ಜನ ನನನ್ನು ಏಕೆ ಸೋಲಿಸಬೇಕು ಎಂದು 5 ಕಾರಣಗಳನ್ನು ನೀಡಿ: ಸಿಎಂ ಸಿದ್ದುಗೆ ಪ್ರತಾಪ್ ಸಿಂಹ ಸವಾಲು
ಮೈಸೂರು, ಸೆಪ್ಟೆಂಬರ್, 03: ಈ ಬಾರಿ ಎಂಪಿ ಚುನಾವಣೆಯಲ್ಲಿ ಪ್ರತಾಪ್ ಸಿಂಹನನ್ನು ಸೋಲಿಸಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದ್ದಾರೆ. ಜನ ನನ್ನನ್ನು ಏಕೆ ಸೋಲಿಸಬೇಕು ಎಂಬುದಕ್ಕೆ ಅವರು ಕಾರಣ ನೀಡಲಿ ಎಂದು ಸಂಸದ ಪ್ರತಾಪ್ ಸಿಂಹ ಸಿದ್ದರಾಮಯ್ಯಗೆ ಮೈಸೂರಿನಲ್ಲಿ ತಿರುಗೇಟು ನೀಡಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈಸೂರಿನ ಕುವೆಂಪುನಗರದಲ್ಲೋ, ಸರಸ್ವತಿಪುರಂನಲ್ಲೋ, ಸಿದ್ದಾರ್ಥ ಬಡಾವಣೆಯಲ್ಲೋ ಬಂದು ಸಿಎಂ ಈ ರೀತಿ ಹೇಳೋಕೆ ಆಗಲ್ಲ. ಉದಯಗಿರಿಯಲ್ಲಿ ಹೋಗಿ ಕೈ ಮುಗಿದು ನನ್ನನ್ನು ಸೋಲಿಸಲು ಕರೆ ಕೊಟ್ಟಿದ್ದಾರೆ. ಕೈಮಗಿದು ಪ್ರತಾಪ್ ಸಿಂಹನನ್ನು ಸೋಲಿಸಿ ಎಂದು ಕೇಳುವ ದಯನೀಯ ಸ್ಥಿತಿ ಸಿಎಂಗೆ ಬರಬಾರದಿತ್ತು. ಅಷ್ಟಕ್ಕೂ ನನ್ನನ್ನು ಜನರು ಏಕೆ ಸೋಲಿಸಬೇಕು ಎಂಬುದಕ್ಕೆ ಐದು ಕಾರಣಗಳನ್ನು ನೀಡಲಿ ಎಂದು ಸವಾಲು ಹಾಕಿದರು.

ಮೈಸೂರು-ಬೆಂಗಳೂರು ಎಕ್ಸ್‌ಪ್ರೆಸ್ ಹೈವೆ ಮಾಡಿಸಿದ್ದು ನನ್ನ ತಪ್ಪಾ? ಗ್ರೇಟರ್ ಮೈಸೂರು ಮಾಡಲು ಹೊರಟ್ಟಿದ್ದು ತಪ್ಪಾ? ವಿಮಾನ ನಿಲ್ದಾಣ ಅಭಿವೃದ್ಧಿ ಮಾಡಲು ಹೊರಟ್ಟಿದ್ದು, ಚಾಮುಂಡಿ ಬೆಟ್ಟದ ಅಭಿವೃದ್ಧಿ ಮಾಡುತ್ತಿರುವುದು ತಪ್ಪಾ? ಎಂದು ಪ್ರಶ್ನಿಸುವ ಮೂಲಕ ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.
40 ವರ್ಷದಿಂದ ಸಿದ್ದರಾಮಯ್ಯ ರಾಜಕೀಯದಲ್ಲಿದ್ದಾರೆ. ಅವರು ಮೈಸೂರಿಗೆ ಮಾಡಿರುವ ಕೆಲಸ ಏನು ಎಂಬುದನ್ನು ಹೇಳಲಿ. ಕೆಲಸ ಮಾಡಿದವನನ್ನು ಸೋಲಿಸಬೇಕು ಅಂತಾ ಕೈ ಮುಗಿದು ಸಿಎಂ ಕೇಳಿದರೆ ಜನ ಅದನ್ನು ಒಪ್ಪುತ್ತಾರಾ? ಎಂದರು. ಅಲ್ಲದೆ ಸಿದ್ದರಾಮಯ್ಯ ಅವರಿಗೆ ಬಡವರ ಮಕ್ಕಳು ಉದ್ಧಾರವಾಗಬಾರದು. ಅವರ ಮಕ್ಕಳು ಮಾತ್ರ ರಾಜಕಾರಣ ಮಾಡುತ್ತಾ ಇರಬೇಕು ಅಷ್ಟೇ. ಸಿದ್ದರಾಮಯ್ಯ ಪ್ರತಿ ಬಾರಿಯೂ ಮೋದಿ ವಿರುದ್ಧ ಮಾತಾಡುತ್ತಾರೆ. ಇದು ಒಂಥರಾ ಆಕಾಶದ ಕಡೆ ಮುಖ ಮಾಡಿ ಉಗಿದಂತೆ ಎಂದು ಟೀಕಿಸಿದರು.












Click it and Unblock the Notifications