ನೋ ಕಾಮೆಂಟ್ಸ್ ಎಂಬ ಹೊಸ ರೂಢಿ ಮಾಡಿಕೊಂಡರಪ್ಪೋ ವಿಶ್ವನಾಥ್
ಮೈಸೂರು, ಜುಲೈ 7: ಜೆಡಿಎಸ್ ಸೇರಿದ ಬಳಿಕ ಮಾಜಿ ಸಚಿವ ಎಚ್.ವಿಶ್ವನಾಥ್ ಇದೇ ಮೊದಲ ಬಾರಿಗೆ ಮೈಸೂರಿನ ಜೆಡಿಎಸ್ ಕಚೇರಿಗೆ ಬಂದು, ಸನ್ಮಾನ ಸ್ವೀಕರಿಸಿದರು. ಜೆಡಿಎಸ್ ನಗರಾಧ್ಯಕ್ಷ ಹರೀಶ್ ಗೌಡ ಹಾರ ಹಾಕಿ, ಹೂಗುಚ್ಛ ನೀಡುವ ಮೂಲಕ ಬರಮಾಡಿಕೊಂಡರು.
32ನೇ ವಾರ್ಡ್ ಉಪಚುನಾವಣೆಯಲ್ಲಿ ವಿಜೇತರಾದ ಎಸ್.ಬಿ.ಎಂ.ಮಂಜು ಅವರನ್ನು ಇದೇ ವೇಳೆ ಸನ್ಮಾನಿಸಲಾಯಿತು. ವಿಶ್ವನಾಥ್ ಮಾತನಾಡಿ, ಮೊದಲ ಬಾರಿಗೆ ಜೆಡಿಎಸ್ ಕಚೇರಿಗೆ ಬಂದಿದ್ದೇನೆ. ಎಲ್ಲರೂ ಇಲ್ಲಿ ಪ್ರೀತಿಯಿಂದ ಬರಮಾಡಿಕೊಂಡಿದ್ದಾರೆ. ಪಕ್ಷದ ಬಲವರ್ಧನೆಗೆ ಶ್ರಮಿಸಲಾಗುವುದು ಎಂದರು.

ಜೆಡಿಎಸ್ ಮುಖಂಡ ಎಚ್.ಡಿ.ರೇವಣ್ಣ ಪುತ್ರ ಪ್ರಜ್ವಲ್ ನೀಡಿದ ಹೇಳಿಕೆಗೆ ಉತ್ತರಿಸಲು ವಿಶ್ವನಾಥ್ ನಿರಾಕರಿಸಿದರು. ನಾನು ಯಾವುದೇ ಪ್ರತಿಕ್ರಿಯೆ ನೀಡಲು ಇಚ್ಛಿಸುವುದಿಲ್ಲ. ನನ್ನ ಸೇರ್ಪಡೆಯಿಂದ ಜೆಡಿಎಸ್ ನಲ್ಲಿ ಗೊಂದಲ ಸೃಷ್ಠಿಯಾಗಿದೆ ಅನ್ನೋದು ಕಥೆ ಎಂದ ಅವರು, ಜೆಡಿಎಸ್ ನ ಹಿಂದಿನ ಘಟನೆಗಳು, ಗುರುವಾರ ಹುಣಸೂರಿನಲ್ಲಿ ನಡೆದ ಘಟನೆಗಳ ಬಗ್ಗೆ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಹೇಳಿದರು.
ಅವುಗಳ ಬಗ್ಗೆ ಪಕ್ಷದಲ್ಲಿನ ದೊಡ್ಡವರು ಮಾತನಾಡುತ್ತಾರೆ. ನಾನು ಯಾವುದರ ಬಗ್ಗೆಯೂ ಮಾತನಾಡುವುದಿಲ್ಲ. ಮೈಸೂರು ಮಹಾನಗರ ಪಾಲಿಕೆ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಹೀನಾಯ ಸೋಲಿಗೆ ನಾಯಕರ ನಡವಳಿಕೆ ಕಾರಣ. ಆ ಪಕ್ಷದ ನಾಯಕರ ವರ್ತನೆಗೆ ಉಪ ಚುನಾವಣೆ ಸೋಲು ತಕ್ಕ ಪಾಠ ಕಲಿಸಿದೆ ಎಂದು ಪರೋಕ್ಷವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದರು.
ಮೇಯರ್ ಎಂ.ಜೆ.ರವಿಕುಮಾರ್ ಸೇರಿದಂತೆ ಜೆಡಿಎಸ್ ಪ್ರಮುಖರು ಉಪಸ್ಥಿತರಿದ್ದರು.

ಮುಹೂರ್ತ ನೋಡಿ ಪ್ರವೇಶ?
ವಿಶ್ವನಾಥ್ ಈಗ ಶಾಸ್ತ್ರಕ್ಕೆ ಮಣೆ ಹಾಕಿದ್ದಾರೆ. ಜೆಡಿಎಸ್ ಸೇರ್ಪಡೆಗೊಂಡ ಮೇಲೆ ಶುಕ್ರವಾರ ಜೆಡಿಎಸ್ ಕಚೇರಿಗೆ ಮೊದಲ ಭಾರಿಗೆ ಭೇಟಿ ನೀಡಿದರು. ಆದರೆ ಅವರು ಕಾರ್ಯಕ್ರಮಕ್ಕೆ ಬರುವ ಮುನ್ನ ರಾಹುಕಾಲ ನೋಡಿದರು ಎಂಬ ಮಾತು ಹರಿದಾಡುತ್ತಿದೆ. 10 ಗಂಟೆಗೆ ಬರಬೇಕಾದವರು 12 ಗಂಟೆಯಾದರೂ ಬಂದಿರಲಿಲ್ಲ.
ನೋ ಕಾಮೆಂಟ್ ಎಂದ ವಿಶ್ವನಾಥ್
ಕಾಂಗ್ರೆಸ್ ನಲ್ಲಿದ್ದಾಗ ಯಾವುದೇ ವಿಚಾರಕ್ಕೂ ಎಚ್. ವಿಶ್ವನಾಥ್ ಪತ್ರಿಕಾಗೋಷ್ಠಿ ನಡೆಸಿ, ಪತ್ರಕರ್ತರ ಪ್ರಶ್ನೆಗಳಿಗೆ ಸಮಾಧಾನದಿಂದಲೇ ಗಂಟೆಗಟ್ಟಲೆ ಉತ್ತರ ನೀಡುತ್ತಿದ್ದರು. ಆದರೆ ಜೆಡಿಎಸ್ ಸೇರ್ಪಡೆಗೊಂಡ ನಂತರ ಮೊದಲ ಬಾರಿಗೆ ಪತ್ರಕರ್ತರ ಪ್ರಶ್ನೆಗೆ 'ಐ ಆಮ್ ಸಾರಿ ನೋ ಕಾಮೆಂಟ್' ಎಂಬ ಉತ್ತರ ನೀಡಿದರು.
ಜೆಡಿಎಸ್ ನಲ್ಲಿ ವರಿಷ್ಠರ ಮಾತೇ ಅಂತಿಮ ಎಂಬ ಸಂಸ್ಕೃತಿಗೆ ಹೊಂದಿಕೊಳ್ಳುತ್ತಿದ್ದಾರೆ ವಿಶ್ವನಾಥ್ ಎಂಬ ಮಾತು ಜೆಡಿಎಸ್ ಕಚೇರಿಯಲ್ಲಿ ಚರ್ಚೆಗೆ ಗ್ರಾಸವಾಯಿತು.












Click it and Unblock the Notifications