Pratap Simha: ಒಕ್ಕಲಿಗ ಎನ್ನುವ ಕಾರಣಕ್ಕೆ ಪ್ರತಾಪ್ ಸಿಂಹಗೆ ಟಿಕೆಟ್ ಕೊಡಲ್ವಾ? ಸಾಮಾಜಿಕ ಜಾಲತಾಣದಲ್ಲಿ ಪೋಸ್ಟರ್ ಅಭಿಯಾನ
ಮೈಸೂರು ಮಾರ್ಚ್ 13: ಲೋಕಸಭಾ ಚುನಾವಣೆಗೆ ಪ್ರತಾಪ್ ಸಿಂಹಗೆ ಟಿಕೆಟ್ ಕೈತಪ್ಪುವ ಆತಂಕದಿಂದಾಗಿ ಇಂದು 11 ಗಂಟೆಗೆ ಮೈಸೂರಿನಲ್ಲಿ ಧರಣಿ ನಡೆಸಲು ಬೆಂಬಲಿಗರು ನಿರ್ಧರಿಸಿದ್ದಾರೆ. ಮಾತ್ರವಲ್ಲದೆ ಸಾಮಾಜಿಕ ಜಾಲತಾಣದಲ್ಲಿ ಪ್ರತಾಪ್ ಸಿಂಹ ಪರ ಪೋಸ್ಟರ್ ಅಭಿಯಾನವೂ ಶುರುವಾಗಿದೆ.
ಹೌದು.. ಮೈಸೂರು ಕೊಡಗು ಲೋಕಸಭಾ ಕ್ಷೇತ್ರದಿಂದ ಹಾಲಿ ಸಂಸದರಾದ ಪ್ರತಾಪ್ ಸಿಂಹ ಅವರಿಗೆ ಈ ಬಾರಿ ಬಿಜೆಪಿ ಟಿಕೆಟ್ ಕೈ ತಪ್ಪಿಲಿದೆ ಎನ್ನುವ ಚರ್ಚೆ ಶುರುವಾಗಿದೆ. ಹೀಗಾಗಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟರ್ ಅಭಿಯಾನ ಆರಂಭವಾಗಿದೆ.

ಬಿಜೆಪಿ ಎರಡನೇ ಪಟ್ಟಿ ಬಿಡುಗಡೆಯಿಂದ ಕರ್ನಾಟಕದ ಕಮಲ ಪಾಳೆಯದಲ್ಲಿ ಅತೃಪ್ತರ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಈಗಾಗಲೇ ಬಿಜೆಪಿ ಪಟ್ಟಿ ಬಿಡುಗಡೆಗೆ ಸಿದ್ಧವಾಗಿದ್ದು ಈ ಪಟ್ಟಿಯಲ್ಲಿ ಪ್ರತಾಪ್ ಸಿಂಹಗೆ ಟಿಕೆಟ್ ನೀಡಲಾಗಿಲ್ಲ ಎನ್ನುವ ಸುದ್ದಿ ಹೊರಬೀಳುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಅವರ ಬೆಂಬಲಿಗರು ಆಕ್ರೋಶ ಹೊರಹಾಕಿದ್ದಾರೆ. ವಿವಿಧ ಪೋಸ್ಟರ್‌ಗಳನ್ನು ಹಂಚಿಕೊಳ್ಳುವ ಮೂಲಕ ರಾಜ್ಯ ಬಿಜೆಪಿ ನಾಯಕರನ್ನು ಪ್ರಶ್ನೆ ಮಾಡಿದ್ದಾರೆ.
ಪೋಸ್ಟರ್‌ಗಳಲ್ಲಿ ಯಾವ ಕಾರಣಕ್ಕೆ ಪ್ರತಾಪ್ ಸಿಂಹಗೆ ಟಿಕೆಟ್ ನೀಡಲಾಗಿಲ್ಲ ಎಂದು ಬೆಂಬಲಿಗರು ಪ್ರಶ್ನೆ ಎತ್ತಲು ಶುರು ಮಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಪ್ರತಾಪ್ ಸಿಂಹ ಅವರ ಪರ ಪೋಸ್ಟರ್ ಅಭಿಯಾನದಲ್ಲಿ ಕೇಳಲಾದ ಪ್ರಶ್ನೆಗಳು ಹೀಗಿವೆ-

*'ಒಕ್ಕಲಿಗ ಎನ್ನುವ ಕಾರಣಕ್ಕೆ ಪ್ರತಾಪ್ ಸಿಂಹಗೆ ಟಿಕೆಟ್ ಕೊಡಲ್ವಾ?' ಎಂದು ಬೆಂಬಲಿಗರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟರ್ ಅಭಿಯಾನದ ಮೂಲಕ ಪ್ರಶ್ನೆ ಮಾಡಿದ್ದಾರೆ.
* 'ರಾಜಕೀಯದಲ್ಲಿ ಒಳ್ಳೆಯರಿಗೆ ಬೆಲೆ ಇಲ್ಲ' ಎನ್ನುವ ಮೂಲಕ ಪೋಸ್ಟರ್‌ಗಳ ಮೂಲಕ ಪ್ರತಾಪ್ ಸಿಂಹ ಪರ ಅಭಿಯಾನ ನಡೆಸಲಾಗಿದೆ.
*ಹಿಂದೂಗಳ ಪರ ಮಾತನಾಡಿದ್ದಕ್ಕೆ ಪ್ರತಾಪ್ ಸಿಂಹಗೆ ಟಿಕೆಟ್ ಇಲ್ವಾ?
*ಅಭಿವೃದ್ಧಿ ಕೆಲಸ ಮಾಡಿದ್ದಕ್ಕಾಗಿ ಪ್ರತಾಪ್ ಸಿಂಹಗೆ ಟಿಕೆಟ್ ಕೊಡಲು ಮೀನಾಮೇಷಾನಾ?
*ಮೈಸೂರು ಹೈವೇ ಮಾಡಿದ್ದಕ್ಕಾಗಿ ಪ್ರತಾಪ್ ಸಿಂಹಗೆ ಟಿಕೆಟ್ ಕೊಡುತ್ತಿಲ್ವಾ?
* ಬಿಜೆಪಿಯಲ್ಲಿ ವ್ಯಕ್ತಿಗಿಂತ ಪಕ್ಷ ದೊಡ್ಡದು, ಪಕ್ಷಕ್ಕಿಂತ ದೇಶ ದೊಡ್ಡದು
*ಹತ್ತು ವರ್ಷಗಳಲ್ಲಿ ಹನ್ನೆರಡು ಟ್ರೈನ್ ತಂದಿದ್ದಕ್ಕಾಗಿ ಪ್ರತಾಪ್ ಸಿಂಹಗೆ ಟಿಕೆಟ್ ಕೊಡಲು ಹಿಂದೇಟು ಹಾಕಲಾಗುತ್ತಿದಿಯಾ? ಎಂದು ಬೆಂಬಲಿಗರು ಬಿಜೆಪಿ ನಾಯಕರನ್ನು ಪ್ರಶ್ನೆ ಮಾಡಿದ್ದಾರೆ.
ಇದೇ ಸೋಮವಾರ ರಾತ್ರಿ (ಮಾ. 11) ರಾತ್ರಿ ಮೈಸೂರಿನ ಸಂಸದ ಪ್ರತಾಪ್ ಸಿಂಹ ಫೇಸ್ ಬುಕ್ ಲೈವ್ ಬಂದಿದ್ದರು. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ತಮಗೆ ಟಿಕೆಟ್ ಕೈ ತಪ್ಪಬಹುದಾದ ಸಂದರ್ಭದಲ್ಲಿ ತಮ್ಮ ಬೆಂಬಲಕ್ಕೆ ನಿಂತುಕೊಂಡಿರುವ ತಮ್ಮ ಅಭಿಮಾನಿಗಳಿಗೆ, ಮೈಸೂರಿನ ನಾಗರಿಕರಿಗೆ, ಸಂಘ - ಸಂಸ್ಥೆಗಳಿಗೆ ಧನ್ಯವಾದ ಅರ್ಪಿಸಿದರು. ಅಷ್ಟೇ ಅಲ್ಲ, ತಮ್ಮನ್ನು ಟೀಕೆಗಳ ಮೂಲಕ ತಿದ್ದಿ ತೀಡಿದವರಿಗೂ ಒಂದು ತಿಳಿಯಾದ ಧನ್ಯವಾದ ಹೇಳಿ, ಹಗುರಾದರು.
"ನನಗೆ ಟಿಕೆಟ್ ಸಿಗೋದು ಅನುಮಾನ ಎಂದಾದಾಗ ನನ್ನ ಪರವಾಗಿ ಹಲವಾರು ಸಂಘ ಸಂಸ್ಥೆಗಳು ನಿಂತವು. ಜನರು ನಿಂತರು. ಅಚ್ಚರಿಯೆಂದರೆ, ನನ್ನನ್ನು ಟೀಕಿಸುತ್ತಿದ್ದ ಎಡಪಕ್ಷದವರೂ... ಛೇ... ಇವನು ಕೆಲಸ ಮಾಡಿದ್ದಾನೆ. ಇವನಿಗೆ ಟಿಕೆಟ್ ಸಿಗಬೇಕು ಎಂಬಂಥ ಮಾತುಗಳನ್ನಾಗಿಡ್ಡು ನನಗೆ ಅತ್ಯಂತ ಖುಷಿ ತಂದಿದೆ. ಕಳೆದ ನಾಲ್ಕು ದಿನಗಳಲ್ಲಿ ನೀವು ತೋರಿದ ಪ್ರೀತಿ, ನನ್ನ ಬಗ್ಗೆ ಇಟ್ಟಿರುವ ನಂಬಿಕೆ ನನ್ನಲ್ಲಿ ಮತ್ತಷ್ಟು ಕಿಚ್ಚು ಹೊತ್ತಿಸಿದೆ. ಜನಪರ ಕೆಲಸಗಳೆಂದರೆ ಅದು ಥ್ಯಾಂಕ್ ಲೆಸ್ ಜಾಬ್ ಎಂದುಕೊಂಡಿದ್ದವ ನಾನು. ಆದರೆ, ನಿಮ್ಮ ಪ್ರೀತಿ ನನ್ನ ಅಭಿಪ್ರಾಯವನ್ನು ಬದಲಾಯಿಸಿದೆ'' ಎಂದು ಪ್ರತಾಪ್ ವಿಡಿಯೋದಲ್ಲಿ ಹೇಳಿದ್ದರು.
ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಸಾಕಷ್ಟು ಜನ ಬೆಂಬಲಿಗರು ತಮ್ಮ ಜನನಾಯಕರಿಗೆ ಟಿಕೆಟ್ ಯಾಕೆ ಕೊಟ್ಟಿಲ್ಲ ಅಂತ ಪಕ್ಷಕ್ಕೆ ಪ್ರಶ್ನೆ ಮಾಡಲು ಶುರು ಮಾಡಿದ್ದಾರೆ. ಒಂದು ವೇಳೆ ಪ್ರತಾಪ್ ಸಿಂಹಗೆ ಬಿಜೆಪಿ ಟಿಕೆಟ್ ಕೈತಪ್ಪಿದರೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುವ ಸಾಧ್ಯತೆ ಕೂಡ ಇದೆ. ಜೊತೆಗೆ ಬಿಜೆಪಿ ವಿರುದ್ಧ ಅಸಮಧಾನಗೊಳ್ಳುವ ಸಾಧ್ಯತೆ ಇದೆ.












Click it and Unblock the Notifications