ಮೈಸೂರು: ಕಾಡಿನಿಂದ ನಾಡಿನತ್ತ ಕಾಡಾನೆಗಳು; ರೈತರ ಎದೆಯಲ್ಲಿ ಢವಢವ...
ಮೈಸೂರು, ಏಪ್ರಿಲ್ 27: ಬೇಸಿಗೆಯ ದಿನಗಳಲ್ಲಿ ಅರಣ್ಯದಲ್ಲಿ ಆಹಾರದ ಕೊರತೆಗಳು ಎದುರಾಗುವುದರಿಂದ ಕಾಡಾನೆಗಳು ಆಹಾರ ಅರಸಿ ನಾಡಿನತ್ತ ಮುಖ ಮಾಡುವುದು ಮಾಮೂಲಿಯಾಗಿದ್ದು, ಪರಿಣಾಮ ಕಾಡಂಚಿನ ಜನರು ಭಯ, ಆತಂಕದಲ್ಲಿ ದಿನ ಕಳೆಯುವುದು ಅನಿವಾರ್ಯವಾಗಿದೆ.
ಈಗಾಗಲೇ ಅರಣ್ಯಗಳ ಸುತ್ತ ಆನೆ ಕಂದಕ, ರೈಲ್ವೆ ಕಂಬಿಯ ತಡೆಗೋಡೆ ನಿರ್ಮಿಸಿದರೂ ಕೂಡ ಅವುಗಳನ್ನು ದಾಟಿ ಕಾಡಾನೆಗಳು ನಾಡಿಗೆ ಬರುತ್ತಿವೆ. ಹೀಗಾಗಿ ಪೂರ್ವ ಮುಂಗಾರು ಮಳೆಗೆ ಹಾಗೂ ಇರುವ ನೀರಿನ ಸೆಲೆಯನ್ನು ಬಳಸಿಕೊಂಡು ತಮ್ಮ ಜಮೀನಿನಲ್ಲಿ ಬೆಳೆ ಬೆಳೆದ ರೈತರು ಎಲ್ಲಿ ನಮ್ಮ ಜಮೀನಿಗೆ ಕಾಡಾನೆಗಳು ದಾಳಿ ಮಾಡಿಬಿಡಬಹುದೋ ಎಂಬ ಭಯದಲ್ಲಿಯೇ ದಿನ ಕಳೆಯುವಂತಾಗಿದೆ.

ರೈತರ ಬೆಳೆ ಮೇಲೆ ಕಣ್ಣಿಟ್ಟ ಕಾಡಾನೆಗಳು
ಮೈಸೂರು ಜಿಲ್ಲೆಯ ಎಚ್.ಡಿ. ಕೋಟೆ, ಹುಣಸೂರು, ಪಿರಿಯಾಪಟ್ಟಣ ತಾಲೂಕು ವ್ಯಾಪ್ತಿಯ ಕಾಡಂಚಿನ ಗ್ರಾಮಗಳಲ್ಲಿರುವ ರೈತರು ಇದೀಗ ಕಾಡಾನೆಗಳ ಹಿಂಡುಗಳು ಜಮೀನಿನತ್ತ ಬರುವುದನ್ನು ನೋಡಿ ಬೆಚ್ಚಿ ಬಿದ್ದಿದ್ದಾರೆ. ಹಲಸಿನ ಹಣ್ಣು ಕಾಡಾನೆಗಳಿಗೆ ಪ್ರಿಯವಾಗಿರುವುದರಿಂದ ಹಣ್ಣನ್ನು ಹುಡುಕಿಕೊಂಡು ಬರುವುದು ರೂಢಿಯಾಗಿದೆ. ಜತೆಗೆ ರೈತರು ಈ ಸಮಯದಲ್ಲಿ ಬಾಳೆ, ಜೋಳ ಸೇರಿದಂತೆ ವಿವಿಧ ಬೆಳೆಗಳನ್ನು ಬೆಳೆಯುವುದರಿಂದ ಅವುಗಳನ್ನು ತಿನ್ನುವ ಸಲುವಾಗಿ ಅರಣ್ಯದಿಂದ ಬರುತ್ತಿವೆ.
ಈ ನಡುವೆ ನಾಗರಹೊಳೆ ಉದ್ಯಾನ ವ್ಯಾಪ್ತಿಯಲ್ಲಿ ಕಾಡಾನೆಗಳ ಹಾವಳಿ ಶುರುವಾಗಿದ್ದು, ಕಾಡಂಚಿನ ಹೊಸಪೆಂಜಳ್ಳಿ, ಹಳೇಪೆಂಜಳ್ಳಿ, ಹರಳಹಳ್ಳಿ ಸೇರಿದಂತೆ ಹಲವು ಗ್ರಾಮಗಳಲ್ಲಿ ಕಾಡಾನೆಗಳು ಅಡ್ಡಾಡಿದ್ದು ಇದರಿಂದ ಜನ ಭಯಗೊಂಡಿದ್ದಾರೆ. ಅಷ್ಟೇ ಅಲ್ಲದೆ ತನ್ನ ಪಾಡಿಗೆ ದನಗಳನ್ನು ಮೇಯಿಸುತ್ತಾ ಕುಳಿತಿದ್ದ ವೃದ್ಧೆಯ ಮೇಲೆಯೂ ಕಾಡಾನೆ ದಾಳಿ ನಡೆಸಿದೆ.

ರೈತರ ಜಮೀನಿನಲ್ಲಿ ಹಾಯಾಗಿದ್ದ ಕಾಡಾನೆಗಳು
ಒಂದೆರಡು ದಿನಗಳ ಹಿಂದೆ ನಾಗರಹೊಳೆ ಉದ್ಯಾನದಿಂದ ಆಹಾರ ಅರಸಿ ಜೋಡಿಯಾನೆಗಳು ಹೊರಬಂದಿದ್ದು, ಕಾಡಂಚಿನ ಹೊಸಪೆಂಜಳ್ಳಿ, ಹಳೇಪೆಂಜಳ್ಳಿ ಗ್ರಾಮಗಳಲ್ಲಿ ಬೀಡುಬಿಟ್ಟಿದ್ದವಲ್ಲದೆ, ಈ ವ್ಯಾಪ್ತಿಯ ಜಮೀನಿನಲ್ಲಿ ರೈತರು ಬೆಳೆದಿದ್ದ ಬೆಳೆಗಳನ್ನು ತಿಂದು, ತುಳಿದು ನಾಶ ಮಾಡುತ್ತಾ ಎಲ್ಲೆಂದರಲ್ಲಿ ಅಡ್ಡಾಡುತ್ತಾ ಹಾಯಾಗಿದ್ದವು.
ಆದರೆ ಕಾಡಾನೆಗಳು ಬೀಡು ಬಿಟ್ಟ ಸುದ್ದಿ ತಿಳಿಯುತ್ತಿದ್ದಂತೆಯೇ ರೈತರು ಬೆಚ್ಚಿ ಬಿದ್ದಿದ್ದರು. ಇದರ ಜತೆಗೆ ಒಂಟಿ ಕೊಂಬಿನ ಸಲಗವೂ ನಾಗರಹೊಳೆ ಉದ್ಯಾನದಿಂದ ದಾಟಿ ಬಂದಿತ್ತು. ಇವೆಲ್ಲ ಸೇರಿ ರೈತರ ಬೆಳೆಗಳನ್ನು ತಿಂದು ತೇಗಿದ್ದಲ್ಲದೆ, ತುಳಿದು ನಾಶ ಮಾಡಿದ್ದವು. ನಡೆದದ್ದೇ ಹಾದಿ ಎನ್ನುತ್ತಾ ಓಡಾಡಿದವು. ಇವುಗಳನ್ನು ಹೀಗೆಯೇ ಬಿಟ್ಟರೆ ನಮ್ಮ ಬೆಳೆ ನಾಶವಾಗುತ್ತದೆ ಎಂದರಿತ ರೈತರು ಸೇರಿದಂತೆ ಗ್ರಾಮಸ್ಥರು ಅರಣ್ಯ ಇಲಾಖೆ ಮಾಹಿತಿ ನೀಡಿ ಅವರು ಬರುವ ಮುನ್ನವೇ ದನಗಳನ್ನು ಅಟ್ಟುವ ರೀತಿಯಲ್ಲಿ ಕಾಡಾನೆಗಳನ್ನು ಕಾಡಿಗೆ ಅಟ್ಟಲು ಮುಂದಾದರು.

ದನಗಾಹಿ ಮಹಿಳೆಗೆ ಒದ್ದ ಕಾಡಾನೆ
ಸುಮಾರು ಐನ್ನೂರಕ್ಕೂ ಹೆಚ್ಚು ಮಂದಿ ಸೇರಿ ಕೂಗುತ್ತಾ ಕಿರುಚುತ್ತಾ ಭಾರೀ ಶಬ್ದ ಮಾಡಿದ್ದರಿಂದ ಬೆದರಿದ ಸಲಗ, ಹರಳಹಳ್ಳಿಯ ಅದ್ವಾಳಕೆರೆ ಬಳಿ ಉಳಿಯಿತು. ಅಷ್ಟರಲ್ಲಿಯೇ ಎಸಿಎಫ್ ಸತೀಶ್, ಆರ್‌ಎಫ್ಒ ನಮನ್ ನಾರಾಯಣ್ ನಾಯ್ಕ, ಡಿಆರ್‌ಎಫ್‌ಒ ದ್ವಾರಕನಾಥ್, ಚಂದ್ರೇಶ್ ಸೇರಿದಂತೆ ಅರಣ್ಯ ಹಾಗೂ ಎಸ್‌ಟಿಪಿಎಫ್ ಸಿಬ್ಬಂದಿ ಆಗಮಿಸಿ ಒಂಟಿ ಸಲಗವನ್ನು ಕಾಡಿಗಟ್ಟಲು ಪ್ರಯತ್ನಿಸಿದರು. ಈ ವೇಳೆ ಜನರ ಕೂಗಾಟಕ್ಕೆ ಹೆದರಿ ಅರಣ್ಯದ ಕಡೆಗೆ ಮುಖ ಮಾಡಿ ಓಡಲಾರಂಭಿಸಿತು.
ಒಂದು ಕಡೆ ಇಷ್ಟೆಲ್ಲ ಆಗುತ್ತಿದ್ದರೂ ಮತ್ತೊಂದು ಕಡೆಯಲ್ಲಿ ತನಗೇನು ಗೊತ್ತೇ ಇಲ್ಲ ಎಂಬಂತೆ ಹರಳಹಳ್ಳಿ ನಿವಾಸಿ ಪುಟ್ಟಲಕ್ಷ್ಮಮ್ಮ(60) ಎಂಬುವರು ಕೆರೆಯ ಬಳಿ ಜಾನುವಾರುಗಳನ್ನು ಮೇಯಿಸುತ್ತಾ ಕುಳಿತಿದ್ದರು. ಬೆಚ್ಚಿದ ಸಲಗವೂ ಅದೇ ಮಾರ್ಗದಲ್ಲಿ ಬಂದಿದ್ದು, ಅವರಿಗೆ ಕಾಲಿನಿಂದ ಒದೆದು ಮುಂದೆ ಓಡಿದೆ. ಸಲಗದ ಒದೆತಕ್ಕೆ ಪುಟ್ಟಲಕ್ಷ್ಮಮ್ಮ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ತಕ್ಷಣ ಅವರಿಗೆ ನೀರು ನೀಡಿ ಉಪಚರಿಸಿ ಕೂಡಲೇ ಹುಣಸೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಮೈಸೂರಿನ ಕೆ.ಆರ್. ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಅವರ ಕಾಲು ಮುರಿತವಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ. ಅದೃಷ್ಟವಶಾತ್ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಮತ್ತೆ ಯಾವಾಗ ಬೇಕಾದರೂ ಬರಬಹುದು
ಕೊನೆಗೂ ಅರಣ್ಯ ಇಲಾಖೆ ಕಾಡಾನೆಗಳನ್ನು ನಾಗರಹೊಳೆ ಅರಣ್ಯಕ್ಕೆ ಅಟ್ಟಿದೆ. ಆದರೆ ಇದು ಇಲ್ಲಿಗೆ ಮುಗಿದಂತೆ ಕಾಣುತ್ತಿಲ್ಲ. ಮತ್ತೆ ಯಾವಾಗ ಬೇಕಾದರೂ ಕಾಡಾನೆಗಳು ನಾಡಿಗೆ ಬರುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.
ಕಾಡಾನೆಗಳ ಹಾವಳಿಯ ಕುರಿತಂತೆ ಈ ಭಾಗದ ರೈತರು ಅಳಲು ತೋಡಿಕೊಂಡಿದ್ದು, ನಿತ್ಯ ಕಾಡಾನೆಗಳ ಕಾಟದಿಂದ ಕಂಗಾಲಾಗಿದ್ದು, ಬೆಳೆಹಾನಿ, ಜೀವ ಹಾನಿಯ ಭಯದಲ್ಲಿ ಬದುಕಬೇಕಾದ ಅನಿವಾರ್ಯತೆ ಒದಗಿ ಬಂದಿದೆ. ಸರಕಾರ ಈ ಭಾಗದಲ್ಲಿ ರೈಲ್ವೆ ಕಂಬಿ ತಡೆಗೋಡೆ ಪೂರ್ಣಗೊಳಿಸದಿರುವುದು ಜತೆಗೆ ಈಗಾಗಲೇ ನಿರ್ಮಿಸಿದರು ಆನೆಕಂದಕ, ರೈಲ್ವೆ ಹಳಿಯ ಬೇಲಿಯನ್ನು ಸಮರ್ಪಕವಾಗಿ ನಿರ್ವಹಣೆ ಮಾಡದೆ ಇರುವುದರಿಂದಾಗಿ ಕಾಡಾನೆಗಳು ಅರಣ್ಯದಿಂದ ಹೊರಬರುತ್ತಿವೆ.

ಶಾಶ್ವತ ಪರಿಹಾರ ಕ್ರಮಕ್ಕೆ ರೈತರ ಆಗ್ರಹ
ಕಳೆದ ಎರಡು ವರ್ಷಗಳಿಂದ ಕೊರೊನಾ ಕಾಡಿದ್ದರಿಂದ ಯಾವುದೇ ರೀತಿಯ ಕೃಷಿ ಮಾಡಲು ಸಾಧ್ಯವಾಗಿರಲಿಲ್ಲ. ಈ ಬಾರಿ ಸಾಲಸೋಲ ಮಾಡಿ ಕೃಷಿ ಮಾಡುತ್ತಿದ್ದು, ಅದನ್ನು ಕೂಡ ಕಾಡಾನೆಗಳು ತಿಂದು, ತುಳಿದು ನಾಶ ಮಾಡುತ್ತಿವೆ. ಇದರಿಂದ ನಮ್ಮ ಬದುಕು ಸಂಕಷ್ಟಮಯವಾಗಿದೆ. ಇನ್ನಾದರೂ ಸಂಬಂಧಿಸಿದವರು ಇತ್ತ ಗಮನಹರಿಸಿ ಕಾಡಾನೆ ಹಾವಳಿ ತಡೆಗೆ ಶಾಶ್ವತ ಪರಿಹಾರ ಕ್ರಮ ಕಂಡು ಹಿಡಿಯುವಂತೆ ಆಗ್ರಹಿಸಿದ್ದಾರೆ.












Click it and Unblock the Notifications