ಬಿಜೆಪಿ ಬಾವುಟ ತೆಗೆಯಲು ವಿರೋಧ: ಮೈಸೂರಿನಲ್ಲಿ ಚುನಾವಣಾಧಿಕಾರಿ ಜೊತೆ ವಾಕ್ಸಮರ
ಮೈಸೂರು, ಮಾರ್ಚ್ 13: ಬಿಜೆಪಿ ಕಾರ್ಯಕರ್ತರು ಮತ್ತು ಬೆಂಬಲಿಗರ ಮನೆ ಮೇಲೆ ಅಳವಡಿಸಿರುವ ಪಕ್ಷದ ಬಾವುಟ ತೆರವುಗೊಳಿಸುವ ಸಂಬಂಧ ಚುನಾವಣೆ ಸಿಬ್ಬಂದಿ ಮತ್ತು ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ಮೈಸೂರಿನಲ್ಲಿ ನಡೆದಿದೆ.
ಮೈಸೂರಿನ ತ್ಯಾಗರಾಜ ರಸ್ತೆಯ ನಿವಾಸಿ ಬಿಜೆಪಿ ಕಾರ್ಯಕರ್ತ ಪ್ರಭುಸ್ವಾಮಿ ಅವರ ಮನೆಯ ಮೇಲೆ ಅಳವಡಿಸಿದ್ದ ಬಾವುಟ ತೆರವುಗೊಳಿಸುವ ವೇಳೆ ಈ ಘಟನೆ ನಡೆದಿದೆ. ಇದರಿಂದ ಸ್ಥಳದಲ್ಲಿ ಕೆಲಕಾಲ ಗೊಂದಲಮಯ ವಾತಾವರಣ ಕೂಡ ನಿರ್ಮಾಣವಾಗಿತ್ತು .
ಇದೇ ವೇಳೆ ಮಾತನಾಡಿದ ಮನೆ ಮಾಲೀಕ ಪ್ರಭುಸ್ವಾಮಿ, ನಮ್ಮ ಸ್ವಂತ ಮನೆಯ ಮೇಲೆ ತಾವು ಇಷ್ಟಪಡುವ ಪಕ್ಷದ ಬಾವುಟ ಹಾರಿಸಿದರೆ ತಪ್ಪೇನಿದೆ ?ಒಂದು ವೇಳೆ ಕೇಂದ್ರ ಚುನಾವಣಾ ಆಯೋಗ ಖಾಸಗಿ ಮನೆಗಳ ಮೇಲೆ ಪಕ್ಷದ ಬಾವುಟ ಹಾರಿಸಬಾರದು ಎಂದು ನಿಯಮ ಜಾರಿಗೊಳಿಸಿದರೆ ಮೊದಲು ನೋಟಿಸ್ ನೀಡಲಿ. ಅದನ್ನು ಬಿಟ್ಟು ಮನೆಯ ಮೇಲೆ ಅಳವಡಿಸಿರುವ ಪಕ್ಷದ ಬಾವುಟವನ್ನು ನೋಟಿಸ್ ನೀಡದೆ, ತೆರವುಗೊಳಿಸಲು ಮುಂದಾದರೆ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಇದರಿಂದ ಸ್ಥಳದಲ್ಲಿದ್ದ ಚುನಾವಣಾ ಸಿಬ್ಬಂದಿ ಹಾಗೂ ಅಭಯ ತಂಡದ ಸದಸ್ಯರು ಕೆಲಕಾಲ ತಬ್ಬಿಬ್ಬಾದರು.

ಪ್ರಭುಸ್ವಾಮಿ ಮನವರಿಕೆಗೆ ಯತ್ನ
ಪರಿಸ್ಥಿತಿ ಕೈ ಮೀರುವುದನ್ನು ಅರಿತ ಕೆ. ಆರ್ ಠಾಣೆಯ ಪೊಲೀಸರು ಮಧ್ಯ ಪ್ರವೇಶಿಸಿ ಹತೋಟಿಗೆ ತಂದರು. ನಂತರ ಮೇಲಧಿಕಾರಿಗಳನ್ನು ಸಂಪರ್ಕಿಸಿ ಬೇರೆ ಮನೆಗಳ ಮೇಲೆ ರಾಜಕೀಯ ಪಕ್ಷದ ಬಾವುಟ ಹಾರಿಸುವುದಕ್ಕೆ ಪಾಲಿಕೆಯಿಂದ ಅನುಮತಿ ಪಡೆಯಬೇಕೆ ?ಅಥವಾ ಕಡ್ಡಾಯವಾಗಿ ನಿಷೇಧಿಸಲಾಗಿದೆಯೇ ? ಎಂಬುದನ್ನು ಸ್ಪಷ್ಟಪಡಿಸಿಕೊಂಡು ಪ್ರಭುಸ್ವಾಮಿ ಅವರಿಗೆ ಮನವರಿಕೆ ಮಾಡಿಕೊಡಲು ಯತ್ನಿಸಿದರು. ಆದರೆ ಅವರು ಒಪ್ಪದೇ ಮೊದಲು ನೋಟಿಸ್ ನೀಡಿ ಆಮೇಲೆ ತೆರವುಗೊಳಿಸುತ್ತೇನೆ ಎಂದು ಪಟ್ಟು ಹಿಡಿದರು.

ನಾನಾ ಪಕ್ಷದ ಬಾವುಟಗಳ ತೆರವು
ಕೊನೆಗೆ ಚುನಾವಣಾ ಅಧಿಕಾರಿಗಳು ಮತ್ತು ಸಿಬ್ಬಂದಿ ಪ್ರಭುಸ್ವಾಮಿ ಅವರ ಮನೆಯನ್ನು ಹೊರತುಪಡಿಸಿ, ಉಳಿದ ಮನೆಗಳಲ್ಲಿ ಹಾರಿಸಲಾಗಿದ್ದ ನಾನಾ ಪಕ್ಷದ ಬಾವುಟವನ್ನು ತೆರವುಗೊಳಿಸಿದರು.

ವಿರೋಧ ವ್ಯಕ್ತಪಡಿಸಿದ ಬಿಜೆಪಿ
ಇನ್ನು ತಮ್ಮ ಪಕ್ಷದ ಕಾರ್ಯಕರ್ತರು ಅವರ ಮನೆಯ ಮೇಲೆ ಹಾರಿಸಿರುವ ಬಾವುಟವನ್ನು ಮೈಸೂರು ಮಹಾನಗರ ಪಾಲಿಕೆಯು ತೆಗೆದು ಹಾಕುತ್ತಿರುವುದನ್ನು ಬಿಜೆಪಿ ವಿರೋಧಿಸಿದೆ. ನಮ್ಮ ಪಕ್ಷದ ಕಾರ್ಯಕರ್ತರು ಅವರ ಮನೆಗಳ ಮೇಲೆ ಬಿಜೆಪಿ ಬಾವುಟ ಹಾರಿಸಿದ್ದಾರೆ. ಆದರೆ ಚುನಾವಣೆ ಹಿನ್ನೆಲೆಯಲ್ಲಿ ಇದು ನೀತಿ ಸಂಹಿತೆ ಉಲ್ಲಂಘನೆ ಎಂದು ತೆಗೆದು ಹಾಕಲಾಗಿದೆ. ಈ ಕುರಿತು ಚುನಾವಣಾ ಅಧಿಕಾರಿಗಳಿಗೆ ದೂರು ನೀಡುತ್ತೇವೆ ಎಂದು ಮೈಸೂರು ನಗರ ಬಿಜೆಪಿ ಅಧ್ಯಕ್ಷ ಮಂಜುನಾಥ್ ತಿಳಿಸಿದ್ದಾರೆ.

ಸಂಸದ ಪ್ರತಾಪ್ ಸಿಂಹ ಪ್ರತಿಕ್ರಿಯೆ
ಈ ಬಗ್ಗೆ ಇದೀಗ ಸಂಸದ ಪ್ರತಾಪ್ ಸಿಂಹ ಕೂಡ ಪ್ರತಿಕ್ರಿಯೆ ನೀಡಿದ್ದಾರೆ.ಬಾವುಟ ತೆರವುಗೊಳಿಸುವ ಅಧಿಕಾರಿಗಳೇ, ಮೊದಲು ನ್ಯಾಯಾಲಯದ ಆದೇಶ ತೋರಿಸಿ. ಸ್ವಇಚ್ಛೆಯಿಂದ ಸಾರ್ವಜನಿಕರು ಯಾವುದೇ ಪಕ್ಷದ ಬಾವುಟ ಹಾಕಿಕೊಳ್ಳಬಹುದು. ನಿಮ್ಮ ಬಳಿ ಬರುವ ಸೆಕ್ಟರ್ ಅಧಿಕಾರಿಗೆ ಈ ಆದೇಶವನ್ನು ತೋರಿಸಿ ಎಂದು ಆದೇಶದ ಪ್ರತಿಯನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ.












Click it and Unblock the Notifications