ಅಶ್ವತ್ಥ್ ನಾರಾಯಣ್ ಗೆ ಡಿಸಿಎಂ ಆಗುವ ಅರ್ಹತೆ ಏನಿದೆ?: ಮಾಜಿ ಸಂಸದ ಧ್ರುವನಾರಾಯಣ್
ಮೈಸೂರು, ಸೆಪ್ಟೆಂಬರ್ 3: "ಇಡಿ ಮೂಲಕ ಕಾಂಗ್ರೆಸ್ ಪಕ್ಷದ ನಾಯಕರ ಮೇಲೆ ದಾಳಿ ಮಾಡಿರುವುದು ಖಂಡನೀಯ. ದುರುದ್ದೇಶದಿಂದ ಡಿಕೆಶಿ ವಿರುದ್ಧದ ತನಿಖೆ ಸರಿಯಲ್ಲ" ಎಂದು ಮಾಜಿ ಸಂಸದ ಧ್ರುವ ನಾರಾಯಣ್ ದೂರಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ನಾನು ಡಿ.ಕೆ ಶಿವಕುಮಾರ್ ಅವರನ್ನು 1983ರಿಂದಲೂ ನೋಡಿದ್ದೇನೆ. ಅವರು ಗಣಿಗಾರಿಕೆ, ರಿಯಲ್ ಎಸ್ಟೇಟ್ ಎಲ್ಲಾ ಕ್ಷೇತ್ರದಲ್ಲೂ ಇದ್ದಾರೆ. ಅದೇ ರೀತಿ ಶಾಸಕ ರಾಮದಾಸ್, ಸಾರಾ ಮಹೇಶ್ ಸಹ ಹೀಗೆ ಇದ್ದಾರೆ. ಡಿ.ಕೆ.ಶಿವಕುಮಾರ್ ವಿರುದ್ಧ ತನಿಖೆ ಮಾಡಲಿ, ಬೇಡ ಅನ್ನುವುದಿಲ್ಲ. ಆದರೆ ತನಿಖೆ ದುರುದ್ದೇಶದಿಂದ ಕೂಡಿದೆ. ಇದು ಸರಿಯಲ್ಲ" ಎಂದು ಹರಿಹಾಯ್ದರು.

ಗುಜರಾತ್ ಶಾಸಕರು ಕರ್ನಾಟಕಕ್ಕೆ ಬಂದಾಗ ಅವರಿಗೆ ಸಹಾಯ ಮಾಡಿದ್ದಕ್ಕೆ ಡಿಕೆಶಿ ಅವರಿಗೆ ಈ ಸ್ಥಿತಿ ಬಂದಿರುವುದು ಎಂಬ ಬಿಜೆಪಿ ಡಿಸಿಎಂ ಹೇಳಿಕೆಗೆ ಖಂಡನೆ ವ್ಯಕ್ತಪಡಿಸಿದ ಅವರು, "ಈ ಹೇಳಿಕೆ ಗಮನಿಸಿದರೆ ಇವರೇ ದುರುದ್ದೇಶದಿಂದ ಅಧಿಕಾರ ದುರ್ಬಳಕೆ ಮಾಡಿಕೊಳ್ಳತ್ತಿರುವುದು ತಿಳಿಯುತ್ತದೆ. ಗುಜರಾತ್ ರಾಜ್ಯಸಭಾ ಚುನಾವಣೆ ಮುಗಿದ ಕೇವಲ 2 ದಿನಗಳಲ್ಲೇ ಡಿಕೆಶಿ ಮನೆ ಮೇಲೆ ದಾಳಿ ಮಾಡಿಸಿದ್ದಾರೆ. ಲಕ್ಷ್ಮಣ್ ಸವದಿ, ಅಶ್ವಥ್ ನಾರಾಯಣ್ 17 ಮಂದಿ ಶಾಸಕರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಪಾತ್ರ ವಹಿಸಿದ್ದರು. ಹೀಗಾಗಿ ಅವರಿಗೆ ಉನ್ನತ ಸ್ಥಾನ ನೀಡಿದ್ದಾರೆ. ಇವರಿಗೆ ಡಿ.ಕೆ.ಶಿವಕುಮಾರ್ ವಿರುದ್ಧ ಮಾತನಾಡುವ ನೈತಿಕತೆ ಇಲ್ಲ" ಎಂದು ಗುಡುಗಿದರು.

"ಮಧ್ಯಂತರ ಚುನಾವಣೆಗೆ ಕಾಂಗ್ರೆಸ್ ಸಿದ್ಧವಿದೆ. ಅನರ್ಹ ಶಾಸಕರಿಗೆ ಬೇಕಾದ ವ್ಯವಸ್ಥೆ ಮಾಡಿದ್ದರಿಂದಲೇ ಋಣ ತೀರಿಸಲು ಅಶ್ವತ್ಥ ನಾರಾಯಣ್ ಗೆ ಡಿಸಿಎಂ ಹುದ್ದೆ ನೀಡಲಾಗಿದೆ. ಹಿರಿತನಕ್ಕೆ ಸಿಗಬೇಕಿರುವ ಉಪಮುಖ್ಯಮಂತ್ರಿ ಸ್ಥಾನ ನಾರಾಯಣ ಅವರಿಗೆ ಸಿಕ್ಕಿದೆ ಎಂದರೆ ಅನರ್ಹ ಶಾಸಕರನ್ನು ಕರೆದುಕೊಂಡು ಬಂದಿರುವುದೇ ಕಾರಣ. ಕರ್ನಾಟಕ ಬಿಜೆಪಿ ನಾಯಕರು ಈ ಬಗ್ಗೆ ಗಮನ ಹರಿಸದೆ ಕಾಂಗ್ರೆಸ್ ನಾಯಕರನ್ನು ಗುರಿ ಮಾಡಿ ಮಾತನಾಡುತ್ತಿದ್ದಾರೆ" ಎಂದರು.
"ಡಿಕೆಶಿ ಹಿಂದಿನಿಂದಲೂ ಬೇರೆ ಬೇರೆ ವ್ಯಾಪಾರದ ಮೂಲಕ ಉತ್ತಮ ರೀತಿ ಸಂಪಾದನೆ ಮಾಡಿದ್ದಾರೆ. ಅವರ ಮೇಲೆ ತನಿಖೆ ಮಾಡಲಿ. ಆದರೆ ದುರುದ್ದೇಶದಿಂದ ತನಿಖೆ ಮಾಡಬಾರದು. ನಮ್ಮಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ. ಡಿಕೆಶಿ ನಮ್ಮಲ್ಲಿ ಟ್ರಬಲ್ ಶೂಟರ್. ಮುಂದಿನ ದಿನಗಳಲ್ಲಿ ಯಾವುದೇ ಮೈತ್ರಿ ಇಲ್ಲದೆ ಚುನಾವಣೆ ಎದುರಿಸುತ್ತೇವೆ. ಮೈತ್ರಿಯೇ ನಮಗೆ ಲೋಕಸಭಾ ಚುನಾವಣೆಯಲ್ಲಿ ಹಿನ್ನಡೆಗೆ ಕಾರಣವಾಯಿತು" ಎಂದು ದೂರಿದರು.












Click it and Unblock the Notifications