ಮೇಕೆದಾಟು ಯೋಜನೆ ಬಗ್ಗೆ ಪ್ರಧಾನಿ ಜೊತೆ ಮಾತನಾಡಿದ್ದೇನೆ: ಹೆಚ್‌ಡಿ ಕುಮಾರಸ್ವಾಮಿ
ಮೇಕೆದಾಟು ಯೋಜನೆ ಬಗ್ಗೆ ನಾನು ಮತ್ತು ದೇವೇಗೌಡರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಚರ್ಚೆ ಮಾಡಿದ್ದೇವೆ. ಸಂಸತ್ ಅಧಿವೇಶನದಲ್ಲೂ ಈ ಬಗ್ಗೆ ಚರ್ಚೆ ಮಾಡಲಾಗುವುದು ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.
ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈ ವಯಸ್ಸಿನಲ್ಲೂ ದೇವೇಗೌಡರು ಕಾವೇರಿ ಹೋರಾಟದ ಬಗ್ಗೆ ಧ್ವನಿ ಎತ್ತಿದ್ದಾರೆ. ಆದರೆ, ಇಂಡಿಯಾ ಮೈತ್ರಿಕೂಟ ಯಾವೊಬ್ಬ ನಾಯಕರು ಕೂಡ ಮೇಕೆದಾಟು ಯೋಜನೆ ಬಗ್ಗೆ ಮಾತನಾಡಿಲ್ಲ ಎಂದು ಕಾಂಗ್ರೆಸ್ ನಾಯಕರಿಗೆ ತಿರುಗೇಟು ನೀಡಿದರು.

ಕೇಂದ್ರದಿಂದ ರಾಜ್ಯಕ್ಕೆ ಅನ್ಯಾಯವಾಗಿದೆ ಎಂದು ಕೇಂದ್ರ ಸರ್ಕಾರದತ್ತ ಬೊಟ್ಟು ಮಾಡುತ್ತಾರೆ ಕಾಂಗ್ರೆಸ್ ನಾಯಕರು. ಕರ್ನಾಟಕಕ್ಕೇ ನನ್ನನ್ನು ಬರಬೇಡಿ ಎನ್ನುತ್ತಾರೆ. ಮಂಡ್ಯಕ್ಕೆ ಬರಲೇಬೇಡಿ ಎನ್ನುತ್ತಾರೆ. ಇಂತಹವರಿಂದ ರಾಜ್ಯದ ಅಭಿವೃದ್ಧಿ ಆಗುತ್ತಾ? ಕೇವಲ ಕಾಟಾಚಾರಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಬಂದರೆ ಉಪಯೋಗವೇನು? ರಾಜ್ಯಕ್ಕೆ ಒಳ್ಳೆಯದು ಆಗಬೇಕಾದರೆ ಪ್ರಧಾನಿಗಳಿಗೆ ಪ್ರಾಮಾಣಿಕವಾಗಿ ಮನವರಿಕೆ ಮಾಡಬೇಕು. ಕೇಂದ್ರದ ಜತೆ ಸೌಹಾರ್ದ ಸಂಬಂಧ ಹೊಂದಿರಬೇಕು ಎಂದು ಹೇಳಿದರು.
ರಾಜ್ಯಕ್ಕೆ ಆಗಬೇಕಿರುವ ಅಭಿವೃದ್ಧಿಗಳ ಬಗ್ಗೆ ಪಟ್ಟಿ ಮಾಡಿ ಕೊಡಬೇಕು. ರಾಜ್ಯದ ಅಭಿವೃದ್ಧಿ ಬಗ್ಗೆ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಬೇಕು. ನಾನು ಕೇಂದ್ರಕ್ಕೆ ಹೋದ ಮೇಲೆ ರಾಜ್ಯದ ಅಭಿವೃದ್ಧಿ ಬಗ್ಗೆ ಸಾಕಷ್ಟು ಕಾಳಜಿ ಇಟ್ಟಿದ್ದೇನೆ. ಎಲ್ಲಾ ಕೇಂದ್ರ ಸಚಿವರು ರಾಜ್ಯಕ್ಕಾಗಿ ಕೆಲಸ ಮಾಡುತ್ತಿದ್ದಾರೆ. ನಾನು ಸಚಿವನಾಗಿ ಕೇವಲ ಒಂದು ತಿಂಗಳಾಗಿದೆ. ಕಾವೇರಿ ಸಮಸ್ಯೆ ಒಂದು ತಿಂಗಳಿಗೆ ಬಗೆಹರಿಸಿ ಎನ್ನುತ್ತಾರೆ. ಇವರಿಂದ ಕಾವೇರಿ ವಿವಾದಕ್ಕೆ ಎಷ್ಟು ಪರಿಹಾರ ಸಿಕ್ಕಿದೆ ಎಂದು ಕುಮಾರಸ್ವಾಮಿ ಅವರು ಚಾಟಿ ಬೀಸಿದರು.
ಕೇಂದ್ರ ಬಜೆಟ್‌ನಲ್ಲಿ ಎಲ್ಲ ರಾಜ್ಯಗಳಿಗೂ ಆದ್ಯತೆ ನೀಡಲಾಗಿದೆ. ಕೆಲವೊಂದು ರಾಜ್ಯದ ಹೆಸರುಗಳನ್ನು ಕಾಂಗ್ರೆಸ್ಸಿನವರು ಹೇಳುತ್ತಿದ್ದಾರೆ. ಆಂಧ್ರ ಪ್ರದೇಶ ಮತ್ತು ಬಿಹಾರದ ಹೆಸರು ಹೇಳಿ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಅದನ್ನೇ ನೆಪ ಮಾಡಿಕೊಂಡು ಇಂಡಿಯಾ ಒಕ್ಕೂಟದ ಸದಸ್ಯ ಪಕ್ಷಗಳು ತಾರತಮ್ಯದ ಬಜೆಟ್ ಎಂದು ಆರೋಪ ಮಾಡಿದ್ದಾರೆ. ವಾಸ್ತವಕ್ಕೆ ಈ ಆರೋಪ ಸತ್ಯವಲ್ಲ ಎಂದು ಕೇಂದ್ರ ಸಚಿವರು ಹೇಳಿದರು.












Click it and Unblock the Notifications