ಗ್ಯಾಸ್ ಸಿಲಿಂಡರ್ ಬೆಲೆ 1 ಸಾವಿರ ರೂಪಾಯಿಯಾಗಲಿದೆ: ಎಚ್. ವಿಶ್ವನಾಥ್
ಮೈಸೂರು, ಸೆಪ್ಟೆಂಬರ್.10 : ತೈಲ ಬೆಲೆ ಏರಿಕೆಯಿಂದ ದೇಶದ ಆರ್ಥಿಕತೆ ಬುಡಮೇಲಾಗುತ್ತಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್. ವಿಶ್ವನಾಥ್ ತಮ್ಮ ಆಕ್ರೋಶ ಹೊರಹಾಕಿದರು.
ಮೈಸೂರಿನ ಗಾಂಧಿ ವೃತ್ತದ ಬಳಿ ಬಂದ್ ಗೆ ಬೆಂಬಲ ಸೂಚಿಸಿ ಜೆಡಿಎಸ್ ನಿಂದ ನಡೆದ ಬೃಹತ್ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಬೆಲೆ ಏರಿಕೆ ಕೇಂದ್ರದ ಬಿಜೆಪಿ ಸರ್ಕಾರದ ವೈಫಲ್ಯಕ್ಕೆ ಸಾಕ್ಷಿ. ಡೀಸೆಲ್ ಪೆಟ್ರೋಲ್ ಬೆಲೆ ಏರಿಕೆಯಿಂದ ದೇಶದ ಆರ್ಥಿಕತೆ ಬುಡ ಮೇಲಾಗುತ್ತಿದೆ.
ಮುಂದಿನ ಕೆಲವೇ ದಿನಗಳಲ್ಲಿ ಗ್ಯಾಸ್ ಸಿಲಿಂಡರ್ ಬೆಲೆ ಸಾವಿರ ರೂಪಾಯಿ ಆಗಲಿದೆ. ಕೆಲವು ದಿನಗಳ ಹಿಂದೆ ಶೋಭಾ ಕರಂದ್ಲಾಜೆ, ಸದಾನಂದಗೌಡ ಅವರು ಬೀದಿಗಿಳಿದು ಗ್ಯಾಸ್ ಸಿಲಿಂಡರ್ ತಲೆ ಮೇಲೆ ಹೊತ್ತು ಪ್ರತಿಭಟನೆ ನಡೆಸಿದ್ದರು. ಈಗ ಅವರೆಲ್ಲರೂ ನಾಪತ್ತೆಯಾಗಿದ್ದಾರೆ ಎಂದು ಕಿಡಿಕಾರಿದರು.

ಮೋದಿಯವರಿಂದ ದೇಶಕ್ಕೆ ಯಾವುದೇ ಪ್ರಯೋಜನವಿಲ್ಲ. ಇವರನ್ನ ಒದ್ದು ಓಡಿಸಲು ಜನರು ಸಿದ್ಧರಾಗಿದ್ದಾರೆ. ಬಿಜೆಪಿ ಕೇಂದ್ರ ಸರ್ಕಾರದ ವಿರುದ್ಧ ಧಂಗೆ ಏಳಲು ಜನ ನಿರ್ಧರಿಸಿದ್ದಾರೆ. ಸಾವಿರಾರು ಕೋಟಿಗಳನ್ನು ಲೂಟಿ ಹೊಡೆದು ಬೇರೆ ದೇಶಗಳಿಗೆ ಓಡಿಹೋದವರು ಬಿಜೆಪಿಯವರು.
ಬಿಜೆಪಿ ಸರ್ಕಾರ ಎಲ್ಲಾ ಕ್ಷೇತ್ರದಲ್ಲಿ ವಿಫಲವಾಗಿರುವ ಸರ್ಕಾರವಾಗಿದೆ. ಎಲ್ಲಾ ರಂಗಗಳಲ್ಲೂ ಸೋತಿರುವ ಬಿಜೆಪಿ ನಾಯಕರು ಮೊದಲು ರಾಜೀನಾಮೆ ನೀಡಲಿ ಎಂದು ಆಗ್ರಹಿಸಿದರು.
ಬೆಲೆ ಏರಿಕೆಯಾದಾಗ ಈ ಹಿಂದೆ ಮಾಜಿ ಮುಖ್ಯಮಂತ್ರಿಗಳಾದ ಈಶ್ವರಪ್ಪ, ಯಡಿಯೂರಪ್ಪನವರು ಬಾಯಿ ಬಾಯಿ ಬಡೆದುಕೊಳ್ಳುತ್ತಿದ್ದರು. ಆದರೆ ಸದ್ಯ ಯಾವ ವೈಶಂಪಾಯನ ಸರೋವರದಲ್ಲಿ ಅವಿತಿದ್ದರೋ ಎಂದು ತಿಳಿಯದಾಗಿದೆ ಎಂದು ಲೇವಡಿ ಮಾಡಿದರು.












Click it and Unblock the Notifications