ಸರ್ಕಾರದ ಭವಿಷ್ಯ ನುಡಿಯಲು ನಾನು ಜ್ಯೋತಿಷ್ಯ ಓದಿಲ್ಲ; ನಟ ಉಪೇಂದ್ರ
ಮೈಸೂರು, ಜುಲೈ 1: ಯಾವುದೇ ವ್ಯಕ್ತಿ ಕೇಂದ್ರಿತ ಅಥವಾ ಪಕ್ಷ ಕೇಂದ್ರಿತ ಚುನಾವಣೆ ಎಂದಿಗೂ ನಡೆಯಬಾರದು. ವಿಚಾರಗಳ ವಿನಿಮಯದ ಮೇಲೆ ಚುನಾವಣೆ ನಡೆಯಬೇಕು ಎಂದು ಚಿತ್ರ ನಟ ಉಪೇಂದ್ರ ಅಭಿಪ್ರಾಯಪಟ್ಟಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರೋ ಬಂದು ದೇಶವನ್ನು ಹೀಗೆ ಮಾಡುತ್ತೇನೆ, ಹಾಗೆ ಮಾಡುತ್ತೇನೆ ಎಂದರೆ ನಾವು ಓಟು ಹಾಕುತ್ತೇವೆ. ಯಾವ ರೀತಿ ಮಾಡುತ್ತೀರ ಎಂದು ಮರುಪ್ರಶ್ನೆಯನ್ನೂ ಕೇಳುವುದಿಲ್ಲ. ಮುಂದಿನ ದಿನಗಳಲ್ಲಿ, ವಿಚಾರಗಳನ್ನು ವಿಮರ್ಶಿಸಿ ಚುನಾವಣೆ ನಡೆಸುವ ಕಾಲ ಬರಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಸಮ್ಮಿಶ್ರ ಸರಕಾರ ಆಡಳಿತ ನಡೆಸುತ್ತಿದೆ. 37 ಸ್ಥಾನ ಪಡೆದ ಪಕ್ಷ ಮೈತ್ರಿ ಮಾಡಿಕೊಂಡು ಸಂವಿಧಾನ ಬದ್ಧವಾಗಿಯೇ ಬಹುಮತ ಸ್ಪಷ್ಟಪಡಿಸಿ ಅಧಿಕಾರದ ಗದ್ದುಗೆ ಏರಿದೆ. ಇದರಲ್ಲಿ ತಪ್ಪೇನೂ ಇಲ್ಲ. ಕೆಲಸಗಳ ಬಗ್ಗೆ ಜನ ಹಾಗೂ ಮಾಧ್ಯಮಗಳು ಮಾತನಾಡಬೇಕು ಎಂದರು.

ಈ ಹಿಂದಿನ ಹಾಗೂ ಪ್ರಸ್ತುತ ಆಡಳಿತ ನಡೆಸುತ್ತಿರುವ ರಾಜಕೀಯ ಪಕ್ಷಗಳ ಕೆಲಸಗಳು ತೃಪ್ತಿ ನೀಡದ ಹಿನ್ನೆಲೆಯಲ್ಲಿ ಪ್ರಜಾಕೀಯ ಪಕ್ಷ ಸ್ಥಾಪನೆ ಮಾಡಲಾಗಿದೆ. ಸರ್ಕಾರ ಬೀಳಲಿದೆ ಎಂದು ಹೇಳುವುದಕ್ಕೆ ನಾನು ಜ್ಯೋತಿಷ್ಯ ಓದಿಲ್ಲ. ಸುಮಲತಾ ಅವರಿಗೆ ಒಂದು ಸಿದ್ಧಾಂತವಿದೆ. ಹಾಗಾಗಿ ಚುನಾವಣೆಯಲ್ಲಿ ಗೆದ್ದರು. ಆದ್ದರಿಂದ ನನಗೂ ಅವರಿಗೂ ಹೋಲಿಕೆ ಮಾಡಬಾರದು. ವೈಯಕ್ತಿಕ ಧ್ಯೇಯೋದ್ದೇಶಗಳನ್ನು ಈಗಾಗಲೇ ನನ್ನ ಸಿನಿಮಾಗಳಲ್ಲಿ ತೋರಿಸಿದ್ದೇನೆ. ಹಾಗಾಗಿ ಪ್ರಜಾಕೀಯದ ಕುರಿತು ಸಿನಿಮಾ ಮಾಡುವುದಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.












Click it and Unblock the Notifications