ರಾಜ್ಯ ಸರ್ಕಾರ ಬದುಕಿದೆಯೋ, ಸತ್ತಿದೆಯೋ?: ಕುಮಾರಣ್ಣ ಗುಡುಗು
ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರ ಸ್ವಾಮಿ. ಮಂಗಳೂರು ಕೋಮು ಗಲಭೆ ಬಗ್ಗೆ ಸರ್ಕಾರದ ನೀರಸ ಪ್ರತಿಕ್ರಿಯೆ ಎಂದು ಆರೋಪಿಸಿದ ಮಾಜಿ ಮುಖ್ಯಮಂತ್ರಿ.
ಮೈಸೂರು, ಜುಲೈ 10: ದಕ್ಷಿಣ ಕನ್ನಡದಲ್ಲಿ ಇತ್ತೀಚೆಗೆ ನಡೆದ ಕೋಮು ಗಲಭೆಗಳಿಗೆ ಸಂಬಂಧಪಟ್ಟಂತೆ ಸರ್ಕಾರ ಸ್ಪಂದಿಸುತ್ತಿರುವ ರೀತಿಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರ ಸ್ವಾಮಿ ಕಿಡಿಕಾರಿದ್ದಾರೆ.
ಮೈಸೂರು ವಿಶ್ವವಿದ್ಯಾಲಯದ ಮಾಜಿ ಉಪ ಕುಲಪತಿ ಪ್ರೊ. ಕೆ.ಎಸ್. ರಂಗಪ್ಪ ಅವರನ್ನು ಪಕ್ಷಕ್ಕೆ ಅಧಿಕೃತವಾಗಿ ಆಹ್ವಾನಿಸಿದ ಅವರು, ಆ ಕಾರ್ಯಕ್ರಮದಲ್ಲಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದರು.

ಮಂಗಳೂರಿನಲ್ಲಿ ಇತ್ತೀಚೆಗೆ ನಡೆದ ಆರೆಸ್ಸೆಸ್ ಕಾರ್ಯಕರ್ತರ ಹತ್ಯೆ ಹಾಗೂ ಮುಸ್ಲಿ ಯುವಕರ ಹತ್ಯೆ ಪ್ರಕರಣಗಳ ಬಗ್ಗೆ ತನಿಖೆಯಾಗಿ, ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದರು.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಮಂಗಳೂರು ಘಟನೆಗಳನ್ನು ನೋಡಿದರೆ, ರಾಜ್ಯದಲ್ಲಿ ಸರ್ಕಾರ ಬದುಕಿದೆಯೋ, ಸತ್ತಿದೆಯೋ ಎಂಬ ಅನುಮಾನ ಬರುತ್ತದೆ ಎಂದು ಬೇಸರಿಸಿದರು.
ಮಂಗಳೂರಿನ ಕೋಮು ಗಲಭೆಗಳ ಬಗ್ಗೆ ತನಿಖೆಗೆ ಆಗ್ರಹಿಸಿ, ಬಿಜೆಪಿಯ ಮಾಜಿ ಸಚಿವೆ ಶೋಭಾ ಕರಂದ್ಲಾಜೆ ನಡೆಸುತ್ತಿರುವ ಪ್ರತಿಭಟನೆ ಮಾಡುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಕುಮಾರ ಸ್ವಾಮಿ, ''ಪ್ರತಿಭಟನೆಯಿಂದ ಸಮಸ್ಯೆ ಬಗೆಹರಿಯುವುದಿಲ್ಲ. ಪಕ್ಷಾತೀತವಾಗಿ ಎಲ್ಲರೂ ಸಮಸ್ಯೆ ಇತ್ಯರ್ಥಕ್ಕೆ ಮುಂದಾಗಬೇಕು. ರಾಷ್ಟ್ರೀಯ ಪಕ್ಷಗಳು ಈ ರೀತಿ ಬೇಜವಬ್ದಾರಿಯಾಗಿ ವರ್ತಿಸುವುದು ಸರಿಯಲ್ಲ'' ಎಂದರು.












Click it and Unblock the Notifications