ಹೆಣ್ಣು ಭ್ರೂಣ ಹತ್ಯೆ ಪ್ರಕರಣ: ಮೈಸೂರಿನ ಆಸ್ಪತ್ರೆಗೆ ನೋಟಿಸ್
ಮೈಸೂರು, ಡಿಸೆಂಬರ್ 1: ಕಳೆದ ಮೂರು ತಿಂಗಳಲ್ಲಿ ಮಾಡಿರುವ ಭ್ರೂಣ ತಪಾಸಣೆ ವರದಿ ನೀಡುವಂತೆ ಆರೋಗ್ಯ ಇಲಾಖೆಯು ಉದಯಗಿರಿಯ ಮಾತಾ ಆಸ್ಪತ್ರೆಗೆ ಆರೋಗ್ಯ ಇಲಾಖೆ ನೋಟಿಸ್ ಜಾರಿಗೊಳಿಸಿದೆ.
ಅನಧಿಕೃತ ಭ್ರೂಣಹತ್ಯೆಯ ಬಗ್ಗೆ ಬಂದಿರುವ ಮೌಖಿಕ ದೂರುಗಳ ಆಧಾರದ ಮೇಲೆ ನೋಟಿಸ್ ಜಾರಿಗೊಳಿಸಿ ಅದರ ಪ್ರತಿಯನ್ನು ಕ್ಲಿನಿಕ್ ದ್ವಾರದ ಮುಂದೆ ಅಂಟಿಸಲಾಗಿದೆ. ಭ್ರೂಣಹತ್ಯೆ ಕಾನೂನು ಬಾಹಿರ ಅಪರಾಧ ವಾಗಿದ್ದು, ಪಿಸಿಪಿಎನ್‌ಡಿಟಿ ಕಾಯಿದೆ ಅನ್ವಯ ಭ್ರೂಣಹತ್ಯೆಯನ್ನು ಹೆಣ್ಣು ಮಗುವೆಂದು ಮಾಡಲಾಗುವ ಹಿನ್ನೆಲೆಯಲ್ಲಿ ಕ್ರಮ ಜರುಗಿಸ ಲಾಗುತ್ತಿದೆ.

ಮಾತ್ರವಲ್ಲದೇ ಪ್ರಸ್ತುತ ಮೈಸೂರು ಜಿಲ್ಲೆಯಲ್ಲಿ ಲಿಂಗಾನುಪಾತ ಸರಾಸರಿಯಲ್ಲಿ ಹೆಣ್ಣು ಮಕ್ಕಳಿಗಿಂತ ಗಂಡು ಮಕ್ಕಳ ಜನನ ದರದಲ್ಲಿ ಹೆಚ್ಚಳವಾಗಿದೆ. ಈ ಹಿನ್ನೆಲೆಯಲ್ಲಿ ತಮ್ಮ ಆಸ್ಪತ್ರೆಯಲ್ಲಿ ಕಳೆದ 3 ತಿಂಗಳಲ್ಲಿ ಭ್ರೂಣ ತಪಾಸಣೆಯ ಮಾಹಿತಿಯನ್ನು 7 ದಿನಗಳ ಒಳಗಾಗಿ ಸೂಕ್ತ ಸಮಜಾಯಿಷಿ ಜತೆ ನೀಡುವಂತೆ ನೋಟಿಸ್‌ನಲ್ಲಿ ಸೂಚಿಸಲಾಗಿದೆ.
ದಿನಾಂಕದಲ್ಲಿ ವ್ಯತ್ಯಾಸ: ಮೈಸೂರು ತಾಲೂಕು ಆರೋಗ್ಯ ವಿಭಾಗದ ಅಧಿಕಾರಿಗಳು ಕ್ಲಿನಿಕ್‌ನ ಮುಂಭಾಗ ಅಂಟಿಸಿರುವ ನೋಟಿಸ್‌ನಲ್ಲಿರುವ ದಿನಾಂಕವನ್ನು 21/11 ಎಂದು ನಮೂದಿಸುವ ಬದಲಿಗೆ 21/6 ಎಂದು ಹಿಂದಿನ
ದಿನಾಂಕವನ್ನು ನಮೂದಿಸಲಾಗಿದೆ. ಹೀಗಾಗಿ ಹಿಂದೆಯೇ ಈ ನೋಟಿಸ್ ನೀಡಲಾಗಿದೆ ಎಂಬ ಅರ್ಥ ಬರುತ್ತದೆ ಎಂಬ ಕಾರಣಕ್ಕೆ ಡಿಎಚ್‌ಒ ಅವರು ಕೂಡಲೇ ಆಗಿರುವ ತಪ್ಪನ್ನು ಸರಿಪಡಿಸಲು ಸೂಚಿಸಿದ್ದಾರೆ.
ವರದಿ ನೀಡಲು ಡಿಸಿ ಸೂಚನೆ: ಹೆಣ್ಣು ಭ್ರೂಣ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಕೆ.ವಿ. ರಾಜೇಂದ್ರ ಅವರು ಆರೋಗ್ಯ ಇಲಾಖೆ ಅಧಿಕಾರಿಗಳ ಸಭೆ ನಡೆಸಿ ನಾಲ್ಕು ದಿನದಲ್ಲಿ ಜಿಲ್ಲೆಯಲ್ಲಿರುವ ಆಸ್ಪತ್ರೆ, ಕ್ಲಿನಿಕ್‌ಗಳನ್ನು ಪರಿಶೀಲಿಸಿ ವರದಿ ನೀಡುವಂತೆ ಸೂಚಿಸಿದ್ದಾರೆ.
ತಾಲೂಕು ಮಟ್ಟದಲ್ಲಿ ಅಧಿಕಾರಿಗಳ ತಂಡ ರಚಿಸಿ ಕೂಡಲೇ ಪರಿಶೀಲನೆ ಆರಂಭಿಸಬೇಕು. ಅದೇ ರೀತಿ ನಗರ ವ್ಯಾಪ್ತಿಯಲ್ಲಿ ಪಾಲಿಕೆಯ ಎಲ್ಲಾ ವಲಯಗಳಿಗೂ ಅಧಿಕಾರಿಗಳ ಪ್ರತ್ಯೇಕ ತಂಡವನ್ನು ರಚಿಸಿ ಕಾರ್ಯಚರಣೆ ಆರಂಭಿಸುವಂತೆ ಸಲಹೆ ನೀಡಿದರು.
ಆಸ್ಪತ್ರೆ, ಕ್ಲಿನಿಕ್‌ಗಳು, ಸ್ಕ್ಯಾನಿಂಗ್ ಸೆಂಟರ್‌ಗಳನ್ನು ಕೆಪಿಎಂಇ ನಡಿ ನೋಂದಣಿಯಾಗಿವೆಯೇ? ಚಿಕಿತ್ಸೆ ನೀಡುವ ವೈದ್ಯರು ಪದವಿ ಪಡೆದಿರುವವರೆ? ಮಾಲೀಕರಿಂದ ಬಾಡಿಗೆ ಕರಾರು, ಟ್ರೇಡ್ ಲೈಸನ್ಸ್ ಪಡೆಯಲಾಗಿದೆಯೇ? ಆಯುರ್ವೇದ ಕ್ಲಿನಿಕ್‌ಗೆ ರಿಜಿಸ್ಟ್ರರ್ ಮಾಡಿಸಿ ಅಲೋಪಥಿ ಚಿಕಿತ್ಸೆ ನೀಡಲಾಗುತ್ತಿದೆಯೆ? ಎಂಬುದನ್ನು ಪರಿಶೀಲಿಸಿ ವರದಿ ತಯಾರಿಸಬೇಕು ಎಂದು ತಿಳಿಸಿದರು.
ಸ್ಕ್ಯಾನಿಂಗ್ ಸೆಂಟರ್‌ಗಳಲ್ಲಿ ಲೈಸೆನ್ಸ್ ಪರವಾನಗಿ ಸಾರ್ವಜನಿಕರಿಗೆ ಕಾಣುವಂತೆ ಪ್ರದರ್ಶಿಸಬೇಕು. ನೋಂದಣಿ ಮಾಡಿಸದಿದ್ದಲ್ಲಿ ಅಂತಹವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಎಂದು ಸೂಚಿಸಿದರು. ಜಿಲ್ಲಾ ಆರೋಗ್ಯಾಧಿಕಾರಿ ಡಾ.ಪಿ.ಸಿ.ಕುಮಾರಸ್ವಾಮಿ ಮಾತನಾಡಿ, ''ಕೂಡಲೇ ತಾಲೂಕು ಹಾಗೂ ನಗರ ಮಟ್ಟದಲ್ಲಿರುವ ಅಧಿಕಾರಿಗಳ ಸಭೆ ನಡೆಸಿ ನಾನಾ ತಂಡಗಳಾಗಿ ವಿಂಗಡಿಸಿ ಕಾರ್ಯಾ ಚರಣೆ ಆರಂಭಿಸುವಂತೆ ಸೂಚನೆ ನೀಡಲಾಗುವುದು ಎಂದು ತಿಳಿಸಿದರು.












Click it and Unblock the Notifications