ದಸರಾ ಸಂಭ್ರಮಕ್ಕೆ ತಣ್ಣೀರೆರಚಿದ ಮೈಸೂರಿನ ಮಹಾಮಳೆ
ಮೈಸೂರು, ಸೆಪ್ಟೆಂಬರ್ 27: ದಸರಾ ಸಂಭ್ರಮದಲ್ಲಿದ್ದ ಜನರನ್ನು ಮಳೆ ಕಂಗೆಡಿಸಿದೆ. ಕಳೆದ ಕೆಲವು ದಿನಗಳಿಂದ ಸಂಜೆ ಹೊತ್ತು ಸುರಿಯುತ್ತಿತ್ತಾದರೂ ಮಂಗಳವಾರ ರಾತ್ರಿಯಿಡೀ ಸುರಿದ ಭಾರೀ ಮಳೆಗೆ ನಗರದ ಬಹುತೇಕ ಸ್ಥಳಗಳು ಜಲಾವೃತವಾಗಿದ್ದು ಜನ ಪರದಾಡುವಂತಾಗಿದೆ.
ಮನೆಯೊಳಗೇ ನೀರು ನುಗ್ಗಿ ಬರುನತ್ತಿರುವುದನ್ನು ಕಂಡು ಜನರು ಹೌಹಾರಿದ್ದಾರೆ. ನಗರದ ಕನಕಗಿರಿಯಲ್ಲಿ ಮೋರಿ ನೀರು ನೇರವಾಗಿ ಮನೆಗಳಿಗೆ ನುಗ್ಗಿದೆ. ಅಲ್ಲದೆ ರಸ್ತೆ ಮೇಲೆ ಸುಮಾರು ಮೂರ್ನಾಲ್ಕು ಅಡಿಯಷ್ಟು ನೀರು ಹರಿದು ಹೋಗುತ್ತಿದ್ದು ಜನ ಮನೆಯೊಳಗೆ ನುಗ್ಗಿದ ನೀರಿನಿಂದ ಒದ್ದಾಡುತ್ತಿದ್ದಾರೆ. ಕನಕಗಿರಿ ಮೂಲಕವೇ ಮೋರಿ ಹಾದು ಹೋಗಿದ್ದು, ನಗರದ ಹೆಚ್ಚಿನ ನೀರು ಇದರಲ್ಲೇ ಹರಿದು ಹೋಗುತ್ತಿದೆ.

ರಾತ್ರಿಯೆಲ್ಲ ಸುರಿದ ಮಳೆಯ ನೀರು ರಸ್ತೆಯ ಮೇಲೆ ಹರಿದು ಹೋಗಿದ್ದು ಚರಂಡಿಯಲ್ಲಿದ್ದ ತ್ಯಾಜ್ಯ, ರಸ್ತೆ ಬದಿಯಲ್ಲಿದ್ದ ಮರಳು, ಕಲ್ಲು ಎಲ್ಲವೂ ರಸ್ತೆಗೆ ಬಂದಿದೆ. ಕೆಲವೆಡೆ ಚರಂಡಿ ನೀರು ರಸ್ತೆ ಮೇಲೆ ಹರಿದಿದೆ. ನಗರದಿಂದ ಹರಿದು ಬರುವ ನೀರೆಲ್ಲವೂ ಮೋರಿಯ ಮೂಲಕ ಕನಕಗಿರಿಯಲ್ಲಿ ಹರಿಯುವ ವೇಳೆ ಬಡಾವಣೆಯೊಳಗೆ ನುಗ್ಗಿದೆ. ಇಲ್ಲಿ ಒತ್ತುವರಿ ಮಾಡಿಕೊಂಡಿರುವ ಪರಿಣಾಮ ನೀರು ಒಳ ನುಗ್ಗಿದೆ ಆರೋಪವೂ ಇದೆ. ಇದೀಗ ವಿದ್ಯುತ್ ಕಡಿತಗೊಂಡಿದ್ದು ಜನ ನೀರಿಲ್ಲದೆ ಪರದಾಡುತ್ತಿದ್ದಾರೆ.

ಒಟ್ಟಾರೆ ಮಳೆ ಸಾಂಸ್ಕೃತಿಕ ನಗರಿಯ ಜನರನ್ನು ಬೆಚ್ಚಿ ಬೀಳಿಸಿದೆ. ಪ್ರತಿ ದಿನವೂ ಸಂಜೆ ವೇಳೆಗೆ ಮಳೆ ಸುರಿಯುತ್ತಿರುವುದರಿಂದ ಮನೆಯಿಂದ ಹೊರಗೆ ಬರಲು ಜನ ಹಿಂದೇಟು ಹಾಕುತ್ತಿದ್ದಾರೆ. ಪರಿಣಾಮ ದಸರಾ ಕಾರ್ಯಕ್ರಮಗಳಿಗೆ ಜನರೇ ಇಲ್ಲದಂತಾಗಿದೆ. ಇನ್ನು ಆಹಾರ ಮೇಳದಲ್ಲಿ ಮಳಿಗೆ ತೆರೆದವರು ನಷ್ಟವಾಗುತ್ತಿದೆ ಎಂದು ಅಳಲು ತೋಡಿಕೊಂಡಿದ್ದಾರೆ.












Click it and Unblock the Notifications