MUDA Scam: ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ಕ್ರಮ 'ಗ್ಯಾರಂಟಿ'; ಸಿ.ಜೆ.ಅಬ್ರಹಾಂ
ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯನವರನ್ನು ಏನಾದರೂ ಮಾಡಿ ಹಣಿಯಬೇಕು ಎಂದು ಬಿಜೆಪಿ ಮತ್ತು ಜೆಡಿಎಸ್ ನಾಯಕರು ಪಣ ತೊಟ್ಟಿದ್ದಾರೆ. ಮೈಸೂರು ಚಲೋ ಹೆಸರಿನಲ್ಲಿ ಈಗಾಗಲೇ ವಿಪಕ್ಷಗಳು ಪಾದಯಾತ್ರೆ ಮಾಡುತ್ತಿದ್ದು, ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿವೆ. ಸಿಎಂ ವಿರುದ್ಧ ರಾಜ್ಯಪಾಲರಿಗೆ ದೂರು ಕೊಟ್ಟಿರುವ ಸಾಮಾಜಿಕ ಹೋರಾಟಗಾರ ಸಿ.ಜೆ.ಅಬ್ರಹಾಂ ಕೂಡ ಸಿದ್ದರಾಮಯ್ಯ ಸಮರ್ಥಕರಿಗೆ ಸವಾಲು ಹಾಕಿದ್ದಾರೆ.
ಮೈಸೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿ.ಜೆ.ಅಬ್ರಹಾಂ, ಮುಡಾ ಹಗರಣಕ್ಕೆ ಸಂಬಂಧಪಟ್ಟಂತೆ ಸಿಎಂ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡುವ ವಿಶ್ವಾಸವಿದೆ ಎಂದಿದ್ದಾರೆ. ಪ್ರಕರಣದಲ್ಲಿ ಸಿಎಂ ಹೆಸರು ಇರುವುದಕ್ಕೆ ಇದಕ್ಕೆ ಮಹತ್ವ ಬಂದಿದೆ. ಇದೇ ಕಾರಣಕ್ಕೆ ಸಿಎಂ ಸಿದ್ದರಾಮಯ್ಯ ಸೇರಿ ಅವರ ಕಡೆಯವರು ಸಮರ್ಥಿಸಿಕೊಳ್ಳುತ್ತಿದ್ದಾರೆ ಎಂದರು.

ಬಿಎಸ್ ಯಡಿಯೂರಪ್ಪ ಅವರ ವಿರುದ್ಧ ಆರೋಪ ಮಾಡಿದಾಗ ಕಾಂಗ್ರೆಸ್‌ನವರು ಸತ್ಯ ಎಂದಿದ್ದರು. ಈಗ ನನ್ನನ್ನು ಬ್ಲಾಕ್‌ಮೇಲರ್ ಅನ್ನುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರ ಹಿಂಬಾಲಕರು ಕೂಡ ನನ್ನನ್ನ ಬ್ಲಾಕ್ ಮೇಲರ್ ಅಂತಿದ್ದಾರೆ, ಸಿದ್ದರಾಮಯ್ಯ ಅವರಿಗೆ ಸೋಲಿನ ಭೀತಿ ಶುರುವಾಗಿದೆ. ರಾಜ್ಯದಲ್ಲಿ ಬುದ್ದಿ ಇರುವ ಜನರಿದ್ದಾರೆ, ಅವರಿಗೆ ನಾನೇನು ಮಾಡುತ್ತಿದ್ದೇನೆ ಎನ್ನುವುದು ಅರ್ಥ ಆಗುತ್ತದೆ ಎಂದರು.
ಪ್ರಶ್ನೆ ಮಾಡುವರಿಗೆ ಬಹಿರಂಗ ಸವಾಲು
ಸದನದಲ್ಲಿ ಸಿದ್ದರಾಮಯ್ಯ ಅವರಷ್ಟು ಉತ್ತಮವಾಗಿ ಮಾತನಾಡುವ ವ್ಯಕ್ತಿ ಯಾರೂ ಇಲ್ಲ. ಅವರು ಎರಡು ಬಾರಿ ಸಿಎಂ ಆಗಿರುವವರು. ಅವರ ಐಡಿಯಾಲಜಿ ನಮಗೆ ಗೊತ್ತು. ನಾವು ಅದೆಲ್ಲವನ್ನೂ ಕೂಡ ಒಪ್ಪಿಕೊಳ್ಳುತ್ತೇವೆ. ಸಮರ್ಥನೆ ಮಾಡಿಕೊಳ್ಳಲು ಡಿ.ಕೆ.ಶಿವಕುಮಾರ್ ಬಂದಿದ್ದಾರೆ. ರಾಹುಲ್ ಗಾಂಧಿ ಅವರು ಏನು ಆಗಿಲ್ಲ ಎಂದು ಸಮರ್ಥನೆ ನೀಡುತ್ತಿದ್ದಾರೆ. ನಾನೂ ಕೂಡ ದೆಹಲಿಗೆ ಬರುತ್ತೇನೆ. ಈ ವಿಷಯವನ್ನು ಸುದ್ದಿಗೋಷ್ಠಿ ಮಾಡಿ ಹೇಳ್ತೀರಾ ಎಂದರು.
ಸಿಎಂ ಬಾಮೈದ ಮಲ್ಲಿಕಾರ್ಜುನ ಅವರು ಭೂಮಿ ಕೊಂಡುಕೊಂಡ ಸಂದರ್ಭ ಇದು ಕೃಷಿ ಭೂಮಿ ಆಗಿತ್ತಾ? ಭೂಮಿ ಖರೀದಿ ಮುನ್ನವೇ ಈ ಜಾಗ ದೇವನೂರು ಬಡಾವಣೆ ಆಗಿತ್ತು. 2004 ರಲ್ಲಿ ಮಲ್ಲಿಕಾರ್ಜುನ ಅವರು ಖರೀದಿ ಮಾಡಿದ್ದಾರೆ. ಆದರೆ, 2001ರಲ್ಲಿಯೇ ಅದು ದೇವನೂರು ಬಡಾವಣೆ ಆಗಿ ಸೈಟ್ ಹಂಚಿಕೆ ಮಾಡಲಾಗಿತ್ತು. ಆ ಭೂಮಿಯನ್ನ ಅದೇಗೆ ನೀವು ಖರೀದಿ ಮಾಡಲು ಸಾಧ್ಯ? ಆ ಭೂಮಿಯನ್ನ ಹೇಗೆ ಮಾರಾಟ ಮಾಡಿದರು? ಬೇರೆಯವರು ಖರೀದಿ ಮಾಡಿದ ಭೂಮಿಗೆ ಹೇಗೆ ಕಂದಾಯ ಕಟ್ಟುತ್ತೀರಿ? ಮುಡಾ ಸ್ವಾಧೀನದಲ್ಲಿದ್ದ ಭೂಮಿಯನ್ನ ಹೇಗೆ ಖರೀದಿ ಮಾಡಲು ಸಾಧ್ಯವಾಯಿತು? ಎಂದು ಪ್ರಶ್ನಿಸಿದರು.
ಡಿನೋಟಿಫೈ ಆದಾಗ ನಿಂಗನ ಹೆಸರಲ್ಲಿ ಜಮೀನು ಇತ್ತು. 15-7-2001 ರಲ್ಲೇ ಭೂಮಿಯನ್ನ ಸೈಟ್ ಮಾಡಿ ಹಂಚಿದ್ದಾರೆ. ಆದರೆ, ಸಿಎಂ ಪತ್ನಿಗೆ 2010 ರಲ್ಲಿ ಇದು ದಾನವಾಗಿ ಬರುತ್ತದೆ. ಯಾವ ಜಮೀನನ್ನು ನೀವು ದಾನ ಕೊಟ್ರಿ? ಆ ಜಮೀನು ಆವಾಗ ಎಲ್ಲಿತ್ತು. ಆ ಜಮೀನು ಆಗಲೇ ದೇವನೂರು ಮೂರನೇ ಹಂತ ಆಗಿತ್ತು. ಮುಡಾ ಸಭೆಗಳಲ್ಲಿ ಡಾ.ಯತೀಂದ್ರ ಕುಳಿತಿದ್ದರು. ಪರಿಹಾರ ನೀಡುವ ದಿನವೂ ಕೂಡ ಕುಳಿತಿದ್ದರು. 2021 ರಲ್ಲಿ ರಿಲೀಸ್ ಡೀಡ್ ಮಾಡಿಕೊಡ್ತಾರೆ. 2021 ರಲ್ಲಿ ನಿಮ್ಮ ಹಕ್ಕು ಏನಿತ್ತು? ಎಂದು ಪ್ರಶ್ನೆ ಮಾಡಿದ್ದಾರೆ.
ಮುಡಾದವರಿಗೆ ಕಾನೂನು ಮೂಲಕ ಮನವಿ ಮಾಡಿಕೊಂಡಿರುವೆ. ಈಗ ಹಂಚಿಕೆ ಆಗಿರುವ 14 ಸೈಟ್‌ಗಳು ಸಿದ್ದರಾಮಯ್ಯದವರಲ್ಲ. ಆ ಸೈಟ್‌ಗಳನ್ನು ಮುಡಾ ವಾಪಸ್ ಪಡೆದುಕೊಳ್ಳಬೇಕು. ಕಾನೂನು ಬದ್ಧವಾಗಿ ನಾವು ಅದರ ಹೋರಾಟ ಮಾಡುತ್ತೇವೆ. ಸಿದ್ದರಾಮಯ್ಯ ಅವರು ಹೇಳಿದಂತೆ ಅದರ ಮೌಲ್ಯ 62 ಕೋಟಿ ರೂಪಾಯಿ, ಆ ಆಸ್ತಿಯನ್ನ ವಾಪಸ್ ಪಡೆದುಕೊಳ್ಳಬೇಕಾಗಿದೆ ಎಂದರು.
ಸಿದ್ದರಾಮಯ್ಯ ಅವರ ಕೇಸ್‌ನಲ್ಲಿ ಇದು ಪ್ರಾರಂಭದ ಹಂತವಷ್ಟೇ ಸಂಪೂರ್ಣ ತನಿಖೆಗೆ ಆದೇಶ ಆಗೇ ಆಗುತ್ತದೆ. ರಾಜ್ಯಪಾಲರು ಅನುಮತಿ ಕೊಡುತ್ತಾರೆ ಎಂಬ ವಿಶ್ವಾಸವಿದೆ. ಕ್ಯಾಬಿನೆಟ್‌ನಲ್ಲಿ ಮೂರು ಗಂಟೆ ಈ ವಿಷಯ ಚರ್ಚೆ ಆಗಿದೆ. ಇದಕ್ಕೆ ತಾರ್ಕಿಕ ಅಂತ್ಯ ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.












Click it and Unblock the Notifications