ಸಾಹಿತ್ಯ ಸಮ್ಮೇಳನಕ್ಕೆ ಬೃಹತ್ ಗಾತ್ರದ ಅಕ್ಷರ ರಚಿಸಿ ಸ್ವಾಗತ
ಮೈಸೂರು, ನವೆಂಬರ್ 20: ಮಲ್ಲಿಗೆ ನಗರಿಯಲ್ಲಿ ನಡೆಯಲಿರುವ 83 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕ್ಷಣಗಣನೆ ಶುರುವಾಗಿದೆ. ಈ ಹಿನ್ನೆಲೆ ಇಂದು ಅರಮನೆ ಎದುರು ಹಳದಿ-ಕೆಂಪು ಬಣ್ಣದಲ್ಲಿ 83ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಮತ್ತು ಶ್ರೀರಾಮಾಯಣ ದರ್ಶನಂ ಎಂಬ ಬೃಹತ್ ಗಾತ್ರದ ಅಕ್ಷರ ರಚಿಸಿ ಪ್ರವಾಸಿಗರಿಗೆ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಪ್ರೀತಿಯ ಸ್ವಾಗತ ಕೋರಲಾಯಿತು.
ಕಾರ್ಡ್ ಬೋರ್ಡಿನಿಂದ ಮಾಡಲಾಗಿರುವ ರಚನೆಯನ್ನು ಆಗಸದಿಂದ ಕ್ಯಾಮರಾ ಮೂಲಕ ಚಿತ್ರೀಕರಿಸಲಾಗಿದ್ದು, ಹಿನ್ನೆಲೆ ಸಂಗೀತದೊಂದಿಗೆ ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಬಿಡಲಾಗುತ್ತಿದೆ. 20 ಶಾಲೆಗಳ ಎರಡು ಸಾವಿರ ವಿದ್ಯಾರ್ಥಿಗಳು ಅಕ್ಷರ ಸಂರಚನೆಯಲ್ಲಿ ಭಾಗವಹಿಸಿದ್ದರು. ಈ ಕುರಿತು ಜಿಲ್ಲಾಧಿಕಾರಿ ಡಿ.ರಂದೀಪ್ ಮಾತನಾಡಿ ಸಮ್ಮೇಳನದ ಪ್ರಚಾರದ ಒಂದು ಭಾಗವಾಗಿ ಮಾಡಲಾಗುತ್ತಿದ್ದು, ಈ ಯೋಜನೆ ಸಮ್ಮೇಳನದ ಉದ್ಘಾಟನೆಗೂ ಮೂರು ದಿನಗಳ ಮುನ್ನವೇ ಅರಮನೆಗೆ ಆಗಮಿಸುವ ಪ್ರವಾಸಿಗರನ್ನು ಸೆಳೆಯಲಿದೆ.

ಅರಮನೆಗೆ ಆಗಮಿಸುವ ಪ್ರವಾಸಿಗರೂ ಕೂಡ ಹಳದಿ ಕೆಂಪುಬಣ್ಣದ ಕನ್ನಡ ಸಾಹಿತ್ಯ ಸಮ್ಮೇಳನದ ಅಕ್ಷರ ವಿನ್ಯಾಸದ ಸೌಂದರ್ಯವನ್ನು ಸವಿಯುವ ಜತೆಗೆ ಸಮ್ಮೇಳನದಲ್ಲೂ ಪಾಲ್ಗೊಳ್ಳಬೇಕೆಂಬ ಆಶಯವನ್ನು ಹೊಂದಿದ್ದೇವೆ. ಇದನ್ನು ಸಾಮಾಜಿಕ ಜಾಲತಾಣಗಳಲ್ಲೂ ಹರಿ ಬಿಡುತ್ತೇವೆ ಎಂದು ತಿಳಿಸಿದರು.
ಕುವೆಂಪುರ ಶ್ರೀ ರಾಮಾಯಣ ದರ್ಶನಂ ಕೃತಿಗೆ ಪ್ರತಿಷ್ಠಿತ ಜ್ಞಾನಪೀಠ ಪ್ರಶಸ್ತಿ ದೊರೆತು 50 ವರ್ಷ ಸಂದಿರೋ ಹಿನ್ನಲೆ ಅಕ್ಷರ ಸಂರಚನೆ ಮಾಡಲಾಗಿದ್ದು, ನಾಡು, ನುಡಿ ಜಾತ್ರೆಯ ಮಹತ್ವ ಸಾರಲು ಸಮ್ಮೇಳನಕ್ಕೆ ಮೂರು ದಿನ ಮುಂಚಿತವಾಗಿ ಅಕ್ಷರ ಸಂರಚಿಸೋ ಮೂಲಕ ಜಿಲ್ಲಾಡಳಿತ ಹಾಗೂ ಕಸಾಪ ಕನ್ನಡ ಪ್ರೇಮಿಗಳನ್ನ ಸ್ವಾಗತಿಸುತ್ತಿದೆ.












Click it and Unblock the Notifications