ಜೂ7ಕ್ಕೆ ತೆನೆಹೊತ್ತ ಮಹಿಳೆಯ ಕೈಹಿಡಿಯಲಿದ್ದಾರೆ ವಿಶ್ವನಾಥ್
ಕಾಂಗ್ರೆಸ್ ಹಿರಿಯ ಮುಖಂಡ ಹಾಗೂ ಮಾಜಿ ಸಂಸದ ಅಡಗೂರು ಎಚ್.ವಿಶ್ವನಾಥ್ ಜೂನ್ 7 ರಂದು ಹಸ್ತಕ್ಕೆ ಗುಡ್ ಬೈ ಹೇಳಿ, ತೆನೆ ಹೊತ್ತ ಮಹಿಳೆಯ ಕೈ ಹಿಡಿಯಲಿದ್ದಾರೆ!
ಮೈಸೂರು, ಮೇ 23: ಕಾಂಗ್ರೆಸ್ ಹಿರಿಯ ಮುಖಂಡ ಹಾಗೂ ಮಾಜಿ ಸಂಸದ ಅಡಗೂರು ಎಚ್.ವಿಶ್ವನಾಥ್ ಜೂನ್ 7 ರಂದು ಹಸ್ತಕ್ಕೆ ಗುಡ್ ಬೈ ಹೇಳಿ, ತೆನೆ ಹೊತ್ತ ಮಹಿಳೆಯ ಕೈ ಹಿಡಿಯಲಿದ್ದಾರೆ!
ಮೈಸೂರಿನಲ್ಲಿ ನಡೆಯುವ ಬೃಹತ್ ಕಾರ್ಯಕರ್ತರ ಸಮಾವೇಶ, ಇಲ್ಲವೆ ನಗರದ ಪಕ್ಷದ ಕೇಂದ್ರ ಕಚೇರಿಯಲ್ಲಿ ನಡೆಯಲಿರುವ ಸರಳ ಸಮಾರಂಭದಲ್ಲಿ ಎಚ್.ವಿಶ್ವನಾಥ್ ಅವರನ್ನು ಸೇರ್ಪಡೆ ಮಾಡಿಕೊಳ್ಳಲು ಜೆಡಿಎಸ್ ಸಜ್ಜುಗೊಂಡಿದೆ.
ಸಿಎಂ ಸಿದ್ಧರಾಮಯ್ಯ ವಿರುದ್ಧ ಬಂಡಾಯವೆದ್ದು, ಕಾಂಗ್ರೆಸ್ ತೊರೆಯಿತ್ತಿರುವ ಹಳ್ಳಿಹಕ್ಕಿ ವಿಶ್ವನಾಥ್ ಯಾವುದೇ ಷರತ್ತು ಇಲ್ಲದೆ, ದೇವೇಗೌಡರ ಜೊತೆ ಕೈ ಜೋಡಿಸಲಿದ್ದಾರೆ.
ಇತ್ತೀಚೆಗೆ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ದೇವೇಗೌಡರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ ಸಂದರ್ಭದಲ್ಲಿ ಸೇರ್ಪಡೆ ದಿನಾಂಕ ನಿಗದಿಯಾಗಿದೆ. 2018ರಲ್ಲಿ ರಾಜ್ಯ ವಿಧಾನಸಭೆಗೆ ನಡೆಯುವ ಚುನಾವಣಾ ವೇಳೆಯಲ್ಲಿ ಹುಣಸೂರು ಕ್ಷೇತ್ರದಿಂದ ಸ್ಪರ್ಧಿಸಬೇಕೆಂಬ ಬಯಕೆ ಹೊಂದಿದ್ದರು.[ವಿಶ್ವನಾಥ್ ಹುಣಸೂರಿನ ಜೆಡಿಎಸ್ ಅಭ್ಯರ್ಥಿ: ಶಾಕ್ ನೀಡಿದ ಎಚ್ಡಿಕೆ!]

ಮಾತುಕತೆ ಸಂದರ್ಭದಲ್ಲಿ ದೇವೇಗೌಡರ ಬಳಿಯೂ ಇದನ್ನೂ ಹೇಳಿಕೊಂಡಿದ್ದರು. ಆದರೆ ಗೌಡರು, ಸದ್ಯದ ಪರಿಸ್ಥಿತಿಯಲ್ಲಿ ನೀವು ಚುನಾವಣಾ ಕಣಕ್ಕಿಳಿಯುವುದು ಬೇಡಿ. ಮುಂಬರುವ ಲೋಕಸಭಾ ಚುನಾವಣೆವರೆಗೂ ಪಕ್ಷಕ್ಕೆ ದುಡಿಯಿರಿ. ಅಷ್ಟೇ ಅಲ್ಲ ಎಲ್ಲರ ವಿಶ್ವಾಸಗಳಿಸಿಕೊಳ್ಳಿ, ನಿಮಗೆ ಪಕ್ಷದಲ್ಲಿ ಒಳ್ಳೆಯ ಭವಿಷ್ಯವಿದೆ. ನಿಮ್ಮನ್ನು ನಾವು ನಡು ನೀರಿನಲ್ಲಿ ಬಿಡುವುದಿಲ್ಲ. ನಿಮಗೆ ಎಲ್ಲಾ ರೀತಿಯ ಸಹಕಾರ ನೀಡುತ್ತೇವೆ ಎಂಬ ಭರವಸೆ ನೀಡಿದ್ದಾರೆ.[ಸಿದ್ಧರಾಮಯ್ಯ ಮಹಾನ್ ಸುಳ್ಳುಗಾರ, ವಿಶ್ವಾಸ ದ್ರೋಹದಲ್ಲಿ ನಂ.1 - ವಿಶ್ವನಾಥ್]
ಗೌಡರ ಭರವಸೆಯನ್ನು ಗಂಭೀರವಾಗಿ ಪರಿಗಣಿಸಿದ ವಿಶ್ವನಾಥ್ ಸದ್ಯ ಚುನಾವಣಾ ಕಣದಿಂದ ಹಿಂದೆ ಉಳಿಯುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಅಷ್ಟೇ ಅಲ್ಲದೇ ದೊಡ್ಡ ಮಟ್ಟದಲ್ಲಿ ಪಕ್ಷ ಸೇರ್ಪಡೆಗೊಳ್ಳುವುದು ಬೇಡ. ಸಣ್ಣದಾಗಿ ಪಕ್ಷದ ಕಚೇರಿಯಲ್ಲಿ ಕಾರ್ಯಕ್ರಮ ನಡೆಸುವಂತೆ ದೇವೇಗೌಡರು ಸಲಹೆ ನೀಡಿದ್ದಾರೆ ಎನ್ನಲಾಗಿದೆ. ಆದರೆ ಕುಮಾರಸ್ವಾಮಿ ಮಾತ್ರ ಮೈಸೂರಿನಲ್ಲಿ ದೊಡ್ಡ ಸಮಾವೇಶ ನಡೆಸಿ, ವಿಶ್ವನಾಥ್ ಅವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಲು ಸಿದ್ಧತೆ ನಡೆಸುತ್ತಿದ್ದಾರೆ ಎನ್ನಲಾಗಿದೆ.
ಇತ್ತೀಚೆಗಷ್ಟೇ ಕುಮಾರಸ್ವಾಮಿಯವರು ಹುಣಸೂರು ಕ್ಷೇತ್ರಕ್ಕೆ ಎಚ್.ವಿಶ್ವನಾಥ್ ಜೆಡಿಎಸ್ ಅಭ್ಯರ್ಥಿ ಎಂದು ಶಾಕ್ ನೀಡಿದ್ದರು. ಆದರೆ ದೇವೇಗೌಡರು, ವಿಶ್ವನಾಥ್ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದಿರುವುದು ಒಂದೇ ಪಕ್ಷದ ಇಬ್ಬರು ನಾಯಕರ ತದ್ವಿರುದ್ಧ ಹೇಳಿಕೆಯ ಬಗ್ಗೆ ಗೊಂದಲ ಮೂಡಿಸಿದೆ.












Click it and Unblock the Notifications