿದ್ದರೂ ಪ್ರಕರಣ ದಾಖಲಿಸಿಕೊಳ್ಳದೇ ಲೋಕಾಯುಕ್ತ ಪೊಲೀಸರು ನಿರ್ಲಕ್ಷ್ಯವಹಿಸಿದ್ದಾರೆ, ಸಿಎಂ ಅವರ ಆದೇಶದಂತೆ ಲೋಕಾಯುಕ್ತ ಪೊಲಿಸರು ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಈಗ ನೀಡಿರುವ ದೂರನ್ನು ಆಧರಿಸಿ ಎಫ್‌ಐಆರ್ ದಾಖಲಿಸಬೇಕು, ಹಿಂಬರಹ ನೀಡಬೇಕು, ಇಲ್ಲದೇ ಇದ್ದರೆ ಲೋಕಾಯುಕ್ತ ಕಚೇರಿ ಎದುರು ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಇನ್ನೂ ತಲುಪದ ಆದೇಶ ಪ್ರತಿ
ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಕರಕಣ ದಾಖಲಿಸುವಂತೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಆದೇಶ ಕೊಟ್ಟಿದ್ದರೂ, ಇನ್ನು ಆದೇಶ ಪ್ರತಿ ತಲುಪದ ಕಾರಣ ಮೈಸೂರು ಲೋಕಾಯುಕ್ತ ಪೊಲೀಸರು ಯಾವುದೇ ಕ್ರಮವನ್ನು ತೆಗೆದುಕೊಂಡಿಲ್ಲ. ಆದೇಶ ಪ್ರತಿ ಸಿಕ್ಕ ಬಳಿಕ ಲೋಕಾಯುಕ್ತ ಪೊಲೀಸರು ಮುಂದಿನ ಕ್ರಮ ತೆಗೆದುಕೊಳ್ಳಲಿದ್ದಾರೆ.
ಮುಖ್ಯಮಂತ್ರಿ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ನೀಡಿದ್ದ ಅನುಮತಿಯನ್ನು ಹೈಕೋರ್ಟ್ ಎತ್ತಿ ಹಿಡಿದ ನಂತರ ಬುಧವಾರ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುವಂತೆ ಆದೇಶ ನೀಡಿದ್ದು ಡಿಸೆಂಬರ್ 24ರೊಳಗೆ ವರದಿ ಸಲ್ಲಿಸುವಂತೆ ಸೂಚನೆ ಕೊಟ್ಟಿದೆ.
ತಮ್ಮ ವಿರುದ್ಧ ಆದೇಶದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಿದ್ದರಾಮಯ್ಯ, ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡುವ ಪ್ರಶ್ನೆಯೇ ಇಲ್ಲ, ತನಿಖೆಯನ್ನು ಎದುರಿಸಲು ನಾನು ಸಿದ್ದವಾಗಿದ್ದೇನೆ ಎಂದು ಹೇಳಿದ್ದಾರೆ. ಕಾಂಗ್ರೆಸ್ ಸಚಿವರು, ಶಾಸಕರು ಕೂಡ ಸಿದ್ದರಾಮಯ್ಯ ಪರ ನಿಂತಿದ್ದು, ರಾಜೀನಾಮೆ ಕೊಡಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಹೈಕಮಾಂಡ್ ಕೂಡ ಸಿದ್ದರಾಮಯ್ಯ ಪರವಾಗಿದ್ದು, ಸದ್ಯಕ್ಕೆ ಸಿಎಂ ಖುರ್ಚಿ ಭದ್ರವಾಗಿದೆ. ಆದರೆ ವಿಪಕ್ಷಗಳು ಮಾತ್ರ ಸಿದ್ದರಾಮಯ್ಯ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡಲೇಬೇಕೆಂದು ಆಗ್ರಹಿಸುತ್ತಿವೆ.












Click it and Unblock the Notifications