ಮೈಸೂರಿನಲ್ಲಿ ಗೃಹಲಕ್ಷ್ಮಿ ಯೋಜನೆ ಫಲಾನುಭವಿ ಮಾತಿಗೆ ದಂಗಾದ ಸಭೆ: ಯಾಕೆ ಗೊತ್ತಾ?
ಮೈಸೂರು, ಏಪ್ರಿಲ್ 12: ಗ್ಯಾರಂಟಿ ಯೋಜನೆ ಬೆಲೆ ಏರಿಕೆಗೆ ಕಾರಣವಾಗುತ್ತಿದೆ, ಸರ್ಕಾರದ ಬೊಕ್ಕಸ ಖಾಲಿಯಾಗುತ್ತಿದೆ ಎಂಬ ಆರೋಪವನ್ನು ವಿರೋಧ ಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ಮಾಡುತ್ತಲೇ ಬರುತ್ತಿದ್ದು, ಈ ಸಂಬಂಧ ಹೋರಾಟಗಳು ಜೋರಾಗಿಯೇ ನಡೆಯುತ್ತಿವೆ. ಇದರ ನಡುವೆ ವಿಪಕ್ಷಗಳು ಮಾಡುತ್ತಿರುವ ಅಪಪ್ರಚಾರವನ್ನು ತಡೆಯುವ ಸಲುವಾಗಿ ಸರ್ಕಾರ ಕೂಡ ಗ್ಯಾರಂಟಿ ಯೋಜನೆಗೆ ಸಂಬಂಧಿಸಿದಂತೆ ಫಲಾನುಭವಿಗಳನ್ನು ಸೇರಿಸಿ ಕುಂದುಕೊರತೆ ಸಭೆ ನಡೆಸುವ ಮೂಲಕ ಟಾಂಗ್ ಕೊಡುವ ಪ್ರಯತ್ನವನ್ನು ಅಲ್ಲಲ್ಲಿ ಮಾಡುತ್ತಿದೆ.
ಈಗಾಗಲೇ ಗ್ಯಾರಂಟಿ ಯೋಜನೆಗಳಿಂದ ಹಲವು ರೀತಿಯ ಅನುಕೂಲಗಳನ್ನು ಮಾಡಿಕೊಂಡು ಫಲಾನುಭವಿಗಳನ್ನು ಹುಡುಕಿ ಅವರ ಮೂಲಕ ಗ್ಯಾರಂಟಿ ಯೋಜನೆಗಳ ಕುರಿತ ಉಪಯೋಗಗಳನ್ನು ಜನತೆಗೆ ತಿಳಿಸುವ ಮೂಲಕ ಯೋಜನೆಯನ್ನು ವಿರೋಧಿಸುತ್ತಾ ಬರುತ್ತಿರುವ ವಿಪಕ್ಷಗಳಿಗೆ ತಿರುಗೇಟು ನೀಡುವ ಕೆಲಸವನ್ನು ಮಾಡಲಾಗುತ್ತಿದೆ. ಈ ನಡುವೆ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಭೆ ನಡೆಸಿ ಕುಂದುಕೊರತೆಯನ್ನು ಕೇಳಿ ಅದಕ್ಕೆ ಪರಿಹಾರ ನೀಡುವ ಕೆಲಸವೂ ನಡೆಯುತ್ತಿದೆ.

ಈ ನಡುವೆ ಇಂತಹದೊಂದು ಕಾರ್ಯಕ್ರಮ ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಹುಲ್ಲಹಳ್ಳಿ ಗ್ರಾಮದಲ್ಲಿ ನಡೆದಿದ್ದು, ಕಾರ್ಯಕ್ರಮಕ್ಕೆ ಫಲಾನುಭವಿಗಳೇ ಗೈರಾಗಿದ್ದಲ್ಲದೆ, ಸಭೆಗೆ ಆಗಮಿಸಿದ ಫಲಾನುಭವಿ ಮಹಿಳೆಯೊಬ್ಬರು ಗ್ಯಾರಂಟಿ ಯೋಜನೆಯ ಹಣವನ್ನು ತಾನು ಮಾಡುತ್ತಿರುವ ಕೆಲಸದ ಬಗ್ಗೆ ಹೇಳಿ ಸಭೆಯಲ್ಲಿದ್ದ ಶಾಸಕರು, ಮಾಜಿಶಾಸಕರು ಸೇರಿದಂತೆ ಇಡೀ ಜನರೇ ದಂಗಾಗುವಂತೆ ಮಾಡಿದ್ದಾರೆ. ಇಷ್ಟಕ್ಕೂ ಆಗಿದ್ದೇನು ಗೊತ್ತಾ?
ಹುಲ್ಲಹಳ್ಳಿಯಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ತಾಲೂಕು ಸಮಿತಿ ವತಿಯಿಂದ ಸಭೆ ಹಮ್ಮಿಕೊಳ್ಳಲಾಗಿತ್ತು. ಈ ಸಭೆಯ ಅಧ್ಯಕ್ಷತೆಯನ್ನು ಕಾಂಗ್ರೆಸ್ ಶಾಸಕ ದರ್ಶನ್ ಧ್ರುವನಾರಾಯಣ್ ಅವರು ವಹಿಸಿದ್ದಲ್ಲದೇ, ಫಲಾನುಭವಿಗಳ ಕುಂದುಕೊರತೆಯನ್ನು ಆಲಿಸಿ ಪರಿಹಾರ ನೀಡಲು ತಯಾರಾಗಿ ಬಂದಿದ್ದರು. ಅವರ ಜೊತೆಗೆ ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಜೆರಾಲ್ಡ್ ರಾಜೇಶ್, ಗ್ಯಾರಂಟಿ ಯೋಜನೆಯ ಅಧ್ಯಕ್ಷ ಕೆ.ಮಾರುತಿ, ಸಿಡಿಪಿಒಗಳಾದ ಭವ್ಯಶ್ರೀ, ಮಂಜುಳಾ, ಚೆಸ್ಕಾಂ ಎಇಇ ದೇವರಾಜಯ್ಯ ಸೇರಿದಂತೆ ಅಧಿಕಾರಿಗಳು ಮತ್ತು ಕಾಂಗ್ರೆಸ್ ಪಕ್ಷದ ಮುಖಂಡರು ಭಾಗವಹಿಸಿದ್ದರು.
ಫಲಾನುಭವಿಗಳನ್ನು ಕರೆತರುವ ಕೆಲಸವನ್ನು ತಾಲೂಕಿನ ಅಂಗನವಾಡಿ ಕಾರ್ಯಕರ್ತೆಯರಿಗೆ ವಹಿಸಲಾಗಿತ್ತು. ಹೀಗಾಗಿ ಅಂಗನವಾಡಿ ಕಾರ್ಯಕರ್ತೆಯರು ತಮ್ಮ ಊರುಗಳಲ್ಲಿ ಅಡ್ಡಾಡಿ ಫಲಾನುಭವಿಗಳಿಗೆ ಮಾಹಿತಿ ನೀಡಿ ಸಭೆಗೆ ಬರುವಂತೆ ತಿಳಿಸಿದ್ದರು. ಅದರಂತೆ ಎಲ್ಲ ಫಲಾನುಭವಿಗಳು ಸಭೆಗೆ ಬರುವ ನಿರೀಕ್ಷೆಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು, ವಿವಿಧ ಸ್ತ್ರೀಶಕ್ತಿ ಸಂಘಗಳ ಪದಾಧಿಕಾರಿಗಳು ಆಗಮಿಸಿದ್ದರು. ಆದರೆ ಸಭೆ ಆರಂಭವಾದಾಗ ನಿರೀಕ್ಷೆ ಮಾಡಿದಷ್ಟು ಫಲಾನುಭವಿಗಳು ಆಗಮಿಸಲೇ ಇಲ್ಲ. ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರು ತುಂಬಿದ್ದರು.

ಮಹಿಳೆಯ ಮಾತಿಗೆ ದಂಗಾದ ಸಭೆ
ಇದರ ಜೊತೆಗೆ ಕೆಲವೇ ಕೆಲವು ಮಹಿಳಾ ಫಲಾನುಭವಿಗಳು ಆಗಮಿಸಿದ್ದರು. ಕೆಲವು ಫಲಾನುಭವಿಗಳಂತು ಅಧಿಕಾರಿಗಳ ಒತ್ತಡಕ್ಕೆ ಮಣಿದು ಬಂದಂತಿತ್ತು. ಸಭೆಯಲ್ಲಿ ಗ್ಯಾರಂಟಿ ಯೋಜನೆಯ ಫಲಾನುಭವಿಗಳನ್ನು ಮಾತನಾಡಿಸಿ ಅವರಿಗೆ ಗ್ಯಾರಂಟಿ ಯೋಜನೆ ಯಾವ ರೀತಿಯಲ್ಲಿ ಅನುಕೂಲವಾಗುತ್ತಿದೆ ಎಂಬುದರ ಬಗ್ಗೆ ಸಾರ್ವಜನಿಕವಾಗಿ ಹಂಚಿಕೊಳ್ಳುವಂತೆ ತಿಳಿಸಲಾಗಿತ್ತು. ಈ ವೇಳೆ ಇಂದಿರಾನಗರ ಗ್ರಾಮದ ಮಹಿಳೆಯೊಬ್ಬರು ಗೃಹಲಕ್ಷ್ಮೀ ಯೋಜನೆ ಹಣದಿಂದ ಪೆಟ್ರೋಲ್ ಮತ್ತು ಇಸ್ಪೀಟ್ ಮಾರಾಟ ಮಾಡುತ್ತಿರುವುದಾಗಿ ಹೇಳಿದ್ದು, ಇಡೀ ಸಭೆ ಬೆಚ್ಚಿ ಬೀಳುವಂತೆ ಮಾಡಿದೆ.
ಇನ್ನು ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ದರ್ಶನ್ ಧ್ರುವನಾರಾಯಣ್ ಗ್ಯಾರಂಟಿ ಯೋಜನೆಗಳ ಬಗ್ಗೆ ಅಪಪ್ರಚಾರ ಸೇರಿದಂತೆ ಗ್ಯಾರಂಟಿಗಳಿಗೆ ಹಣ ಇಲ್ಲ, ಅಭಿವೃದ್ಧಿಗೆ ಹಣ ಇಲ್ಲ ಎಂದು ಸಾಕಷ್ಟು ಇಲ್ಲಸಲ್ಲದ ಸುಳ್ಳು ಆರೋಪಗಳನ್ನು ನಮ್ಮ ವಿರೋಧಿಗಳು ಮಾಡುತ್ತಿದ್ದಾರೆ ಎಂದು ಬಿಜೆಪಿ ನಾಯಕರ ವಿರುದ್ಧ ಹರಿಹಾಯುವುದರೊಂದಿಗೆ ಅಭಿವೃದ್ಧಿಯಲ್ಲಿ ಸಿದ್ದರಾಮಯ್ಯ ಸರ್ಕಾರ ಮುಂದಿದ್ದು, ಒಂದು ಮುಕ್ಕಾಲು ವರ್ಷಗಳಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ನಡೆಸಿರುವುದಾಗಿ ಹೇಳುವ ಮೂಲಕ ಸಭೆಯಲ್ಲಿ ಆದ ಮುಜುಗರವನ್ನು ತಪ್ಪಿಸುವ ಪ್ರಯತ್ನ ಮಾಡಿರುವುದು ಕಂಡು ಬಂದಿದೆ.












Click it and Unblock the Notifications