ಉಪಚುನಾವಣೆ: ಗೀತಾ ಮಹದೇವಪ್ರಸಾದ್ ಕಣ್ಣೀರು!
ಬಿಜೆಪಿಯ ಕೆಲ ನಾಯಕರು ತಮ್ಮ ಮೇಲೆ ಅವಹೇಳನಕಾರಿ ಮಾತುಗಳನ್ನಾಡಿದ್ದರ ಕುರಿತು ಗೀತಾ ಮಹದೇವಪ್ರಸಾದ್ ಕಣ್ಣೀರಿಟ್ಟು ಬೇಸರ ವ್ಯಕ್ತಪಡಿಸಿದ್ದಾರೆ.
ಮೈಸೂರು, ಮಾರ್ಚ್ 28 : ನಾನು ಬಹಳ ಸೂಕ್ಷ್ಮ ಸ್ವಭಾವದವಳು. ಬಿಜೆಪಿ ಮುಖಂಡರ ಹೇಳಿಕೆಯಿಂದ ನನಗೆ ತುಂಬಾ ನೋವಾಗಿದೆ ಎಂದು ಗುಂಡ್ಲುಪೇಟೆ ಉಪಚುನಾವಣೆ ಕಾಂಗ್ರೆಸ್ ಅಭ್ಯರ್ಥಿ ಗೀತಾ ಮಹದೇವಪ್ರಸಾದ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗೀತಾ ಮಹದೇವ್ ಪ್ರಸಾದ್, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪನವರು ನನ್ನ ತಲೆ ಮೇಲೆ ಕೈ ಇಟ್ಟು ನಿನ್ನನ್ನು ಅವಿರೋಧ ಆಯ್ಕೆ ಮಾಡುತ್ತೇನೆ ಎಂದಿದ್ದರು. ಆದ್ರೆ ಇದೀಗ ಅವರ ಪಕ್ಷದ ಕೆಲವರು ಅವಹೇಳನಕಾರಿ ಹೇಳಿಕೆ ನೀಡಿ ಮನಸ್ಸಿಗೆ ನೋವುಂಟು ಮಾಡುತ್ತಿದ್ದಾರೆ. ಇದು ರಾಷ್ಟ್ರೀಯ ಪಕ್ಷವೊಂದರ ಸಂಸದರು ಮಹಿಳೆಯರಿಗೆ ನೀಡುವ ಗೌರವ ಇದೇನಾ ಎಂದು ಪ್ರಶ್ನಿಸಿದರು.[ಉಪಚುನಾವಣೆ: ತಪಾಸಣೆಗೆ ಜಿಲ್ಲಾಧಿಕಾರಿ ವಾಹನವೂ ಹೊರತಾಗಿಲ್ಲ]

ನಾನು ಸುತ್ತೂರು ಸ್ವಾಮಿಜಿಗಳ ಆಶೀರ್ವಾದ ಪಡೆದುಕೊಂಡು ಚುನಾವಣೆಗೆ ಬಂದಿದ್ದೇನೆ. ಸುಸಂಸ್ಕೃತ ಮನೆತನದಿಂದ ಬಂದ ನಾನು ಅವರ ರೀತಿ ಕೆಟ್ಟ ಮಟ್ಟಕ್ಕಿಳಿದಿಲ್ಲ. ನನ್ನ ಗ್ರಾಮ ಬಿಟ್ಟು ನಾನು ಗುಂಡ್ಲುಪೇಟೆ ಪಟ್ಟಣ ಸಹ ನೋಡಿರಲಿಲ್ಲ. ಬಹುಶಃ ಇಂತಹ ಕೆಟ್ಟ ರಾಜಕಾರಣ ಇದೆ ಎಂಬ ಕಾರಣಕ್ಕೇ ನನ್ನ ಪತಿ ನನ್ನನ್ನು ಇಲ್ಲಿಗೆ ಕರೆತರುತ್ತಿರಲಿಲ್ಲ ಅನ್ನಿಸುತ್ತೆ ಎಂದು ಕಣ್ಣೀರಿಟ್ಟರು. ನಾನು ಯಾವತ್ತೂ ನಾನಾಗಿಯೇ ಚುನಾವಣೆಗೆ ನಿಲ್ಲುತ್ತೇನೆ ಎಂದು ಬಂದಿರಲಿಲ್ಲ. ಮನುಷ್ಯನಿಗೆ ಮಾನಸಿಕ ನೆಮ್ಮದಿ ಇರಬೇಕು. ಆದ್ರೆ ಇಲ್ಲಿ ನನ್ನ ನೆಮ್ಮದಿಯನ್ನು ಕಸಿದಿಕೊಳ್ಳುತ್ತಿದ್ದಾರೆ ಎಂದು ತಮ್ಮ ನೋವನ್ನು ಮಾಧ್ಯಮದೆದುರು ಹೊರಹಾಕಿದರು.
ಯಡಿಯೂರಪ್ಪ ಹಾಗೂ ಶೋಭಾ ಅವರೇ ಬಂದು ನೀನೇ ಚುನಅವಣೆಗೆ ನಿಲ್ಲಬೇಕು ಎಂದಿದ್ದರು. ಯಡಿಯೂರಪ್ಪ ಅವರನ್ನು ನಾನು ತಂದೆ ಸ್ಥಾನದಲ್ಲಿ ನಿಲ್ಲಿಸಿದ್ದೇನೆ. ಏನೇ ಆದರೂ ನನ್ನ ಜನರು ಇವರಿಗೆಲ್ಲ ಏಪ್ರಿಲ್ 13 ರಂದು ಉತ್ತರ ಹೇಳುತ್ತಾರೆ ಎಂದು ಗೀತಾ ಬೇಸರ ವ್ಯಕ್ತಪಡಿಸಿದರು.[ಸೋಲು-ಗೆಲುವಿನ ಜಿದ್ದಾಜಿದ್ದಿ ಉಪಚುನಾವಣಾ ಕಣ!]
ಬಿಎಸ್ ವೈ ತಿರುಗೇಟು: ಗೀತಾ ಮಹದೇವಪ್ರಸಾದ್ ಹೇಳಿಕೆಗೆ ಗುಂಡ್ಲುಪೇಟೆ ತಾಲೂಕಿನ ಬೆರಟಹಳ್ಳಿಯಲ್ಲಿ ಯಡಿಯೂರಪ್ಪ ಪ್ರತಿಕ್ರಿಯೆ ನೀಡಿದ್ದು, ಮಹದೇವ ಪ್ರಸಾದ್ ತೀರಿಕೊಂಡ ದಿನ ನಾನು ಅವರ ಮನೆಗೆ ಸಾಂತ್ವಾನ ಹೇಳಲು ಹೋಗಿದ್ದೆ. ಅದೊಂದೆ ದಿನ ನಾನೂ ಗೀತಾ ಮಹದೇವಪ್ರಸಾದ್ ಭೇಟಿ ಮಾಡಿದ್ದು. ಸಾವಿನ ಮನೆಯಲ್ಲಿ ಸಾಂತ್ವನ ಹೇಳಬೇಕಾದ್ರೆ ಚುನಾವಣಾ ವಿಚಾರ ಪ್ರಸ್ತಾಪ ಮಾಡೋದಕ್ಕೆ ಆಗುತ್ತ ಎಂದು ಮರುಪ್ರಶ್ನೆ ಹಾಕಿದ್ದಾರೆ.[ಅದೆಲ್ಲ ಸರಿ, ಶ್ರೀನಿವಾಸ್ ಪ್ರಸಾದ್ ನಡೆ ಮಾತ್ರ ನಿಗೂಢ]
ಸುಳ್ಳು ಹೇಳಿಕೆಗಳನ್ನು ನೀಡಿ, ಕಣ್ಣೀರುಹಾಕಿ, ನನ್ನಂತಹ ರಾಷ್ಟ್ರೀಯ ಪಕ್ಷದ ರಾಜ್ಯಾಧ್ಯಕ್ಷನಿಗೆ ಅಪಮಾನ ಮಾಡಬಾರದು. ನಾನು ವಚನ ಭ್ರಷ್ಟನಲ್ಲ, ಆ ರೀತಿ ಕೆಲಸ ಸಹ ಮಾಡುವುದಿಲ್ಲ. ಸದ್ಯ ಚುನಾವಣೆ ಏರ್ಪಟ್ಟಿದೆ ಹಾಗಾಗಿ ನನ್ನ ಪಕ್ಷದ ಅಭ್ಯರ್ಥಿಯನ್ನ ಕಣಕ್ಕಿಳಿಸಿದ್ದೇವಷ್ಟೇ. ಸುತ್ತೂರು ಶ್ರೀಗಳು ಎಲ್ಲರಿಗೂ ಆಶೀರ್ವಾದ ಮಾಡ್ತಾರೆ. ಇತ್ತೀಚೆಗಷ್ಟೇ ನಮ್ಮ ಅಭ್ಯರ್ಥಿ ನಿರಂಜನ ಕುಮಾರ್ ಅವರಿಗೂ ಆಶಿರ್ವಾದ ಮಾಡಿಸಿಕೊಂಡು ಬಂದಿದ್ದೇನೆ. ಗೀತಾ ಮಹದೇವ ಪ್ರಸಾದ್ ಅವರು ಸುತ್ತೂರು ಶ್ರೀಗಳನ್ನ ರಾಜಕೀಯ ಎಳೆತಂದು ಮಾತನಾಡಬಾರದು ಅಂತ ಅವರು ವಾಗ್ದಾಳಿ ನಡೆಸಿದರು.












Click it and Unblock the Notifications